‘ಜ್ಞಾನ ಗಂಗೆ’ಯಲ್ಲಿ ‘ಹೊಸ’ಬರ ಹಂಗಾಮ

7
ವಿ.ವಿ. ಒಳಗೊಂದು ಸುತ್ತು

‘ಜ್ಞಾನ ಗಂಗೆ’ಯಲ್ಲಿ ‘ಹೊಸ’ಬರ ಹಂಗಾಮ

Published:
Updated:

ಗುಲ್ಬರ್ಗ:  ಅಲ್ಲಿ ಜಿಟಿ ಜಿಟಿ ಮಳೆ ಹನಿಯುತ್ತಿದೆ. ರಸ್ತೆಯ ಪಕ್ಕದ ಮರಗಳಲ್ಲಿ ಹೂಗಳು ಅರಳಿವೆ. ನೀರಿನ ಹೊಂಡದ ಮರದಲ್ಲಿ ಪಕ್ಷಿಗಳು ಗೂಡು ಕಟ್ಟಿವೆ. ಹಳಬರ ನಿರ್ಗಮನ, ಹೊಸ ವಿದ್ಯಾರ್ಥಿಗಳ ಆಗಮನ ಜೋರಾಗಿದೆ. ಒಟ್ಟಾರೆ ಅಲ್ಲಿ ಹೊಸಬರ ಖುಷಿ, ಸಂತಸ ಇಮ್ಮಡಿಯಾಗಿದೆ.–ಇವು ಸೇಡಂ ರಸ್ತೆಯಲ್ಲಿರುವ ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಕಂಡು ಬಂದ ದೃಶ್ಯ.

ಪದವಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ, ಸ್ನಾತಕೋತ್ತರ ಪದವಿ ಪಡೆಯುವ ಅದಮ್ಯ ಉತ್ಸಾಹ, ಗುರಿಯೊಂದಿಗೆ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕನಸು ಕಂಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಏನನ್ನೋ ಗೆದ್ದ ಸಂಭ್ರಮ, ಕೊನೆಗೂ ವಿ.ವಿ ಮೆಟ್ಟಿಲು ತುಳಿದೆವು ಎಂಬ ಪುಳಕ, ಇನ್ನು ಮೇಲೆ ಜವಾಬ್ದಾರಿಯಿಂದ ಹೆಜ್ಜೆ ಹಾಕಬೇಕು ಎಂಬ ಎಚ್ಚರಿಕೆ ಭಾವ ಮನೆ ಮಾ­ಡಿವೆ. ಗುರಿ ತಲುಪುವ ಹೊಸ ದಾರಿಯತ್ತ, ಎಲ್ಲ ವಿದ್ಯಾರ್ಥಿಗಳು ಹೊಸ ದೃಷ್ಟಿ ಹರಿ­ಸಿದ್ದು ಭವಿಷ್ಯದ ಭದ್ರ ಬುನಾದಿಗೆ ಅಡಿಪಾಯ ಹಾಕಲು ಅಣಿಯಾಗುತ್ತಿದ್ದಾರೆ.ಪದವಿ ಕಾಲೇಜು ಎಂದರೆ ಗುಂಪಿನಲ್ಲಿ ಗೋವಿಂದ ಎಂಬ ಸ್ಥಿತಿ. ನೂರಾರು ಸಹಪಾಠಿಗಳು, ಪ್ರೀತಿಯ ಮೇಷ್ಟ್ರುಗಳು, ತಪ್ಪು ಮಾಡಿದರೆ ಕರೆದು ಬುದ್ಧಿ ಹೇಳುವ ಉಪನ್ಯಾಸಕಿಯರು, ನೋಟ್ಸ್ ಜೆರಾಕ್ಸ್ ಮಾಡಿಸಿ ಕೊಡುವ ಹಿರಿಯ ವಿದ್ಯಾರ್ಥಿಗಳು, ಎರವಲು ಪಡೆದ ಪುಸ್ತಕದ ಅವಧಿ ಮುಗಿದಿದ್ದರೂ ದಂಡ ವಿಧಿಸದೇ ಕ್ಷಮಿಸಿ ಬಿಡುವ ಗ್ರಂಥ­ಪಾಲಕ.. ಕಾಲೇಜಿಗೆ ಚಕ್ಕರ್ ಹೊಡೆ­ದರೂ ಹಾಜರಾತಿ ಹಾಕುವ ಸಹಪಾಠಿ­ಗಳು.. ಹೀಗೆ ಪದವಿ ಕಾಲೇಜು ದಿನಗಳ ಖುಷಿ, ನೆನಪುಗಳೇ ಬೇರೆ. ಪದವಿಯ ದಿನಗಳ ಅಮೂಲ್ಯ ನೆನಪುಗಳು, ಅಪಾರ ಸ್ನೇಹಿತರನ್ನು ಕಳೆದುಕೊಂಡ ವಿದ್ಯಾರ್ಥಿಗಳು ವಿ.ವಿಯಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು ಅಳುಕಿನಿಂದಲೇ ಹೆಜ್ಜೆ ಹಾಕುತ್ತಿದ್ದಾರೆ. ಇಲ್ಲಿನ ವಾತಾವರಣಕ್ಕೆ ನಿಧಾನವಾಗಿ ತೆರೆದುಕೊಳ್ಳುತ್ತಿದ್ದಾರೆ.ಮನೆಗಳಿಂದ ನಡೆದುಕೊಂಡು ಅಥವಾ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ವಿ.ವಿಗೆ ತೆರಳಲು ಬಸ್‌ ಅವಲಂಬಿಸಬೇಕಾಗಿದೆ. ಊಟದ ಸಮಯಕ್ಕೆ ಮನೆ ಸೇರುತ್ತಿ­ದ್ದ­ವರು ಬುತ್ತಿ ತಂದು ಊಟ ಮಾಡುತ್ತಿ­ದ್ದಾರೆ. ನೂರಾರು ಸಹಪಾಠಿಗಳ ಜತೆ ತರಗತಿಗೆ ಹಾಜರಾಗುತ್ತಿದ್ದವರು, ಈಗ ಕೇವಲ 25 ರಿಂದ 30 ಸಹಪಾಠಿಗಳ ಜತೆ ಹೆಜ್ಜೆ ಹಾಕಬೇಕಾಗಿದೆ.ಏನೇ ಆಗಲಿ, ಪದವಿ ಓದುತ್ತಿರುವ ಆ ದಿನ­ಗಳೇ ಚೆಂದ. ಯಾವುದೇ ಜವಾಬ್ದಾರಿ ಇರಲಿಲ್ಲ. ಉಪನ್ಯಾಸಕರು ತೀರ ಪರಿಚಿತ­ರಾ­ದ್ದರಿಂದ ಹೆಚ್ಚಿನ ತೊಂದರೆ ಆಗುತ್ತಿ­ರ­ಲಿಲ್ಲ. ಆದರೆ, ಇಲ್ಲಿಗೆ ಬಂದ ಮೇಲೆ ಒಂದು ರೀತಿಯ ಅವ್ಯಕ್ತ ಭಯ ಕಾಡು­ತ್ತಿದೆ. ಮೊದಲಿನಿಂತೆ ಕಟ್ಟೆ ಪುರಾಣ ಹೇಳುವು­ದನ್ನು ಬಿಟ್ಟು ಗಂಭೀರವಾಗಿ ಅಧ್ಯಯನ ಮಾಡಬೇಕಾ­ಗಿದೆ. ಆ ಮೂಲಕ ಭವಿಷ್ಯದ ದಾರಿ ಹುಡುಕಿ­ಕೊಳ್ಳ­­ಬೇ­ಕಾಗಿದೆ ಎಂದು ಬಹು­ತೇಕ ವಿದ್ಯಾರ್ಥಿಗಳು ತೋಡಿಕೊಳ್ಳು­ತ್ತಾರೆ.ಎಷ್ಟು ವಿಭಾಗಗಳು: ವಿಶ್ವವಿದ್ಯಾನಿಲ­ಯದಲ್ಲಿ ಒಟ್ಟು 48 ವಿಭಾಗಗಳಿದ್ದು, ಬಹುತೇಕ ಎಲ್ಲ ವಿಭಾಗಗಳಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲವು ವಿಭಾಗಗಳಲ್ಲಿ ಒಂದಿಷ್ಟು ಸೀಟುಗಳು ಖಾಲಿ ಉಳಿದುಕೊಂಡಿದ್ದು, ಎರಡು ಹಾಗೂ ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ ಎಲ್ಲ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಪತ್ರಿಕೋದ್ಯಮ, ಎಂ.ಸಿ.ಎ, ವಿಜ್ಞಾನ ಹಾಗೂ ಕನ್ನಡ ನಿಕಾಯದ ಕೆಲವು ವಿಭಾಗಗಳಲ್ಲಿ ಸೆ. 2 ರಿಂದಲೇ ಪ್ರಥಮ ಸೆಮಿಸ್ಟರ್ ತರಗತಿಗಳು ಆರಂಭವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry