ಶುಕ್ರವಾರ, ಮೇ 20, 2022
21 °C

ಚಿಂಚೋಳಿ:ಬಂಪರ್ ಇಳುವರಿನಿರೀಕ್ಷೆ

ಪ್ರಜಾವಾಣಿ ವಾರ್ತೆ/ -ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

ಚಿಂಚೋಳಿ: `ಹೂ ಚೆಟ್ಟಿ, ಕಾಯಿ ಗಟ್ಟಿ ಹೊಟ್ಟೆಗೆ ರೊಟ್ಟಿ ಗಟ್ಟಿ'. ಇದು ದೇಗಲಮಡಿಯ ರೈತ ನರಸಿಂಗರಾವ್ ಪರೀಟ್ ಕಣ್ಣುಕುಕ್ಕುವಂತೆ ಬೆಳೆದು ನಿಂತ ಬೆಳೆಗಳನ್ನು ತಮ್ಮದೇ ಆದ ಒಗಟಿನ ಶೈಲಿಯಲ್ಲಿ ವರ್ಣಿಸುವ ಪರಿ.ಪ್ರಸಕ್ತ ವರ್ಷ ಮುಂಗಾರು ಬೆಳೆಗಳು ನಳನಳಿಸುತ್ತ ಮೊಗ್ಗು, ಹೂವಿನ ಹಂತದಲ್ಲಿ ಇರುವುದು ಕಂಡು ಬಂಪರ್ ಇಳುವರಿಯ ನಿರೀಕ್ಷೆಯನ್ನು ಗರಿ ಗೆದರುವಂತೆ ಮಾಡಿವೆ.`ಮೊಗ್ಗು ವಾರದೊಳಗೆ ಹೂವಾಗಿ ಬೆಟ್ಟಿ(ಚೆಳ್ಳಿ) ಬಿಡುತ್ತವೆ. ಈ ಚೆಟ್ಟಿ ಕಾಯಿಯಾಗಿ ಕಾಳು ಕಟ್ಟಲು ವಾರ ತಗುಲುತ್ತದೆ. ಕಾಳುಗಳು ಗಟ್ಟಿಯಾಗಿ ಒಂದೆರಡು ವಾರದಲ್ಲಿ ಕೊಯಿಲಿಗೆ ಬರುತ್ತವೆ. ಅಂದುಕೊಂಡಂತೆ ಸುರಿಯುತ್ತಿರುವ ಮಳೆ ಅಲ್ಪಾವಧಿಯ ಹೆಸರು, ಉದ್ದು, ಸೋಯಾ ರಾಶಿಯಲ್ಲಿ ಮಳೆಗೆ ವಿರಾಮ ನೀಡಿದರೆ ನಮ್ಮ ರೊಟ್ಟಿ ಗಟ್ಟಿ(ಖಾತ್ರಿ)ಯಾಗುತ್ತವೆ' ಎಂದು ಅವರು ವಿವರಿಸಿದರು.ಸದ್ಯ ತಾಲ್ಲೂಕಿನಲ್ಲಿ ಮೊದಲು ಬಿತ್ತಿದ ಹೊಲಗಳಲ್ಲಿ ಹೆಸರು, ಎಳ್ಳು ಬೆಳೆಗಳು ಮೊಗ್ಗು ಬಿಡುವ ಹಂತದಲ್ಲಿದ್ದು, ಉದ್ದು, ಸೋಯಾ, ಸಜ್ಜೆ, ಜೋಳ ಮತ್ತು ತೊಗರಿ ಬೆಳವಣಿಗೆ ಹಂತದಲ್ಲಿವೆ.ಚಿಂಚೋಳಿ ಎಂದರೆ ಹೇಳಿ ಕೇಳಿ ಮಿನಿ ಮಲೆನಾಡು. ಬೆಟ್ಟ, ಗುಡ್ಡ, ಕಾಡು ಮೇಡಿನಿಂದ ತನ್ನ ಚೆಲುವು ಹೆಚ್ಚಿಸಿಕೊಂಡು ಸಮೃದ್ಧ ಹಸಿರ ಸಿರಿಯಿಂದ ಭೂರಮೆ ಬೀಗುತ್ತಿದ್ದಾಳೆ. ಇಲ್ಲಿ ಸದಾ ಮೋಡ ಕವಿದ ವಾತಾವರಣ ಆಗಾಗ ಇಣುಕಿ ನೋಡುತ್ತ ಧರೆಗಿಳಿಯುವ ವರುಣನಿಂದ ಬೆಳೆಗಳು ನಳನಳಿಸುತ್ತಿದ್ದರೆ, ಈ ಸಂಭ್ರಮ ಕಣ್ಣುತುಂಬಿಸಿಕೊಂಡ ರೈತರು ಪುಳಕಿತರಾಗುತ್ತಿದ್ದಾರೆ.ತಾಲ್ಲೂಕಿನ ರಾಣಾಪುರ, ಚಂದನಕೇರಾ, ಮುಕರಂಬಾ, ಬೆಡಸೂರು ಮೇಲಿನ ತಾಂಡಾ, ಗೊಣಗಿ, ಕನಕಪೂರ, ಚಿಂಚೋಳಿ, ದೇಗಲಮಡಿ, ನರನಾಳ, ಸುಲೇಪೇಟ, ಕಲಭಾವಿ, ಭೋಗಾನಿಗಂದಳ್ಳಿ, ಕೊಂಚಾವರಂ, ಶಾದಿಪುರ, ಚಿಮ್ಮನಚೋಡ್, ಐನಾಪುರ, ಎತೆಬಾರಪುರ, ಸಾಲೇಬೀರನಹಳ್ಳಿ, ಮರಪಳ್ಳಿ ಮುಂತಾದ ಕಡೆಗಳಲ್ಲಿ ಮುಂಗಾರಿನ ಬೆಳೆಗಳು ಜನರನ್ನು ಆಕರ್ಷಿಸುತ್ತಿವೆ.`ಮಳೆ ಇಲ್ಲದೇ ಕಂಗಾಲಾದ ಜಿಲ್ಲೆಯ ಇತರ ತಾಲ್ಲೂಕುಗಳ ರೈತರು ಇಲ್ಲಿನ ಬೆಳೆಗಳು ಕಂಡು ಹೊಟ್ಟೆಕಿಚ್ಚು ಪಡುವಂತೆ  ಬೆಳೆಗಳು ಬೆಳೆದು ನಿಂತಿವೆ. ಬೇಗ ಬಿತ್ತನೆಯಾದ ಹೊಲದಲ್ಲಿನ ಬೆಳೆಗಳು ಬೆಳೆದು ಮೈದುಂಬಿ ನಿಂತಿದ್ದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವುದನ್ನು ನೋಡಿದರೆ ಬಂಪರ್ ಇಳುವರಿ ಬರಲಿದೆ' ಎನ್ನುತ್ತಾರೆ ಕನಕಪೂರದ ಜಗದೀಶ ಪಾಟೀಲ್.`ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 70,745 ಹೆಕ್ಟೇರ್ ಬಿತ್ತನೆಯ ಗುರಿ ಸಾಧಿಸಲಾಗಿದೆ. ತಾಲ್ಲೂಕಿನಲ್ಲಿ ಹೆಸರು -3745 ಹೆಕ್ಟೆರ್, ಉದ್ದು -7819 ಹೆಕ್ಟರ್, ಸೋಯಾ -5311 ಹೆಕ್ಟೆರ್ ಬಿತ್ತನೆಯಾಗಿದೆ. 40ರಿಂದ60 ದಿನಗಳಲ್ಲಿ ಈ ಬೆಳೆಯ ಫಸಲು ರೈತರ ಕೈಗೆಟುಕಲಿವೆ' ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಜಾನಕಿಬಾಯಿ ಬಳವಾಟ್ ಪ್ರಜಾವಾಣಿಗೆ ತಿಳಿಸಿದರು.ಈಗ ಬೆಳೆಯ ಮಧ್ಯೆ ಬೆಳೆದ ಕಳೆ ಕೀಳುವುದು, ಕಳೆ ನಾಶಕ ಸಿಂಪಡಿಸುವುದು ಮತ್ತು ಅಂತರ ಬೇಸಾಯ ಅಂದರೆ ಎಡೆ ರಂಟೆ ಉಳುಮೆ ಕೆಲಸಲ್ಲಿ ರೈತರು ತೊಡಗಿದ್ದಾರೆ. ಆದರೆ ಬಿತ್ತನೆ ವಿಳಂಬವಾದ ಹೊಲಗಳಲ್ಲಿ ಬೆಳೆಗಳು ಇದೀಗ ಚೇತರಿಸಿಕೊಂಡಿದ್ದು, ವಾರದೊಳಗೆ ಅವು ಉತ್ತಮ ಬೆಳವಣಿಗೆ ಹೊಂದುವ ಮೂಲಕ ಇತರ ಬೆಳೆಗಳಂತೆ ಗೋಚರಿಸಲಿವೆ ಎನ್ನಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.