ಸೋಮವಾರ, ಏಪ್ರಿಲ್ 12, 2021
25 °C

ಕೇಂದ್ರಕ್ಕೆ ಶೀಘ್ರವೇ ಪ್ರಸ್ತಾವ: ಕುಂಬ್ಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಂಚಾವರಂ (ಚಿಂಚೋಳಿ ತಾ.): ವನ್ಯಜೀವಿ ಹಾಗೂ ಅಗಾಧ ಸಂಪತ್ತು ಹೊಂದಿರುವ ಕೊಂಚಾವರಂ ಅರಣ್ಯ ಪ್ರದೇಶವನ್ನು ವನ್ಯಧಾಮ ಮಾಡುವ ನಿಟ್ಟಿನಲ್ಲಿ ಜನಾಭಿಪ್ರಾಯ ಪಡೆದು, ಕೇಂದ್ರ ಸರ್ಕಾರಕ್ಕೆ ಶೀಘ್ರ ಪ್ರಸ್ತಾವ ಸಲ್ಲಿಸಲಾಗುವುದು ಎಂದು ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಹಾಗೂ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದರು.ಕೊಂಚಾವರಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಅರಣ್ಯ ಇಲಾಖೆಯು ಈ ಪ್ರಸ್ತಾವ ಮಂಡಿಸಿದ್ದು, ಕೊಂಚಾವರಂ ಅರಣ್ಯವನ್ನು ಕರ್ನಾಟಕ ರಾಜ್ಯದ 22ನೇ ವನ್ಯಧಾಮವನ್ನಾಗಿ ರೂಪಿಸಲು ಮಂಡಳಿ ಉತ್ಸುಕವಾಗಿದೆ ಎಂದು ಅವರು ನುಡಿದರು.“ಪ್ರಥಮ ಬಾರಿಗೆ ಇಲ್ಲಿಗೆ ಭೇಟಿ ನೀಡಿದ ನಾನು, ಅರಣ್ಯದ ಕೆಲವು ಭಾಗಗಳನ್ನು ವೀಕ್ಷಿಸಿ ರೋಮಾಂಚನಗೊಂಡೆ. ಮೊದಲ ಭೇಟಿ ನಿಜಕ್ಕೂ ಚೇತೋಹಾರಿಯಾಗಿತ್ತು. ಗುಲ್ಬರ್ಗ ಜಿಲ್ಲೆಯಲ್ಲಿನ ಇಂಥ ಹಸಿರಿನ ಪ್ರದೇಶ ವನ್ಯಧಾಮವಾಗಿ ಮಾರ್ಪಟ್ಟರೆ, ವನ್ಯಪ್ರಾಣಿಗಳು ಇನ್ನಷ್ಟು ವೃದ್ಧಿಯಾಗಲಿವೆ. ಈ ದೃಷ್ಟಿಯಿಂದ ಕೊಂಚಾವರಂ ಸುತ್ತಲಿನ ಗ್ರಾಮಗಳ ಜನತೆ ಮಂಡಳಿ ಹಾಗೂ ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.ವಿಶೇಷ ಪ್ಯಾಕೇಜ್

ಜನರ ಅಭಿಪ್ರಾಯ ಹಾಗೂ ಬೇಡಿಕೆಗಳನ್ನು ವನ್ಯಜೀವಿ ಮಂಡಳಿಯ ಉಪ ಸಮಿತಿಯೊಂದು ಪರಿಶೀಲಿಸಿ, ಅಂತಿಮವಾಗಿ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಅರಣ್ಯ ಪ್ರದೇಶದ ಗ್ರಾಮ, ತಾಂಡಾ ತೆರವು ಮಾಡಿದರೆ ಆ ಜನತೆಗೆ ಪರಿಹಾರದ ವಿಶೇಷ ಪ್ಯಾಕೇಜ್ ಕೊಡಲಾಗುತ್ತದೆ. ಅರಣ್ಯ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿರುವ ಕಾರಣ, ಲಭ್ಯವಿರುವ ಕಾಡನ್ನು ಉಳಿಸಿಕೊಳ್ಳಲು ಸತತ ಪ್ರಯತ್ನ ನಡೆಸಬೇಕಾಗಿದೆ ಎಂದು ಕುಂಬ್ಳೆ ಪ್ರತಿಪಾದಿಸಿದರು.“ಸದ್ಯ ರಾಜ್ಯದಲ್ಲಿ 21 ವನ್ಯಧಾಮಗಳಿದ್ದು, ಕೇಂದ್ರ ಸರ್ಕಾರ ನಮ್ಮ ಪ್ರಸ್ತಾವ ಅಂಗೀಕರಿಸಿದರೆ ಕೊಂಚಾವರಂ ಅರಣ್ಯ 22ನೇ ವನ್ಯಧಾಮವಾಗಿ ರೂಪುಗೊಳ್ಳಲಿದೆ. ಇದರಿಂದ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮ ಚೈತನ್ಯ ಸಿಗಲಿದ್ದು, ಸ್ಥಳೀಯರಿಗೆ ಆದಾಯದ ಮಾರ್ಗ ಸಿಗಲಿದೆ” ಎಂದು ಕುಂಬ್ಳೆ ನುಡಿದರು.ವನ್ಯಧಾಮ ಸ್ಥಾಪನೆಯ ಪ್ರಕ್ರಿಯೆಯಲ್ಲಿ ಸಮುದಾಯದ ಸಹಭಾಗಿತ್ವದ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳದ ಅವರು, “ಸ್ಥಳೀಯ ನಿವಾಸಿಗಳ ಬೆಂಬಲ ಇದ್ದರೆ ವನ್ಯಧಾಮ ಸ್ಥಾಪನೆ ಇನ್ನಷ್ಟು ಸುಲಭವಾಗಲಿದೆ” ಎಂದಷ್ಟೇ ಪ್ರತಿಕ್ರಿಯಿಸಿದರು.ತೆರವಿಗೆ ಸಿದ್ಧ

“ಇಂದು ಬೆಳಿಗ್ಗೆ ಅರಣ್ಯ ವ್ಯಾಪ್ತಿಯ ಒಂದೆರಡು ಹಳ್ಳಿಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಜನರು ತೆರವು ಮಾಡಲು ಸಿದ್ಧರಿದ್ದಾರೆ. ಹಳ್ಳಿ ತೆರವು ಮಾಡಿದರೆ ಬೇರೆ ಕಡೆಯ ಜನತೆಗೆ ನೀಡುವ ಪರಿಹಾರವನ್ನು ತಮಗೂ ನೀಡುವಂತೆ ಅವರು ಬೇಡಿಕೆ ಮಂಡಿಸಿದ್ದಾರೆ. ಅವರಿಗೆ ನೀಡುವ ಪರಿಹಾರದ ಪ್ಯಾಕೇಜ್ ನಂತರ ನಿಗದಿ ಮಾಡಲಾಗುವುದು” ಎಂದು ಕುಂಬ್ಳೆ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.