ಪೊಲೀಸ್ ಮನೆ ಕುಸಿಯುವ ಭೀತಿ

7
ಚಿಂಚೋಳಿಯ ಚಂದಾಪುರ: 50 ವರ್ಷಗಳಿಂದ ನಿರ್ವಹಣೆ ಇಲ್ಲದೆ ಬವಣೆ

ಪೊಲೀಸ್ ಮನೆ ಕುಸಿಯುವ ಭೀತಿ

Published:
Updated:
ಪೊಲೀಸ್ ಮನೆ ಕುಸಿಯುವ ಭೀತಿ

ಚಿಂಚೋಳಿ: ಗೋಡೆಯಲ್ಲಿ ಪ್ರಹಿಸುವ ವಿದ್ಯುತ್, ಛಾವಣಿಯಿಂದ ಹನಿಯುವ ನೀರು, ಛತ್ತಿನಿಂದ ಕಿತ್ತು ಠಪ್ ಎಂದು ನೆಲಕ್ಕಪ್ಪಳಿಸುವ ಪ್ಲಾಸ್ಟರ್ ಪದರು ಮತ್ತು ಗೋಡೆಯಿಂದ ಸದಾ ಉದುರುವ ಮಣ್ಣು, ಇಡೀ ಕಟ್ಟಡ ತೇವಗೊಂಡಿದ್ದರಿಂದ ಆಶ್ರಯ ಅರಸಿ ಬರುವ ಹಾವು ಚೇಳುಗಳು...-ಇದು ಚಿಂಚೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಂದಾಪುರದ ಪೊಲೀಸ್ ವಸತಿ ಗೃಹಗಳ ಸ್ಥಿತಿ.ಇವನ್ನು ಸುಮಾರು 50 ವರ್ಷಗಳ ಹಿಂದೆ ಕಟ್ಟಲಾಗಿದೆ. ಸೂಕ್ತ ನಿರ್ವಹಣೆ  ಇಲ್ಲದಿರುವುದರಿಂದ ಈ ಸ್ಥಿತಿಗೆ ತಲುಪಿವೆ.ಮನೆಯಲ್ಲಿ ಯಾವುದೇ ಪದಾರ್ಥವನ್ನು ಮುಚ್ಚಿಡಲೇಬೇಕು. ಗೋಡೆಗೆ ಬಟ್ಟೆ   ನೇತು ಹಾಕಿದರೂ ಗೋಡೆಯಿಂದ ಒಸರುವ ನೀರಿನಿಂದ ಹೊಲಸಾಗುತ್ತವೆ.   ಆಗ ತಾನೆ ಕಸ ಗೂಡಿಸಿ, ನೆಲ ಒರೆಸಿ ಸ್ವಚ್ಛಗೊಳಿಸಿದ ಮನೆಯಲ್ಲಿ ನೋಡ ನೋಡುತ್ತಿದ್ದಂತೆ ಛತ್ತಿನ ಪ್ಲಾಸ್ಟರ್ ಉದುರಿ ಮನೆ ತುಂಬಾ ಸಿಮೆಂಟ್ ಮರಳು ಹರಡುತ್ತದೆ. ಮತ್ತೆ ಮನೆ ಸ್ವಚ್ಛ ಮಾಡುವುದೇ ಗೃಹಿಣಿಯರ ಕೆಲಸವಾಗಿದೆ.`ಮನೆಯಲ್ಲಿ ಮಕ್ಕಳು, ಮರಿಗಳು ಇಲ್ಲವೇ ನಮ್ಮ ಮೇಲೆ ಪ್ಲಾಸ್ಟರ್ ಬಿದ್ದರೆ ಏನು ಗತಿ?' ಎಂಬ ಪ್ರಶ್ನೆ ನಿವಾಸಿಗಳದು.`ನಿರಂತರ ಸುರಿದ ಮಳೆಗೆ ಕಟ್ಟಡದ ಬಹುಭಾಗ ಸೋರುತ್ತಿತ್ತು. ಮಳೆ ಮತ್ತು ಮೋಡದಿಂದ ಬೆಳಕಿಗಾಗಿ ವಿದ್ಯುತ್ ದೀಪದ ಬಟನ್ ಅದುಮುವುದಕ್ಕಾಗಿ ಗೋಡೆ ಮುಟ್ಟಿದಾಗ ಏನೋ ಒಂಥರಾ ಆಯಿತು. ಪುಟ್ಟ ಕಂದನನ್ನು ಹಿಡಿದುಕೊಂಡು  ಸುಮಾರು 3 ಗಂಟೆ ನಡುಮನೆಯಲ್ಲಿ ಕುಳಿತುಕೊಂಡು ನರಕ ಯಾತನೆ ಅನುಭವಿಸಿದೆ' ಎನ್ನುತ್ತಾರೆ ಮತ್ತೊಬ್ಬ ಗೃಹಿಣಿ.`ಮುಂಬಾಗಿಲ ಮೇಲೆ ಮತ್ತು ಅಕ್ಕಪಕ್ಕದ ಗೋಡೆಯಲ್ಲಿ ವಿದ್ಯುತ್ ಪ್ರಹಿಸುತ್ತಿರುವುದರಿಂದ ಅಂದಿನಿಂದ ಈವರೆಗೆ ಹಿಂದಿನ ಬಾಗಿಲನ್ನೇ ಬಳಸುತ್ತಿದ್ದೇವೆ' ಎಂದು ಹೆಸರು ಹೇಳಲು ಇಚ್ಛಿಸದ ಗೃಹಿಣಿ ತಾನು ಅನುಭವಿಸಿದ ಕಷ್ಟವನ್ನು `ಪ್ರಜಾವಾಣಿ' ಎದುರು ತೋಡಿಕೊಂಡರು. ಮಲಗುವ ಕೋಣೆ, ಅಡುಗೆ ಮನೆ, ಸಿಟ್‌ಔಟ್ ಹಾಗೂ ಸ್ನಾನ ಗೃಹ ಮತ್ತು ಶೌಚಾಲಯ ದುಃಸ್ಥಿತಿಗೆ ಒಳಗಾಗಿವೆ. ಕೆಲವು ವಸತಿ ಗೃಹಗಳ ಶೌಚಾಲಯಗಳು ಯಾವಾಗ ಬೇಕಾದರೂ ಬೀಳಬಹುದು ಎನ್ನುವ ಸ್ಥಿತಿಯಲ್ಲಿವೆ. ಇದು ಒಬ್ಬರ ಕತೆಯಲ್ಲ.`ಚಿಂಚೋಳಿ ಠಾಣೆಯ ಸಿಬ್ಬಂದಿಗಳಿಗಾಗಿ ನಿರ್ಮಿಸಿದ ವಸತಿ ಗೃಹಗಳಲ್ಲಿ ಮಿರಿಯಾಣ  ಠಾಣೆಯ ಸಿಬ್ಬಂದಿ ಇದ್ದಾರೆ. ಮಿರಿಯಾಣದಲ್ಲಿ ವಸತಿ ಸೌಕರ್ಯಕ್ಕಾಗಿ ಸೂಕ್ತ ಜಾಗದ ಅಲಭ್ಯತೆಯಿಂದ ಅವರು ಚಿಂಚೋಳಿಯ ವಸತಿ ಗೃಹಗಳನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿ ಯಾವುದೇ ಸ್ವಚ್ಛತೆಯಿಲ್ಲ. ನಿರ್ವಹಣೆಯೂ ಕಾಣದಾಗಿದೆ. ಕುಡಿವ ನೀರು ಮತ್ತು ವಿದ್ಯುತ್ ಹೊರತು ಪಡಿಸಿದರೆ ಇವರಿಗೆ ರಸ್ತೆ, ಚರಂಡಿ, ಮಕ್ಕಳಿಗೆ ಆಟದ ಮೈದಾನ ಇಲ್ಲ' ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಉಮಾ ಪಾಟೀಲ.`ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ 4 ವಸತಿ ಗೃಹಗಳ ದುರಸ್ತಿಗೆ ಹಣ ಮಂಜೂರು ಮಾಡಿಸಿದ್ದು ಕೆಲಸ ನಡೆಯುತ್ತಿದೆ. ಇನ್ನೂ ಬಾಕಿ ಇರುವ 32 ಕಟ್ಟಡಗಳು ದುರಸ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲು ಮೇಲಧಿಕಾರಿಗಳು ಸೂಚಿಸಿದ್ದಾರೆ, ಮಳೆ ನಿಂತ ಮೇಲೆ ಅಂದಾಜು ಪಟ್ಟಿ ತಯಾರಿಸಿ ಹಣ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸುವೆ' ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಇಸ್ಮಾಯಿಲ್ ಶರೀಫ್  ತಿಳಿಸಿದರು.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry