ಬುಧವಾರ, ಜನವರಿ 29, 2020
27 °C
ಪ್ರಜಾವಾಣಿ ವಿಶೇಷ : ಕೃಷಿ– ಋಷಿ

ತೋಟದಾಗೆ ಖುಷಿ ಕಂಡು, ಖುಷಿ ಜತೆಗೆ ಬದುಕು ಕಂಡು

ಪ್ರಜಾವಾಣಿ ವಾರ್ತೆ/ –ಶಶಿಕಾಂತ ಭಗೋಜಿ Updated:

ಅಕ್ಷರ ಗಾತ್ರ : | |

ತೋಟದಾಗೆ ಖುಷಿ ಕಂಡು, ಖುಷಿ ಜತೆಗೆ ಬದುಕು ಕಂಡು

ಹುಮನಾಬಾದ್‌: ‘ನಿನಗೆ ಸ್ವಲ್ಪವೂ ಬುದ್ಧಿ ಇಲ್ಲ. ಅಂಥ ಭೂಮಿ ಖರೀದಿಸಿ ಏನು ಸಾಧಿಸುತ್ತಿಯಾ ಎಂದು ಜನರು ಬೈದರು. ಆದರೂ ಮುಂದಿಟ್ಟ ಹೆಜ್ಜೆ­ಯನ್ನು ಹಿಂದಿಡಬಾರದು ಎಂಬ ಆತ್ಮ ವಿಶ್ವಾಸದೊಂದಿಗೆ ಬರಡುಭೂಮಿ­ಯಲ್ಲೇ ಕೃಷಿ ಕಾಯಕ ಕೈಗೊಳ್ಳಲು ಮುಂದಾದೆ. ಈಗ ನೋಡಿ’ ಎಂದು ಹರಿನಾಥಪ್ಪ ನೂಲಾ ಬಾನೆತ್ತರಕ್ಕೆ ಬೆಳೆದು ನಿಂತಿರುವ ತೆಂಗಿನಮರಗಳತ್ತ ಮುಖ ಮಾಡಿದರು.ನೂಲಾ ಅವರು ಹುಮನಾಬಾದ್‌ ಸಮೀಪವಿರುವ ಧುಮ್ಮನಸೂರ ಗ್ರಾಮದ ಹೊರವಲಯದ ಬೀದರ್‌ ರಸ್ತೆಯ ಎಡಬದಿಯಲ್ಲಿ ಕೃಷಿ ಚಟು­ವಟಿಕೆಗೆ ಅಷ್ಟಾಗಿ ಬೇಡಿಕೆ ಇಲ್ಲದಿದ್ದ ಸಂದರ್ಭ­ದಲ್ಲಿ 10 ಎಕರೆ ಬರಡು­ಭೂಮಿ­ಯನ್ನು ಖರೀದಿಸಿದ್ದರು. ಆಗ ಸ್ವಗ್ರಾಮ ಮಾತ್ರವಲ್ಲದೇ ಹುಮನಾ­ಬಾದ್‌ನ ಅನೇಕರು ಜರೆದಿದ್ದರು.ಆದರೂ ನೂಲಾ ಅವರು ಹೆದರ­ಲಿಲ್ಲ. ಇಡೀ 10 ಎಕರೆ ಜಮೀನನ್ನು ಹಿಟಾಚಿ ಯಂತ್ರದಿಂದ ಅಗೆಸಿ, ಕನಿಷ್ಠ 1 ಮೀಟರ್‌ನಷ್ಟು ಮಣ್ಣು ಹೊಡೆಸಿದರು. ಹಿಂದುಮುಂದು ನೋಡದೆ ಕೊಳವೆ­ಬಾವಿ ತೆಗೆಸಿದರು. ನೀರು ಚೆನ್ನಾಗಿ ಬಂತು. ಆರಂಭದಲ್ಲಿ ನೆಟ್ಟ ಸುಮಾರು 70ಕ್ಕೂ ಅಧಿಕ ತೆಂಗಿನಮರಗಳು ಈಗ ದೊಡ್ಡದಾಗಿ ಬೆಳೆದುನಿಂತು ತೋಟದ ಆಕರ್ಷಣೆ ಹೆಚ್ಚಿಸಿವೆ. ಜೊತೆಗೆ ತಕ್ಕ ಇಳುವರಿಯಿಂದ ಆದಾಯವೂ ಬರು­ತ್ತಿದೆ. ಎರಡು ಎಕರೆ ತೊಗರಿ, ಸೋಯಾ ಬೇಸಾಯ ಮಾಡು­ತ್ತಿದ್ದು, ಅದರಿಂ­ದಲೂ ಉತ್ತಮ ಆದಾಯ ಬರುತ್ತಿದೆ.ಆರಂಭದಲ್ಲಿ ತೋಟ­ಗಾರಿಕೆ ಕೈಗೊಳ್ಳು­ವಾಗ ಕೆಲವರ ಸಲಹೆ ಮೇರೆಗೆ ಹನಿ ನೀರಾವರಿ ಅಳವಡಿಸಿ ಮಾವು, ಜಾಪಳ­ಕಾಯಿ, ನಿಂಬೆ­ಗಿಡಗಳನ್ನು ಬೆಳೆಸಿದ್ದು, ಋತುವಿಗೆ ಅನುಗುಣವಾಗಿ ಸಿಗುವ ಫಸಲಿನಿಂದ ಉತ್ತಮ ಆದಾಯ ಬರುತ್ತಿದೆ. ಉಳಿದ ಭೂಮಿ­ಯಲ್ಲಿ ಕಬ್ಬನ್ನು 6 ರಿಂದ 8ಅಡಿ ಅಂತರ ಬೆಳೆ­ಯಾಗಿ ಬೆಳೆದಿರುವುದರಿಂದ ಕನಿಷ್ಠ 17 ರಿಂದ 18 ಅಡಿ ಎತ್ತರ ಬೆಳೆ­ದಿದೆ. ಅಲ್ಲದೇ ಪ್ರತಿ ಎಕರೆಗೆ 70ರಿಂದ 80 ಟನ್‌­ಗಳಿಗೂ ಅಧಿಕ ಇಳು­ವರಿ ಬರುತ್ತಿದೆ.20 ವರ್ಷಗಳ ಹಿಂದೆ ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮದಕಟ್ಟಿ­ಯಲ್ಲಿ ವಿಶೇಷ ಸೌಲಭ್ಯ­ವಿಲ್ಲದಿದ್ದ ಸಮಯವದು. ಏನಾದರೂ ವಿಶೇಷ­ವಾದದ್ದನ್ನು ಸಾಧಿಸಬೇಕು ಎಂದು­ಕೊಂ­ಡಿದ್ದ ಹರಿನಾಥಪ್ಪ ನೂಲಾ ಅವರಿಗೆ ತಂದೆ ಕಲ್ಲಪ್ಪ ಅವರಿಂದ ಬಂದ ಅಲ್ಪ­ಸ್ವಲ್ಪ ಜಮೀನಿನಲ್ಲಿ ಕೃಷಿ ಚಟುವಟಿಕೆ­ಯಲ್ಲಿ ತೊಡಗಿಸಿ­ಕೊಂಡರು.ಆದರೆ ತಮ್ಮ ಗ್ರಾಮದಲ್ಲಿ ನಿರೀಕ್ಷಿತ ಗುರಿ ಸಾಧಿಸು­ವುದು ಅಸಾಧ್ಯ ಎನ್ನುವುದನ್ನು ಅರಿತು ಹೊಸ ಪ್ರಯೋ­ಗಕ್ಕೆ ಕೈಹಾಕಿ, ಏನಾದರೂ ಸಾಧಿಸುವ ಉದ್ದೇಶ­ಹೊತ್ತು ಧುಮ್ಮನಸೂರನಲ್ಲಿ ಜಮೀನು ಖರೀದಿಸಿದ್ದರು.ಹೊಸ ಪ್ರಯೋಗ: ‘ಈ ಭಾಗದ ಬರಡು­ಭೂಮಿಯಲ್ಲಿ ಇಂಥ ಪ್ರಯತ್ನ­ದಲ್ಲಿ ಯಶಸ್ಸು ಕಾಣುವುದು ಸಾಧ್ಯವಿಲ್ಲ ಎಂದು­ಕೊಂಡು ಯಾರೊಬ್ಬರೂ ಕೈಹಾ­ಕದೇ ಇದ್ದ ಕಾಫಿ, ಅಡಿಕೆ, ದಾಲ್ಚಿನಿ, ಖಾರಿಕ್, ಚಿಕ್ಕು, ಅಂಜೂರ, ರುದ್ರಾಕ್ಷಿ, ಮಹಾಗನಿ ಮರಗಳನ್ನು ಬೆಳೆಸುವ ಸಾಹಸದಂಥ ಹೊಸ ಪ್ರಯೋಗಕ್ಕೆ ಮುಂದಾದೆ.ಈ ಪ್ರಯತ್ನಕ್ಕೆ ತೋಟ­ದಲ್ಲಿ ಬೆಳೆದು­ನಿಂತ ಗಿಡ,ಮರ­ಗಳೇ ತಾಜಾ ನಿದರ್ಶನ. ಇಷ್ಟಕ್ಕೂ ನಾಲ್ಕಾರು ಗಿಡ ಬೆಳೆದು ನೀವು ಸಾಧಿಸಿದ್ದೇನು? ಎಂಬ ಪ್ರಶ್ನೆಗೆ ಮೇಲೆ ಹೆಸರಿಸಲಾದ ಕಾಫಿ ಇತ್ಯಾದಿ ತೋಟ­ಗಾರಿಕೆ ಬೇಸಾಯ ಈ ಭಾಗದಲ್ಲಿಯೂ ಕೈಗೊಳ್ಳಬಹುದು ಎನ್ನು­­ವು­ದನ್ನು  ಮನ­ವರಿಕೆ ಮಾಡಿ­ಕೊಂಡಿ­­­­ದ್ದೇನೆ.ಭವಿಷ್ಯದಲ್ಲಿ ಈ ಎಲ್ಲ ಬೆಳೆ ಬೆಳೆದು ಹೆಚ್ಚಿನ ಆದಾಯ ಪಡೆಯುವ ಗುರಿಹೊಂದಿದ್ದೇನೆ’ ಎಂದು ಹರಿನಾಥಪ್ಪ ನೂಲಾ ವಿವರಿಸುತ್ತಾರೆ. 

‘ನಾನು ಈವರೆಗೆ ಕೈಗೊಂಡಿರುವ ವೈವಿಧ್ಯಪೂರ್ಣ ಕೃಷಿ ಹಾಗೂ ತೋಟ­ಗಾರಿಕೆ ಬೇಸಾಯಕ್ಕೆ ಬೀದರ್‌ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ರವಿ ದೇಶಮುಖ ಅವರ ಮಾರ್ಗದರ್ಶನ­ವಿದೆ. ಕೇವಲ ಮೌಖಿಕ ಮಾರ್ಗದರ್ಶ­ನಕ್ಕೆ ಸೀಮಿತಗೊಳ್ಳದೆ ಆಗಾಗ ತೋಟಕ್ಕೆ ಭೇಟಿ ನೀಡಿ ಹೊಸ ಪ್ರಯೋಗಗಳ ಕುರಿತು ಸಲಹೆ, ಸೂಚನೆಗಳನ್ನು ನೀಡು­ತ್ತಾರೆ.ಅವರ ಮಾರ್ಗದರ್ಶನದಲ್ಲಿ ಕೈ­ಗೊಳ್ಳ­ಲಾದ ಸಮಗ್ರ ಕೃಷಿ ಚಟುವಟಿಕೆ ಗಮನಿಸಿ ರಾಯಚೂರು ಕೃಷಿ ವಿಶ್ವ­ವಿದ್ಯಾಲಯ 2013–14ನೇ ಸಾಲಿನ ಬೀದರ್‌ ಜಿಲ್ಲೆಯ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದು ಪ್ರಗತಿಪರ ರೈತ ಹರಿನಾಥಪ್ಪ ನೂಲಾ ಅತ್ಯಂತ ಹರ್ಷದಿಂದ ಹೇಳಿಕೊಂಡರು. (ಮೊ:9448109655).

ಪ್ರತಿಕ್ರಿಯಿಸಿ (+)