ಭಾನುವಾರ, ಆಗಸ್ಟ್ 25, 2019
27 °C
`ಟೋನಿ'ಯೊಂದಿಗೆ `ಚಿತ್ರ-ಸಾಹಿತ್ಯ' ಸಂವಾದ

ಕಳಚಿದ ಸಾಹಿತ್ಯ, ಸಿನಿಮಾ ಕೊಂಡಿ: ಕಿಟ್ಟಿ ಬೇಸರ

Published:
Updated:

ಗುಲ್ಬರ್ಗ: `ಟೋನಿ' ಚಲನಚಿತ್ರ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ಚಿತ್ರನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಜಯತೀರ್ಥ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಕನ್ನಡ ಭವನಕ್ಕೆ ಆಹ್ವಾನಿಸಿ `ಚಲನಚಿತ್ರ ಹಾಗೂ  ಸಾಹಿತ್ಯ' ಕುರಿತು ಅರ್ಥಪೂರ್ಣ ಸಂವಾದ ನಡೆಸಿತು.`ಸಾಹಿತ್ಯ ನನ್ನ ಆಸಕ್ತ ಕ್ಷೇತ್ರ. ಮೊದಲಿಂದಲೂ ಪುಸ್ತಕ ಓದುವ ರೂಢಿ ಉಳಿಸಿಕೊಂಡಿದ್ದೇನೆ. ಇತ್ತೀಚಿಗೆ ಸಾಹಿತ್ಯ ಹಾಗೂ ಸಿನಿಮಾ ನಡುವಿನ ಕೊಂಡಿ ಸ್ವಲ್ಪ ಕಳಚಿದೆ. ಸಾಹಿತ್ಯ, ಸಿನಿಮಾ ಎರಡೂ ಒಂದುಕ್ಕೊಂದು ಪೂರಕವಾಗಿರ ಬೇಕೆನ್ನುವುದು ನನ್ನ ಆಶಯ. ಸಾಹಿತ್ಯ ಕ್ಷೇತ್ರದಲ್ಲಿದ್ದವರು ಸಿನಿಮಾ ಮಂದಿಯನ್ನು ಆಗಾಗ ಕೆಣಕಿ ಎಚ್ಚರಿಸುವ ಕೆಲಸ ಮಾಡಬೇಕು' ಎಂದರು.`ಸಾಹಿತ್ಯ-ಸಿನಿಮಾ ಎರಡೂ ನನಗೆ ಇಷ್ಟ. ಸಿನಿಮಾ ನನ್ನ ಬದುಕು. 7ನೇ ತರಗತಿ ಯಲ್ಲಿದ್ದಾಗಲೇ ಧಾರಾವಾಹಿಯಲ್ಲಿ ನಟಿಸಿದೆ. ಈ ಸವಿನೆನಪಿಗಾಗಿ ಈಚೆಗೆ `ಬಾಲ್ ಪೆನ್' ಎನ್ನುವ ಮಕ್ಕಳ ಸಿನಿಮಾ ನಿರ್ಮಾಣ ಮಾಡಿದೆ. ಈ ಸಿನಿಮಾದಿಂದಾದ ನಷ್ಟಕ್ಕಿಂತಲೂ ಹಿರಿಯ ನಿರ್ದೇಶಕರು ಪ್ರೋತ್ಸಾಹಿಸಲಿಲ್ಲ ಎನ್ನುವ ಕೊರಗು ಈಗಲೂ ಉಳಿದಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.`ರಂಗಭೂಮಿಯ ಆಶಯ ಇಟ್ಟುಕೊಂಡು ಮೌಲ್ಯಗಳನ್ನು ಉಳಿಸಿಕೊಳ್ಳುವ ಸಿನಿಮಾಗಳನ್ನು ನಾನು ನಿರ್ದೇಶಿಸುತ್ತೇನೆ. ಟೋನಿ ಸಿನಿಮಾದಲ್ಲಿ ಜನಪದ ಗರತಿ ಹಾಡುಗಳ ಸಾಲುಗಳನ್ನು ತುಂಬಾ ಹದವಾಗಿ ಬೆರೆಸಿದ್ದೇವೆ. ಬರೀ ಹಣವಿದ್ದರೆ ಸುಖ ಹೊಂದಲು ಸಾಧ್ಯವಾಗು ವುದಿಲ್ಲ. ಹಣ ಹಾಗೂ ಸುಖದ ವ್ಯತ್ಯಾಸವನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಸಾಹಿತ್ಯವಿಲ್ಲದಿದ್ದರೆ ಸಿನಿಮಾ ಶೋ ಪೀಸ್ ಆಗಿ ಬಿಡುತ್ತದೆ. ಯುವ ಪೀಳಿಗೆಗೆ ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸ ಈ ಚಿತ್ರದಲ್ಲಾಗಿದೆ' ಎಂದು ನಿರ್ದೇಶಕ ಜಯತೀರ್ಥ ವಿವರಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಪ್ರಸ್ತಾವಿಕ ಮಾತುಗಳನ್ನಾಡಿ, `ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಪ್ರೀತಿಯನ್ನು ಶ್ರೀನಗರ ಕಿಟ್ಟಿ ಮೊದಲಿ ನಿಂದಲೂ ಕಾಯ್ದುಕೊಂಡಿದ್ದಾರೆ' ಎಂದರು.ಚಲನಚಿತ್ರ ಛಾಯಾಗ್ರಾಹಕ ಸುಜ್ಞಾನಮೂರ್ತಿ, ನಿರ್ಮಾಪಕ ಇಂದ್ರಕುಮಾರ್ ಇದ್ದರು. ಸುರೇಶ ಬಡಿಗೇರ ನಿರೂಪಿಸಿದರು. ಕೆ. ಗಿರಿಮಲ್ಲ ವಂದಿಸಿದರು. ಬಿ.ಎಚ್. ನಿರಗುಡಿ, ಸಾಹಿತಿ ವಸಂತ ಕುಷ್ಟಗಿ ಪಾಲ್ಗೊಂಡಿದ್ದರು.

ಅ. 9ಕ್ಕೆ `ಟೋನಿ' ಬಿಡುಗಡೆ

ಗುಲ್ಬರ್ಗ: `ಟೋನಿ ಏಕ್ ದಿನ್ ಕಾ ಸುಲ್ತಾನ' ಚಿತ್ರತಂಡವು ನಗರದ ಆಳಂದ ರಸ್ತೆಯ ಶೆಟ್ಟಿ ಮಲ್ಟಿಪ್ಲೆಕ್ಸ್‌ಗೆ ಗುರುವಾರ ಭೇಟಿ ಕೊಟ್ಟಾಗ, ನೆರೆದಿದ್ದ ಅಭಿಮಾನಿಗಳು ಶ್ರೀನಗರ ಕಿಟ್ಟಿ ಅವರ ಕೈ ಕುಲುಕಿ ಖುಷಿ ಪಟ್ಟರು. ಅನೇಕರು ಫೋಟೊಗಾಗಿ ವಿನಿಂತಿಸಿದಾಗ ಕಿಟ್ಟಿ, ಅವರ ಸ್ನೇಹಿತನಂತೆ ಹೆಗಲ ಕೈ ಹಾಕಿ ಪೋಸ್ ಕೊಟ್ಟರು.ದಾವಣಗೆರೆ, ಹುಬ್ಬಳ್ಳಿ ನಂತರ ಕೊನೆಯದಾಗಿ ಗುಲ್ಬರ್ಗ ಭೇಟಿಗೆ ಆಗಮಿಸಿದ್ದ ಚಿತ್ರತಂಡದಲ್ಲಿ ನಟಿ ಐಂದ್ರಿತಾ ರೈ ಇಲ್ಲದೇ ಹೋಗಿದ್ದು ಅಭಿಮಾನಿಗಳಲ್ಲಿ ಸ್ವಲ್ಪ ಬೇಸರ ಮೂಡಿಸಿತ್ತು. ಲವಲವಿಕೆಯಿಂದಲೇ ಮಲ್ಟಿಪ್ಲೆಕ್ಸ್  ಅಂಗಳದಲ್ಲಿ ಅಭಿಮಾನಿಗಳೊಂದಿಗೆ ಹೆಜ್ಜೆಹಾಕಿ ಕಿಟ್ಟಿ ಸಂತೋಷಪಟ್ಟರು. ಇದೇ ವೇಳೆ ಟೋನಿ ಸಿನಿಮಾದ ಆಡಿಯೋ ಸಿ.ಡಿ.ಗಳನ್ನು ಆಯ್ದ ಕೆಲವರಿಗೆ ಹಂಚಿದರು.ವೋಡಾಫೋನ್ ನೆಟ್‌ವರ್ಕ್‌ನೊಂದಿಗೆ ಈ ಚಿತ್ರತಂಡವು ಸಹಯೋಗ ಪಡೆದುಕೊಂಡಿದೆ. ಹೀಗಾಗಿ ವೋಡಾಫೋನ್ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿತ್ತು.ಚಿತ್ರದ ನಿರ್ದೇಶಕ ಜಯತೀರ್ಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ಆಳಂದ ತಾಲ್ಲೂಕಿನ ಖಜೂರಿ, ಥಾಯ್ಲೆಂಡ್ ದೇಶಗಳಲ್ಲಿ ಈ ಸಿನಿಮಾ ಚಿತ್ರೀಕರಿಸಲಾಗಿದೆ. ಆಗಸ್ಟ್ 9ರಂದು ಚಿತ್ರವು ಬಿಡುಗಡೆಯಾಗಲಿದ್ದು, ಗುಲ್ಬರ್ಗದ ಜನರು ಅದನ್ನು ಯಶಸ್ವಿಗೊಳಿಸಬೇಕು' ಎಂದು ಕೋರಿದರು.

Post Comments (+)