660 ವಿದ್ಯಾರ್ಥಿಗಳಿಗೆ 3 ಅಡುಗೆ ಸಿಬ್ಬಂದಿ!

7
ಅಡುಗೆ ಸಿಬ್ಬಂದಿ ಸಮಸ್ಯೆ ನಿವಾರಣೆಗೆ `ಚೆಕ್' ಅಡಚಣೆ

660 ವಿದ್ಯಾರ್ಥಿಗಳಿಗೆ 3 ಅಡುಗೆ ಸಿಬ್ಬಂದಿ!

Published:
Updated:

ಗುಲ್ಬರ್ಗ:  `ಹಬ್ಬವೂ ಆಗಬೇಕು; ಗೋಧಿಯೂ ಉಳಿಯಬೇಕು.. ಹಾವು ಸಾಯಬೇಕು; ಕೋಲು ಮುರಿಯಬಾರದು'..

-ಇದು ಸರ್ಕಾರ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಧೋರಣೆ. ಇದರಿಂದಾಗಿ ಜಿಲ್ಲಾ ವಸತಿನಿಲಯ ದಿನಗೂಲಿ ನೌಕರರ ಸಂಘದ ಸದಸ್ಯರು ಪರದಾಡುವಂತಾಗಿದೆ. ಅಷ್ಟೇ ಅಲ್ಲ, ನಾಲ್ಕು ದಿನಗಳಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿ, ಆಸ್ಪತ್ರೆಗೆ ದಾಖಲಾದ ಘಟನೆಯೂ ನಡೆದಿದೆ.ದಿನಗೂಲಿ ನೌಕರರಿಗೆ ಕನಿಷ್ಠ ರೂ. 5,400 ವೇತನ ನೀಡಬೇಕು. ಈ ಹಣವನ್ನು `ಚೆಕ್' ಮೂಲಕವೇ ಪಾವತಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹ. ಆದರೆ, ಈ ಬಗ್ಗೆ ಸರ್ಕಾರ ಹೇಳುವುದೇ ಬೇರೆ. `ಅಡುಗೆ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಪೂರ್ಣ ದಿನಗಳಿಗೆ ಪಡೆದಲ್ಲಿ ಹೆಚ್ಚಿನ ವೆಚ್ಚವಾಗುತ್ತದೆ.ಆದ್ದರಿಂದ, ಈ ವ್ಯವಸ್ಥೆಗೆ (ಅಡುಗೆ ಮಾಡಲು) ಅನಿಪುಣ, ಅಂಶಕಾಲಿಕ ಕೆಲಸದಾಳುಗಳ ಸೇವೆ ಪಡೆಯಬೇಕು. ಇದರಿಂದ ಸರ್ಕಾರಕ್ಕೆ ಉಳಿತಾಯವಾಗಲಿದೆ. ಅಲ್ಲದೇ, ಅವರ ಮೇಲೆ ನಿಯಂತ್ರಣ ಇರುವುದರಿಂದ ಅವರ ಸೇವೆಯನ್ನು ಪಡೆಯುವುದು, ಮರುಪ್ರಾರಂಭಿಸಲು ಅನುಕೂಲವಾಗುತ್ತದೆ' ಎಂದು ಸರ್ಕಾರದ ನಡಾವಳಿಗಳಲ್ಲಿ ತಿಳಿಸಲಾಗಿದೆ. ಹೀಗಾಗಿ, ಸಮಸ್ಯೆ ಕಗ್ಗಂಟಾಗಿದೆ.ಕೂಲಿ ಸೇವೆ: ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ 104 ಹಾಸ್ಟೆಲ್‌ಗಳಿದ್ದು, 275 `ಕಾಯಂ' ಸಿಬ್ಬಂದಿ (ಅಡುಗೆಯವರು, ಅಡುಗೆ ಸಹಾಯಕರು ಮತ್ತು ಕಾವಲುಗಾರರು) ಕೆಲಸ ನಿರ್ವಹಿಸುತ್ತಿದ್ದಾರೆ. 185 ಹುದ್ದೆ ಖಾಲಿ ಉಳಿದಿದ್ದು, ಹೊರಗುತ್ತಿಗೆ ಆಧಾರದ ಮೇಲೆ 185 ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಇವರೆಲ್ಲರೂ ದಿನಗೂಲಿ ನೌಕರರಾಗಿದ್ದು, ಯಾವುದೇ ರೀತಿಯ `ನೇಮಕಾತಿ ಆದೇಶ' ಪಡೆದಿರುವುದಿಲ್ಲ.ಮೂವರೇ ಸಿಬ್ಬಂದಿ: ಜಿಲ್ಲೆಯ ಚಿತ್ತಾಪೂರ ಮತ್ತು ಸೇಡಂ ತಾಲ್ಲೂಕುಗಳ ವಿದ್ಯಾರ್ಥಿ ನಿಲಯಗಳಲ್ಲಿ ಕ್ರಮವಾಗಿ 660 ಮತ್ತು 535 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಚಿತ್ತಾಪುರದಲ್ಲಿ 10 ವಿದ್ಯಾರ್ಥಿ ನಿಲಯಗಳಿವೆ. ಆದರೆ, ಅಡುಗೆ ಸಿಬ್ಬಂದಿ ಇರುವುದು ಕೇವಲ ಮೂರು ಮಂದಿ ಮಾತ್ರ. ಅದರಲ್ಲಿ ಕಾಯಂ ನೌಕರರು ಒಬ್ಬರೇ ಇದ್ದಾರೆ.`ಸದ್ಯ ಕೆಲಸ ನಿರ್ವಹಿಸುತ್ತಿರುವ 185 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಗುತ್ತಿಗೆ ಪಡೆದಿದ್ದ ಖಾಸಗಿ ಸಂಸ್ಥೆಯವರು ಅವರ ಸೇವೆ ಮುಂದುವರಿಸಲು ಆಗುವುದಿಲ್ಲ ಎಂದು ಹೇಳಿದ್ದರಿಂದ, ಇಲಾಖೆಯೇ ಹಾಸ್ಟೆಲ್ ಸೂಪರಿಂಟೆಂಡೆಂಟ್‌ಗಳ ಮೂಲಕ ರೂ. 3,500 ಸಂಬಳ ಪಾವತಿಸುತ್ತಿದೆ. ಕಳೆದ ಒಂದು ವರ್ಷದಿಂದ ಇದೇ ವ್ಯವಸ್ಥೆ ಜಾರಿಯಲ್ಲಿದೆ' ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಪಿ.ರಾಠೋಡ `ಪ್ರಜಾವಾಣಿ'ಗೆ ತಿಳಿಸಿದರು.`ಸಂಬಳವನ್ನು ವಿಳಂಬವಾಗಿ ಪಾವತಿಸುವಲ್ಲಿ ಹೊರಗುತ್ತಿಗೆ ಸಂಸ್ಥೆ ಸಿಬ್ಬಂದಿ ಹಾಗೂ ಇಲಾಖೆ ಅಧಿಕಾರಿಗಳ ಹುನ್ನಾರ ಅಡಗಿದೆ. ರೂ. 3,500 ಸಾವಿರ ಸಂಬಳ ನೀಡಬೇಕು ಎಂಬ ನಿಯಮವಿದ್ದರೂ, ಸದ್ಯ ರೂ.  2,000 ಅಥವಾ 2,500 ಸಾವಿರ ಕೊಡಲಾಗುತ್ತಿದೆ. ಹೀಗಾಗಿ ಚೆಕ್ ಮೂಲಕವೇ ಸಂಬಳ ನೀಡಬೇಕು ಎಂಬುದು ನಮ್ಮ ಆಗ್ರಹ. ಆದರೆ, ಚೆಕ್ ಮೂಲಕ ಹಣ ಪಾವತಿಸಿದರೆ ತಮಗೇನೂ `ಲಾಭ'ವಾಗುವುದಿಲ್ಲ ಎಂದು ಕೈಯಲ್ಲೇ ಸಂಬಳ ನೀಡುತ್ತಿದ್ದಾರೆ' ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೇಘರಾಜ ಕಟಾರೆ ಆರೋಪಿಸುತ್ತಾರೆ.ಇವರೇನಂತಾರೆ

`ಚೆಕ್' ಕೊಡಲು ಆಗದು


ಜಿಲ್ಲೆಯ 104 ವಿದ್ಯಾರ್ಥಿ ನಿಲಯಗಳಲ್ಲಿ 275 ಕಾಯಂ ಅಡುಗೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, 185 ಮಂದಿ ದಿನಗೂಲಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಯಾವುದೇ ರೀತಿಯ ನೇಮಕಾತಿ ಆದೇಶ ಪತ್ರ ನೀಡಿಲ್ಲ. ಹೊರಗುತ್ತಿಗೆ ಸಂಸ್ಥೆಗಳು ಇವರನ್ನು ನೇಮಕ ಮಾಡಿಕೊಂಡಿದ್ದು, ಅವರೇ ಸಂಬಳ ಪಾವತಿಸುತ್ತಿದ್ದಾರೆ. ಚೆಕ್ ಮೂಲಕ ಸಂಬಳ ನೀಡಬಾರದು ಎಂಬುದು ಸರ್ಕಾರದ ನಿಯಮ. 2013-14ನೇ ಸಾಲಿನ ಟೆಂಡರ್ ಕರೆಯಲಾಗುತ್ತಿದೆ. ಹೊರಗುತ್ತಿಗೆ ಸಂಸ್ಥೆಯವರು ಸಂಬಳ, ಇಎಸ್‌ಐ, ಇಪಿಎಫ್ ನೀಡಲಿದ್ದಾರೆ.

-ಕೆ.ಟಿ.ರಾಠೋಡ, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆರೂ  5,400 ವೇತನ ನೀಡಬೇಕು

ಸರ್ಕಾರ ನಿಗದಿ ಪಡಿಸಿದ ಕನಿಷ್ಠ ವೇತನ ರೂ. 5,400 ಅನ್ನು ಇಲಾಖೆ ವತಿಯಿಂದಲೇ ಪಾವತಿಸಬೇಕು. ಪ್ರತಿ ತಿಂಗಳು 10ರೊಳಗೆ ವೇತನ ನೀಡಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ವೇತನದಿಂದ ಕಡಿತಗೊಳಿಸಿದ ಇ.ಪಿ.ಎಫ್ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಒಂದು ವರ್ಷದಿಂದ ಕಡಿಮೆ ವೇತನ ಪಾವತಿಸಿದ ಬಿ.ಸಿ.ಎಂ ಇಲಾಖೆ, ಸರ್ಕಾರದ ಆದೇಶದಂತೆ ಕನಿಷ್ಠ ವೇತನ ಕೊಡಲು ಹೆಚ್ಚುವರಿ ಬಿಲ್ ಮಾಡಿ ವೇತನ ಸರಿಪಡಿಸಿಕೊಳ್ಳಬೇಕು. ಹಾಸ್ಟೆಲ್‌ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆಗಟ್ಟಬೇಕು.

-ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾಧ್ಯಕ್ಷ, ಗುಲ್ಬರ್ಗ ಜಿಲ್ಲಾ ಹಾಸ್ಟೆಲ್ ದಿನಗೂಲಿ ನೌಕರರ ಸಂಘಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry