ಭಾನುವಾರ, ಡಿಸೆಂಬರ್ 15, 2019
26 °C
ಮಹಾನಗರ ಪಾಲಿಕೆಗೆ ಮೂರು ತಿಂಗಳು ಕಾಲಾವಕಾಶ: ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ

ಅನುದಾನ ಬಳಸದಿದ್ದರೆ ‘ತಲೆದಂಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುದಾನ ಬಳಸದಿದ್ದರೆ ‘ತಲೆದಂಡ’

ಗುಲ್ಬರ್ಗ: ನಗರದ ರಸ್ತೆ ಗುಂಡಿಗಳ ದುರಸ್ತಿ, ಚರಂಡಿ ಸ್ವಚ್ಛತೆ, ಶೇ 22.75 ಹಾಗೂ 7.25 ಯೋಜನೆಗಳು, ಎಸ್‌ಎಫ್‌ಸಿ ಅನುದಾನ ಬಳಕೆ, ಕಸ ವಿಲೇವಾರಿ ಸೇರಿದಂತೆ ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳನ್ನು ಇನ್ನು ಮೂರು ತಿಂಗಳಲ್ಲಿ ಸಮರ್ಪಕ­ವಾಗಿ ಜಾರಿಗೊಳಿಸದಿದ್ದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗು­ವುದು ಎಂದು ನಗರಾಭಿವೃದ್ಧಿ ಸಚಿವ ವಿನಯಕು­ಮಾರ್‌ ಸೊರಕೆ ತಾಕೀತು ಮಾಡಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಹಾಗೂ ಜನಸಾಮಾನ್ಯರಿಗೆ  ಒದಗಿಸುತ್ತಿರುವ ಮೂಲ ಸೌಕರ್ಯಗಳ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು, ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ನಿರೀಕ್ಷೆ ಅಪಾರವಾಗಿರುತ್ತದೆ. ಅದಕ್ಕೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸ­ಬೇಕು, ಮೂರು ತಿಂಗಳೊಳಗೆ ಗುಲ್ಬರ್ಗ ನಗರವನ್ನು ಸಂಪೂರ್ಣ ಸ್ವಚ್ಚತಾ ನಗರವನ್ನಾಗಿ ಪರಿವತಿರ್ಸಬೇಕು ಎಂದು ಹೇಳಿದರು.ನೀರು, ಆಸ್ತಿ, ಅಂಗಡಿ ಮಳಿಗೆ, ಮಾರುಕಟ್ಟೆ ಹರಾಜು, ಜಾಹೀರಾತು ಸೇರಿದಂತೆ ವಿವಿಧ ರೀತಿಯ ತೆರಿಗೆಗಳ ಸಂಗ್ರಹಣೆಯಲ್ಲೂ ಪಾಲಿಕೆ ಹಿಂದುಳಿದಿದೆ. ಒಟ್ಟಾರೆ  ಕಾರ್ಯವೈಖರಿ ತೃಪ್ತಿ ತಂದಿಲ್ಲ. ಪಾಲಿಕೆಗೆ ತೆರಿಗೆ ಸಂಗ್ರಹವೇ ಆದಾಯ ಮೂಲ. ಆದರೆ ಇಲ್ಲಿ ಆದಾಯ ಕನಿಷ್ಠವಾಗಿದೆ, ತೆರಿಗೆ ಬರದಿದ್ದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸು­ವುದು ಕಷ್ಟಸಾಧ್ಯ ಎಂದರು.ಜಾಹಿರಾತು ಫ್ಲೆಕ್ಸ್‌ಗಳಿಗೂ ತೆರಿಗೆ ಹಾಕಬೇಕು.  ನೀರು ಹಾಗೂ ಆಸ್ತಿ ತೆರಿಗೆ ಸಂಗ್ರಹಣೆಗೆ ಕೆಲವು ನಿಯಮಗಳಿವೆ. ಅವುಗಳನ್ನು ಮೀರಿದರೆ ಕೇಂದ್ರ ಸರ್ಕಾರದಿಂದ ಅನುದಾನ ಬರುವುದಿಲ್ಲ. ಅದೇ ರೀತಿ ನಗರದ ಘನತ್ಯಾಜ್ಯ  ವೈಜ್ಞಾನಿಕವಾಗಿ ವಿಲೇವಾರಿಯಾ­ಗಬೇಕು, ಸಾಂಕ್ರಾಮಿಕ ರೋಗಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮತ್ತೆ ರೂ 100 ಕೋಟಿ: ಮುಖ್ಯ ಮಂತ್ರಿಗಳ ವಿಶೇಷ ಅನುದಾನದಲ್ಲಿ ರೂ.100 ಕೋಟಿ ಗಳಂತೆ ಎರಡು ಬಾರಿ ಅನುದಾನ ಬಿಡುಗಡೆಯಾಗಿದೆ. ಮೊದಲ ರೂ. 100 ಕೋಟಿ  ಅನುದಾನದಲ್ಲಿ ಶೇ. 80ರಷ್ಟು ಖರ್ಚಾಗಿದೆ, ಉಳಿದ ಅನುದಾನ­ವನ್ನು ಶೀಘ್ರವಾಗಿ ಬಳಸ­ಬೇಕು.ಎರಡನೆ ಹಂತದ ರೂ.100 ಕೋಟಿಗಳಲ್ಲಿ ರೂ.50 ಕೋಟಿ ಬಿಡುಗಡೆ­ಯಾಗಿದೆ. ಉಳಿದ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ 3ನೇ ಹಂತದಲ್ಲೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರೂ.100 ಕೋಟಿಗಳ ಅನುದಾನ ಬಿಡುಗಡೆಗೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಅನುದಾನದಲ್ಲಿ ಅತೀ ಮುಖ್ಯವಾದ ಕಾಮಗಾರಿಗಳಿಗೆ ಆದ್ಯತೆ ಕೊಡಬೇಕು ಎಂದರು. ಪಾರದರ್ಶಕ ಆಡಳಿತವಿರಲಿ: ಯಾವುದೇ ಕಡತ ಒಂದು ಮೇಜಿನ ಮೇಲೆ ಮೂರು ದಿನಗಳಿಗಿಂತಲೂ ಹೆಚ್ಚು ಇರಬಾರದು, ಅತೀ ಶೀಘ್ರವಾಗಿ ಕಾರ್ಯನಿರ್ವಹಿಸಬೇಕು. ಪಾರದರ್ಶಕ ಆಡಳಿತವಿದ್ದರೆ ಮಾತ್ರ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವರಾದ ಖಮರುಲ್ಲ್ ಇಸ್ಲಾಂ ಅವರು ಮಾತನಾಡಿ, ಮೊದಲ ಮೂರು ತಿಂಗಳ ಅವಧಿಯಲ್ಲಿ ಪಾಲಿಕೆಯು ಶೇ.25 ರಷ್ಟು ತೆರಿಗೆ ಸಂಗ್ರಹಿಸಬೇಕು.  ಜತೆಗೆ ತೆರಿಗೆ ಸಂಗ್ರಹದ ಪ್ರಗತಿ ವರದಿಯನ್ನು ಕಡ್ಡಾಯವಾಗಿ ಕಳುಹಿಸಬೇಕು ಎಂದು ಹೇಳಿದರು.ನಗರಾಭಿವೃದ್ಧಿ ಖಾತೆಯ ಪ್ರಧಾನ ಕಾರ್ಯದಶಿರ್ ಟಿ.ಕೆ. ಅನಿಲ್ ಕುಮಾರ್ ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 2011–-12, 2012-–13ನೇ ಸಾಲಿನ ಬಾಕಿ ಉಳಿದ ಕಾಮಗಾರಿಗಳನ್ನು 2013ರ ಡಿಸೆಂಬರ್‌ನೊಳಗೆ ಪೂರೈಸಬೇಕು, 2013-–14ನೇ ಸಾಲಿನ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿಯೇ ಮುಗಿಸಬೇಕು. ಇಲ್ಲದಿದ್ದಲ್ಲೀ  ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಜಿ. ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ ಹಾಗೂ ಕೆ.ಐ.ಯು.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕ ದರ್ಪಣ್ ಜೈನ್ ವೇದಿಕೆಯಲ್ಲಿದ್ದರು.ಮಹಾನಗರ ಪಾಲಿಕೆ ಆಯುಕ್ತ ಶ್ರೀಕಾಂತ್ ಕಟ್ಟಿಮನಿ, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ. ಜಾಧವ್, 22.75 ಯೋಜನೆಯ ಶಾಖಾ ಮುಖ್ಯಸ್ಥ ವಿಠ್ಠಲ್ ಹಾದಿಮನಿ, ವಿಜಯಲಕ್ಷ್ಮೀ ಪಟ್ಟೇದಾರ್‌ ಸೇರಿದಂತೆ ಪಾಲಿಕೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.ನೀರು ಸರಬರಾಜು ಆಧುನೀಕರಣ’

ಗುಲ್ಬರ್ಗ:
ಇಲಾಖೆ ವತಿಯಿಂದ ಕರ್ನಾಟಕ ನಗರ ನೀರು ಸರಬರಾಜು ಯೋಜನೆಯನ್ನು ಆಧುನೀಕರಣಗೊಳಿಸಲಾಗುತ್ತಿದ್ದು, ಗುಲ್ಬರ್ಗ ನಗರಕ್ಕೆ 24/7ರಡಿ ಕುಡಿ­ಯುವ ನೀರು ಸರಬರಾಜು ಪೂರೈಕೆ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಸೊರಕೆ ತಿಳಿಸಿದರು.

ಸೇಡಂನಲ್ಲಿ ಒಳಚರಂಡಿ ನಿರ್ಮಾ­ಣಕ್ಕೆ ರೂ.28.70 ಕೋಟಿ, ಆಳಂದಕ್ಕೆ ರೂ.57.50 ಕೋಟಿ, ವಾಡಿಗೆ ರೂ.65.40 ಕೋಟಿ ಯೋಜನೆಗೆ ಪ್ರಸ್ತಾವನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಅನುಮೋ­ದನೆಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು.ಗುರುಮಠ­ಕಲ್‌ನಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ರೂ. 1842 ಲಕ್ಷ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ರೂ. 737 ಲಕ್ಷ ಬಿಡುಗಡೆಯಾಗಿದೆ.ಆಳಂದ ಹಾಗೂ ಶಹಾಪುರಕ್ಕೆ ಯು.ಜಿ.ಡಿ. ಯೋಜನೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿನಯಕುಮಾರ ಸೊರಕೆ ತಿಳಿಸಿದರು.

ಪ್ರತಿಕ್ರಿಯಿಸಿ (+)