ಭಾನುವಾರ, ನವೆಂಬರ್ 17, 2019
29 °C

`ಅನುವುಗಾರರು ಭೂ ಚೇತನದ ರೂವಾರಿಗಳು'

Published:
Updated:

ಅಫಜಲಪುರ: ಭೂ ಚೇತನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಮಟ್ಟದಲ್ಲಿ ರೈತ ಅನುವುಗಾರರನ್ನು ಆಯ್ಕೆ ಮಾಡಿ ಅವರ ಮುಖಾಂತರ ಯೋಜನೆಯ ಉದ್ದೇಶಗಳನ್ನು ರೈತರಿಗೆ ತಿಳಿಸುವದು ಅನುವುಗಾರರ ಮಖ್ಯ ಕೆಲಸವಾಗಿದೆ. ಇವರು ಈ ಯೋಜನೆಯ ರುವಾರಿಗಳಾಗಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಈಶ್ವರ ಬ್ಯಾಡಗಿ ತಿಳಿಸಿದರು.ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ ಭೂ ಚೇತನ ಕುರಿತ ಅನುವುಗಾರರ ಕಾರ್ಯಗಾರದಲ್ಲಿ ಅವರು ಮಾತನಾಡಿದರು.ಖುಷ್ಕಿ ಪ್ರದೇಶದಲ್ಲಿ ಶೇ. 20 ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ರೈತರು ಆರ್ಥಿಕ ಪರಸ್ಥಿತಿಯನ್ನು ಉತ್ತಮಗೊಳಿಸುವುದು, ಅಲ್ಲದೆ ಬೆಳೆ ಉತ್ಪಾದನಾ ತಾಂತ್ರಿಕತೆಗಳ ಅಳವಡಿಕೆಗಳಿಗೆ ಒತ್ತು ನೀಡುವದು ಮತ್ತು ಅವಶ್ಯವಿರುವ ಪರೀಕರಣಗಳನ್ನು ರಿಯಾಯಿತಿ ದರದಲ್ಲಿ ಸಕಾಲದಲ್ಲಿ ರೈತರಿಗೆ ಒದಗಿಸುವುದು ಭೂ ಚೇತನ (ಖುಷ್ಕಿ ಪ್ರದೇಶದಲ್ಲಿ ಬೇಸಾಯ ತಾಂತ್ರಿಕತೆಯ ಅಳವಡಿಕೆ ಹಾಗೂ ಉತ್ಪಾದನೆ ವರ್ಧಿಸುವ ಯೋಜನೆ)ದ ಉದ್ದೇಶವಾಗಿದೆ. ಈ ಉದ್ದೇಶವನ್ನು ಈಡೇರಿಸಲು ಹೋಬಳಿ ಮಟ್ಟದಲ್ಲಿ ಅನುವುಗಾರರು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರದ ಬಸವರಾಜ ಬಿರಾದಾರ ಹಾಗೂ ಆನಂದ ಪೊಲೀಸ್ ಪಾಟೀಲ ಮಾತನಾಡಿ, `ಹೆಚ್ಚಿನ ಇಳುವರಿ ಪಡೆಯಬೇಕಾದರೆ 17 ಅವಶ್ಯಕ ಪೋಷಕಾಂಶಗಳು ಬೇಕಾಗುತ್ತವೆ. ಅವುಗಳ ಬಗ್ಗೆ ಅನುವುಗಾರರು ರೈತರಿಗೆ ತಿಳಿಸಿಕೊಡಬೇಕು. ಬಿತ್ತನೆ ಸಮಯದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರಿಗೆ ಬೀಜೋಪಚಾರ ಮತ್ತು ಬಿತ್ತನೆ ಬೀಜಗಳ ಬಗ್ಗೆ ಮಾಹಿತಿ ನೀಡಬೇಕು. ಆಗ ಭೂ ಚೇತನ ಕಾರ್ಯಕ್ರಮ ಯಶಸ್ವಿ ಆಗುತ್ತದೆ' ಎಂದರು.ಕಾರ್ಯಗಾರವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾರದಾಬಾಯಿ ಯಲ್ಲಪ್ಪ ಗಂಡೋಳಿ ಉದ್ಘಾಟಿಸಿದರು. ಕೃಷಿ ಅಧಿಕಾರಿಗಳಾದ ಅರವಿಂದ ರಾಠೋಡ, ಸಹಾಯಕ ಕೃಷಿ ಅಧಿಕಾರಿಗಳಾದ ಆರ್.ಡಿ.ಚವ್ಹಾಣ, ಚಿದಾನಂದ ವಾಗಮೊರೆ, ದೇವೆಂದ್ರ ಕಾಂಬಳೆ, ತಾಂತ್ರಿಕ ಅಧಿಕಾರಿ ಸರ್ದಾರ ಭಾಷಾ ನದಾಫ್ ಇದ್ದರು. ಅನುವುಗಾರರಾದ ಸುಭಾಸ ಸ್ವಾಗತಿಸಿದರು. ರಾಮು ವಂದಿಸಿದರು.

ಪ್ರತಿಕ್ರಿಯಿಸಿ (+)