ಪಾಲಿಕೆಯಲ್ಲಿ ನಿಂತ ನೀರಾದ ‘22.75’ ಯೋಜನೆ

7

ಪಾಲಿಕೆಯಲ್ಲಿ ನಿಂತ ನೀರಾದ ‘22.75’ ಯೋಜನೆ

Published:
Updated:
ಪಾಲಿಕೆಯಲ್ಲಿ ನಿಂತ ನೀರಾದ ‘22.75’ ಯೋಜನೆ

ಗುಲ್ಬರ್ಗ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆಯಲ್ಲಿ ಮೀಸಲಿಡುವ ಶೇ 22.75 ಅನುದಾನ ಯೋಜನೆ ಇಲ್ಲಿಯವರೆಗೂ ಸಮರ್ಪಕವಾಗಿ ಜಾರಿಯಾಗಿಲ್ಲ. ಅನುದಾನದ ಲಭ್ಯತೆ ಹಾಗೂ ವೆಚ್ಚದ ಬಗ್ಗೆ ಸ್ವತಃ ಪಾಲಿಕೆ ಅಧಿಕಾರಿಗಳಲ್ಲೆ ಗೊಂದಲವಿದೆ!ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಕೌಶಲಗಳ ಅಭಿವೃದ್ಧಿಗೆ ಪರಿಶಿಷ್ಟ ಜಾತಿ/ ಪಂಗಡದ ವಿದ್ಯಾರ್ಥಿಗಳಿಗಾಗಿ ವೆಚ್ಚ ಮಾಡುವುದು. ಪರಿಶಿಷ್ಟ ಜಾತಿ/ ಪಂಗಡದ ಕಾಲೋನಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಈ ಅನುದಾನ ಬಳಸಿಕೊಳ್ಳುವುದಕ್ಕೆ ಸರ್ಕಾರ ನಿಯಮ ರೂಪಿಸಿದೆ. ಮಹಾನಗರ ಪಾಲಿಕೆಯಲ್ಲಿ 22.75 ಯೋಜನೆ ಅಡಿಯಲ್ಲಿ ಅನುದಾನ ಲಭ್ಯವಿದ್ದರೂ, ವಿದ್ಯಾರ್ಥಿಗಳಿಗೆ ಅದರ ಲಾಭ ದೊರಕುತ್ತಿಲ್ಲ.22.75 ಯೋಜನೆಗೆ ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ)ದಿಂದ ಅನುದಾನ ಬಿಡುಗಡೆಯಾಗುವುದರ ಜತೆಗೆ, ಪಾಲಿಕೆ ಸಂಗ್ರಹಿಸುವ ತೆರಿಗೆಯಲ್ಲಿ ಶೇ 22.75ರಷ್ಟು ಈ ವಿಭಾಗಕ್ಕೆ ಜಮೆಯಾಗುತ್ತದೆ. 2012–13 ಹಾಗೂ 2013–14ನೇ ಹಣಕಾಸು ವರ್ಷದಲ್ಲಿ ರೂ 7.82 ಕೋಟಿ ಹಾಗೂ ರೂ 2.4 ಕೋಟಿ ಅನುದಾನ ನೀಡಿದ್ದರೂ, ಯಾವುದೇ ತರಬೇತಿ ಅಥವಾ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಗುಲ್ಬರ್ಗ ಮಹಾನಗರ ಪಾಲಿಕೆಯಲ್ಲಿ 22.75 ಯೋಜನೆಯು ನಿಂತ ನೀರಿನಂತಾಗಿದೆ.‘ಎರಡು ವರ್ಷದಿಂದ ಕ್ರಿಯಾ ಯೋಜನೆಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುಮೋದನೆಯಾಗದೆ ಬಿದ್ದಿವೆ’ ಎನ್ನುವುದು ಪಾಲಿಕೆಯಲ್ಲಿ 22.75 ಯೋಜನೆ ಜಾರಿಗೆ ನಿಯೋಜಿತ ಅಧಿಕಾರಿ ವಿಠ್ಠಲ ಹಾದಿಮನಿ ಅವರ ವಿವರ. ಆದರೆ ಎರಡು ವರ್ಷದ ಹಿಂದೆ 2010–11ರಲ್ಲಿ ಎಸ್‌ಎಫ್‌ಸಿಯಿಂದ ರೂ 2.14 ಕೋಟಿ, ಮಹಾನಗರ ಪಾಲಿಕೆ ಆದಾಯದಿಂದ 4.25 ಕೋಟಿ ಅನುದಾನ ಲಭ್ಯತೆ ಇತ್ತು.

ಆದರೆ ವೆಚ್ಚವಾಗಿದ್ದು,  ರೂ 46 ಲಕ್ಷ ಹಾಗೂ ರೂ 1.59 ಕೋಟಿ ಮಾತ್ರ. 2011–12ನೇ ಸಾಲಿನಲ್ಲಿ ಎಸ್‌ಎಫ್‌ಸಿಯಿಂದ ರೂ 2.56 ಕೋಟಿ ಹಾಗೂ ಮಹಾನಗರ ಪಾಲಿಕೆ ಆದಾಯದಿಂದ ರೂ 6.32 ಕೋಟಿ ಅನುದಾನ ಲಭ್ಯತೆ ಇತ್ತು. ಆದರೆ ವೆಚ್ಚವಾಗಿದ್ದು ಎಸ್‌ಎಫ್‌ಸಿ ಅನುದಾನ ರೂ 2.4 ಕೋಟಿ ಮಾತ್ರ!ಎಲ್ಲಿ ಹೋಯಿತು ಅನುದಾನ?: 22.75 ಕ್ರಿಯಾ ಯೋಜನೆಗೆ ಒಮ್ಮೆ ಅನುಮೋದನೆ ದೊರೆತರೆ, ಅದನ್ನು ಮುಂದಿನ ಹಣಕಾಸು ವರ್ಷಗಳಲ್ಲಿ ಅನುಮೋದನೆ ಇಲ್ಲದೆಯೇ ವೆಚ್ಚ ಮಾಡುವುದಕ್ಕೆ ಅವಕಾಶವಿದೆ. ಮಹಾನಗರ ಪಾಲಿಕೆ ದಾಖಲೆಗಳ ಪ್ರಕಾರ 2010 ಹಾಗೂ 2011ರಲ್ಲಿ 22.75 ಅಡಿಯಲ್ಲಿ ಲಭ್ಯವಿದ್ದ ಅನುದಾನ ಆಯಾ ಹಣಕಾಸು ವರ್ಷದ ಅಂತ್ಯದಲ್ಲಿ ಸಂಪೂರ್ಣ ವೆಚ್ಚವಾಗಿಲ್ಲ.ಹಾಗಾದರೆ ಉಳಿದ ಅನುದಾನ ಎಲ್ಲಿ ಹೋಯಿತು ಎಂಬುದರ ಬಗ್ಗೆ ಪಾಲಿಕೆಯಲ್ಲಿ ಖಚಿತ ಮಾಹಿತಿ ಇಲ್ಲ. ಮುಂದಿನ ಹಣಕಾಸು ವರ್ಷದಲ್ಲಿ ಅನುದಾನ ಸೇರ್ಪಡೆ ಮಾಡಿದ್ದರೆ, ಅದನ್ನು ವೆಚ್ಚ ವಿಭಾಗದಲ್ಲಿ ಅನುದಾನ ಪೂರ್ಣ ಬಳಕೆಯಾಗಿದೆ ಎಂದು ತೋರಿಸಬೇಕಿತ್ತು.

ಪಾಲಿಕೆಗೆ ತರಾಟೆ: ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಾದ ಶೇ 22.75, ಅಲ್ಪಸಂಖ್ಯಾತರಿಗೆ ಮೀಸಲಾದ ಶೇ 7.25 ಯೋಜನೆ ಹಾಗೂ ಅಂಗವಿಕಲರಿಗೆ ಮೀಸಲಾದ ಶೇ 3 ಯೋಜನೆಗಳ ಅನುದಾನ ಬಳಕೆಯಲ್ಲಿರುವ ಗೊಂದಲ ಅಂಶವು ಗುಲ್ಬರ್ಗದಲ್ಲಿ ಈಚೆಗೆ ನಡೆದ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಅವರು ಗಮನಕೆ್ಕ ಬಂದಿದೆ. ಸಚಿವರು ಸಂಬಂಧಿಸಿದ ಪಾಲಿಕೆ ಅಧಿಕಾರಿಗಳನ್ನು ಸಭೆಯಲ್ಲೆ ತರಾಟೆ ತೆಗೆದುಕೊಂಡು, ಮೂರು ತಿಂಗಳಲ್ಲಿ ಸಮರ್ಪಕ ವಿವರ ಸಲ್ಲಿಸಲು ಸೂಚಿಸಿದ್ದಾರೆ. ಹೀಗಾಗಿ ಅನುದಾನ ಸದುಪಯೋಗ, ದುರುಪಯೋಗದ ಬಗ್ಗೆ ಮೂರು ತಿಂಗಳಲ್ಲಿ ಇನ್ನಷ್ಟು ಸ್ಪಷ್ಟ ಮಾಹಿತಿ ಹೊರ ಬೀಳಲಿದೆ.ಗಗನ ಕುಸುಮವಾದ ಐಎಎಸ್‌/ಕೆಎಎಸ್‌: ಪರಿಶಿಷ್ಟ ಜಾತಿ/ ಪಂಗಡ ವಿದ್ಯಾರ್ಥಿಗಳು ಪ್ರತಿಷ್ಠಿತ ಹುದ್ದೆಗಳಾದ ಐಎಎಸ್‌, ಕೆಎಎಸ್‌ ಹಾಗೂ ಐಪಿಎಸ್‌ ಪರೀಕ್ಷೆ ಬರೆಯುವುದಕ್ಕೆ ಅಗತ್ಯ ತರಬೇತಿ ನೀಡಬೇಕೆನ್ನುವ ಅಂಶ 22.75 ಯೋಜನೆಯಲ್ಲಿದೆ.ಆದರೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ರೂ 25 ಲಕ್ಷ ವೆಚ್ಚ ಮಾಡಲಾಗಿದೆ ಎಂಬುದು 2011ರ ವರ್ಷದಲ್ಲಿ ಮಾತ್ರ ತೋರಿಸಲಾಗಿದೆ. ಅದರ ಹಿಂದಿನ ವರ್ಷದಲ್ಲಾಗಲಿ, ಮುಂದಿನ ವರ್ಷಗಳಲ್ಲಾಗಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗೋಜಿಗೆ ಪಾಲಿಕೆ ಹೋಗಿಲ್ಲ.

ದಾಖಲೆ ಸಂಗ್ರಹ

22. 75 ಯೋಜನೆ­ಯಲ್ಲಿ ಅನು­ದಾನ ವೆಚ್ಚವಾದ ವಿವರಗಳನ್ನು ಕ್ರೋಢಿ­ಕರಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಯು ಸಮರ್ಪಕವಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳ­ಲಾಗುವುದು.

– ಶ್ರೀಕಾಂತ್‌ ಕಟ್ಟಿಮನಿ, ಪಾಲಿಕೆ ಆಯುಕ್ತ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry