ಸೋಮವಾರ, ಜನವರಿ 20, 2020
27 °C

ತೊಗರಿ ಬೆಳೆ ಕ್ಷೇತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೊಗರಿ ಬೆಳೆ ಕ್ಷೇತ್ರೋತ್ಸವ

ಕಮಲಾಪುರ: ಗುಲ್ಬರ್ಗದಲ್ಲಿ ಅತಿ ಹೆಚ್ಚು  ಪ್ರದೇಶದಲ್ಲಿ ತೊಗರಿ ಬೆಳೆಯು­ತ್ತಾರೆ. ಇದು ತೊಗರಿಯ ಕಣಜ. ಈಚೆಗೆ ಬಂದಿದ್ದ ವಿದೇಶಿಯರೊಬ್ಬರು  ಕಣ್ಣು ಕಾಣುವಷ್ಟು ದೂರ ವಿಶಾಲ­ವಾಗಿ ಹರಡಿದ್ದ ತೊಗರಿ ಹೊಲಗಳನ್ನು ಕಂಡು ಇದು ತೊಗರಿ ಸಮುದ್ರ ಎಂದು ಉದ್ಗರಿಸಿದ್ದರು ಎಂದು ತೊಗರಿ ಪ್ರಧಾನ ವಿಜ್ಞಾನಿ ಡಾ. ಧರ್ಮರಾಜ ಹೇಳಿದರು.



ಓಸಿಸಿ, ಐಎಸ್‌ಎಸಿ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರ­ಗಳ ಆಶ್ರಯದಲ್ಲಿ ಗುಲ್ಬರ್ಗ ತಾಲ್ಲೂಕಿನ ಅವರಾದ (ಬಿ) ಗ್ರಾಮದ ಗುರುಶಾಂತಪ್ಪ ಹೊಡಲ ಅವರ ಹೊಲ­ದಲ್ಲಿ ಶುಕ್ರವಾರ  ನಡೆದ ತೊಗರಿ  ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು  ಮಾತನಾಡಿದರು.



‘ಟಿಎಸ್‌ಆರ್ 3 ತಳಿಯ ತೊಗರಿ ಬೀಜ­ಗಳನ್ನು ನಮ್ಮ ಸಂಶೋಧನಾ ಕೇಂದ್ರ ಮೂರು ವರ್ಷಗಳಿಂದ ಅಭಿವೃ­ದ್ಧಿ­ಪಡಿಸಿದೆ. ಈಗ ರೈತರಿಗೆ ಅವನ್ನು ಬಿಡುಗಡೆ ಮಾಡಿದ್ದು, ಈ ಬೀಜಗಳಿಂದ ರೈತರು ಹೆಚ್ಚಿನ ಇಳುವರಿ ಪಡೆಯು­ತ್ತಿದ್ದಾರೆ’ ಎಂದು  ತಿಳಿಸಿದರು.



‘ಬೇರೆ ತೊಗರಿ ಬೀಜಗಳೊಂದಿಗೆ ಹೋಲಿಸಿದರೆ, ಈ ಬೀಜಗಳಿಂದ ಶೇ 70 ಹೆಚ್ಚು ಇಳುವರಿ  ಬಂದಿದೆ. ನೆಟೆ ಮತ್ತು ಗೊಡ್ಡುರೋಗದ ಹಾವಳಿ ಅಷ್ಟಿಲ್ಲ. ಅದನ್ನು ಈ ಹೊಲದಲ್ಲಿ ಕಾಣುತ್ತಿದ್ದೇವೆ.  ಬೇರೆ ತೊಗರಿ ಬೆಳೆ ಪ್ರತಿ ಎಕರೆಗೆ ಮೂರು ಕ್ವೀಟಲ್‌  ಇಳುವರಿ ಬಂದರೆ, ಟಿಎಸ್‌ಆರ್‌ 3 ನಂಬರ್ ತೊಗರಿ ಎಕರೆಗೆ ಸರಾಸರಿ 7ರಿಂದ 8 ಕ್ವೀಟಲ್‌ ಇಳುವರಿ ಬರು­ತ್ತದೆ. ಇದನ್ನು ಈಗ ಸುತ್ತಲಿನ ಹಳ್ಳಿಗಳ ರೈತರೂ ಗಮನಿಸಿದ್ದಾರೆ’ ಎಂದು ಅವರು ವಿವರಿಸಿದರು.



‘ಹೈದರಾಬಾದ ಕರ್ನಾಟಕದ ಬೀದರ್‌, ರಾಯಚೂರ, ಗುಲ್ಬರ್ಗ ಜಿಲ್ಲೆಗಳ ಹಲವಾರು ತಾಲ್ಲೂಕುಗಳಲ್ಲಿ ಈ ತಳಿಯ ತೊಗರಿ ಬೆಳೆಯಲಾಗಿದ್ದು, ಕ್ಷೇತ್ರೋತ್ಸವ ನಡೆಸಿ ಇತರ ರೈತರಿಗೂ ತಿಳವಳಿಕೆ ಮೂಡಿಸಲಾಗುತ್ತಿದೆ’ ಎಂದೂ ಅವರು ವಿವರಿಸಿದರು.



ಕೃಷಿ ಸ್ಥಾಯಿ ಸಮೀತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮಾಲಿಪಾಟೀಲ, ಸಸ್ಯರೋಗಗಳ ತಜ್ಞ ಜಹೀರ ಅಹಮ್ಮದ, ಐಎಸ್‌ಎಸಿ ಸಂಸ್ಥೆಯ ಪ್ರೇಮಸಿಂಗ್ ಮತ್ತು ಇತರರು ರೈತರನ್ನು ಉದ್ದೇಶಿಸಿ ಮಾತನಾಡಿ­ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ ಬಿರಾದಾರ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಕೃಷಿ ಅಧಿಕಾರಿಗಳು ಹಾಗೂ ಸುತ್ತಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)