ಪ್ರಸಾದ್ ಬಿದ್ದಪ್ಪ ಬೆಡಗಿಯರ ವಸ್ತ್ರವೈಭವ

7

ಪ್ರಸಾದ್ ಬಿದ್ದಪ್ಪ ಬೆಡಗಿಯರ ವಸ್ತ್ರವೈಭವ

Published:
Updated:
ಪ್ರಸಾದ್ ಬಿದ್ದಪ್ಪ ಬೆಡಗಿಯರ ವಸ್ತ್ರವೈಭವ

ಗುಲ್ಬರ್ಗ: ಗುಲ್ಬರ್ಗ ನಗರದಲ್ಲಿ ಶನಿವಾರ ಸಂಜೆ ಚಂದಿರ ಬೆರಗಾಗಿದ್ದ. ಉಪ್ಪಿನ್ ತೋಟದಲ್ಲಿ ತಾರೆಗಳ ತೋರಣ. ಗಾಢ ವರ್ಣಗಳು, ಗಾಢ ಭಾವಗಳ ಅನಾವರಣ.  ಶನಿವಾರ ಸಂಜೆ ವಸ್ತ್ರ ವಿನ್ಯಾಸಕ ಫ್ಯಾಷನ್ ಲೋಕದ ಗುರು, ಕರ್ನಾಟಕದ ಐಕಾನ್ ಎಂದೇ ಪ್ರಸಿದ್ಧಿಯಾದ ಪ್ರಸಾದ್ ಬಿದ್ದಪ್ಪಗೆ ಮೀಸಲಾಗಿತ್ತು.

ಸಿಂಹದ ಕಟಿಯ, ನೀಳ ಕಾಲುಗಳ ನಳಿನಾಕ್ಷಿಯರ ಬಳಕು, ಅವರ ಬಟ್ಟೆಯ ಥಳಕು, ಚೆಲುವಾಂತ ಚೆನ್ನಿಗರ ನಗುಮೊಗ, ಅವರ ಮೈಗೆ ಅಪ್ಪಿದ ಹತ್ತಿ ವಸ್ತ್ರ... ಎಲ್ಲವೂ ಗಮನ ಸೆಳೆದವು. ಮನಸೂರೆಗೊಂಡವು.

ಫ್ಯಾಶನ್ ಲೋಕದ ಮೂಲ ಸೆಲೆಯನ್ನೇ ಜನರ ಮುಂದೆ ಬಿಚ್ಚಿಟ್ಟರು ಬಿದ್ದಪ್ಪ. ಕೈಮಗ್ಗ ಹಾಗೂ ಖಾದಿಯನ್ನು ಜನಪ್ರಿಯಗೊಳಿಸುವಲ್ಲಿ ಕೈಗೊಂಡ ಆಂದೋಲನದ ಪ್ರತೀಕವಾಗಿ ಇಲ್ಲಿ ಇನ್ನೊಂದು ಹಂತವನ್ನು ಮುಂದೆ ಸಾಗಿದರು. ಕೈ ಮಗ್ಗದ ಬಟ್ಟೆಯಲ್ಲಿರುವುದನ್ನು ಗುರುತಿಸಿ, ಬಳಸಿ, ಜವಳಿ ಉದ್ಯಮ ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ನೀಡಿದರು. ಕೊನೆಯ ಪಕ್ಷ ವರ್ಷಕ್ಕೆ ಒಮ್ಮೆಯಾದರೂ ಖಾದಿ ಬಟ್ಟೆ ಕೊಳ್ಳುವ ಒಲವು ನಮ್ಮಲ್ಲಿ ಬೆಳೆಯಬೇಕು. ಕೈ ಮಗ್ಗದ ಉದ್ಯಮದಲ್ಲಿರುವ ನೇಕಾರರು ಸಮೃದ್ಧವಾಗಿ ಬಾಳಬೇಕು ಎಂಬ ಸಂದೇಶವನ್ನು ನೀಡಿದರು.

ಅದಕ್ಕೆ ತಕ್ಕಂತೆ ಅವರ ಇಡಿಯ ಫ್ಯಾಶನ್ ಷೋ, ಖಾದಿ ಬಗೆಗಿರುವ ಅವರ ‘ಪ್ಯಾಷನ್’ ಸಹ ಬಿಚ್ಚಿಟ್ಟಿತು. ಮೊದಲ ಸುತ್ತಿನಲ್ಲಿ ಬೆಂಗಳೂರಿನ ಕಾಜಲ್ ಅವರ ಕೈಮಗ್ಗದ ಸುಂದರ ಸಂಗ್ರಹ ಅನಾವರಣಗೊಂಡಿತು. ಕೂರಲಗಿನಂಥ ಹಿಮ್ಮಡಿಯ ಪಾದರಕ್ಷೆ ಧರಿಸಿದ ಸುಂದರಿಯರು ಗಾಳಿಯಲ್ಲಿ ತೇಲಿದಂತೆ ಹೆಜ್ಜೆ ಇಟ್ಟರು. ಅವರ ತಿಳಿ ವರ್ಣದ ಉಡುಗೆಗಳು ಜನರ ಮನಸೂರೆಗೊಂಡವು. ಮುಂದಿನ ಸುತ್ತು ಅಮೆಂಡಾ ಬಚ್ಚಳಿಯವರ ರಾಜಸ್ತಾನಿ ಬ್ಲಾಕ್‌ಗಳ ವಿಶಿಷ್ಟ ಸಂಗ್ರಹವನ್ನು ತೆರೆದಿಟ್ಟರು. ಮಾನವರ ಬೆರಳಚ್ಚಿನಂತೆಯೇ ಈ ಅಚ್ಚುಗಳೂ ಒಂದಕ್ಕಿಂತ ಒಂದು ಭಿನ್ನ ಎಂಬ ಮಾಹಿತಿಯನ್ನೂ ಬಿದಪ್ ನೀಡಿದರು.

ಇದಾದ ನಂತರದ ವಿವಾಹ ಸಂಗ್ರಹವನ್ನು ಕಡುಗಾಢ ವರ್ಣಗಳಲ್ಲಿ ತೊಟ್ಟ ಚೆಲುವರು ಬಂದರು. ನೇರ ನಡಿಗೆಯ ಆತ್ಮವಿಶ್ವಾಸದ ನೋಟದ ಈ ಸುಂದರಾಂಗರ ನಡುವೆ ಪರದೆಯ ಮರೆಯಲ್ಲಿದ್ದ ಸುಂದರಾಂಗಿ ಲಲನೆ ನಿಧಾನದ ಹೆಜ್ಜೆ ಇಟ್ಟು ಬಂದರು. ಕಡುಕೆಂಪು ವರ್ಣದ ಆ ಮಾಡೆಲ್‌ಗೆ ಸೀರೆಯನ್ನಪ್ಪಿದ್ದರೋ, ಸೀರೆಯೇ ಅವರನ್ನಪ್ಪಿತೋ ಎಂಬ ಅಯೋಮಯದಂತಿತ್ತು ಆ ವಸ್ತ್ರ ವೈಭವ.  ಈ ಸುತ್ತಿನ ನಂತರದ ರೂಪಾ ಪೆನ್ನರಾಜ ವಿನ್ಯಾಸಕಿಯ ‘ಕಲಾಂತ’ ಸಂಗ್ರಹ. ನೋಡಲೂ ತಂಪು, ಉಡಲೂ ಸರಳ, ಸಹಜ ಸುಂದರ ಸಂಗ್ರಹದಲ್ಲಿ ಪಾರದರ್ಶಕ ಉಡುಗೆಗಳಲ್ಲಿ ಅಪಾರ ದರ್ಶನವಾದರೂ ಅಶ್ಲೀಲವೆನಿಸದ ಗ್ಲಾಮರ್ ನೋಟ ಬೆಡಗಿಯರು ನೀಡಿದರು. ಪುರುಷರ ಸರಳ ಸಂಗ್ರಹವೂ ಹೊಸತನವನ್ನು ಸೃಷ್ಟಿಸಿತು.

ಲಾಲ್ವಾನಿಯವರ ಸಂಜೆಯುಡುಗೆಯ ಸಂಗ್ರಹ ಇಂಡಿಯಾ ಫ್ಯಾಶನ್ ವೀಕ್‌ನಿಂದ ನೇರವಾಗಿ ಗುಲ್ಬರ್ಗದ ಉಪ್ಪಿನ್ ತೋಟದ ಅಂಗಳಕ್ಕೆ ಬಂದಿದ್ದವು. ತಿಳಿ ವರ್ಣದ, ಮಿನುಗು ಮಿಂಚಿನ ಉಡುಗೆಗಳಲ್ಲಿ ಹುಡುಗಿಯರ ಥಳಕು, ಬಳಕು, ಬೆಳಕು, ಬಿನ್ನಾಣಗಳಿಗೆ ಗುಲ್ಬರ್ಗದ ಅಧಿಕಾರಿ ವರ್ಗವೂ ಸೇರಿದಂತೆ ನೆರೆದವರೆಲ್ಲ ಬೆರಗಾಗಿ ನೆಟ್ಟದೃಷ್ಟಿಯಿಂದ ನೋಡುತ್ತಿದ್ದರು. ಕೆಲಕ್ಷಣದವರೆಗೆ ಅನಿಮಿಷನೇತ್ರರಾಗಿದ್ದರು.

ಕೊನೆಯ ಸುತ್ತಿನಲ್ಲಿ ಬಾಂಗ್ಲಾ ದೇಶದ ಸೊಗಡನ್ನು ಅದೇ ಭಾಷೆಯ ಹಿನ್ನೆಲೆಯ ಸಂಗೀತದಲ್ಲಿ ಲವಲವಿಕೆಯ ಹೆಜ್ಜೆ ಹಾಕಿದರು. ಬಿ.ಬಿ.ರಸಲ್ ವಿನ್ಯಾಸಕಿಯ ಕೈಮಗ್ಗದ ವಸ್ತ್ರದಲ್ಲಿ ಕರಕುಶಲ ವೈಭವದ ವಸ್ತ್ರಸಂಗ್ರಹ ಜನರ ಗಮನ ಸೆಳೆದವು. ಕೇವಲ ನಾಲ್ಕುಗೋಡೆಗಳ ನಡುವಿನ ರ್ಯಾಂಪ್‌ಗೆ ಸೀಮಿತರಾಗಿದ್ದ ಮಾಡೆಲ್ ಸಮೂಹ ಇಲ್ಲಿಯ ಜನಸಾಗರದ ನಡುವೆ ಪ್ರದರ್ಶನ ನೀಡಲು ಉತ್ಸಾಹ ತೋರುತ್ತಿದ್ದಾರೆ ಎಂದು ಬಿದಪ್ ಹೇಳಿದರು.

ಇಡೀ ಶೋ ಉದ್ದಕ್ಕೂ ಜೀವಂತಿಕೆಯಿಂದ ಮಾಹಿತಿ, ವಿವರಣೆಯನ್ನು ನೀಡುತ್ತ ಆಕರ್ಷಕ ಷೋ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಭಿರುಚಿ ಇರುವಲ್ಲಿ ಮಕ್ಕಳಿಗೆ ಓದಿಸಿ, ಈ ಕ್ಷೇತ್ರದಲ್ಲೂ ಬರಲು ಪ್ರೋತ್ಸಾಹಿಸಿ. ಅವರ ಸೃಜನಶೀಲ ಸಾಮರ್ಥ್ಯವನ್ನು ಪ್ರೋತ್ಸಾಹಿಸಿ ಎಂಬ ಸಂದೇಶ ನೀಡಿ ನೆರೆದವರ ಮನ ಮುಟ್ಟಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry