ಭಂಕೂರ: ಸಮಸ್ಯೆಗಳ ಊರು!

ಬುಧವಾರ, ಜೂಲೈ 17, 2019
23 °C

ಭಂಕೂರ: ಸಮಸ್ಯೆಗಳ ಊರು!

Published:
Updated:

ಶಹಾಬಾದ: ಚಿತ್ತಾಪುರ ತಾಲ್ಲೂಕಿನ ಭಂಕೂರ ಗ್ರಾಮ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಮತಕ್ಷೇತ್ರಗಳ ಕೇಂದ್ರವಾದರೂ ಪರಿಹಾರ ಕಾಣದ ಇಲ್ಲಿನ ಸಮಸ್ಯೆಗಳು ಹಲವು. ತಾಲ್ಲೂಕಿನ ಅತಿದೊಡ್ಡ ಗ್ರಾಮ ಪಂಚಾಯಿತಿ ಭಂಕೂರ. 10 ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದೆ.ಗ್ರಾಮದ ಒಳ ರಸ್ತೆಗಳು, ಕುಡಿಯುವ ನೀರಿನ ಸೌಕರ್ಯ, ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ, ಶೌಚಾಲಯ, ನೈರ್ಮಲ್ಯ ವ್ಯವಸ್ಥಿತವಾಗಿಲ್ಲ. ಗ್ರಾಮದ ಮುಖ್ಯರಸ್ತೆ ಎನಿಸಿಕೊಂಡಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಕಳೆದ ನಾಲ್ಕು ವರ್ಷದಿಂದ `ಕೆಸರು ಗದ್ದೆ'ಯಂತೆ ಇದ್ದು, ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.ಈ ರಸ್ತೆ ಸುಧಾರಣೆ ರೂ. 26 ಲಕ್ಷ ಮಂಜೂರಾಗಿದ್ದರೂ, ಟೆಂಡರ್ ಕೆಲಸ ಮುಗಿದಿಲ್ಲ. ಭಂಕೂರ ಗ್ರಾಮ 2006-07 ರಲ್ಲಿ ಜಲ ನಿರ್ಮಲ ಯೋಜನೆಯಡಿಯಲ್ಲಿ ಆಯ್ಕೆಯಾಗಿತ್ತು, ಆದರೆ ಇಲ್ಲಿನ ಜನಕ್ಕೆ ಇನ್ನೂ ಶುದ್ಧ ಕುಡಿಯುವ ನೀರು ಲಭ್ಯವಾಗಿಲ್ಲ. ಗ್ರಾಮಸ್ವರಾಜ್ಯ ಯೋಜನೆಯಡಿ ಗ್ರಾಮದ ಹಲವು ಒಳರಸ್ತೆಗಳು ಅಭಿವೃದ್ಧಿಯಾಗಬೇಕಾದದ್ದು ಕನಸಾಗಿಯೇ ಉಳಿದಿದೆ.ಶಾಂತನಗರದಿಂದ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಕಳೆದ ಮೂರು ವರ್ಷಗಳಿಂದ ಟೆಂಡರ್‌ಗೆ ಕಾಯ್ದು ಕುಳಿತಿದೆ. ನದಿ ಪಾತ್ರದಲ್ಲಿರುವ `ಜಾಕ್‌ವೆಲ್' ದೇ ಪದೇ ಕೆಡುತ್ತಿರುವುದರಿಂದ ಗ್ರಾಮದ ಜನತೆ ಕುಡಿಯುವ ನೀರಿಗಾಗಿ ಬಾಯಿ ಬಾಯಿ ಬಿಡುವಂತಾಗಿದೆ.    ಅಧ್ಯಕ್ಷೆ ನಿರ್ಲಕ್ಷ್ಯ: `ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾರ್ಯಾಲಯಕ್ಕೆ ಬಾರದೆ ಇದ್ದರೂ ಎಲ್ಲ ಕಾರ್ಯಗಳು ನಡೆಯುತ್ತವೆ! ದುರದೃಷ್ಟಕ್ಕೆ ಇಲ್ಲಿನ ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ಮನಸ್ಸು ಬಂದಾಗ ಬರುತ್ತಾರೆ' ಎಂದು ಕೆಲ ಗ್ರಾಮ ಪಂಚಾಯಿತಿ ಸದಸ್ಯರೇ ದೂರುತ್ತಾರೆ.`ಪ್ರಜಾವಾಣಿ' ಗ್ರಾಮ ಪಂಚಾಯಿತಿ ಅಧಿಕಾರಿ ನಾರಾಯಣ ಅವರನ್ನು ಸಂಪರ್ಕಿಸಿದಾಗ `ಮುಖ್ಯರಸ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ಕಳೆದ ಮೂರು ವರ್ಷದಿಂದ ಈ ರಸ್ತೆ ದುರಸ್ತಿಗೆ ಯಾರೂ ಟೆಂಡರ್ ಹಾಕುತ್ತಿಲ್ಲ' ಎಂದು ತಿಳಿಸಿ, ಉಳಿದ ಕಾಮಗಾರಿಗಳ ಬಗ್ಗೆ ಸ್ಪಷ್ಟವಾದ ವಿವರ ಕೊಡಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry