ಮಂಗಳವಾರ, ಜನವರಿ 21, 2020
18 °C
ಡಿ.31ರ ಒಳಗಾಗಿ ಕ್ರಮಕ್ಕೆ ಬ್ಯಾಂಕ್‌ಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ

ಎಟಿಎಂ: ಭದ್ರತಾ ಸಿಬ್ಬಂದಿ ನೇಮಿಸಲು ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲೆಯ ಎಲ್ಲ ಬ್ಯಾಂಕುಗಳ ಎಟಿಎಂ ಕೇಂದ್ರಗಳಿಗೆ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿ ಯನ್ನು ನಿಯೋಜಿಸುವುದು ಸೇರಿದಂತೆ ಇತರೆ ಸುರಕ್ಷತಾ ಕ್ರಮಗಳನ್ನು ಡಿಸೆಂಬರ್‌ 31ರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ಸಿಂಗ್‌ ಸೂಚಿಸಿದರು.ಎಟಿಎಂ ಹಾಗೂ ಬ್ಯಾಂಕುಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವ ಕುರಿತು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರಿ ಎಲ್ಲ ಬ್ಯಾಂಕ್‌ ಶಾಖೆಗಳ ಮ್ಯಾನೇಜರ್‌ಗಳ ವಿಶೇಷ ಸಂವಾದ ಸಭೆ ಬುಧವಾರ ಏರ್ಪಡಿಸಿ ಈ ಬಗ್ಗೆ ವಿವರಿಸಿದರು.ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಡಿಸೆಂಬರ್‌ 31ರ ನಂತರ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ, ಸಿಟಿಟಿವಿ ಹಾಗೂ ಅಲಾರಂ ಹಾಕದಿದ್ದರೆ, ಅವುಗಳನ್ನು ಮುಚ್ಚುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 127 ಎಟಿಎಂಗಳಿದ್ದು, 125 ಕಾರ್ಯನಿರ್ವಹಿಸುತ್ತಿವೆ. 124 ಎಟಿಎಂಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. 74 ಎಟಿಎಂಗಳಿಗೆ ಮಾತ್ರ ಭದ್ರತಾ ಸಿಬ್ಬಂದಿ ಗಳಿದ್ದಾರೆ. 2009ರಿಂದ ಇಲ್ಲಿಯವರೆಗೂ ಎಟಿಎಂ ಕೇಂದ್ರಗಳಿಗೆ ಸಂಬಂಧಿಸಿದಂತೆ ಎಂಟು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.ಸುರಕ್ಷತಾ ಕ್ರಮಗಳ ಸಡಿಲಿಕೆಯನ್ನು ಕಳ್ಳರು ಅವಕಾಶ ಮಾಡಿಕೊಂಡು ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಸಿಸಿಟಿವಿ ಹಾಗೂ ಅಲಾರಂ ಉಪಕರಣಗಳು ಗುಣಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ಮಾತ್ರ ಅಳವಡಿಸ ಬೇಕು. ಅಳವಡಿಸಿರುವ ಉದ್ದೇಶ ಈಡೇರಬೇಕು. ಅನೇಕ ಬ್ಯಾಂಕುಗಳಲ್ಲಿ ಅಳವಡಿಸಿದ ಸಿಸಿಟಿವಿ ಗುಣಮಟ್ಟದಲ್ಲಿ ಇರದ ಕಾರಣ, ಅಪರಾಧ ನಡೆದ ಸಂದರ್ಭದಲ್ಲಿ ಅಪರಾಧಿಗಳ ಮುಖಗಳೇ ಕಾಣುವುದಿಲ್ಲ. ಹೆಸರಿಗಷ್ಟೆ ಉಪಕರಣಗಳನ್ನು ಹಾಕಬಾರದು ಎಂದು ಹೇಳಿದರು.ಆ್ಯಕ್ಸಿಸ್‌ ಬ್ಯಾಂಕ್‌ನಂತಹ ಬ್ಯಾಂಕುಗಳು ಎಲ್ಲ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನೇಮಿಸಲು ಸಾಧ್ಯವಾಗಿದೆಯೆಂದರೆ, ಇನ್ನುಳಿದ ಬ್ಯಾಂಕುಗಳಿಗೆ ಏಕೆ ಸಾಧ್ಯವಾಗಿಲ್ಲ. ಕೂಡಲೇ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು. ಸಾರ್ವಜನಿಕರಿಗೆ ಇನ್ನಷ್ಟು ಸುರಕ್ಷಿತ ಸೇವೆ ಒದಗಿಸುವ ಭರವಸೆಯನ್ನು ಬ್ಯಾಂಕುಗಳ ನೀಡಬೇಕು ಎಂದರು.ಎಟಿಎಂ ಪಾಸ್‌ವರ್ಡ್‌ ತಪ್ಪಾಗಿ ಹಾಕಿದರೆ, ಕೂಡಲೇ ಈ ಬಗ್ಗೆ ಬ್ಯಾಂಕ್‌ಗಳಿಗೆ ಮಾಹಿತಿ ಸಿಗಬೇಕು. ಈ ತಂತ್ರಜ್ಞಾನವನ್ನು ವಿದೇಶಗಳಲ್ಲಿ ಅಳವಡಿಸಲಾಗಿದೆ. ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಬ್ಯಾಂಕುಗಳ ಯೋಜಿಸ ಬೇಕು. ಈಚೆಗೆ ಗುಲ್ಬರ್ಗದಲ್ಲಿ ನಡೆದ ಮುತ್ತೂಟ್‌ ಫೈನಾನ್ಸ್‌ ಕಳ್ಳತನ ಪ್ರಕರಣದಲ್ಲಿ ಕಳ್ಳರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹವಾ ಗುವ ಡಿವಿಆರ್‌ ಉಪಕರಣವನ್ನು ಸುಲಭವಾಗಿ ಹಾಳು ಮಾಡಿದ್ದಾರೆ. ಕಡಂಗಂಚಿ ಬ್ಯಾಂಕ್‌ ದರೋಡೆ ಪ್ರಕರಣದಲ್ಲೂ ಸಿಸಿಟಿವಿ ಗುಣಮಟ್ಟ ದಲ್ಲಿ ಇಲ್ಲಿದಿರುವುದೇ ಕಾರಣವಾಗಿದೆ ಎಂದು ತಿಳಿಸಿದರು.ಸಹಾಯಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷಬಾಬು ಕೆ., ಡಿವೈಎಸ್‌ಪಿಗಳಾದ ಸವಿಶಂಕರ ನಾಯಕ, ವಿಜಯಕುಮಾರ ಬೇವಿನಗಿಡದ ಹಾಗೂ ಎಲ್ಲ ಬ್ಯಾಂಕ್‌ ಶಾಖೆಗಳ ಮ್ಯಾನೇಜರ್‌ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.ಬ್ಯಾಂಕ್‌ಗಳಿಗೆ ಮಾರ್ಗಸೂಚಿ

ಸಿಸಿಟಿವಿ:
ಎಟಿಎಂ ಕೇಂದ್ರ ಹಾಗೂ ಬ್ಯಾಂಕ್‌ ಶಾಖೆಗಳ ಒಳಗೆ ಒಂದು ಮತ್ತು ಹೊರಗೆ ಒಂದು ಸಿಸಿಟಿವಿ ಅಳವಡಿಸಬೇಕು. ಗುಣಮಟ್ಟದ ಸಿಸಿಟಿವಿ ಇದೆಯೋ ಇಲ್ಲವೋ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇವುಗಳ ಕಾರ್ಯನಿರ್ವಹಣೆಯನ್ನು ಪೊಲೀಸರು ಪರೀಕ್ಷಿಸುವರು. ಕನಿಷ್ಠ 30 ದಿನದ ದೃಶ್ಯಾವಳಿಗಳನ್ನು ಉಳಿಸಿಕೊಳ್ಳುವ ಡಿವಿಆರ್‌ ಅಳವಡಿಸಬೇಕು.

ಎಟಿಎಂ: ಮುಖಕ್ಕೆ ಹೆಲ್ಮೆಟ್‌, ಮೊಪ್ಲರ್‌ ಅಥವಾ ಇನ್ನಿತರೆ ಅರಿವೆಯಿಂದ ಮರೆಮಾಚಿಕೊಂಡು ಎಟಿಎಂ ಪ್ರವೇಶಿಸಲು ಅವಕಾಶ ನೀಡಬಾರದು. ಸರತಿಯಲ್ಲಿ ಒಬ್ಬೊಬ್ಬರಿಗೆ ಎಟಿಎಂ ಒಳಗೆ ಹೋಗಲು ಅವಕಾಶ ನೀಡಬೇಕು. ಈ ಬಗ್ಗೆ ಭದ್ರತಾ ಸಿಬ್ಬಂದಿ ತರಬೇತಿ ನೀಡಬೇಕು. ಭದ್ರತಾ ಸಿಬ್ಬಂದಿ ಭಾವಚಿತ್ರ ಹಾಗೂ ಸಂಪೂರ್ಣ ಮಾಹಿತಿಯನ್ನು ಬ್ಯಾಂಕ್‌ ಶಾಖೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.ಬ್ಯಾಂಕ್‌ ಶಾಖೆ: ಬ್ಯಾಂಕ್‌ ಶಾಖೆಗಳಲ್ಲಿ ರಾತ್ರಿವೇಳೆಯಲ್ಲಿ ವಿದ್ಯುತ್‌ದೀಪ ಆರಿಸಬಾರದು. ಬ್ಯಾಂಕಿನ ಪ್ರತಿಯೊಂದು ಜಾಗ ಸೆರೆಯಾಗುವ ರೀತಿಯಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಡಿವಿಆರ್‌ ಸೆಟ್‌ ಸುಲಭವಾಗಿ ಸಿಗುವಂತೆ ಇಡಬಾರದು.ಅಲಾರಂ: ಎಟಿಎಂ ಕೇಂದ್ರಗಳಲ್ಲಿ ಹಾಗೂ ಬ್ಯಾಂಕ್‌ ಶಾಖೆಗಳಲ್ಲಿ ಯಾವುದೇ ತಪ್ಪುಗಳು ನಡೆದ ಸಂದರ್ಭದಲ್ಲಿ ತುರ್ತಾಗಿ ಅಲಾರಂ ಶಬ್ದ ಹೊರಡಿಸುವ ಉಪಕರಣ ಅಳವಡಿಸಬೇಕು. ಈ ಉಪಕರಣದಿಂದ ಕೂಡಲೇ ಆಯಾ ಪೊಲೀಸ್‌ ಠಾಣೆಗೆ ಮಾಹಿತಿ ಕೂಡಾ ರವಾನಿಸುವ ವ್ಯವಸ್ಥೆ ಅಳವಡಿಸಿಕೊಳ್ಳಬೇಕು.

ಪ್ರತಿಕ್ರಿಯಿಸಿ (+)