ಗುರುವಾರ , ಮೇ 19, 2022
25 °C

ಗಡಿಕೇಶ್ವಾರ ಆರೋಗ್ಯ ಕೇಂದ್ರ:ಇಲ್ಲಿ ನರ್ಸ್‌ಗಳೇ ವೈದ್ಯರು!

ಪ್ರಜಾವಾಣಿ ವಾರ್ತೆ / -ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

ಚಿಂಚೋಳಿ: ನೋಡಲು ಅತ್ಯಂತ ಸುಸಜ್ಜಿತ ಸುಂದರ ಕಟ್ಟಡ, ಆಧುನಿಕ ಯಂತ್ರಗಳು, ಚಿಕಿತ್ಸಾ ಸಲಕರಣೆಗಳು, ಪ್ರಾಥಮಿಕ ಆರೋಗ್ಯ ಘಟಕ (ಪಿಎಚ್‌ಯು)ದಿಂದ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‌ಸಿ)ವಾಗಿ ಮೇಲ್ದರ್ಜೆ, ಗ್ರಾಮೀಣ ಪ್ರದೇಶದ ಬಡ ಜನತೆಗೆ ಧಕ್ಕದ ಸೂಕ್ತ ಚಿಕಿತ್ಸೆ..-ಇದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಪ್ರತಿನಿಧಿಸುವ ಸೇಡಂ ವಿಧಾನಸಭೆ ಮತಕ್ಷೇತ್ರದಲ್ಲಿ ಬರುವ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಸಮುದಾಯ ಆರೋಗ್ಯ ಕೇಂದ್ರದ ಕಥೆ.ತಾಲ್ಲೂಕು ಕೇಂದ್ರದಿಂದ 23 ಕೀ.ಮೀ. ದೂರದಲ್ಲಿದೆ ಗಡಿಕೇಶ್ವಾರ. `ಜರ್ಮನ್ ನೆರವು' ಯೋಜನೆ ಅಡಿಯಲ್ಲಿ ಆರೋಗ್ಯ ಕೇಂದ್ರದ ಕಟ್ಟಡ ಮತ್ತು ಸಲಕರಣೆಗಳಿಗಾಗಿ ಅಂದಾಜು 3 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಲ್ಲಿ ಆರೋಗ್ಯ ಕೇಂದ್ರ ಇದ್ದರೂ ಸುತ್ತಮುತ್ತಲಿನ ಹಳ್ಳಿಗಳ ಜನತೆಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ ಎನ್ನುತ್ತಾರೆ ಯುವ ಮುಖಂಡ ಸಿದ್ದು ಹಲಚೇರಾ.ಮೂರು ತಜ್ಞವೈದ್ಯರ ಹುದ್ದೆ ಮಂಜೂರಾಗಿದ್ದು, ಒಬ್ಬರೂ ಈ ಕಡೆ ಇಣುಕಿ ನೋಡಿಲ್ಲ. ಎಂಬಿಬಿಎಸ್ ಓದಿದವರ ನೇಮಕಾತಿಗೆ ಅವಕಾಶವಿಲ್ಲ. ಹೀಗಾಗಿ 2 ವರ್ಷಗಳಿಂದ ವೈದ್ಯರು ಇಲ್ಲದಂತಾಗಿದೆ. ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಎಂಬಿಬಿಎಸ್ ವೈದ್ಯರು ಮುಂದೆ ಬರುತ್ತಿಲ್ಲ. ಹೀಗಾಗಿ ತಾಲ್ಲೂಕಿನ ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಸೇವೆಗೆ ತಾತ್ಕಾಲಿಕವಾಗಿ ನಿಯೋಜಿಸಲಾಗುತ್ತಿದೆ. ಅವರು ಆಗೊಮ್ಮೆ ಈಗೊಮ್ಮೆ ಬಂದು ಹೋಗುವುದರಿಂದ ಇಲ್ಲಿ ನರ್ಸ್‌ಗಳೇ ವೈದ್ಯರಾಗಿದ್ದಾರೆ.ಚಿಕಿತ್ಸೆಗೆ ಬರುವ ರೋಗಿಗಳಿಗೆ ಅವರು ತಮ್ಮ ಸಾಮರ್ಥ್ಯಕ್ಕನುಸಾರ ಚಿಕಿತ್ಸೆ ನೀಡುತ್ತಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಸುಲೇಪೇಟ, ಇಲ್ಲವೇ ತಾಲ್ಲೂಕು ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡುತ್ತಾರೆ. ಇಲ್ಲಿ ಮೂವರು ನರ್ಸಗಳಿದ್ದು ಅವರೇ ಆರೋಗ್ಯ ಕೇಂದ್ರ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರು ಪ್ರತಿದಿನ 50ರಿಂದ 60ಜನರಿಗೆ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಿದರೆ, ತಿಂಗಳಿಗೆ ಕನಿಷ್ಠ 8-10 ಹೆರಿಗೆ ಮಾಡಿಸುತ್ತಾರೆ.ತುರ್ತು ಚಿಕಿತ್ಸಾ ವಿಭಾಗದ ಬಾಗಿಲು ಸದಾ ತೆರೆದಿರುತ್ತದೆ. ಆದರೆ ಕೇಂದ್ರದ ಮುಖ್ಯ ಪ್ರವೇಶದ ಬಾಗಿಲು ಮುಚ್ಚಲಾಗಿದೆ. ಜತೆಗೆ ವೈದ್ಯಾಧಿಕಾರಿ ಇರಬೇಕಾದ ಕೋಣೆಯನ್ನು ದಾಸ್ತಾನು ಕೋಣೆಯಾಗಿ ಮಾರ್ಪಾಡು ಮಾಡಲಾಗಿದೆ. ಕೇಂದ್ರದಲ್ಲಿ ಜನತೆಗೆ ದೊರೆಯುವ ಸೌಲಭ್ಯ ಮತ್ತು ಸೇವೆಯ ವಾಗ್ದಾನ ಬರೆಯಲಾಗಿದೆ. ಆದರೆ ವೈದ್ಯರ ಕೊರತೆಯಿಂದ ಅದು ಗೋಡೆಗೆ ಸೀಮಿತವಾಗಿ ಉಳಿದಿದೆ.

ಸಮುದಾಯ ಆರೋಗ್ಯ ಕೇಂದ್ರಗಳು 30 ಹಾಸಿಗೆ ಹೊಂದಿರುತ್ತವೆ. ಆದರೆ ಗಡಿಕೇಶ್ವಾರದ ಈ ಕೇಂದ್ರ 16 ಹಾಸಿಗೆ ಹೊಂದಿದೆ.ನಂತರದ ದಿನಗಳಲ್ಲಿ ಇದನ್ನು ಹೆಚ್ಚಿಸಬಹುದು ಎಂದು ಕೇಂದ್ರದ ಮೂಲಗಳು ತಿಳಿಸಿವೆ. ಅಂಬುಲೆನ್ಸ್ ಇದೆ. ಆದರೆ ಅದಕ್ಕೆ ಚಾಲಕನಿಲ್ಲ. ಚಾಲಕನ ಹುದ್ದೆ ಮಂಜೂರು ಇಲ್ಲದ ಕಾರಣ ಈ ವಾಹನ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಎದುರು ಅನಾಥವಾಗಿ ನಿಂತಿದೆ.

ಗಡಿಕೇಶ್ವಾರ್, ರುದ್ನೂರು, ರಾಯಕೋಡ್, ಭೂತಪೂರ, ಚಿಂತಪಳ್ಳಿ, ಬಂಟನಳ್ಳಿ, ಕೆರಳ್ಳಿ, ಬೆನಕನಳ್ಳಿ, ಹೊಸಳ್ಳಿ, ಹಲಚೇರಾ, ತೇಗಲತಿಪ್ಪಿ ಗ್ರಾಮಗಳು ಈ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತವೆ.`ಪ್ರಯತ್ನ ಮಾಡುತ್ತಿದ್ದೇವೆ'

ಗಡಿಕೇಶಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇರುವುದು ನಿಜ. ಆದರೆ ವಾರದಲ್ಲಿ 5 ದಿನ ಆಯುಷ್ ವೈದ್ಯರು ಮತ್ತು 2 ದಿನ ಎಂಬಿಬಿಎಸ್ ವೈದ್ಯರನ್ನು ಸೇವೆಗೆ ನಿಯೋಜಿಸಿದ್ದೇವೆ. ಖಾಲಿ ಇರುವ ವೈದ್ಯರ ಹುದ್ದೆ ಭರ್ತಿ ಮಾಡಲಾಗುತ್ತಿದೆ. ದೂರದ ಹಳ್ಳಿಕಡೆಗೆ ಬರಲು ವೈದ್ಯರು ಇಷ್ಟಪಡುತ್ತಿಲ್ಲ. ಪ್ರಯತ್ನ ಮಾಡುತ್ತಿದ್ದೇವೆ.

-ಡಾ.ರಾಜಕುಮಾರ ಎ.ಕೆ

ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ.

ವೈದ್ಯರಿಗಾಗಿ ಸಚಿವರಿಗೆ ಮೊರೆ

ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿ 10 ವರ್ಷವಾಯಿತು. ಅಂದಿನಿಂದ ಈವರೆಗೆ ಇಲ್ಲಿಗೆ ವೈದ್ಯರೇ ಬಂದಿಲ್ಲ. ಪ್ರಭಾರ ವೈದ್ಯರೇ ಹುಣ್ಣಿಮೆ, ಅಮಾವಾಸ್ಯೆಗೆ ಬಂದು ಹೋಗುತ್ತಾರೆ. ಇದರಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಮಾಡಿದ್ದೇವೆ.

-ರೇವಣಸಿದ್ದಪ್ಪ ಅಣಕಲ್,

ಕಾಂಗ್ರೆಸ್ ಮುಖಂಡ, ಗಡಿಕೇಶ್ವಾರ

`ಎಂಬಿಬಿಎಸ್ ಹುದ್ದೆ ಸೃಷ್ಟಿಸಿ'

ಇಲ್ಲಿ ತಜ್ಞ ವೈದ್ಯರ ಹುದ್ದೆ ಮಂಜೂರಾದರೂ ಯಾರೂ ಇಲ್ಲಿಗೆ ಬರುತ್ತಿಲ್ಲ. ಹೆಚ್ಚುವರಿಯಾಗಿ ಒಂದು ಎಂಬಿಬಿಎಸ್ ಹುದ್ದೆ ಸೃಷ್ಟಿಸಿ, ಕಾಯಂ ವೈದ್ಯರು ಬರುವಂತೆ ಮಾಡಿ. ರಾಜ್ಯದಲ್ಲಿ ತಜ್ಞ ವೈದ್ಯರಿಗೆ ಕೊರತೆಯಿದೆ. ಆದರೆ ಸ್ಟಾಫ್ ನರ್ಸ್ ಹುದ್ದೆ ಖಾಲಿ ಇಟ್ಟಿರುವುದೇಕೆ?

-ಶಿವಕುಮಾರ ಎಸ್. ಗುಡಪಳ್ಳಿ,

ರಾಯಕೋಡ ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.