ಶನಿವಾರ, ಜನವರಿ 18, 2020
22 °C

ವಿಜ್ಞಾನ ಮೇಳ–ಮಕ್ಕಳ ಪ್ರತಿಭೆ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಸ್ತೆ ಅಪಘಾತದಲ್ಲಿ ಬಸ್‌ಗೆ ಬೆಂಕಿ ತಗುಲಿದೆ. ಕೂಡಲೇ ಅಲರಾಂ ಗಂಟೆ ಚಾಲಕನನ್ನು ಎಚ್ಚರಿಸುತ್ತದೆ. ತಕ್ಷಣ ಎಚ್ಚೆತ್ತ ಚಾಲಕ ಬಟನ್‌ ಒತ್ತಿ ಬಸ್‌ನ ಎಲ್ಲಾ ಕಿಟಕಿಗಳು ತೆರೆಯುವಂತೆ ಮಾಡು­­ತ್ತಾನೆ. ಪ್ರಯಾಣಿಕರು ಕಿಟಕಿ ಮೂಲಕ ಹೊರಗೆ ಹಾರಿ ಪ್ರಾಣಾ­ಪಾಯದಿಂದ ಪಾರಾಗುತ್ತಾರೆ. ಅಪ­ಘಾತ­ದಲ್ಲಿ ಬಸ್‌ ಮತ್ತು ಪ್ರಯಾ­ಣಿಕರು ಇಬ್ಬರೂ ಬಚಾವ್‌.– ಇದು ಯಾವುದೇ ಅಪಘಾತ­ವಲ್ಲ. ಮಕ್ಕಳ ಯೋಚನಾಲಹರಿಯಲ್ಲಿ ಬಸ್ ಅಪಘಾತ ತಡೆಯಲು ಮೂಡಿಬಂದ ಸುರಕ್ಷತಾ ಕ್ರಮ.

ನಗರದ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಇಂತಹ ಹಲವು ಮಾದರಿಗಳು ಗಮನ ಸೆಳೆದವು. 

ಭೂಕಂಪ ಮುನ್ಸೂಚನೆ ಯಂತ್ರ, ವಿಪತ್ತು ನಿರ್ವಹಣೆ ಯಂತ್ರ, ಕಲಬೆರಕೆ ವಸ್ತುಗಳ ಮಾದರಿ, ಡಿಎನ್‌ಎ ಪರೀಕ್ಷೆ ವಿಧಾನ, ತ್ಯಾಜ್ಯ­ದಿಂದ ಜೈವಿಕ ಇಂಧನ ತಯಾರಿಕೆ, ಜಾಗತಿಕ ತಾಪಮಾನ, ಮಳೆಕೊಯ್ಲು, ಭವಿಷ್ಯದ ಇಂಧನ ಮೂಲ ಎಥೆನಾಲ್‌ ಹೀಗೆ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾ­ರವು  ಮಕ್ಕಳ ಮಾದರಿಯ ವಿಷಯ­ಗಳಾಗಿದ್ದವು.  ಕಮಲಾಪುರದಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ವಿಜ್ಞಾನ ಕೇಂದ್ರ, ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್‌, ಸಾರ್ವಜನಿಕ  ಶಿಕ್ಷಣ ಇಲಾಖೆ ಉಪನಿ­ರ್ದೇ­­ಶಕರ ಕಚೇರಿ ಆಶ್ರಯದಲ್ಲಿ ಕಾರ್ಯ­ಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ರಾಧಾಕೃಷ್ಣರಾವ್‌ ಮದನಕರ್‌ ಮಾತನಾಡಿ, ಜೀವನ ಒಂದು ಸವಾಲು.

ಅದಕ್ಕೆ ಉತ್ತರ ವಿಜ್ಞಾನದಲ್ಲಿದೆ. ವಿಕೃತ ಜೀವನ ವಿನಾಶಕ್ಕೆ ದಾರಿ ಎಂದರು. ಪ್ರಶ್ನೆ ಕೇಳುವ ಮನೋಭಾವ, ತಿಳಿದುಕೊಳ್ಳುವ ಮನೋಭಾವ ವಿಜ್ಞಾನದಿಂದ ಮೂಡುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ , ವೈಚಾರಿಕ , ಉದಾತ್ತ ಭಾವನೆ ಬೆಳೆಸಲು ಶಿಕ್ಷಕರು ಮುಂದಾಗಬೇಕು ಎಂದರು.ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ ಮಾತನಾಡಿ, ತಾಲ್ಲೂಕು ಮಟ್ಟದ ವಿಜ್ಞಾನ ಮೇಳಗಳನ್ನು ನಡೆಸಲು ₨ 2,000 ನೀಡಲಾಗುತ್ತದೆ. ಈ ಹಣದಲ್ಲಿ ಮೇಳ ನಡೆಸುವುದು ಅಸಾಧ್ಯ. ಇಂತಹ ಕಾರ್ಯಕ್ರಮಗಳಿಗೆ ನೀಡುವ ಧನಸಹಾಯ ಹೆಚ್ಚಬೇಕು ಎಂದರು.ಜಿಲ್ಲಾ ವಿಜ್ಞಾನ ಅಧಿಕಾರಿ ಲಕ್ಷ್ಮಿನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಾಪುರ ಡಯಟ್‌ನ ಪ್ರಾಚಾರ್ಯರಾದ ಮೆಹರುನ್ನಿಸಾ ಬೇಗಂ ಅಧ್ಯಕ್ಷತೆ ವಹಿಸಿದ್ದರು. ಗುರಣ್ಣ ಗುಂಡಗುರ್ತಿ ನಿರೂಪಿಸಿದರು. ರಾಜಶೇಖರ ಜೀವಣಗಿ ಸ್ವಾಗತಿಸಿದರು. ಗೋಪಾಲಕೃಷ್ಣ ವಂದಿಸಿದರು. ಮೇಳದಲ್ಲಿ ಆರು ವಿಭಾಗಗಳ ಸುಮಾರು 35ಕ್ಕೂ ಹೆಚ್ಚು ಶಾಲೆಗಳ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)