ಮಂಗಳವಾರ, ಮೇ 18, 2021
30 °C

ಸ್ವಾಸ್ಥ್ಯ ಸಂರಕ್ಷಣೆಗೆ ಆದ್ಯತೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಔಷಧ, ಚಿಕಿತ್ಸೆಗಿಂತ ಹೆಚ್ಚಿನ ಮಹತ್ವ ಸ್ವಸ್ಥ ಜೀವನಕ್ಕೆ ನೀಡುವುದು ಇಂದಿನ ತುರ್ತು ಆಗಿದೆ ಎಂದು ಡಾ.ಬಿ.ಎಂ.ಹೆಗ್ಡೆ  ಹೇಳಿದರು. ಅವರು ಬುಧವಾರ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ಗುಲ್ಬರ್ಗ ಉತ್ಸವದ ನಿಮಿತ್ಯ ‘ಔಷಧವಿಲ್ಲದ ಜೀವನ’ದ ಬಗ್ಗೆ ಉಪನ್ಯಾಸ ನೀಡುತ್ತಿದ್ದರು.ವೈದ್ಯಕೀಯ ಕ್ಷೇತ್ರಗಳಲ್ಲಿ ವಿಶೇಷ ಕ್ಷೇತ್ರಗಳ ಸೃಷ್ಟಿಯಾದಂತೆ ಸ್ವಾಸ್ಥ್ಯ ಸಂರಕ್ಷಣೆಯು ಸಂಕೀರ್ಣವಾಗುತ್ತಿದೆ. ಸರಳವಾಗಿ ಇಡಿಯಾಗಿ ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ವೈದ್ಯರಿಗೆ ಹಲವು ಉದಾಹರಣೆಗಳನ್ನು ನೀಡುತ್ತ ಸಹಜ ಬದುಕಿನ ಮಹತ್ವದ ಬಗ್ಗೆ ವಿವರಿಸಿದರು.ಸಕಾರಾತ್ಮಕ ನಿಲುವು, ಚಿಂತನೆ ಹಾಗೂ ಕ್ರಿಯೆಗಳಿಂದ ದೇಹದ ನೈಜ ಸ್ಥಿತಿಯನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. ರೋಗ ತಜ್ಞರಿಗಿಂತ ರೋಗಿಗಳನ್ನು ಅರಿತಿರುವ ಕೌಟುಂಬಿಕ ವೈದ್ಯರ ಅಗತ್ಯ ಇರುತ್ತದೆ. ಎಲ್ಲ ರೋಗಗಳೂ ದೈಹಿಕ ಬಾಧೆಗಳಿಂದಾಗುವುದಿಲ್ಲ. ರೋಗ ಒಂದು ದೇಹ ಸ್ಥಿತಿ. ದೇಹದಲ್ಲಿರುವ ನಿರೋಧಕ ಶಕ್ತಿಯು ಇದಕ್ಕೆ ಪರಿಹಾರವನ್ನೂ ಹುಡುಕುತ್ತದೆ ಎಂದು ವಿವರಿಸಿದರು.ತುರ್ತು ಪರಿಸ್ಥಿತಿಗಳಲ್ಲಿ ಕೆಲವೊಮ್ಮೆ ಔಷಧಿಗಳು ಜೀವರಕ್ಷಕಗಳಾಗಬಹುದು. ಆದರೆ ಯಾವತ್ತಿಗೂ ಔಷಧಿಗಳಿಂದಲೇ ಚಿಕಿತ್ಸೆ ನೀಡುವ ಅಗತ್ಯವಿಲ್ಲ. ದೇಹವೆಂಬುದು ಒಂದು ಪ್ರಜ್ಞೆ ಮಾತ್ರ. ನಮ್ಮ ಚಿಂತನೆಯಂತೆಯೇ ದೇಹವೂ ಪ್ರತಿಸ್ಪಂದಿಸುತ್ತದೆ. ಅದಮ್ಯ ಉತ್ಸಾಹವಿದ್ದಲ್ಲಿ ಎಲ್ಲವನ್ನೂ ಸಾಧಿಸಬಹುದು. ಈ ಉತ್ಸಾಹ ಕಳೆದುಕೊಂಡಂತೆ ದೇಹ ನಿಷ್ಕ್ರಿಯಗೊಳ್ಳುತ್ತದೆ. ನಿಷ್ಕ್ರಿಯಗೊಂಡ ದೇಹದಲ್ಲಿ ಸತ್ತ ಜೀವಕೋಶಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ದೇಹ ಜಡಗೊಂಡಷ್ಟು ರೋಗಗಳು ಹೆಚ್ಚಾಗುತ್ತವೆ ಎಂದರು.ಪ್ರಾಣಾಯಾಮ, ನಿಯಮಿತ ಆಹಾರ, ಮಿತಾಹಾರ, ನಿಯಮಿತ ನಿದ್ದೆ ಹಾಗೂ ಎಲ್ಲವನ್ನೂ ಸ್ವೀಕರಿಸುವ ಮನೋಭಾವವಿದ್ದಲ್ಲಿ ಚಿತ್ತವಿಕಾರಗಳನ್ನೂ, ದೇಹದ ಪ್ರಕೋಪಗಳನ್ನೂ ತಡೆಯಬಹುದಾಗಿದೆ. ಈ ಎಲ್ಲ ಕಾರಣಗಳನ್ನು ಗಮನದಲ್ಲಿರಿಸಿಕೊಂಡರೆ ನಮ್ಮ ಆದ್ಯತೆ ತಾನಾಗಿಯೇ ಬದಲಾಗುತ್ತದೆ.ಆರೋಗ್ಯವಿಮೆಯಂಥ ಯೋಜನೆಗಳಿಂದಾಗಿಯೇ ಚಿಕಿತ್ಸೆಗಳು, ಚಿಕಿತ್ಸಾ ವಿಧಾನ ಹಾಗೂ ಔಷಧಿಗಳು ದುಬಾರಿಯಾದವು. ಅಮೆರಿಕಾದಲ್ಲಿ ಆರೋಗ್ಯ ವಿಮೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಆದರೆ ನಮ್ಮಲ್ಲಿ ಈಗ ಇವನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಲಾಗುತ್ತಿರುವುದು ವಿಪರ್ಯಾಸ ಎಂದು ಲೇವಡಿ ಮಾಡಿದರು.ಸ್ವಸ್ಥ ಸಮಾಜದ ನಿರ್ಮಾಣ ಮಾಡಲು ನೈರ್ಮಲ್ಯ ಹಾಗೂ ಸ್ವಚ್ಛ ಸಮಾಜದ ನಿರ್ಮಾಣವಾಗಬೇಕು. ಪ್ರತಿಯೊಬ್ಬರನ್ನೂ ಸ್ವೀಕರಿಸುವ, ಪ್ರೀತಿಸುವ ಮನೋಭಾವ ಬೆಳೆಯಬೇಕು. ಆಗ ವಿಶೇಷ ಆಸ್ಪತ್ರೆಗಳ ಅಗತ್ಯವೇ ಕಂಡು ಬರುವುದಿಲ್ಲ. ಪರಿಪೂರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಸಾಕು. ಸದ್ಯದ ಯೋಜನೆಗಳೆಲ್ಲವೂ ಔಷಧಿ ಕೇಂದ್ರೀಕೃತ ಯೋಜನೆಗಳಾಗಿವೆ. ಈ ದೃಷ್ಟಿಕೋನ ಬದಲಾಗಬೇಕಿದೆ ಎಂಬುದನ್ನು ಒತ್ತಿ ಹೇಳಿದರು.ಡಾ. ಶಾಲಿನಿ ರಜನೀಶ್ ಪ್ರಾಸ್ತಾವಿಕ ಮಾತನಾಡಿದರು. ವೈದ್ಯಕೀಯ ಕಾಲೇಜಿನ ಡೀನ್ ಮಲ್ಲಿಕಾರ್ಜುನ ಭಂಡಾರಿ ಸ್ವಾಗತಿಸಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಶಶೀಲ್ ಜಿ.ನಮೋಶಿ ಅಧ್ಯಕ್ಷತೆ ವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.