ಸಂತೋಷಕ್ಕೆ ಹದಿನೆಂಟು ಅಧ್ಯಾಯಗಳು

7

ಸಂತೋಷಕ್ಕೆ ಹದಿನೆಂಟು ಅಧ್ಯಾಯಗಳು

Published:
Updated:

ಸಂತೋಷವಾಗಿರುವವರು ವಿರಳ. ಆದರೆ, ಸಂತೋಷವಾಗಿರುವುದು ಹೇಗೆ ಎಂದು ಅವರಿಂದ ಕಲಿಯುವವರು ಇನ್ನೂ ವಿರಳ. ಸಂತೋಷವಾಗಿರುವುದಕ್ಕೆ ಒಂದು ರೀತಿಯ ಕೌಶಲ ಬೇಕು. ಅದಕ್ಕೆ ತಕ್ಕ ತಯಾರಿ ಬೇಕು. ಅಂತಹ ಕೆಲವು ತಯಾರಿಗಳನ್ನು ಎಲ್ಲರೂ ಮಾಡಬಹುದು. ಇಲ್ಲಿವೆ ಅದಕ್ಕೆ ಕೆಲವು ಸೂತ್ರಗಳು.

ಮೊದಲ ಸೂತ್ರ: ಸಂತೋಷವಾಗಿರುವವರು ಸಾಮಾನ್ಯವಾಗಿ ದಕ್ಷರಾಗಿರುತ್ತಾರೆ. ವರ್ಷದ ತೆರಿಗೆ ಸಲ್ಲಿಕೆಯನ್ನು ಕಾಲಕಾಲಕ್ಕೆ ಮುಗಿಸುತ್ತಾರೆ. ಮನೆಯಲ್ಲಿ ಸಣ್ಣಪುಟ್ಟ ವಸ್ತುಗಳನ್ನು, ಅಂದರೆ, ಸೂಜಿ, ಮಾತ್ರೆ, ಟಾರ್ಚು ಇತ್ಯಾದಿ ವಸ್ತುಗಳನ್ನು ಓರಣವಾಗಿ ಇಡುತ್ತಾರೆ. ಎಲ್ಲವನ್ನೂ ಹರಡಿಕೊಂಡಿರುವವರು ಅದನ್ನೇ ತಮ್ಮ ಸ್ವಾತಂತ್ರ್ಯದ ಸಂಕೇತ ಎನ್ನುವಂತೆ ಭಾಷಣ ಬಿಗಿಯಬಹುದು. ಆದರೆ, ಅದು ಭಾಷಣ ಅಷ್ಟೆ.

ಎರಡನೆ ಸೂತ್ರ: ಸಂತೋಷವಾಗಿರುವವರು ಸಾಮಾನ್ಯವಾಗಿ ವಸ್ತುಗಳನ್ನು ಅಡಕಿರಿಯುವಂತೆ ಮನೆಯ ತುಂಬಾ ತುಂಬಿಕೊಳ್ಳುವುದಿಲ್ಲ. ವಸ್ತುಗಳು ಕಡಿಮೆಯಾಗುತ್ತಿರಬೇಕು. ಅದರಲ್ಲೂ ವಿಶೇಷವಾಗಿ ಹಳೆಯ ರದ್ದಿ ವಸ್ತುಗಳು ಹೊರಹೋಗಬೇಕು. ಅದರರ್ಥ ಇವರು ಹೊಸಹೊಸ ಸಾಮಾನುಗಳನ್ನು ತಂದುಕೊಳ್ಳುತ್ತಾರೆ ಎಂದಲ್ಲ. ಹಳೆಯ ವಸ್ತುಗಳನ್ನು ಅದು ಕೆಲಸಮಾಡುವವರೆಗೂ ಜೋಪಾನವಾಗಿ ಉಪಯೋಗಿಸಿ, ಆಮೇಲೆ, ಎಸೆಯುತ್ತಾರೆ. ಅಪರಿಗ್ರಹ ಎನ್ನುತ್ತಾರಲ್ಲ, ಅದರ ಒಂದು ಸರಳ ರೂಪ ಇದು.

ಮೂರನೆಯ ಸೂತ್ರ: ಸಂತೋಷವಾಗಿರುವವರು ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾರೆ. ಆದರೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ ಎಂದಲ್ಲ. ಆರೋಗ್ಯವನ್ನು ಹೆಚ್ಚಿಸುವ ಸ್ವಭಾವಗಳು ಅವರಿಗೆ ಸಹಜ ರೂಢಿಯಂತೆ ಆಗಿರುತ್ತದೆ.

ನಾಲ್ಕನೆಯ ಸೂತ್ರ: ಸಂತೋಷವಾಗಿರುವವರು ತಮ್ಮ ಸುತ್ತದ ಜನರ ಬಗ್ಗೆ, ಪ್ರಪಂಚದ ಬಗ್ಗೆ ಕಾನ್‌ಸ್ಪಿರಸಿ ಥಿಯರಿಗಳನ್ನು ಹೊಂದಿರುವುದಿಲ್ಲ. ಅಂದರೆ, ನಡೆದ ಘಟನೆಗಳು ಯಾವಯಾವುದೋ ಮಸಲತ್ತುಗಳಿಂದ, ಯಾರಯಾರದೋ ಷಡ್ಯಂತ್ರಗಳಿಂದ ಆಗಿರುವಂಥದ್ದು ಎನ್ನುವ ರೀತಿಯಲ್ಲಿ ಯೋಚಿಸುವುದಿಲ್ಲ. ಇಂತಹ ಕಾನ್‌ಸ್ಪಿರಸಿ ಥಿಯರಿಗಳನ್ನು ಹೆಣೆಯುವ ಜನರನ್ನು ನೋಡಿದ ತಕ್ಷಣವೇ ನೀವು ನಿರ್ಧರಿಸಬಹುದು, ಇವರು ದುಃಖಿಗಳು ಎಂದು. ಬಹುಶಃ ಈ ಸೂತ್ರದ ಪ್ರಕಾರ ನೀವೂ ದುಃಖಿಗಳಾಗಿರುವ ಸಾಧ್ಯತೆಯೇ ಹೆಚ್ಚು. ಸಂತೋಷವಾಗಿರುವವರು, ನಡೆವ ಘಟನೆಗಳು ಹಲವಾರು ಕಾರಣಗಳಿಂದ ನಡೆಯುತ್ತವೆ. ಯಾರೋ ಒಬ್ಬರು ಎಲ್ಲೋ ಕುಳಿತುಕೊಂಡು ಅದನೆಲ್ಲಾ ನಡೆಸುವ ಹುನ್ನಾರ ಮಾಡುತ್ತಿಲ್ಲ ಎನ್ನುವ ಸರಳ ಸತ್ಯವನ್ನು ಕಂಡಿರುತ್ತಾರೆ.

ಐದನೆಯ ಸೂತ್ರ: ಸಂತೋಷವಾಗಿರುವವರು ಸರಳತೆ ಮತ್ತು ಸೌಂದರ್ಯ ಎರಡನ್ನೂ ಜೊತೆಜೊತೆಯಾಗಿಯೇ ತೂಗಿನೋಡುತ್ತಾರೆ. ಸಾಮಾನ್ಯವಾಗಿ, ತಮ್ಮ ಸಹಜ ರೂಪವನ್ನು ಎಷ್ಟು ಕನಿಷ್ಠ ತಿದ್ದುವುದರಿಂದ ಸುಂದರವಾಗಿ ಕಾಣಬಹುದೋ ಅಷ್ಟು ಮಾತ್ರವೇ ಸೌಂದರ್ಯಕ್ಕಾಗಿ ತಮ್ಮನ್ನು ತಿದ್ದಿತೀಡಿಕೊಳ್ಳುತ್ತಾರೆ. ಗಾಢ ಬಣ್ಣಗಳಿಂದ ಮನೆಯನ್ನು ಅಲಂಕರಿಸುವವರು, ಪ್ಲಾಸ್ಟಿಕ್ ಹೂವುಗಳನ್ನು ಶೋಕಿಗಾಗಿ ಎಲ್ಲೆಲ್ಲೂ ಇಡುವವರು ಇವರೆಲ್ಲಾ ಗಾಢ ದುಃಖಿಗಳು.

ಆರನೆಯ ಸೂತ್ರ: ಸಂತೋಷವಾಗಿರುವವರು ತಮಗಿಂತಲೂ ಮಿಗಿಲಾದ, ತಮಗಿಂತಲೂ ಹಿರಿದಾದ, ಪ್ರಾಚೀನವಾದ, ತಲತಲಾಂತರದ, ಸನಾತನವಾದ ಯಾವುದೋ ಒಂದನ್ನು ಕುರಿತು ಶ್ರದ್ಧೆಯುಳ್ಳವರಾಗಿರುತ್ತಾರೆ. ಅದು ದೇವರಾಗಿರಬಹುದು, ಗಣಿತವಾಗಿರಬಹುದು, ಸಂಗೀತವಾಗಿರಬಹುದು ಅಥವಾ ಸಾಹಿತ್ಯವಾಗಿರಬಹುದು. ಆದರೆ ಈ ಶ್ರದ್ಧೆಯನ್ನು ಆದಷ್ಟೂ ತಮ್ಮೊಳಗೇ ಇಟ್ಟುಕೊಂಡಿರುತ್ತಾರೆಯೇ ಹೊರತೂ ಪರರಿಗೆ ತೋರುವಂತೆ ಮಾಡುವುದಿಲ್ಲ.

ಏಳನೆಯ ಸೂತ್ರ: ದುಃಖಿಗಳು ದ್ವೇಷಿಗಳು. ಸಂತೋಷವಾಗಿರುವವರು ಇತರರ ಕುರಿತು ಕಾಳಜಿ ಮತ್ತು ಆಸಕ್ತಿ ಹೊಂದಿರುವವರು. ನಾಲ್ಕು ಜನರ ಮಧ್ಯೆ ಕುತೂಹಲದಿಂದ ಇತರರ ಮಾತನ್ನು ಕೇಳಿಸಿಕೊಳ್ಳುವವರು. ಮತ್ತು ಎಲ್ಲೆಲ್ಲೋ, ಯಾರಯಾರ ಬಳಿಯೋ, ಗಂಭೀರ ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ಹೇಳುವ ಗೋಜಿಗೆ ಹೋಗದವರು.

ಎಂಟನೆಯ ಸೂತ್ರ: ಸಂತೋಷವಾಗಿರುವವರು ಸತ್ಯವಂತರೂ ಆಗಿರುತ್ತಾರೆ. ಇದು ಬಹಳ ವಿಚಿತ್ರದ ಸಂಗತಿ. ಇವರೆಲ್ಲಾ ಸತ್ಯ ಹರಿಶ್ಚಂದ್ರನ ರೀತಿ ಸತ್ಯಕ್ಕಾಗಿ ಮಡದಿ ಮಕ್ಕಳನ್ನೇ ಮಾರುವ ತರಲೆ ತಾಪತ್ರಯಕ್ಕೆಲ್ಲಾ ಹೋಗದಿದ್ದರೂ, ಸುಮಾರಾಗಿ, ಸತ್ಯದ ಹಾದಿಯಿಂದ ತುಂಬಾ ದೂರ ಆಚೀಚೆ ಓಡಾಡುವ ಸಾಹಸ ಮಾಡದಿರುವವರು. ಆದರೆ, ಸತ್ಯದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡು, ತಾನು ಸತ್ಯವಂತನಾಗಿದ್ದೇನೆ ಎನ್ನುವ ವ್ರತದಲ್ಲಿರುವವರು ಬಹಳ ದುಃಖಿಗಳು. ಎಲ್ಲವೂ ಸಹಜವಾಗಿ ಇರುವುದೇ ಸಂತೋಷಕ್ಕೆ ಹೆದ್ದಾರಿ.

ಒಂಬತ್ತನೆಯ ಸೂತ್ರ: ಸಂತೋಷವಾಗಿರುವವರು ಬೌದ್ಧಿಕಜ್ಞಾನವನ್ನು ತುಂಬಾ ನೆಚ್ಚಿಕೊಳ್ಳುವುದಿಲ್ಲ. ಹಾಗೆಂದು ಅದರ ಕುರಿತು ಅಸಡ್ಡೆಯನ್ನೂ ಮಾಡುವುದಿಲ್ಲ. ಕಲಿಯಬೇಕಾದ ಎಲ್ಲ ವಿದ್ಯೆಗಳನ್ನೂ ಸೂಕ್ಷ್ಮವಾಗಿ ಕಲಿಯುತ್ತಾರೆ. ಎಲ್ಲಕ್ಕಿಂತಾ ಮುಖ್ಯ, ಸದಾ ಕಲಿಕೆಯಲ್ಲಿರುತ್ತಾರೆ. ಖಂಡಿತವಾಗಿಯೂ ಸಂತೋಷವಾಗಿರುವವರು ಆಧುನಿಕರ ರೀತಿಯ ಸ್ವ–ಲೋಲುಪವಾದ ವಿಚಾರಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದಕ್ಕೆ ಪರಿಹಾರವಿದೆಯೋ ಅದು ಸಮಸ್ಯೆ. ಯಾವುದಕ್ಕೆ ಪರಿಹಾರವಿಲ್ಲವೋ ಅದು ವಿಧಿ ಎನ್ನುವ ಸರಳ ವ್ಯತ್ಯಾಸವನ್ನು ಅರಿತವರಾಗಿರುತ್ತಾರೆ. ಮತ್ತು ವಿದ್ಯೆ ಎಂದರೆ ಪ್ರಯೋಜನವಿರುವಂಥದ್ದೇ ಹೊರತೂ, ಶೋಭೆಗೆ ಇರುವಂಥದ್ದಲ್ಲ ಎಂದು ತಿಳಿದಿರುತ್ತಾರೆ. ಪ್ರಯೋಜನವೆಂದರೆ ಇಹಪರದಲ್ಲಿ ಯಾವುದೋ ಒಂದು ಪ್ರಯೋಜನ ಎಂದರ್ಥ.

ಹತ್ತನೆಯ ಸೂತ್ರ: ಸಂತೋಷವಾಗಿರುವವರು ಗುರಿಯಿಲ್ಲದಂತೆ ಅಲೆಯುವುದಿಲ್ಲ. ಹಾಗೆಂದು ಕುಳಿತ ಕಡೆಯೇ ಕುಳಿತಿರುವುದೂ ಇಲ್ಲ. ಸದಾ ಚಟುವಟಿಕೆಯಿಂದಿರುತ್ತಾರೆ. ಆದರೆ ಅವರ ಚಟುವಟಿಕೆಗೆ ಯಾವಾಗಲೂ ಗುರಿ ಇಲ್ಲದಿದ್ದರೂ, ಒಂದು ಕ್ರಮವಂತೂ ಇರುತ್ತದೆ.

ಹನ್ನೊಂದನೆಯ ಸೂತ್ರ: ಸಂತೋಷವಾಗಿರುವವರಿಗೆ, ಕಿರಿಕಿರಿಯ ಸಂದರ್ಭ ಬಂದಾಗ, ಕಷ್ಟದ ಸಂದರ್ಭ ಬಂದಾಗ, ತಮ್ಮ ದೃಷ್ಟಿಕೋನವನ್ನು ಬದಲಾಯಿಸಿ ತಮ್ಮ ಸ್ಥಿತಿಯನ್ನು ಹೊರಗಿನಿಂದ, ಸಮಚಿತ್ತದಿಂದ ನೋಡುವ ಕೌಶಲ ಇರುತ್ತದೆ. ಈ ಕೌಶಲ ಕೇವಲ ಕಷ್ಟದ ಸಂದರ್ಭದಲ್ಲಿ ಮಾತ್ರವಲ್ಲ, ಬದಲಾಗಿ ಎಲ್ಲಾ ರೀತಿಯ ಸಂದರ್ಭಗಳಲ್ಲೂ ಜಾಗೃತವಾಗಿರುತ್ತದೆ. ತಪ್ಪುಗಳನ್ನು ಸುಲಭವಾಗಿ ತಿದ್ದಿಕೊಳ್ಳಲು ಇದು ಕೆಲಸಕ್ಕೆ ಬರುತ್ತದೆ.

ಹನ್ನೆರಡನೆಯ ಸೂತ್ರ: ನಿಜವಾಗಿ ಸಂತೋಷವಾಗಿರುವವರು ಯಾರೂ ಸಿಕ್ಕಾಪಟ್ಟೆ ಸಂತೋಷವಾಗಿರುವುದಿಲ್ಲ. ಒಂದು ಹದದಲ್ಲಿ ಸಂತೋಷದಿಂದಿರುತ್ತಾರೆ.

ಹದಿಮೂರನೆಯ ಸೂತ್ರ: ಸಂತೋಷವಾಗಿರುವವರು ಇತರರಿಗೆ ಉಪಯೋಗಕ್ಕೆ ಬರುವವರೂ ಆಗಿರುತ್ತಾರೆ. ಹಾಗಲ್ಲದೇ ಸಂತೋಷವಾಗಿರುವುದಕ್ಕೆ ಬೇರೆಯವರು ಬಿಡಬೇಕಲ್ಲ.

ಹದಿನಾಲ್ಕನೆಯ ಸೂತ್ರ: ಸಂತೋಷವಾಗಿರುವವರು ಇತರರನ್ನು ಕುರಿತು ಟೀಕೆ ಮಾಡುವಾಗ ತೀವ್ರವಾದ ಮಾಪನಗಳನ್ನು, ಪ್ರಮಾಣಗಳನ್ನು ಬಳಸುವುದಿಲ್ಲ. ತಪ್ಪುಗಳಲ್ಲಿ ಮಾಡುವ ಅಂಶ ಎಷ್ಟಿದೆಯೋ, ಆಗುವ ಅಂಶವೂ ಅಷ್ಟೇ ಇರುತ್ತದೆ ಎಂದು ಇವರು ತಿಳಿದಿರುತ್ತಾರೆ.

ಹದಿನೈದನೆಯ ಸೂತ್ರ: ಸಂತೋಷವಾಗಿರುವವರ ಪ್ರಕಾರ ಪ್ರಪಂಚ ಸಾಮಾನ್ಯವಾಗಿ ಸರಿಯಾಗಿಯೇ ಇರುತ್ತದೆ. ರಿಪೇರಿ ಆಗಬೇಕಿರುವುದು ನಾವು ಎನ್ನುವ ಕನಿಷ್ಠ ಸೌಜನ್ಯ ಅವರಿಗೆ ಇರುತ್ತದೆ.

ಹದಿನಾರನೆಯ ಸೂತ್ರ: ಸಂತೋಷವಾಗಿರುವವರ ಮಾತಿಗೆ ಸಮದೃಷ್ಟಿ ಇರುವಂತೆ, ಅವರ ಧ್ವನಿಗೆ ಸಮಶ್ರುತಿಯೂ ಇರುತ್ತದೆ. ಅವರ ಮಾತಿನ ವರಸೆಗೆ ಸಮಸೂತ್ರವೂ ಇರುತ್ತವೆ. ಹದಿನೇಳನೆಯ ಸೂತ್ರ: ಸಂತೋಷವಾಗಿರುವವರಿಗೆ ಸಂತೋಷವಾಗಿರುವುದೇ ಒಂದು ದೊಡ್ಡ ಗುರಿ, ಒಂದು ದೊಡ್ಡ ಆದರ್ಶ ಎಂದೇನೂ ಅನ್ನಿಸುವುದಿಲ್ಲ.

ಹದಿನೆಂಟನೆಯ ಸೂತ್ರ: ದುಃಖಿಗಳು ಸಾಮಾನ್ಯವಾಗಿ ಅಸಾಮಾನ್ಯ ಬುದ್ಧಿ ಇರುವವರೂ, ಅಥವಾ ಬಹಳ ಪ್ರತಿಭೆ ಇರುವವರೂ ಆಗಿರುತ್ತಾರೆ. ಸಂತೋಷವಾಗಿರುವವರು ಬುದ್ಧಿಯನ್ನು ಸಂಸ್ಕಾರದಿಂದ ಬಾಗಿಸಿ, ಪ್ರತಿಭೆಯನ್ನು ಸಾಧನೆಯಿಂದ ಬಗ್ಗಿಸಿ, ಹತೋಟಿಯಲ್ಲಿಟ್ಟುಕೊಂಡಿರುತ್ತಾರೆ.

ಹದಿನೆಂಟು ಅಧ್ಯಾಯ ಮುಗಿದಮೇಲೆ, ಬಿಲ್ಲುಬಾಣ ಏರಿಸಿಕೊಂಡು ಯುದ್ಧಕ್ಕೇ ಸಿದ್ದರಾದವರಿದ್ದಾರೆ. ನಿಮಗೇನು ಕಡಿಮೆ? ಹೊರಡಿ. ವಿಜಯೀಭವ.  

 

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !