ಚೌರಾಸಿಯಾ ಬಾನ್ಸುರಿ ವೈಭವ....

7

ಚೌರಾಸಿಯಾ ಬಾನ್ಸುರಿ ವೈಭವ....

Published:
Updated:
ಚೌರಾಸಿಯಾ ಬಾನ್ಸುರಿ ವೈಭವ....

ಗುಲ್ಬರ್ಗ:  ಬಿಸಿಲೂರಿನ ವೈಭವದ ಗುಲ್ಬರ್ಗ ಉತ್ಸವದಲ್ಲಿ ಶುಕ್ರವಾರ ಸಂಜೆ ತಂಗಾಳಿಯ ಅನುಭವ. ತಾಪಮಾನದ ನಾಡಲ್ಲಿ ಪವಮಾನದ ನಿನಾದ.

-ಅದು ಹವಾಮಾನದ ಏರುಪೇರಲ್ಲ. ಸಂಘಟಕರು ಭಯಪಡುತ್ತಿದ್ದ ಸಿಡಿಲು-ಗುಡುಗು-ಮಳೆಯ ಆಗಮನವಲ್ಲ. ಸಂಗೀತದ ಹೊಸ ಲೋಕವನ್ನು ಸೃಷ್ಟಿಸಿದ ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿ ನಿನಾದ. ಬಿಸಿಲೂರಿನಲ್ಲಿ ಚೌರಾಸಿಯಾ ಬಾನ್ಸುರಿ ವೈಭವ...ಆಗಸದಲ್ಲಿ ಚಂದಿರ ಮೂಡುತ್ತಿದ್ದರೆ, ಮೋಡಗಳು ಕಂಗೊಳಿಸಿ ಆತಂಕ ಮೂಡಿಸಿದ್ದವು. ಹಾಲು ಚೆಲ್ಲಿದ ಬೆಳದಿಂಗಳಲ್ಲಿ ಸಂಗೀತ ಆಹ್ವಾದಿಸಲು ಬಂದ ಶೋತೃಗಳ ಮುಖಭಾವ ಬದಲಾಗಿತ್ತು. ಆದರೆ ಗುಲ್ಬರ್ಗದ ಸಂಗೀತಾಸಕ್ತರಿಗೆ ವರುಣನೂ ಕರುಣಿಸಿದ್ದ. ಸಭಾ ಕಾರ್ಯಕ್ರಮದಲ್ಲಿ ಸುರಿದಿದ್ದ ತುಂತುರು ಹನಿಗಳು ಚೌರಾಸಿಯಾ ನಿನಾದಕ್ಕೆ ತಂಗಾಳಿಯಾಗಿ ತೇಲಿಬಂದಿದ್ದವು. ಗುಲ್ಬರ್ಗ ಜನತೆಗೆ ಜೋಗುಳ ಹಾಡಿದಂತಿತ್ತು. ಭಾಷೆ, ವೇಷ, ಧರ್ಮ ಭೇದಗಳ ಎಲ್ಲೆ ಮೀರಿದ ಸಂಗೀತದ ಝೇಂಕಾರ ಹೊನಲಾಗಿ ಹರಿದಿತ್ತು. ಬಾನ್ಸುರಿಯ ಅಲೆಗಳ ನರ್ತನಕ್ಕೆ ಶ್ರೋತೃಗಳೆಲ್ಲ ತನ್ಮಯ. ಎಲ್ಲೆಲ್ಲೂ ಸಂಗೀತವೇ...ಆಗಸದಲ್ಲಿ ಮೇಘಗಳು ಮರೆಯಾಗಿ, ಬಾನ್ಸುರಿಯ ನಾದವೇ ಭಾನಂಗಳದಲ್ಲಿ ತುಂಬಿತ್ತು. ಇತ್ತ ಸಭಾಂಗಣದಲ್ಲೂ ಹೊಸದೊಂದು ಲೋಕ.  ಇದು 71 ಹರೆಯದ ಪದ್ಮವಿಭೂಷಣ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಬಾನ್ಸುರಿ ವಾದನವು ಸಂಗೀತದ ಮೂಡಿಸಿದ ಪರಿ. ಚೌರಾಸಿಯಾ ಅವರ ಬಾನ್ಸುರಿ ವಾದನ ಕೇಳಲು ಸಮೀಪದ ಜಿಲ್ಲೆಗಳಿಂದಲೂ ಸಂಗೀತ ಅಭಿಮಾನಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮವು ನಿಗದಿಗಿಂತ ತಡವಾಗಿ ಆರಂಭಗೊಂಡರೂ ಶಾಸ್ತ್ರೀಯ ಪ್ರಕಾರಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಗುಲ್ಬರ್ಗದ ಸಂಗೀತಾಭಿಮಾನಿಗಳ ದಂಡು ನೆರೆದಿತ್ತು. ಸಂಗೀತದ ಸ್ವರ ಸ್ವರಗಳನ್ನು ಆಹ್ವಾದಿಸಿ ಚಪ್ಪಾಳ, ತಲೆದೂಗುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ಮಹೇಶ್ ಅವರು ತಬಲಾದಲ್ಲಿ, ಅಶುತೋಷ್ ಅವರು ತಂಬೂರಿ ಹಾಗೂ ಸ್ಥಳೀಯ ಕಲಾವಿದ ರಾಜೇಶ್ ಕೆ.ಎಸ್. ಅವರು ಕೊಳಲಿನಲ್ಲಿ ಸಹಕರಿಸಿದರು.ಲೇಸರ್: ಚೌರಾಸಿಯಾ ಕೊಳಲು ವಾದನಕ್ಕೆ ಮೊದಲು ಲೇಸರ್ ಬೆಳಕಿನ ವೈಭವ ನಡೆಯಿತು. ವಾರ್ತಾ ಇಲಾಖೆ ಸಾದರ ಪಡಿಸಿದ ಲೇಸರ್ ಬೆಳಕಿನ ಕಾರ್ಯಕ್ರಮವು ಸರ್ಕಾರ ಮಡಿಲು ಯೋಜನೆ, ಆರೋಗ್ಯ ಕವಚ, ಮಾಸಾಶನ, ವೃದ್ಧಾಪ್ಯ ವೇತನ, ಮಕ್ಕಳಿಗೆ ಸೈಕಲ್ ವಿತರಣೆ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿತು.ಲೇಸರ್ ಬೆಳಕಿನ ನರ್ತನ ಕಣ್ಣಿಗೆ ಹಿತ ನೀಡಿದರೆ, ಜನತೆ ಕಿವಿಕೊಟ್ಟು, ಮನತಣಿಸಿ, ತನ್ಮಯರಾದದ್ದು ಚೌರಾಸಿಯಾ ಸ್ವರಗಳಿಗೆ. ಬಾನ್ಸುರಿಯಿಂದ ಹೊರಟ ನಾದಗಳು ಆಲೆ ಅಲೆಯಾಗಿ ತೇಲಿ ಬರುತ್ತಿದ್ದಂತೆಯೇ ಸಭಿಕರೆಲ್ಲ ತಲೆದೂಗಿದರು. ಆ ಬಳಿಕ ಮೇಯರ್ ಅಷ್ಫಕ್ ಚುಲ್‌ಬುಲ್ ಅವರು ಎಂದಿನಂತೆ ತಮ್ಮ ಆರಾಧ್ಯ ದೈವ ಮಹ್ಮದ್ ರಫಿ ನೆನಪಿನಲ್ಲಿ ‘ಯಹ್ ಭಾರತ್ ದೇಶ್ ಹೇ ಮೇರಾ’ ಹಾಡನ್ನು ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry