ಬುಧವಾರ, ಮೇ 18, 2022
25 °C
ಗುಲ್ಬರ್ಗ: ಸಚಿವ ಖಮರುಲ್ ಇಸ್ಲಾಂ ಚಾಲನೆ

ರೂಪಾಯಿಗೆ ಕೆಜಿ ಅಕ್ಕಿ: `ಅನ್ನಭಾಗ್ಯ' ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲೆಯ 4,04,887 ಬಿಪಿಎಲ್ ಕುಟುಂಬಗಳಿಗೆ ಕೆಜಿಗೆ ಒಂದು ರೂಪಾಯಿಯಂತೆ ಪ್ರತಿ ತಿಂಗಳು 30 ಕೆಜಿ ಅಕ್ಕಿ ನೀಡುವ ಸರ್ಕಾರದ `ಅನ್ನಭಾಗ್ಯ' ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಬುಧವಾರ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಚಾಲನೆ ನೀಡಿದರು.30 ಕೆಜಿ ಅಕ್ಕಿ ಸ್ವೀಕರಿಸಿದ ನಗರದ ನ್ಯಾಯಬೆಲೆ ಅಂಗಡಿ ಸಂಖ್ಯೆ 169ರ ನಸೀಮಾ ಬೇಗಂ ಜಿಲ್ಲೆಯಲ್ಲಿ `ಅನ್ನಭಾಗ್ಯ'ದ ಮೊದಲ ಫಲಾನುಭವಿಯಾದರು. ಬಳಿಕ ಹಫೀಸಾ ಬೇಗಂ, ಹಮೀದಾ ಮತ್ತಿತರ ಅಕ್ಕಿ ಪಡೆದರು.ಸಚಿವ ಖಮರುಲ್ ಇಸ್ಲಾಂ ಮಾತನಾಡಿ, `ಈ ಯೋಜನೆ ಯಶಸ್ವಿಗೆ ಜಿಲ್ಲೆಯ 988 ನ್ಯಾಯಬೆಲೆ ಅಂಗಡಿಗಳ ಹಾಗೂ ಸಾರ್ವಜನಿಕರ ಸಹಕಾರ ಅತಿ ಮುಖ್ಯ. ಅಕ್ರಮ ತಡೆಗಾಗಿ ಬಯೋಮೆಟ್ರಿಕ್ ತೂಕದ ಯಂತ್ರದ ಮೂಲಕ ಅಕ್ಕಿ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಯೋಜನೆಗಳಾಗಿ ಘೋಷಿಸಿದ್ದಾರೆ' ಎಂದರು.ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ್ ಮಾತನಾಡಿ, `ಅನಧಿಕೃತವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದುವ ಮೂಲಕ ಬಡವರಿಗೆ ವಂಚಿಸಬೇಡಿ. ಅನಧಿಕೃತ ಚೀಟಿಯನ್ನು ತಹಸೀಲ್ದಾರ್ ಕಚೇರಿಗೆ ವಾಪಾಸು ಮಾಡಿ. ಅರ್ಹತೆ ಇದ್ದರೆ ಮಾತ್ರ ಅಕ್ಕಿ ಪಡೆಯಿರಿ. ಜಿಲ್ಲೆಯಲ್ಲಿ  ಪಡಿತರ ಚೀಟಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಅದಕ್ಕಾಗಿ ವಿದ್ಯುತ್ ನೋಂದಣಿ ಮತ್ತು ಮನೆ ಸಂಖ್ಯೆ ಕೇಳಿದ್ದೇವೆ. ಕೆಲವನ್ನು ನಾವು ನೇರವಾಗಿ ಭೇಟಿ ನೀಡಿ ಪರಿಶೀಲಿಸುತ್ತೇವೆ. ಸರ್ಕಾರದ ಯೋಜನೆಯನ್ನು ಜನತೆಗೆ ತಲುಪಿಸಲು ಸಾರ್ವಜನಿಕರ ಸಹಕಾರ ಅಗತ್ಯ' ಎಂದರು.ಶಾಸಕ ಡಾ.ಉಮೇಶ್ ಜಾಧವ್ ಮಾತನಾಡಿ, `ನೆಟ್‌ವರ್ಕ್ ಮತ್ತು ವಿದ್ಯುತ್ ತೊಂದರೆಯಿಂದ ಪಡಿತರ ಚೀಟಿಗೆ ಅರ್ಜಿ ನೀಡುವ ಕೇಂದ್ರಗಳಲ್ಲಿ ಅವ್ಯವಸ್ಥೆ ಉಂಟಾಗಿದೆ. ಅದನ್ನು ಸರಿಪಡಿಸಬೇಕು. ಅನಧಿಕೃತ ಪಡಿತರ ಚೀಟಿದಾರರ ಬಗ್ಗೆ ಸಮುದಾಯದ   ಜನತೆಯೇ ದೂರು ನೀಡಬೇಕು. ಆ ಮೂಲಕ ಪಕ್ಷ, ಪಂಗಡಗಳ ಭೇದ ಮರೆತು ಯೋಜನೆ ಯಶಸ್ವಿಗೊಳಿಸಬೇಕು. ಈ ಭಾಗದ ಅಪೌಷ್ಟಿಕತೆ ನಿವಾರಿಸುವಲ್ಲಿ ಯೋಜನೆ ಯಶಸ್ವಿಯಾಗಲಿ' ಎಂದು ಆಶಿಸಿದರು.ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ಪ್ರಭು ಪಾಟೀಲ್, ಅಮರನಾಥ ಪಾಟೀಲ್ ಹಾಗೂ ಶಾಸಕ ಜಿ. ರಾಮಕೃಷ್ಣ ಮಾತನಾಡಿ, ` ಜನಪರ ಯೋಜನೆಗಳ ಯಶಸ್ವಿಗೆ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಬೆಂಬಲಿಸಬೇಕು. ಬಡವರ ಅಭಿವೃದ್ಧಿಗೆ ಬದ್ಧರಾಗಿರಬೇಕು' ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, `ಯೋಜನೆಯ ಪ್ರಯೋಜನವು ಜನರ ಮನೆ ಬಾಗಿಲಿಗೆ ತಲುಪಬೇಕು. ಈ ಹಿಂದೆ ಜಿಲ್ಲೆಯಲ್ಲಿ ವರದಿಯಾದ ಅಕ್ರಮ ಅಕ್ಕಿ ಸಾಗಾಣೆ ಜಾಲಗಳಿಗೆ ಕಡಿವಾಣ ಹಾಕಬೇಕು' ಎಂದು ಸಲಹೆ ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಲ್ಲವಿ ಅಕುರಾತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಇದ್ದರು.ವೀರೇಶ ಹೂಗಾರ, ಶಂಕರ ಹೂಗಾರ ದೇಸಾಯಿ ಕಲ್ಲೂರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.