ಆಕಾಶ ಗಂಗೆಯ ಹೊರಗಿಂದ ಮಿಂಚಿ ಮರೆಯಾದ ರೇಡಿಯೊ ತರಂಗ; ಖಗೋಳ ವಿಸ್ಮಯ

7

ಆಕಾಶ ಗಂಗೆಯ ಹೊರಗಿಂದ ಮಿಂಚಿ ಮರೆಯಾದ ರೇಡಿಯೊ ತರಂಗ; ಖಗೋಳ ವಿಸ್ಮಯ

Published:
Updated:

ಅಂತರಿಕ್ಷದ ಅಗಾಧತೆಯಿಂದ ಒಂದರಿಂದೊಂದು ರೇಡಿಯೊ ತರಂಗಗಳು ಮೇಲೆದ್ದು ಮರೆಯಾಗಿರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಮಿಂಚಿನಂತೆ ರೇಡಿಯೊ ತರಂಗಗಳು ಪುನರಾವರ್ತನೆಯಾಗಿರುವುದು ಖಗೋಳದಲ್ಲಿ ಕಂಡಿರುವ ಅಪರೂಪದ ವಿದ್ಯಮಾನ. 

ಅನ್ಯಗ್ರಹ ಜೀವಿಗಳ ಇರುವಿಕೆಯ ಪತ್ತೆಗಾಗಿ ಅಧ್ಯಯನಗಳು ನಡೆಯುತ್ತಿರುವ ಬೆನ್ನಲೇ ಮಿಲಿ ಸೆಕೆಂಡ್‌ಗಳಷ್ಟು ಅಪಾರ ಶಕ್ತಿಯನ್ನು ಹೊರಡಿಸಿ ಮರೆಯಾಗುತ್ತಿರುವ ತರಂಗಗಳ ಮಿಂಚು ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ನಮ್ಮ ನಕ್ಷತ್ರ ‍ಪುಂಜ ಆಕಾಶ ಗಂಗೆ ಅಥವಾ ಕ್ಷೀರಪಥದ ಆಚೆಗೆ, ಸುಮಾರು 150 ಕೋಟಿ ಜ್ಯೋತಿರ್ವರ್ಷ ದೂರದಲ್ಲಿ ಈ ತರಂಗಗಳ ಮಿಂಚು ಕಂಡಿವೆ. 

ಈ ತರಂಗಗಳು ಎಲ್ಲಿಂದ ಹೊರಟಿವೆ, ಯಾವುದರಿಂದ ಹೊರಟಿವೆ, ಯಾವುದಕ್ಕಾಗಿ ಹೊರಟಿವೆ ಎಂಬುದು ವಿಜ್ಞಾನಿಗಳೂ ಸಹ ಉತ್ತರಕ್ಕಾಗಿ ಹುಡುಕಾಟದಲ್ಲಿರುವ ಪ್ರಶ್ನೆಗಳು. ಸಂಶೋಧಕರು ನೂತನ, ಅತ್ಯಂತ ಸಮರ್ಥ ಕೆನೆಡಿಯನ್‌ ಟೆಲಿಸ್ಕೋಪ್‌ ಮೂಲಕ ಹೊಸದಾದ ಬಿರುಸಿನ 13 ರೇಡಿಯೊ ತರಂಗಗಳ ಮಿಂಚುಗಳನ್ನು ಗಮನಿಸಿರುವುದಾಗಿ ಅಮೆರಿಕದ ಖಭೌತ ಸಂಸ್ಥೆಯ ಸಭೆಯಲ್ಲಿ ‍ಪ್ರಕಟಿಸಲಾಗಿದೆ.

ಕಳೆದ 12 ವರ್ಷಗಳಲ್ಲಿ ಐದು ಡಜನ್‌ಗೂ ಹೆಚ್ಚಿನ ರೇಡಿಯೊ ಮಿಂಚುಗಳನ್ನು ಗಮನಿಸಲಾಗಿದ್ದು, ಹಿಂದಿನ ಎರಡೇ ತಿಂಗಳಲ್ಲಿ ಈ ಪ್ರಮಾಣ ಶೇ 20ರಷ್ಟು ಹೆಚ್ಚಿದೆ. 

ಇತ್ತೀಚೆಗೆ ಅಂತರಿಕ್ಷದ ಒಂದೇ ದಿಕ್ಕಿನಿಂದ ಆರು ಬಾರಿ ಮಿಂಚಿರುವುದನ್ನು ವಿಜ್ಞಾನಿಗಳು ಕಂಡಿದ್ದಾರೆ. ಒಂದೇ ಮೂಲದಿಂದ ರೇಡಿಯೊ ತರಂಗಗಳು ಪುನರಾವರ್ತನೆಯಾಗಿರುವುದರಿಂದ ಅದರ ಮೂಲವನ್ನು ಕಂಡುಕೊಳ್ಳುವುದು ಸುಲಭವಾಗಲಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಪುನರಾವರ್ತಿತ ರೇಡಿಯೊ ತರಂಗ ಕಾಣಿಸಿದೆ. ವರ್ಷದ ಹಿಂದೆಯೇ ಕಾಣಿಸಿಕೊಂಡಿರುವ ಈ ಸುಳಿವು ಖಭೌತ ವಿಜ್ಞಾನಿಗಳ ನಿದ್ದೆಗೆಡಿಸಿದೆ. 

ಅನ್ಯಗ್ರಹ ಜೀವಿಗಳ ಲೋಕದಿಂದ?– ಈ ತರಂಗಗಳ ಬಗ್ಗೆ ಅಧ್ಯಯನದಲ್ಲಿರುವ ಶ್ರೀಹರ್ಷ್‌ ತೆಂಡೂಲ್ಕರ್‌, ’ಬಹಳ ದೂರದಲ್ಲಿರುವ ಅನ್ಯಗ್ರಹ ಜೀವಿಗಳು ಕಳಿಹಿಸಿರುವ ಸಂದೇಶ ಎಂಬ ಸಾಮಾನ್ಯ ಅಭಿಪ್ರಾಯವನ್ನು ವಿಜ್ಞಾನಿಯಾಗಿ ಒಪ್ಪಲು ಸಾಧ್ಯವಾಗುವುದಿಲ್ಲ. ಅನ್ಯಗ್ರಹ ಜೀವಿಗಳೇ ಕಳುಹಿಸಿರುವ ಸಂದೇಶವೆಂದು ಶೇ 100ರಷ್ಟು ಖಚಿತವಾಗಿ ಹೇಳಲು ಆಗದು. ಖಗೋಳ ವಿಜ್ಞಾನಿಗಳು ಈ ರೇಡಿಯೊ ತರಂಗಗಳ ಮಿಂಚಿನ ಮೂಲ ಅನ್ಯಲೋಕದ ಬುದ್ಧಿವಂತ ಜೀವಿಗಳಿಂದ ಎಂದು ಪರಿಗಣಿಸಿಲ್ಲ’ ಎಂದಿದ್ದಾರೆ.  

ಬರಹ ಇಷ್ಟವಾಯಿತೆ?

 • 35

  Happy
 • 3

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !