ಭಾನುವಾರ, ಆಗಸ್ಟ್ 25, 2019
21 °C
ಪೊಲೀಸರ ಕಾರ್ಯಕ್ಕೆ ಎಸ್ಪಿ ಶ್ಲಾಘನೆ

ಕೊಲೆ ಪ್ರಕರಣ: ನಾಲ್ವರು ಬಂಧನ

Published:
Updated:

ಚಿಂಚೋಳಿ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಪೀಡಿಸುತ್ತಿರುವುದಲ್ಲದೇ, ಅವಳ ಮದುವೆಯ ನಂತರವೂ ಗಂಡನ ಮನೆಗೆ ಹೋಗಿ ಬೆದರಿಕೆ ಹಾಕಿದ್ದ ಸ್ತ್ರೀಲೋಲನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಚಿಂಚೋಳಿ ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ.ಐನೋಳ್ಳಿಯ ಅಶ್ಪಾಖ್ ಇಕ್ಬಾಲ್ (28) ಕೊಲೆಯಾದ ನತದೃಷ್ಟ. ಘಟನೆ ನಡೆದು ಐದು ತಿಂಗಳ ಬಳಿಕ ಆರೋಪಿಗಳಾದ ಸುಬ್ಬಣ್ಣ ಅಂಜಪ್ಪ, ವೆಂಕಟ ವೀರಶೆಟ್ಟಿ, ನಾರಾಯಣ ಬಸಪ್ಪ, ಈಶಪ್ಪ ಅಂಜಪ್ಪ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಝರಣಪ್ಪ ಅಂಜಪ್ಪನ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಡಿವೈಎಸ್ಪಿ ಪರಶುರಾಮ ಕೋರವಾರ ತಿಳಿಸಿದರು.ಮಾರ್ಚ್‌ನಲ್ಲಿ ಘಟನೆ ನಡೆದರೂ, ಅಶ್ಪಾಖ್ ಕಾಣೆಯಾದ ಬಗ್ಗೆ ಠಾಣೆಗೆ ದೂರು ಬಂದಿರಲಿಲ್ಲ ಎಂದ ಅವರು, ಯುಗಾದಿ ಅಮಾವಾಸ್ಯೆಯ ದಿನ ಎತ್ತುಗಳ ಮೈತೊಳೆಯಲು ಜಲಾಶಯಕ್ಕೆ ಹೋದ ಜನರ ಕಾಲಿಗೆ ಬಡಿದ ಅಶ್ಪಾಖ್‌ನ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಆಗ ಅಶ್ಪಾಖ್‌ನ ಸಹೋದರ ಸಯ್ಯದ್ ಮೋಸಿನ್ ಚಿಂಚೋಳಿ ಠಾಣೆಗೆ ದೂರು ನೀಡಿ ತನ್ನ ಅಣ್ಣ ಕಾಣೆಯಾಗಿರುವುದಾಗಿ ತಿಳಿಸಿದ್ದರು.ದೂರು ಆಧರಿಸಿ ತನಿಖೆ ನಡೆಸಿದ ಸರ್ಕಲ್ ಇನ್‌ಸ್ಪೆಕ್ಟರ್ ಇಸ್ಮಾಯಿಲ್ ಶರೀಫ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಸುರೇಶ ಬೆಂಡಗುಂಬಳ ಹಾಗೂ ಸಿಬ್ಬಂದಿ ಮಂಜುನಾಥ, ಬಾಬು ದೇಸಾಯಿ, ನಸೀರ್, ಹುಸೇನ್, ಗುರುಶಾಂತ, ಗೌತಮ ಮತ್ತು ಅಪ್ಪಾರಾವ್ ನೆರವಿನೊಂದಿಗೆ ಕೊಲೆ ರಹಸ್ಯ ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.ಅಶ್ಪಾಖ್ ಪೀಡಿಸುತ್ತಿದ್ದರಿಂದ ನನ್ನ ತಂಗಿಯನ್ನು ಶಾಲೆ ಬಿಡಿಸಿ, ಮದುವೆ ಮಾಡಿ ಕೊಟ್ಟಿದ್ದೆವು. ಆದರೆ, ಆತ ಅಲ್ಲಿಗೂ ಹೋಗಿ ಪೀಡಿಸುತ್ತ, ಅವಳನ್ನು ಎತ್ತಿಕೊಂಡು ಹೋಗುವುದಾಗಿ ಅವಳ ಗಂಡನಿಗೆ ಬೆದರಿಕೆ ಹಾಹಿದ್ದನು. ಇದರಿಂದ ದಾರಿ ಕಾಣದೇ ಅವನನ್ನು ಮುಗಿಸಲು ನಿರ್ಧರಿಸಿ, ಕೊಲೆ ಮಾಡಿದೆವು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.ಶವ ಹೂತಿಟ್ಟಿದ್ದ ಸ್ಥಳಕ್ಕೆ ಭೇಟಿ ನೀಡಿದ ಸೇಡಂ ಸಹಾಯಕ ಆಯುಕ್ತ ಹರ್ಷಾಶೆಟ್ಟಿ ಅನುಮತಿ ಮೇರೆಗೆ ಡಾ.ಸಂಜಯ ಗೋಳೆದ್ ಹಾಗೂ ಡಾ. ವೀರೇಂದ್ರ ಮರಣೋತ್ತರ ಪರೀಕ್ಷೆ ನಡೆಸಿದರು ಎಂದು ಹೇಳಿದರು.ಎಸ್‌ಪಿ ಶ್ಲಾಘನೆ: ಚಿಂಚೋಳಿ ಸರ್ಕಲ್ ಇನ್‌ಸ್ಪೆಕ್ಟರ್ ಇಸ್ಮಾಯಿಲ್ ಶರೀಫ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಸುರೇಶ ಬೆಂಡಗುಂಬಳ ಹಾಗೂ ಸಿಬ್ಬಂದಿ  ಕೊಲೆ ರಹಸ್ಯ ಭೇದಿಸಿದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮೀತಸಿಂಗ್ ಶ್ಲಾಘಿಸಿದ್ದಾರೆ.

Post Comments (+)