ಶನಿವಾರ, ಫೆಬ್ರವರಿ 27, 2021
25 °C

ಕಪಾಟಿನೊಳಗೆ ಪವಡಿಸುವ ನಾರಣಪ್ಪ!

ಪ್ರಜಾವಾಣಿ ವಾರ್ತೆ/ ವಿಷ್ಣು ಭಾರದ್ವಾಜ್ Updated:

ಅಕ್ಷರ ಗಾತ್ರ : | |

ಕಪಾಟಿನೊಳಗೆ ಪವಡಿಸುವ ನಾರಣಪ್ಪ!

ಗುಲ್ಬರ್ಗ: `ಜನಿವಾರ ಬೆಳ್ಳಗೆ ಮಿಂಚುತ್ತಿದೆ. ಕಣ್ಣಲ್ಲಿ ಶೂನ್ಯತೆ ದೇಹ ಕಸುವು ಕಳೆದು ಕೊಂಡಿದೆ. ಸಾಧಕರಂತೆ ಕುಳಿತು ಉಗುಳು ನುಂಗದೆ ಕುರಾನ್ ಸಾಲುಗಳನ್ನು ಪಠಿಸುತ್ತಾ ನಮಾಜ್ ಮೂಲಕ ರಂಜಾನ್ ಮಾಸದ ವ್ರತದ ಹಟ ಸಾಧನೆ ಮಾಡುತ್ತಿರುವ ಮಹಿಳೆ, ಸಂತನಂತೆ ಗಡ್ಡ, ಕೂದಲು, ನೀರಿನ ಪಾತ್ರೆ ಇರಿಸಿದ ಫಕೀರ....ಇವರೆಲ್ಲ ನಿರ್ಗತಿಕರು, ನಿರಾಶ್ರಿತರು ಆದರೂ ಆಸ್ತಿಕತೆ ಮೈದುಂಬಿಕೊಂಡಿದ್ದಾರೆ.  ಹೊಟ್ಟೆ ಹಸಿದರೂ ರೂಢಿ ಮಾತ್ರ ಬಿಡುತ್ತಿಲ್ಲ.

ಗೋಡೆಯಲ್ಲಿ ಬಟ್ಟೆ ಸಾಮಗ್ರಿ ಇರಿಸಲು ನಿರ್ಮಿಸಿದ ಕಾಂಕ್ರಿಟ್ ಬೀರು (ಕಪಾಟು) ನಾರಣಪ್ಪ ಪವಡಿಸುವ ಸ್ಥಳ! ಪೂರಾ ಕಂಬಳಿ ಹೊದ್ದು ಮಿಸುಕಾಡುವ ಜೀವವಿದು.ಮುಸುಕು ಸರಿಸಿ ನೋಡಿದರೆ ಒಂದಿಂಚೂ ಬಿಡದಂತೆ ಬೆಂಕಿಯಿಂದ ಸುಟ್ಟ ಗಾಯದ ಕಲೆಗಳ ಕಪ್ಪನೆಯ ದೇಹ. ನಗುವ ಹಲ್ಲು, ಜೀವಂತಿಕೆ ತುಂಬಿದ ಕಣ್ಣುಗಳು ಮಾತ್ರ  ಬೆಳ್ಳನೆ ಮಿನುಗುತ್ತಿದ್ದವು. `ಹೆಸರೇನು?' ಎಂದು ಕೇಳಿದರೆ `ನಾರಣಪ್ಪ' ಎಂದು ಉತ್ತರಿಸಿ ವಿಚಿತ್ರವಾಗಿ ವರ್ತಿಸುತ್ತಾನೆ.

ಇಂಥ ಭಾಗಶಃ ಮಾನಸಿಕ ಅಸ್ವಸ್ಥರೂ ಇಲ್ಲಿದ್ದಾರೆ. `ಟಿ.ವಿ. ಕಾರ್ಯಕ್ರಮದ ವೇಳೆ ಡ್ಯಾನ್ಸ್ ಮಾಡ್ತಾನ್ರೀ...' ಸಿಬ್ಬಂದಿಯ ವಿವರಣೆ.ಇವರದ್ದೊಂದು ಭಿನ್ನ ಪ್ರಪಂಚ: `ಮೈ ರತನ್ ಲಾಲ್ ಹ್ಞು ಸಾಬ್... ಯು.ಪಿ. ಸೇ ಆಯಾ. ದಾಲ್ ಫ್ಯಾಕ್ಟರಿ ಮೇ ಕಾಮ್ ಕರ್ತಾ ಥಾ... ಉದರ್ ಸೇ ಇಸ್ ಲೋಗ್ ಮೇರೆಕೋ ಪಕಡ್ ಲಿಯಾ...'(ನನ್ನ ಹೆಸರು ರತನ್ ಲಾಲ್ ಉತ್ತರ ಪ್ರದೇಶ. ಗುಲ್ಬರ್ಗದ ಬೇಳೆ ಕಾಳು ಮಾಡುವ ಕಾರ್ಖಾನೆಯಲ್ಲಿ ದುಡಿಯುತ್ತಿದ್ದೆ.ಅಲ್ಲಿಂದ ಈ ಸಿಬ್ಬಂದಿ ಹಿಡಿದುಕೊಂಡು ಬಂದರು) ತಲೆಗೆ ರುಮಾಲು ಸುತ್ತಿ, ಕುಕ್ಕುರಗಾಲಿನಲ್ಲಿ ಕುಳಿತಿದ್ದ  ವ್ಯಕ್ತಿ ಹುಳಿಹುಳಿ ನಗುತ್ತಾ ಪರಿಚಯ ಹೇಳಿದ.

ಸಾರಾಯಿ ದಾಸನಾಗಿದ್ದ ರತನ್‌ಗೆ ಕೆಲಸದಿಂದ ಹೊರಹಾಕಿದಾಗ ಬಯಲೇ ಮನೆಯಾಗಿತ್ತು. ನಿರಾಶ್ರಿತರ ಕೇಂದ್ರದ ಯೋಗ, ಧ್ಯಾನ, ಊಟೋಪಚಾರ ಈತನ  ಮಸ್ತಿ-ಮಜಾದ `ನಶೆ'   ಇಳಿಸಿತ್ತು.`ಛೋಟೆ ಛೋಟೆ ಬಚ್ಚೇ, ಬೀಬಿ ಹೈ ಸಾಬ್. ಮೇರೆಕೋ ಘರ್ ಛೋಡ್ ದೀಜೀಯೇ...' (ಪತ್ನಿ, ಪುಟ್ಟ ಮಕ್ಕಳಿದ್ದಾರೆ, ಮನೆಗೆ ಕಳುಹಿಸಿ ಕೊಡಿ) ಎಂದು ಅಲ್ಲಿಗೆ ಯಾರೇ ಬಂದರೂ ಅಂಗಲಾಚುತ್ತಿದ್ದ.ನಾಪತ್ತೆ ಪ್ರಕರಣ: ಇದೊಂದು ವಿಚಿತ್ರ `ನಾಪತ್ತೆ' ಪ್ರಕರಣ! ಜಗತ್ ಸರ್ಕಲ್ ಬಳಿಯ ನಾನಾಗೌಡ ಪಾಟೀಲ್ `ಕಾಣೆಯಗಿದ್ದಾರೆ' ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ನಾಪತ್ತೆಯಾದ ವ್ಯಕ್ತಿಯನ್ನು ಪೊಲೀಸರು ಹಿಡಿದು ನಿರಾಶ್ರಿತರ ಕೇಂದ್ರ   ಸೇರಿಸಿದ್ದರು!

ಮನೆ ಮಂದಿ ಗುರುತಿಸಿ ಕರೆದುಕೊಂಡು ಹೋದರು. ಆದರೆ  ಮರುದಿನವೇ ವಾಪಸ್ ತಂದು ಬಿಟ್ಟರು. ಮನೆ ಮಂದಿ ಬಡವರಲ್ಲ. `ಯಾಕೆ ಹಾಗೆ ಮಾಡಿದ್ರು?' ಎಂದು ನಾನಾಗೌಡರನ್ನು ಕೇಳಿದರೆ `ಹೊತ್ತೊತ್ತಿಗೆ ಔಷಧಿ ಬೇಕ್ರಿ, ಡಾಕ್ಟ್ರಿಗೆ ತೋರಿಸ್ಬೇಕ್ರಿ' ಎಂದು ಪೆಚ್ಚು ನಗೆ ಬೀರಿದರು.ರಾಯಚೂರಿನ ಅನಸೂಯಾ ಹಿರಿಯ ಜೀವ. `ಮಕ್ಕಳು ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದಾರೆ, ನೋಡೋಕ್ಕೆ ಬರಲ್ಲ' ಅನ್ನುತ್ತಾರೆ. ಸದಾ ವ್ರತ ನಿಷ್ಠೆಯಲ್ಲಿರುವ ಫಾತಿಮಾ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯವರು. ಇವರ ಕಥೆಯೂ ಇಂತಹದ್ದೇ. ಕೆಲವರಿಗೆ ಇದು `ಸರ್ಕಾರಿ ವೃದ್ಧಾಶ್ರಮ'ವೂ ಹೌದು.`ನಮ್ದು ಬೆಂಗಳೂರಿನ ಬಂಬೂ ಬಜಾರ್ ಬಾಬಾ. ಹೋಟೆಲ್‌ನಲ್ಲಿ ನೈಟ್ ಡ್ಯೂಟಿ-ಓಟಿ ಎಲ್ಲ ಮಾಡಿ ದಿನಾ ರೂ. 500 ದುಡೀತಿದ್ದೆ, ಪರಿಚಯವಾದ ವ್ಯಕ್ತಿ ಹೈದ್ರಾಬಾದ್‌ನಲ್ಲಿ ಕೆಲ್ಸ ಕೊಡಿಸ್ತೀನಿ ಅಂತ ರೈಲು ಹತ್ತಿಸಿದ್ದ; ಗುಲ್ಬರ್ಗ ನಿಲ್ದಾಣದಲ್ಲಿ ಬಿಟ್ಟು ಹೋದ... ಇವರು ಹಿಡ್ಕೊಂಡು ಬಂದ್ರು... ನಾ ಭಿಕ್ಷುಕಿ ಅಲ್ಲ. ಮನೆ-ಮಂದಿ ಇದ್ದಾರ‌್ರೀ..., ವಾಪಸ್ ಹೋಗಿ ದುಡೀಬೇಕ್ರೀ'-ಲಕ್ಷ್ಮೀ ತನ್ನ ಗಡಸು ಮಾತಲ್ಲಿ ಒಂದೇ ಉಸುರಿಗೆ ಹೇಳಿ ಮುಗಿಸಿದಳು. `ಈಕೆಯ ಮಾತು ನಿಜವಲ್ಲ, ಬೇರಾವುದೋ ಕಸುಬಿಗೆ ಮೈಗೂಡಿಸಿಕೊಂಡಿದ್ದಳು...' ಎನ್ನುತ್ತಾರೆ ನಿರಾಶ್ರಿತರ ಕೇಂದ್ರದ ಸಿಬ್ಬಂದಿ.`ನಾವಿಬ್ಬರು ಹುಮ್ನಾಬಾದ್‌ನವರ‌್ರೀ. ಈತ ಮಸ್ತಾನ್ ಖಾದ್ರಿ ದರ್ಗಾದಾಗ ಇದ್ದ, ನಾನು ಯಲ್ಲವ್ವ ಗುಡಿ ಪೂಜಾರಿ.... ಅಲ್ಲಿದ್ದಾಗ ಮತ್ತಿಬ್ಬರನ್ನು ಸೇರಿಸಿ ಹಿಡ್ಕೊಂಡು ಬಂದಾರ‌್ರೀ'-  ರಾಮಣ್ಣ ನಾಗಪ್ಪ ಮುನ್ನಾರೆಡ್ಡಿ ನೀಡುವ ವಿವರ.ನೀರಿನ ಪಾತ್ರೆ ಸಹಿತ ರಂಜಾನ್ ವ್ರತನಿರತನಾಗಿದ್ದ ಮಸ್ತಾನ್‌ಗೆ ವೃದ್ಧಾಪ್ಯ ಸಹಜ ಕಿವುಡು, `ಇದು ಸರಿ' ಎಂದು ಗೋಣು ಹಾಕಿದ.

`ಇವರೆಲ್ಲ ಅಲ್ಲಿ ಭಿಕ್ಷಾಟನೆ ಮಾಡ್ತಿದ್ರು, ಈಗ ಕಥೆ ಕಟ್ಟುತ್ತಿದ್ದಾರೆ' ಎಂದು ಸಿಬ್ಬಂದಿ ಹೇಳಿದಾಗ ಅವರು ಮೌನವಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.