ಸೋಮವಾರ, ಸೆಪ್ಟೆಂಬರ್ 16, 2019
27 °C

ಕ್ಯಾನ್ಸರ್ ಆಸ್ಪತ್ರೆ ಅಭಿವೃದ್ಧಿ

Published:
Updated:

ಗುಲ್ಬರ್ಗ: ನಗರದ ಕ್ಯಾನ್ಸರ್ ಆಸ್ಪತ್ರೆಯನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. ಪತ್ರಿಕಾ ಭವನಕ್ಕೆ ಭಾನುವಾರ ಭೇಟಿ ನೀಡಿದ ಅವರು, ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.ಕ್ಯಾನ್ಸರ್ ಆಸ್ಪತ್ರೆಯ ಅಭಿವೃದ್ಧಿಗಾಗಿ ರೂ. 10 ಕೋಟಿ ವೆಚ್ಚದ ಯೋಜನೆ ಈಗಾಗಲೇ ರೂಪಿಸಲಾಗಿದೆ. ಅಲ್ಲದೇ ಗುಲ್ಬರ್ಗ, ಗದಗ, ಚಾಮರಾಜನಗರ, ಕಾರವಾರ, ಕೊಡಗು, ಕೊಪ್ಪಳ ಜಿಲ್ಲೆಗಳಲ್ಲಿ 2014-15ರಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.ಹಿಂದಿನ ಸರ್ಕಾರ ಘೋಷಿಸಿದ ಏಳು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಇಲ್ಲಿಯವರೆಗೂ ಎಂಸಿಐ (ಭಾರತೀಯ ವೈದ್ಯಕೀಯ ಮಂಡಳಿ)ಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡದಿರುವುದರಿಂದ ಅನುದಾನ ಹಂಚಿಕೆಯಾಗಿರಲಿಲ್ಲ. ಈಗ ಕಾರ್ಯ ಸುಗಮಗೊಂಡಿದೆ ಎಂದರು.ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ:

ಎಂಬಿಬಿಎಸ್(ವೈದ್ಯ ಪದವಿ) ಅಥವಾ ಎಂಡಿ (ವೈದ್ಯ ಸ್ನಾತಕೋತ್ತರ), ಎಂಎಸ್ ಕೋರ್ಸ್ ಮುಗಿಸಿದ ವೈದ್ಯರು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಒಂದು ವರ್ಷ ಸಂಬಳದೊಂದಿಗೆ ಸೇವೆ ಸಲ್ಲಿಸಲು ಕಾನೂನು ರೂಪಿಸಲಾಗಿದೆ. ಈ ಕರಡು ಪ್ರತಿಗೆ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ದಿಂದ ಅನುಮೋದನೆ ಪಡೆಯಬೇಕಿದೆ.

ಈಗ ವೈದ್ಯಕೀಯ ಸೇವೆ ಸಲ್ಲಿಸದವರಿಗೆ ದಂಡ ನಿಗದಿ ಮಾಡಲಾಗಿದೆ. ಆದರೂ ಅನೇಕರು ದಂಡ ಪಾವತಿಸಿ, ಗ್ರಾಮೀಣ ಸೇವೆ ನಿರಾಕರಿಸಿದ್ದಾರೆ ಎಂದರು. ಈ ಕಾನೂನು ಸೇಡಿಗಾಗಿ ರೂಪಿಸಿಲ್ಲ. ಬದಲಾಗಿ ಗ್ರಾಮೀಣ ಜನರಿಗೆ ವೈದ್ಯಕೀಯ ಸೇವೆ ಅಗತ್ಯವಿದೆ. ಇನ್ನು ದಂಡ ವಸೂಲಿ ಕೈಬಿಟ್ಟು, ಗ್ರಾಮೀಣ ಭಾಗದಲ್ಲಿ ಕಡ್ಡಾಯ ಸೇವೆ ಸಲ್ಲಿಸಿದರೆ ಮಾತ್ರ ಪದವಿ ಪ್ರಮಾಣಪತ್ರ ನೀಡಲಾಗುವುದು ಎಂದು ವಿವರಿಸಿದರು.

Post Comments (+)