ತೊನಸನಹಳ್ಳಿ(ಎಸ್): ಕಾಡುವ ನೀರಿನ ಸಮಸ್ಯೆ

7
ಗ್ರಾಮಾಯಣ

ತೊನಸನಹಳ್ಳಿ(ಎಸ್): ಕಾಡುವ ನೀರಿನ ಸಮಸ್ಯೆ

Published:
Updated:

ಶಹಾಬಾದ: ತಾಲ್ಲೂಕು ಕೇಂದ್ರದಿಂದ 30 ಕಿಮೀ ದೂರದಲ್ಲಿರುವ ತೊನಸನಹಳ್ಳಿ(ಎಸ್) ಗ್ರಾಮ ವಿಭಿನ್ನ ಬಗೆಯ ಸಮಸ್ಯೆಗಳಿರುವ ಊರು. ಭಂಕೂರ ಜಿಲ್ಲಾ ಪಂಚಾಯಿತಿ ಹಾಗೂ ಹುನಗುಂಟಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಈ ಗ್ರಾಮದ ಜನಸಂಖ್ಯೆ ಸುಮಾರು 6 ಸಾವಿರ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು ಗೋಳಾ(ಕೆ) ಹಾಗೂ ತರನಳ್ಳಿ ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ.ಗ್ರಾಮದ ಒಳ ರಸ್ತೆಗಳು ಹೇಳಿಕೊಳ್ಳುವಂತಿಲ್ಲ, ಕೊಳವೆ ಬಾವಿ ಅವಲಂಬಿಸಿರುವ ಜನ ನೀರಿನಲ್ಲಿ ‘ಫ್ಲೋರಾಯಿಡ್’ ಅಂಶ ಅಧೀಕ ಎಂದು ಹೇಳುತ್ತಿದ್ದಾರೆ.ಚರಂಡಿ ವ್ಯವಸ್ಥೆ ಇಲ್ಲವೆ ಇಲ್ಲ, ಸಾರ್ವಜನಿಕ ಶೌಚಾಲಯಗಳಿಲ್ಲ ಮತ್ತು ಶೌಚಾಲಯ ಹೊಂದಿರುವ ಮನೆಗಳ ಸಂಖ್ಯೆಯೂ ಕಡಿಮೆ. ಹಾಗಾಗಿ ಇಲ್ಲಿನ ರಸ್ತೆಗಳೇ ಬಯಲು ಶೌಚಾಲಯ. ಗ್ರಾಮದ ‘ಬಂಗಿದೊಡ್ಡಿ’ ಪ್ರದೇಶದ ರಸ್ತೆಗಳು  ಶೌಚಕ್ಕೆ ಬಳಸಲಾಗುತ್ತಿದ್ದು ಇನ್ನುಳಿದ ಕೆಲವು ರಸ್ತೆಗಳು ಕೆಸರು ಗದ್ದೆಗಳಾಗಿವೆ.‘2009-10 ರಲ್ಲಿ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆಯಡಿ 1 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಕೆಲ ಸಿಸಿ ರಸ್ತೆ ಬಿಟ್ಟರೆ ಉಳಿದಂತೆ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರದ ರಾಜೀವ ಗಾಂಧಿ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಗೆ 3.8 ಕೋಟಿ ಮಂಜೂರಾಗಿದೆ.

ಇದು ಭೀಮಾನದಿಯಿಂದ ಕಡೆಹಳ್ಳಿ, ತೊನಸನಹಳ್ಳಿ(ಎಸ್) ಮತ್ತು ತರನಳ್ಳಿ ಮೂಲಕ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ. ಆದರೆ ಯೋಜನೆ ಕುಂಟುತ್ತಾ ಸಾಗಿದೆ. ಗ್ರಾಮದಲ್ಲಿ 3 ನೀರಿನ ಟ್ಯಾಂಕ್ ಗಳಿವೆ, ಆದರೆ ನೀರಿಲ್ಲ’ ಎಂದು ಸ್ಥಳೀಯ ರವಿಕುಮಾರ ಹೂಗಾರ ತಿಳಿಸುತ್ತಾರೆ.ಆರೋಗ್ಯ ಕೇಂದ್ರ: ಗ್ರಾಮ ಸ್ವರಾಜ್ಯ ಯೋಜನೆಯಡಿ 2008 ರಲ್ಲಿ ಅಂಬೇಡ್ಕರ್ ನಗರದಲ್ಲಿ ಉಪ ಆರೋಗ್ಯ ಕೇಂದ್ರಕ್ಕಾಗಿ ಎರಡು ಕೋಣೆಗಳ ಕಟ್ಟಲಾಗಿದೆ. ಆದರೆ ಅಲ್ಲಿ ಜೂಜಾಟ, ಕುಡಿತ ಸೇರಿದಂತೆ ಇತರೆ ಚಟುವಟಿಕೆಗಳು ನಡೆಯುತಿವೆ. ಆರೋಗ್ಯ ಸಹಾಯಕರು ಗ್ರಾಮಕ್ಕೆ ಭೇಟಿ ನೀಡಿ ಬಾಡಿಗೆ ಕೋಣೆಯೊಂದರಲ್ಲಿ ಆರೋಗ್ಯ ತಾಪಾಸಣೆ ಮಾಡುತ್ತಾರೆ.

ಪಶು ಚಿಕಿತ್ಸಾಲಯಕ್ಕೆ ಸ್ವಂತ ಕಟ್ಟಡ, ಉತ್ತಮ ಔಷಧಿಗಳ ಸರಬರಾಜಿದೆ. ಒಟ್ಟು 5 ಸಿಬ್ಬಂದಿ ಬೇಕಿದ್ದು ಇಬ್ಬರು ಕರ್ತವ್ಯದ ಮೇಲಿದ್ದು, ಮೂರು ಹುದ್ದೆಗಳು ಖಾಲಿ ಇವೆ. ಕಟ್ಟಡಕ್ಕೆ ಸೂಕ್ತ ವಿದ್ಯುತ್ ಸಂಪರ್ಕ ಒದಗಿಸಿಲ್ಲ.ಗ್ರಾಮದಲ್ಲಿ ಗ್ರಂಥಾಲಯವಿದ್ದು ಸುಮಾರು 2 ಸಾವಿರ ಪುಸ್ತಕಗಳಿವೆ. ದಿನಪತ್ರಿಕೆಗಳು ಬರುತ್ತವೆ. ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆದರೆ ಪತ್ರಿಕೆ ಓದಲು ಸಾಕಷ್ಟು ಜನ ಬರುತ್ತಾರೆ ಎಂದು ಗ್ರಂಥಪಾಲಕರು ಹೇಳುತ್ತಾರೆ.‘ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಗ್ರಾಮದ ಗ್ರಂಥಾಲಯ ಕಟ್ಟಡಕ್ಕೆ 5 ಲಕ್ಷ ರೂ ಬಿಡುಗಡೆಯಾಗಿದೆ. ಆದರೆ ನಿವೇಶನದ ಕೊರತೆ ಇದೆ’ ಎಂದು ಗ್ರಾಮದ ಬೆಳ್ಳೆಪ್ಪ ವಿವರಿಸುತ್ತಾರೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಮೂರು ಅಂಗನವಾಡಿ ಕೇಂದ್ರಗಳಿದ್ದು ಎರಡು ಕೇಂದ್ರಗಳು ಉತ್ತಮ ಸ್ಥಿತಿಯಲ್ಲಿವೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(1 ರಿಂದ 8 ನೇ) 300 ಮಕ್ಕಳಿದ್ದು 9 ಶಿಕ್ಷಕರಿದ್ದಾರೆ, ಎರಡು ಹುದ್ದೆ ಖಾಲಿ ಇವೆ. ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ(1 ರಿಂದ 5 ನೇ) 107 ಮಕ್ಕಳಿದ್ದು 4 ಶಿಕ್ಷಕರಿದ್ದಾರೆ. ಆದರೆ ಇಲ್ಲಿನ ಉರ್ದು ಶಾಲೆಯನ್ನು ಸರ್ಕಾರ 1 ರಿಂದ 5 ನೇ ತರಗತಿವರೆಗೆ ನಡೆಸುತ್ತಿದ್ದು ಕೇವಲ 21 ಮಕ್ಕಳಿದ್ದು, 4 ಜನ ಶಿಕ್ಷಕರಿದ್ದಾರೆ!ಕಾಮಾಗಾರಿ ಕೈಗೆತಿಕೊಳ್ಳಿ

ಗ್ರಾಮದಲ್ಲಿ ಒಳರಸ್ತೆಗಳು, ಶೌಚಾಲಯ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಸಂಬಂಧಿಸಿದ ಜನ ಪ್ರತಿನಿಧಿಗಳು ಇತ್ತ ಕಡೆ ಗಮನಕೊಡಬೇಕು. ವಿಶೇಷ ಅನುದಾನದಲ್ಲಿ ಸಮಸ್ಯೆಗೆ ಸಂಬಂಧಿಸಿದ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು

-ಬಸವರಾಜ ಮದ್ರಿಕಿ, ಗ್ರಾಮದ ಯುವ ಮುಖಂಡ.

ಫ್ಲೋರೈಡ್‌ ಸಮಸ್ಯೆ

ಫ್ಲೋರೈಡ್ ಸಮಸ್ಯೆಯಿಂದ ಗ್ರಾಮಸ್ಥರು ಕುಡಿಯುವ ನೀರಿನ ಬಗ್ಗೆ ಭಿೀತರಾಗಿದ್ದು ನೀರಿಗಾಗಾಗಿ ಪರದಾಡು ತ್ತಿದ್ದಾರೆ. ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರೊದಗಿಸುವ ಕೆಲಸ ತುರ್ತಾಗಿ ಆಗಬೇಕು.

ಅಲ್ಲಮಪ್ರಭು, ಗ್ರಾಮಸ್ಥ.ಕೆಲಸ ಶುರುವಾಗಲಿದೆ


ರೂ 3.5 ಲಕ್ಷ ಅಂದಾಜು ವೆಚ್ಚದಲ್ಲಿ ಕೊಳವೆ ಬಾವಿ ಮೂಲಕ ನೀರೊದಗಿಸುವ ತಾತ್ಕಾಲಿಕ ಯೋಜನೆ  ಜಾರಿಯಾಗಿದ್ದು ವಿದ್ಯುತ್ ಸಂಪರ್ಕ ಆಗಬೇಕಿದೆ. ಜಿಪಂ ಹಾಗೂ ತಾಪಂ ಅನುದಾನಗಳಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಅನುಮೋದನೆ ದೊರಕಿದ್ದ, ಕೆಲಸ ಶುರುವಾಗಲಿದೆ.

ನಿಂಗಣ್ಣ ಹುಳಗೋಳಕರ್, ತಾಲ್ಲೂಕು ಪಂಚಾಯಿತಿ ಸದಸ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry