ಭಾನುವಾರ, ಡಿಸೆಂಬರ್ 15, 2019
26 °C
ಕ್ಯಾಂಪಸ್ ಸಂದರ್ಶನ

`ಹಿಂದುಳಿದ' ಜಿಲ್ಲೆಯಲ್ಲಿ `ಮುಂದಾಳುತ್ವ!'

ರವಿ ಎಸ್. ಬಳೂಟಗಿ Updated:

ಅಕ್ಷರ ಗಾತ್ರ : | |

`ಹಿಂದುಳಿದ' ಜಿಲ್ಲೆಯಲ್ಲಿ `ಮುಂದಾಳುತ್ವ!'

ಗುಲ್ಬರ್ಗ: `ನಾನು ಸಂಗಮೇಶ. ನೂತನ ವಿದ್ಯಾಲಯದ ಪದವಿ ವಿದ್ಯಾರ್ಥಿ. ಸಂಕೋಚ ಸ್ವಭಾವದ ಹುಡುಗನಾಗಿದ್ದು, ಹೊಸ ಕೆಲಸಕ್ಕೆ ಕೈ ಹಾಕಲು ಹಿಂಜರಿಯುತ್ತಿದ್ದೆ. ಆದರೆ, ಈಗ ಆತ್ಮವಿಶ್ವಾಸ ತುಂಬಿದೆ. ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳ ಮುಂದೆ ಧೈರ್ಯದಿಂದ ಮಾತನಾಡಬಲ್ಲೆ. ಅವರಿಗೆ ನನ್ನ ಕನಸಿನ ಯೋಜನೆಗಳ ಮನವರಿಕೆ ಮಾಡಿ ಕೊಡಬಲ್ಲೆ'.`ನಾನು ಅಂಜಲಿ ಕುಲಕರ್ಣಿ. ಬಿ.ಕಾಂ ವಿದ್ಯಾರ್ಥಿನಿ. ನನ್ನ ವಿದ್ಯಾರ್ಥಿ ಜೀವನ ಈಗ ಚಟುವಟಿಕೆಯಿಂದ ಕೂಡಿದೆ. ತಂಡ ಕಟ್ಟಿಕೊಂಡು ಶಾಲಾ-ಕಾಲೇಜುಗಳಲ್ಲಿ ನಾಯಕತ್ವದ ಅರಿವು ಮೂಡಿಸುತ್ತಿದ್ದೇನೆ. ಹೊಸ `ಐಡಿಯಾ'ಗಳಿಗೆ ನೀರೆರೆದು ಪೋಷಿಸುತ್ತಿದ್ದೇನೆ. ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಂಡಿದ್ದೇನೆ'-ಇವು ನಗರದಲ್ಲಿ ಆರಂಭವಾಗಿರುವ `ಲೀಡ್' ಸಂಘಟನೆ ಸದಸ್ಯರ ವಿಶ್ವಾಸದ ನುಡಿಗಳು. ಇವರು ಮಾತ್ರವಲ್ಲ, ಇಂತಹ ಮಾತುಗಳನ್ನು ನೂರಾರು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಗುಲ್ಬರ್ಗದ ಕೆಲ ಕಾಲೇಜಿನ ಕಾರಿಡಾರುಗಳಲ್ಲಿ ಈಗ ನಾಯಕತ್ವ, ಜನಪರ ಕೆಲಸಗಳ ಚರ್ಚೆ ಜೋರಾಗಿದೆ. ಓದಿನ ಜತೆಗೆ ಇನ್ನೇನು ಮಾಡಬಹುದು ಎಂಬುದು ಆ ಚರ್ಚೆಯ ಪ್ರಮುಖ ವಿಷಯ.ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಎನ್.ವಿ. ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಶರಣಬಸವೇಶ್ವರ ವಿಜ್ಞಾನ ಕಾಲೇಜು ಸೇರಿದಂತೆ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಹುಬ್ಬಳ್ಳಿ ಮೂಲದ `ಲೀಡ್ (Leader Acceler ating Development) ಸಂಘಟನೆಯ ಸದಸ್ಯತ್ವ ಪಡೆದಿದ್ದಾರೆ. ವಿದ್ಯಾರ್ಥಿಗಳಲ್ಲಿ ಮುಂದಾಳತ್ವ ಗುಣ ಬೆಳೆಸುವ ಆಶಯದ ಈ ಸಂಘಟನೆಗೆ ಉತ್ತರ ಕರ್ನಾಟಕದಲ್ಲಿ 14,657ಕ್ಕೂ ಸದಸ್ಯರಿದ್ದಾರೆ.ರಾಜ್ಯದ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳ ಸಂಘಟನೆಗೆ `ಲೀಡ್' ಮುಂದಾಗಿದೆ. ತನ್ನ ಕಾರ್ಯಕ್ರಮಗಳನ್ನು ಗುಲ್ಬರ್ಗ ಹಾಗೂ ಬೀದರ್ ನಗರಗಳಿಗೆ ವಿಸ್ತರಿಸಿದೆ. ಆರಂಭದಲ್ಲಿ ಗುಲ್ಬರ್ಗ ನಗರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. 4 ತಿಂಗಳಿಂದ ಸಂಘಟನೆ ಸ್ವಯಂಸೇವಕರು ವಿದ್ಯಾರ್ಥಿಗಳ ಮನವೊಲಿಸಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಕಾಲೇಜಿನ 300ಕ್ಕೂ ಹೆಚ್ಚು ಮಂದಿ ಈಗಾಗಲೇ `ಲೀಡ್'ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಸದಸ್ಯರ `ಐಡಿಯಾ'ಗಳ ಅನುಷ್ಠಾನಕ್ಕೆ `ಲೀಡ್'ನ ಪ್ರಮುಖರು ನೆರವಾಗುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಯಲ್ಲೂ ಒಂದಷ್ಟು ಹೊಸ `ಐಡಿಯಾ'ಗಳು ಇರುತ್ತವೆ. ಅವುಗಳ ಜಾರಿಗೆ ಮಾರ್ಗದರ್ಶನ ನೀಡುವುದು, ಆರ್ಥಿಕ ನೆರವು ನೀಡುವ ಕೆಲಸ ಇಲ್ಲಿ ಮಾಡಲಾಗುತ್ತಿದೆ.ಏನು ಕಾರ್ಯ? ಎತ್ತ ಚಿತ್ತ?

ಹಳ್ಳಿ, ನಗರ ಪ್ರದೇಶದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಸದಸ್ಯರ ಮೊದಲ ಕೆಲಸ. ಪ್ರತಿ ಸದಸ್ಯ ತನ್ನದೇ ದೃಷ್ಟಿಕೋನದ ಮೂಲಕ  ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈವರೆಗೆ ನಡೆದ ಕಾರ್ಯಗಳಲ್ಲಿ ಹಳ್ಳಿಗಳತ್ತಲೇ ಗಮನ ಕೇಂದ್ರೀಕರಿಸಲಾಗಿದೆ. ಶೌಚಾಲಯ ನಿರ್ಮಾಣ, ಸರ್ಕಾರದಿಂದ ಶೌಚಾಲಯ ನಿರ್ಮಾಣಕ್ಕೆ ಲಭಿಸುವ ಅನುದಾನದ ಮಾಹಿತಿ ನೀಡುವುದು. ಗ್ರಂಥಾಲಯದ ಮಹತ್ವ ತಿಳಿಹೇಳುವುದು, ತೋಟಗಾರಿಕೆ ಬೆಳೆಗಳ ಮಾಹಿತಿ, ನೀರು ಶುದ್ಧೀಕರಣ ಯಂತ್ರ ವಿತರಣೆ, ಬೀದಿದೀಪ ನಿರ್ವಹಣೆ, ಗ್ರಾಮೀಣ ಶಾಲೆಗಳಲ್ಲಿ ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸ  ಲಾಗಿದೆ.ಸ್ನೇಹಿತರ ದಿನ, ರಕ್ಷಾ ಬಂಧನದ ಮೂಲಕ ನಗರದ ಕಾಲೇಜಿನಲ್ಲಿ ಸೌಹಾರ್ದ ಭಾವನೆ ಹರಡಲಾಗುತ್ತಿದೆ. ಮಾರುಕಟ್ಟೆ, ಬಸ್ ನಿಲ್ದಾಣ, ಆಸ್ಪತ್ರೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಮಾಡುವುದು, ನಾಗರಿಕರಲ್ಲಿ ಪೌರಪ್ರಜ್ಞೆ ಬೆಳೆಸುವುದು, ಐತಿಹಾಸಿಕ ಸ್ಥಳಗಳಿಗೆ ಮೆರುಗು ನೀಡುವುದು, ಸರ್ಕಾರಿ ಶಾಲೆಗಳ ಪ್ರಗತಿಗೆ ಯೋಜನೆ ರೂಪಿಸುವುದು, ಸಂಗೀತ, ನೃತ್ಯ, ಹಾಡುಗಾರಿಕೆ ಸೇರಿದಂತೆ ಮನರಂಜನಾ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.ಜೈಲುಗಳಿಗೆ ಭೇಟಿ ನೀಡುವುದು, ಅಂಧ, ಶ್ರವಣ ದೋಷವುಳ್ಳ ಮಕ್ಕಳಿಗೆ ಸೌಲಭ್ಯ ವಿತರಣೆ, ಚಾಲನಾ ಪರವಾನಗಿ ಪಡೆಯುವ ವಿಧಾನದ ಮಾಹಿತಿ ನೀಡುವುದು, ಬಸ್ ಪಾಸ್, ಕ್ಯಾಂಪಸ್ ಹಸಿರೀಕರಣ, ರಕ್ತದಾನ ಶಿಬಿರ ಇತ್ಯಾದಿ ಕೆಲಸಗಳನ್ನು ಗುಲ್ಬರ್ಗದಲ್ಲಿ ಸಂಘಟಿಸಲಾಗಿದೆ. ಹಲವು ಕಾರ್ಯ ಪ್ರಗತಿಯಲ್ಲಿವೆ. ಯೋಜನೆಯನ್ನು ಸದಸ್ಯರೇ ರೂಸುತ್ತಾರೆ.ವೈಯಕ್ತಿಕವಾಗಿ ಅಥವಾ ತಂಡವಾಗಿ ಕೆಲಸ ಮಾಡಬಹುದು. ಸರ್ಕಾರದ ಅನುದಾನ ವ್ಯವಸ್ಥಿತವಾಗಿ ಬಳಸುವ ಬಗ್ಗೆ `ಲೀಡ್' ಸದಸ್ಯರು ನಾಗರಿಕರಿಗೆ ಸಲಹೆ ನೀಡುತ್ತಾರೆ.`ಹೈ-ಕ ಭಾಗದ ಯುವಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು `ಲೀಡ್' ವೇದಿಕೆ. ಇಲ್ಲಿನ ವಿದ್ಯಾರ್ಥಿಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು ನಮ್ಮ ಧ್ಯೇಯ. ಇದರಿಂದ ಸಂವಹನ ಕೌಶಲ, ನಾಯಕತ್ವ ಗುಣ, ಹೊಸಚಿಂತನೆಗಳು ವಿದ್ಯಾರ್ಥಿಗ

ಳಲ್ಲಿ ಮೊಳೆಯುತ್ತವೆ' ಎನ್ನುತ್ತಾರೆ ಲೀಡ್ ಮುಖ್ಯಸ್ಥ ಅಜಯ್ ಸುಮನ್ ಶುಕ್ಲಾ.`ನಾಲ್ಕು ತಿಂಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಸಾಕಷ್ಟು ಯೋಜನೆಗಳ ಜಾರಿಯ ನಿರೀಕ್ಷೆಯಲ್ಲಿದ್ದೇವೆ. ಸದಸ್ಯರಾಗಲು ಎಲ್ಲರಿಗೂ ಮುಕ್ತ ಅವಕಾಶವಿದೆ' ಎನ್ನುತ್ತಾರೆ ಸಂಸ್ಥೆಯ ಗುಲ್ಬರ್ಗ ಭಾಗದ ಉಸ್ತುವಾರಿ ಕವಿತಾ.

'ಲೀಡ್' ಕಾರ್ಯಚಟುವಟಿಕೆಯ ಭಾಗವಾಗಲು 77609 65496 ಸಂಪರ್ಕಿಸಿ.ವಿದ್ಯಾರ್ತಿಗಳ ಮಾತು

ಮುಂದಾಳತ್ವ ನೆರವು


`ಲೀಡ್' ಸಹಭಾಗಿತ್ವದಲ್ಲಿ ಎರಡು ಯೋಜನೆಗಳನ್ನು ಕೈಗೊಂಡಿದ್ದೇನೆ. ಅದರಲ್ಲಿ ಒಂದು ಯಶಸ್ವಿಯಾಗಿ ಪೂರೈಸಿದ್ದೇನೆ. ನಗರ ಶುಚಿತ್ವಕ್ಕೆ ಸಂಬಂಧಿಸಿದ ಮತ್ತೊಂದು ಯೋಜನೆ ಚರ್ಚೆಯ ಹಂತದಲ್ಲಿದೆ. ಆಲೋಚನೆ ಕಾರ್ಯರೂಪಕ್ಕೆ ತರಲು ಹಾಗೂ ಮುಂದಾಳತ್ವ ವಹಿಸಿಕೊಳಲು ಈ ಸಂಸ್ಥೆ ನೆರವಾಗಿದೆ.

-ಸಂಗಮೇಶ ಎಸ್. ಪಟಿಟ್, ಬಿ.ಕಾಂ. ವಿದ್ಯಾರ್ಥಿ`ಲೀಡ್' ಸ್ಫೂರ್ತಿ

ಸಂಘಟಿತ ಕಾರ್ಯ, ಸಾಮೂಹಿಕ ಜವಾಬ್ದಾರಿಗೆ `ಲೀಡ್' ಸ್ಫೂರ್ತಿಯಾಗಿದೆ. ಎಲ್ಲರೂ ಸೇರಿ ಕೆಲಸ ಮಾಡುವುದರಿಂದ ಪರಸ್ಪರರ ನಡುವೆ ಗೌರವ ಭಾವನೆ ಬೆಳೆಯುತ್ತದೆ. ಇತ್ತೀಚೆಗೆ ನಗರದ ಅಂಧ ಮಕ್ಕಳ ಶಾಲೆಯಲ್ಲಿ ಸ್ನೇಹಿತರ ದಿನ ಆಚರಿಸಿದೆವು. ಇದರಿಂದ ಅಲ್ಲಿನ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿತೆ.

-ಅಂಜಲಿ ಕುಲಕರ್ಣಿ,ಬಿ.ಕಾಂ. ವಿದ್ಯಾರ್ಥಿನಿಮಹಿಳೆಯರ ಸಮಸ್ಯೆ ಬಗ್ಗೆ ಜಾಗೃತಿ

ನನಗೆ ಸಮಾಜಸೇವೆಯ ಆಸಕ್ತಿಗೆ ಲೀಡ್ ನೆರವಾಗಿದೆ. ಮಹಿಳೆಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವಿಷಯ ಆಯ್ಕೆ ಮಾಡಿಕೊಂಡಿದ್ದೇನೆ. ಗುಲ್ಬರ್ಗದ ನಗರದಲ್ಲಿ ಕೊಳಚೆ ಪ್ರದೇಶದಲ್ಲಿ ಮಹಿಳೆಯರು ಸಂಕಷ್ಟದ ಬದುಕು ಕಳೆಯುತ್ತಿದ್ದಾರೆ. ಅವರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಬಯಕೆ ಇದೆ.

-ಪ್ರತೀಕ್ಷಾ, ಎಂಜಿನಿಯರಿಂಗ್ ವಿದ್ಯಾರ್ಥಿನಿ

ಪ್ರತಿಕ್ರಿಯಿಸಿ (+)