ಉಳಿದಿರುವ ಫ್ಲೆಕ್ಸ್‌ಗಳ ಸಂಖ್ಯೆ 1,987

7
ಹೈಕೋರ್ಟ್‌ಗೆ ಬಿಬಿಎಂಪಿ ವಿವರ ಸಲ್ಲಿಕೆ

ಉಳಿದಿರುವ ಫ್ಲೆಕ್ಸ್‌ಗಳ ಸಂಖ್ಯೆ 1,987

Published:
Updated:

ಬೆಂಗಳೂರು: ’ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 1,987 ಜಾಹೀರಾತು ಫಲಕಗಳು ಮಾತ್ರ ಉಳಿದಿವೆ’ ಎಂದು ಬಿಬಿಎಂಪಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.

‘ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್‌ ತೆರವುಗೊಳಿಸಬೇಕು’ ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರಿನಿಧಿ ನ್ಯಾಯಪೀಠಕ್ಕೆ ಈ ಅಂಶ ತಿಳಿಸಿದರಲ್ಲದೆ, ‘ಈ ಜಾಹೀರಾತುಗಳು ಬಹುತೇಕ ಅನಧಿಕೃತವಾಗಿವೆ’ ಎಂದರು.

ಇದೇ ವೇಳೆ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಜ್ಞಾಪನಾ ಪತ್ರ (ಮೆಮೊ) ಸಲ್ಲಿಸಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಲ್ಲಿ ಜಾಹೀರಾತು ಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಅನುಸರಿಸಲಾಗುತ್ತಿರುವ ಬೈ–ಲಾದ ವಿವರ ಒದಗಿಸಿದರು.

‘ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ನೌಕರರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಏಳು ಜನರಿಗೆ ಶಿಕ್ಷೆ ವಿಧಿಸಲಾಗಿದೆ. ಇವರಲ್ಲಿ ನಾಲ್ಕು ಜನರು ಮೇಲ್ಮನವಿ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್‌, ‘ಫ್ಲೆಕ್ಸ್‌, ಬ್ಯಾನರ್ ನಿಷೇಧಿಸಿ ಬಿಬಿಎಂಪಿ ಕೌನ್ಸಿಲ್‌ ಕಳೆದ ತಿಂಗಳ 6ರಂದು ತೆಗೆದುಕೊಂಡಿರುವ ನಿರ್ಣಯವನ್ನು ಏಕಸದಸ್ಯ ನ್ಯಾಯಪೀಠದಲ್ಲಿ ಪ್ರಶ್ನಿಸಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಗರಂ ಆದ ದಿನೇಶ್‌ ಮಾಹೇಶ್ವರಿ, ‘ಏಕಸದಸ್ಯ ನ್ಯಾಯಪೀಠ ಇಂತಹ ಅರ್ಜಿಗಳನ್ನು ವಿಚಾರಣೆ ನಡೆಸಬಾರದು ಎಂದು ನಿಮ್ಮ ಅರ್ಥವೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಸಮಜಾಯಿಷಿ ನೀಡಲು ಮೋಹನ್‌ ಪ್ರಯತ್ನಿಸಿದರಾದರೂ, ಅದನ್ನು ಆಲಿಸಲು ನಿರಾಕರಿಸಿದ ನ್ಯಾಯಮೂರ್ತಿಗಳು, ‘ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತದೆ. ಏಕೆ ಸುಮ್ಮನೇ ಎಲ್ಲವನ್ನೂ ಗೋಜಲು ಮಾಡುತ್ತೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.

ಬಿಬಿಎಂಪಿ ಜಾಹೀರಾತು ನೀತಿ ಅಂಗೀಕಾರ

ಬೆಂಗಳೂರು: ಬಿಬಿಎಂಪಿಯ ಹೊರಾಂಗಣ ಜಾಹೀರಾತು, ಸಂದೇಶ ಪ್ರದರ್ಶನ ನೀತಿಗೆ ಸರ್ಕಾರ ಅಂಗೀಕಾರ ನೀಡಿದೆ. 

ಜಾಹೀರಾತು ಫಲಕ ಅಳವಡಿಕೆಗೆ ಸಂಬಂಧಿಸಿ ಬಿಬಿಎಂಪಿ ಸಾಕಷ್ಟು ಕಾನೂನು ಸಮಸ್ಯೆ ಎದುರಿಸಿತ್ತು. ನಗರದಲ್ಲಿ ಫ್ಲೆಕ್ಸ್‌, ಫಲಕಗಳನ್ನು ತೆಗೆದು ಹಾಕಿದ ಬಳಿಕ ಜಾಹೀರಾತು ಪ್ರದರ್ಶನ ನಿಯಮಾವಳಿಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಕೊನೆಗೂ ಬಿಬಿಎಂಪಿ ಸರ್ಕಾರಕ್ಕೆ ಸಲ್ಲಿಸಿದ ಕರಡು ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. 

 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !