ಬೀದರ್: ಮನೆಗಳಿಗೆ ನುಗ್ಗಿದ ನೀರು

ಶನಿವಾರ, ಜೂಲೈ 20, 2019
28 °C
ಎರಡನೇ ದಿನವೂ ಮುಂದುವರೆದ ಮಳೆ

ಬೀದರ್: ಮನೆಗಳಿಗೆ ನುಗ್ಗಿದ ನೀರು

Published:
Updated:

ಬೀದರ್: ನಗರದಲ್ಲಿ ಎರಡನೇ ದಿನವಾದ ಶುಕ್ರವಾರವೂ ಮಳೆ ಮುಂದುವರೆದಿದ್ದು, ವಿವಿಧ ಕಾಲೋನಿಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ.ನಗರದ ಕೆ.ಇ.ಬಿ.ಕಚೇರಿ ಪಕ್ಕದಲ್ಲಿ ಇರುವ ಜೆಸ್ಕಾಂ ಸಿಬ್ಬಂದಿಯ 48 ವಸತಿ ಗೃಹಗಳ ಪೈಕಿ ಎಂಟು ವಸತಿ ಗೃಹಗಳಿಗೆ ನೀರು ನುಗ್ಗಿದೆ. ಮೊಳಕಾಲು ಎತ್ತರಕ್ಕೆ ನೀರು ಸಂಗ್ರಹವಾಗಿದ್ದರಿಂದ ಮನೆಯಲ್ಲಿನ ಅಕ್ಕಿ, ಜೋಳ, ಗೋಧಿ ಮತ್ತಿತರ ಸಾಮಗ್ರಿಗಳು ನಷ್ಟಕ್ಕೀಡಾಗಿವೆ.ನೀರು ನುಗ್ಗಿರುವ ವಸತಿ ಗೃಹಗಳು ಜ್ಯೋತಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆಯ ಬದಿಯಲ್ಲಿವೆ. ಈ ಮಾರ್ಗದಲ್ಲಿ ಸಿ.ಸಿ. ರಸ್ತೆ ನಿರ್ಮಾಣಗೊಂಡಿದ್ದರೂ ಚರಂಡಿ ನಿರ್ಮಾಣ ಆಗಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ಸಂಗ್ರಹವಾಗುವ ನೀರು ಹರಿದು ಹೋಗಲು ಜಾಗವೇ ಇಲ್ಲವಾಗಿವೆ. ಹೀಗಾಗಿ ನೀರು ಮನೆಗಳಿಗೆ ನುಗ್ಗುತ್ತಿದೆ ಎಂದು ತಿಳಿಸುತ್ತಾರೆ ನಿವಾಸಿ ಸಂತೋಷ್. ನೀರು ಮನೆಗೆ ನುಗ್ಗಿದ್ದರಿಂದ ಹಾನಿ ಜೊತೆಗೆ ಸಂಕಷ್ಟವನ್ನೂ ಅನುಭವಿಸಬೇಕಾಗುತ್ತಿದೆ. ನೀರು ಹೊರ ಹಾಕುವುದೇ ಕೆಲಸವಾಗಿಬಿಟ್ಟಿದೆ ಎಂದು ತಿಳಿಸುತ್ತಾರೆ ಮತ್ತೊಬ್ಬರು ನಿವಾಸಿ. ಜೆಸ್ಕಾಂ ಸಿಬ್ಬಂದಿ ವಸತಿ ಗೃಹಗಳ ಪೈಕಿ ಬಹುತೇಕ ವಸತಿಗೃಹಗಳು ಸೋರುತ್ತಿವೆ ಎಂಬ ಅಳಲು ಅವರದು.ಮತ್ತೊಂದೆಡೆ, ಕೆ.ಇ.ಬಿ. ಕಚೇರಿ ಎದುರಿನ ರಸ್ತೆ ಬದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರಿಂದ ಅಂಗಡಿಗಳಿಗೆ ಸಂಪರ್ಕ ಕಡಿತಗೊಂಡಿತು. ನಗರದ ಲೇಬರ್ ಕಾಲೋನಿ ಮತ್ತಿತರ ಕಡೆಯೂ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಗುರುವಾರದಂತೆಯೇ ಶುಕ್ರವಾರವೂ ಮಳೆ ಕೆಲವೊಮ್ಮೆ ಜಿಟಿ ಜಿಟಿ ಮತ್ತೆ ಕೆಲವೊಮ್ಮೆ ಧಾರಾಕಾರವಾಗಿ ಸುರಿಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry