ಶುಕ್ರವಾರ, ಜೂಲೈ 10, 2020
27 °C

ಶಾಸಕರ ಭೇಟಿ: ಪ್ರತಿಭಟನೆ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ಜ.12ರಿಂದ ತೊಗರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ತಾಲ್ಲೂಕು ಜೆಡಿಎಸ್ ಹಾಗೂ ರೈತ ಹೋರಾಟ ಸಮಿತಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಬುಧವಾರ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಭೇಟಿ ನೀಡಿ ರೈತರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸಿರುವುದರಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಬೇಕೆಂದು ಮನವಿ ಮಾಡಿದರು. ತಾವು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಸೇರಿ ಜೇವರ್ಗಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಅವರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳು, ಕೃಷಿ ಹಾಗೂ ಸಹಕಾರ ಸಚಿವರಿಗೆ ಮನವರಿಕೆ ಮಾಡಲಾಗಿತ್ತು. ಅದರಂತೆ ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ತೊಗರಿಗೆ 4ಸಾವಿರ ರೂ ಬೆಂಬಲ ಬೆಲೆ ನೀಡಲು ನಿರ್ಧರಿಸಲಾಗಿದೆ. ತೊಗರಿ ಮಂಡಳಿಯಲ್ಲಿ ಈಗಾಗಲೇ 5ಕೋಟಿ ರೂ ಅನುದಾನವಿದ್ದು, ಮುಖ್ಯಮಂತ್ರಿಗಳು ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ. ತಾಲ್ಲೂಕಿನಲ್ಲಿ ತೊಗರಿ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಕಾರ್ಯಕ್ಕೆ ಸರ್ಕಾರ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದು, ಕೂಡಲೇ ಸಮೀಕ್ಷೆ ಕಾರ್ಯ ನಡೆಯಲಿದೆ. ತಾಲ್ಲೂಕಿನ ರೈತರ ಬಹು ದಿನಗಳ ಬೇಡಿಕೆಯಾದ ಮಲ್ಲಾಬಾದ ಏತ ನೀರಾವರಿ ಯೋಜನೆ ಕಾಮಗಾರಿಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಕೃಷಿ ಹಾಗೂ ರೈತರ ಏಳ್ಗೆಗಾಗಿ 5ಸಾವಿರ ಕೋಟಿ ಅನುದಾನ ಮೀಸಲಿಡಲಿದೆ ಎಂದು ಶಾಸಕರು ತಿಳಿಸಿದರು.ಶಾಸಕರ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಹೋರಾಟ ಸಮಿತಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ, ತಹಸೀಲ್ದಾರ್ ಡಿ.ವೈ.ಪಾಟೀಲ, ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಸಮದ್‌ಪಟೇಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪುರ, ಮಲ್ಲಿನಾಥ ಪಾಟೀಲ ಯಲಗೋಡ, ಎಂ.ಬಿ.ಪಾಟೀಲ ಹರವಾಳ, ರಮೇಶ ವಕೀಲ, ರಾಜಶೆಖರ ಸೀರಿ,ಎಸ್.ಎಸ್.ಸಲಗರ್, ಶಂಕರ ಕಟ್ಟಿಸಂಗಾವಿ, ಶಿವಾನಂದ ದ್ಯಾಮಗೊಂಡ, ರಹಿಮಾನ್‌ಪಟೇಲ, ಎಸ್.ಕೆ.ಹೆರೂರ, ಸುರೇಶ ಸಜ್ಜನ್, ಧರ್ಮಣ್ಣ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.