ಗುರುವಾರ , ಮೇ 26, 2022
22 °C
ಆಳಂದ ಗ್ರಾಪಂ ಅಧ್ಯಕ್ಷರು, ಪಿಡಿಒಗಳ ಒತ್ತಾಯ

ಹೊಸ ಪಡಿತರ ಚೀಟಿ ಕೆಲಸ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಆರಂಭಿಸಿರುವ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಯ ಕಾರ್ಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಪಂಚಾಯಿತಿ ಸಿಬ್ಬಂದಿಯನ್ನು ಇದಕ್ಕಾಗಿ ಬಳಸಿಕೊಳ್ಳಬಾರದು ಎಂದು ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಅವರಿಗೆ ಒತ್ತಾಯಿಸಿದರು.ಬುಧವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾ.ಪಂ. ಅಧ್ಯಕ್ಷ ಮತ್ತು ಪಿಡಿಒಗಳ ಸಭೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಈ ಬಗ್ಗೆ ಒತ್ತಾಯಿಸಿದರು.ಅನೇಕ ಗ್ರಾ.ಪಂ. ಅಧ್ಯಕ್ಷರು ಪಂಚಾಯಿತಿ ಕಚೇರಿಗಳಲ್ಲಿ ವಿದ್ಯುತ್ ಮತ್ತು ಸರ್ವರ್ ಸಮಸ್ಯೆ, ಸಿಬ್ಬಂದಿಗಳ ಕೊರತೆ ಹಾಗೂ ವಿನಾಕಾರಣ ಅಧಿಕಾರಿಗಳು, ಅಧ್ಯಕ್ಷ ಮತ್ತು ಸದಸ್ಯರ ಮೇಲೆ ಸಂಶಯ ಮೂಡಿ ಪ್ರತಿಭಟನೆ ಮಾಡುವ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಗ್ರಾ.ಪಂ.ಕಚೇರಿ ಬಳಕೆ ಮಾಡುವುದು ಬೇಡ. ಇದರಿಂದ ಪಂಚಾಯಿತಿಯ ಇತರ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ ಎಂದು ಅಧ್ಯಕ್ಷರು ಮತ್ತು ಪಿಡಿಒ ಎಲ್ಲರೂ ಒಟ್ಟಾಗಿ ತಿಳಿಸಿದರು.ಪಲ್ಲವಿ ಅವರು ತಹಶೀಲ್ದಾರ ಪರಮೇಶ್ವರ ಸ್ವಾಮಿ ಅವರನ್ನು ಸಭೆಗೆ ಕರೆಯಿಸಿ `ಪಡಿತರ ಚೀಟಿ ಕಾರ್ಯವು ಕಂದಾಯ ಇಲಾಖೆಗೆ ಸಂಬಂಧಿಸಿದೆ. ಈ ಕಾರಣದಿಂದ ಪಂಚಾಯಿತಿ ಮುಂದೆ ಧರಣಿ, ಪ್ರತಿಭಟನೆ ಮತ್ತು ಇತರ ಸಮಸ್ಯೆಗಳು ಕಂಡು ಬಂದರೆ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಸಮಸ್ಯೆ ಬಗೆಹರಿಸಿ' ಎಂದರು.ಕ್ರಿಯಾ ಯೋಜನೆ ಸಲ್ಲಿಕೆ, ಉದ್ಯೋಗ ಖಾತರಿ ಕಾಮಗಾರಿ, ಎನ್‌ಆರ್‌ಜೆ ಮತ್ತು ನಿರ್ಮಲ ಭಾರತ ಯೋಜನೆ, 13ನೇ ಹಣಕಾಸು ಯೋಜನೆ ಮತ್ತಿತರ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಯಿತು.  ಜಿ.ಪಂ. ಉಪಕಾರ್ಯದರ್ಶಿ ವಸಂತರಾವ ಕುಲಕರ್ಣಿ, ಮುಖ್ಯ ಯೋಜನಾಧಿಕಾರಿ ವಿರುಪಾಕ್ಷಪ್ಪ, ಎಸ್.ಎಮ್, ಕೆಂಚಣ್ಣನವರ, ಕಾರ್ಯ ನಿರ್ವಾಹಕ ಅಧಿಕಾರಿ ಅಬ್ದುಲ ಸಲಾಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.