ಭಾನುವಾರ, ಜನವರಿ 19, 2020
29 °C
ಕೃಷಿ ಖುಷಿ

ರಾಜಕೀಯ ಸಾಕಾಯ್ತು: ಬೇಸಾಯ ಬೇಕಾಯ್ತು

ಪ್ರಜಾವಾಣಿ ವಾರ್ತೆ / –ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

ಅಫಜಲಪುರ: ನಾನ್‌–ಮೆಟ್ರಿಕ್‌ ವರೆಗೆ ಶಿಕ್ಷಣ ಪಡೆದು ತೆಂಗಿನಕಾಯಿ, ಹೂವಿನ ವ್ಯಾಪಾರ ಮಾಡುತ್ತಿದ್ದ ಅವರು ಕ್ರಮೇಣ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಅಲ್ಲಿಯೂ ಸಾಕಾಗಿ ಕೊನೆಗೆ ದುಡಿಮೆಗೆ ಆರಿಸಿಕೊಂಡಿದ್ದು ತೋಟಗಾರಿಕೆ!ಪ್ರಸಿದ್ಧ ದತ್ತಾತ್ರೇಯ ದೇವಸ್ಥಾನ ಇರುವ ಗ್ರಾಮ ದೇವಲಗಾಣಗಾಪುರ . ಅಲ್ಲಿ ಕೃಷಿ ಮಾಡುವವರೇ ಕಡಿಮೆ. ಆದರೆ, ಅಲ್ಲಿ ದತ್ತಾತ್ರೇಯ ತಮ್ಮಣ್ಣಪ್ಪ ಕೊಳ್ಳೂರ 55ನೇ ವಯಸ್ಸಿನಲ್ಲಿಯೂ ಸಾವಯವ ಕೃಷಿ, ಮಳೆ ನೀರು ಸಂರ­ಕ್ಷಣೆ, ಜೀವಾಮೃತ (ಸುಭಾಷ್ ಪಾಲೇಕರ್‌ ಪದ್ಧತಿ), ಸೋಲಾರ್‌ ವಿದ್ಯುತ್‌ ಬಳಸಿ ಹನಿ ನೀರಾವರಿ ಮುಂತಾದ ಹೊಸ ಹೊಸ ವಿಧಾನಗಳನ್ನು ಅಳವಡಿಸಿ­ಕೊಂಡು ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಪಡೆದು ಹೆಚ್ಚಿನ ಲಾಭಗಳಿಸುವ ದಾರಿಯನ್ನು ಕಂಡುಕೊಂಡಿದ್ದಾರೆ.ಭೀಮಾನದಿ ಹಾಗೂ ಅಮರ್ಜಾ ನದಿಗಳು ಈ ಭಾಗದಲ್ಲಿ ಹರಿದರೂ ಆ ಭಾಗದ ಹಳ್ಳಿಗಳಿಗೆ ನೀರಾವರಿ ಸೌಲಭ್ಯ­ವಿಲ್ಲ.ಆ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ದೇವಲಗಾಣಗಾ­ಪುರದ ಭೀಮಾನದಿಗೆ ಬ್ಯಾರೇಜ್‌ ಕಂ ಬ್ರೀಜ್‌ ನಿರ್ಮಿಸಲಾಗಿದೆ. ಅದು ಸಮರ್ಪಕ­ವಾಗಿ ನೀರು ಸಂಗ್ರಹವಾಗು­ತ್ತಿಲ್ಲ. ನೀರು ಸಂಗ್ರಹವಾದರೂ ರೈತರು ಪಂಪ್‌ಸೆಟ್‌ ಅಳವಡಿಸಿ ನೀರು ಪಡೆದುಕೊಳ್ಳಬೇಕು.

ದತ್ತಾತ್ರೇಯ ಕೊಳ್ಳುರ ತಮ್ಮ 20 ಎಕರೆ ಜಮೀನಿನಲ್ಲಿ ಬಾವಿ ಮತ್ತು ಕೊಳವೆಬಾವಿ ಕೊರೆದು ಬಂಜರು­ಭೂಮಿ­­ಯ­ನ್ನು ಫಲಭರಿತವ­ನ್ನಾಗಿ ಪರಿ­ವರ್ತಿಸಿ ಉತ್ತಮ ಬೆಳೆ ಬೆಳೆಯುತ್ತಿ­ದ್ದಾರೆ.ಕೊಳ್ಳೂರ ಅವರು ತಮ್ಮ 8 ಎಕರೆಯಲ್ಲಿ ಕೇಸರ ತಳಿಯ ಮಾವು, 3 ಎಕರೆ  ಲಖನೌ ತಳಿಯ ಪೇರಲ ಮತ್ತು 2 ಎಕರೆ ಕಬ್ಬು ಬೆಳೆದಿದ್ದು, ಉಳಿದ ಜಮೀನಿನಲ್ಲಿ ಸಾವಯವ ಗೊಬ್ಬರ, ಹೈನುಗಾರಿಕೆ ಮತ್ತು ಸೋಲಾರ ವಿದ್ಯುತ್‌ ಘಟಕವನ್ನು ಸ್ಥಾಪಿಸಿಕೊಂಡಿ­ದ್ದಾರೆ.

ಪೇರಲ ಫಸಲು ಬರಲು ಆರಂಭಿ­ಸಿದೆ. ಲಖನೌ ತಳಿ ಬೇಗ ಕೆಡುವುದಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಕೇಶರ ಮಾವು ಸಕ್ಕರೆಗಿಂತಲೂ ರುಚಿಯಾಗಿರುತ್ತದೆ. ಇದು ಹೊರ­ದೇಶಕ್ಕೆ ರಫ್ತಾಗುತ್ತದೆ.‘ತೋಟಗಾರಿಕೆಯಲ್ಲಿ ಇಷ್ಟೊಂದು ಲಾಭವಿದೆ ಎನ್ನವುದು ನನಗೆ ತಿಳಿದಿರ­ಲಿಲ್ಲ. ತೋಟಗಾರಿಕೆ ಅಧಿಕಾರಿ ಮುಲಗೆ ಅವರ ಸಲಹೆ ಮೇರೆಗೆ ತೋಟಗಾರಿಕೆ ಕೈಗೊಂಡೆ.ಬೆನ್ನೆಲಬು ಆಗಿ ನನ್ನ ಪತ್ನಿ ನಿಂತಳು. ನನಗೆ ಈಗ ವ್ಯಾಪಾರ ಮತ್ತು ರಾಜಕೀಯಕ್ಕಿಂತ ಕೃಷಿ ಮೇಲೆ ಹೆಚ್ಚು ನಂಬಿಕೆ ಬಂದಿದೆ’ ಎನ್ನುತ್ತಾರೆ ದತ್ತಾ­ತ್ರೇಯ ಕೊಳ್ಳೂರ.ಮಕ್ಕಳಿಗೆ ಶಿಕ್ಷಣ: ದತ್ತಾತ್ರೇಯ ಕೊಳ್ಳೂರ ಮೆಟ್ರಿಕ್‌ ಫೇಲಾಗಿದ್ದರೂ ಕಷ್ಟಪಟ್ಟು  ತಮ್ಮ ಮೂರು ಹೆಣ್ಣು­ಮಕ್ಕಳಿಗೆ ಸ್ನಾತಕೋತ್ತರ ಪದವಿ ಮತ್ತು ಇಬ್ಬರು ಗಂಡು ಮಕ್ಕಳಿಗೆ ಸಾಫ್ಟ್‌ ವೇರ್‌ ಎಂಜಿನಿಯರ್‌ ಮಾಡಿದ್ದು ವಿಶೇಷ­ವಾಗಿದೆ. ಅವರು ಕೃಷಿಯಲ್ಲಿ ಮಾಡಿ­ರುವ ಸಾಧನೆಯನ್ನು ಪರಿಗಣಿಸಿ ಈಚೆಗೆ ರಾಯಚೂರಿನಲ್ಲಿ ನಡೆದ  ಕೃಷಿ ವಿಶ್ವ­ವಿದ್ಯಾಲಯದ ಕೃಷಿ ಮೇಳದಲ್ಲಿ ದತ್ತಾ­ತ್ರೇಯ ಕೊಳ್ಳೂರ ಅವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.ದತ್ತಾತ್ರೇಯ ರೈತನಾದ ಬಗೆ: ದತ್ತಾ­ತ್ರೇಯ ಕೊಳ್ಳೂರ ಮೊದಲು ಪಕ್ಕಾ ವ್ಯಾಪಾರಿ. ದತ್ತ ದೇವಸ್ಥಾನ ಮುಂದೆ ತೆಂಗಿನಕಾಯಿ, ಹೂ ಮಾರಾಟ ಮಾಡುತ್ತಿದ್ದರು. ಅದು ಸರಿ ಹೋಗದ ಕಾರಣ ಕೆಲವು ವರ್ಷಗಳ ಕಾಲ ರಾಜಕೀಯ ಮಾಡಿದರು. ಅಲ್ಲಿಯೂ ಕೈ ಸುಟ್ಟುಕೊಂಡರು. ತೀವ್ರವಾಗಿ ನೊಂದರು. ನೆಮ್ಮದಿಯೇ ಇಲ್ಲದಂ­ತಾಯಿತು.ಮತ್ತೆ ತಮ್ಮ 20 ಎಕರೆಯಲ್ಲಿ ಹಣ್ಣು ಹಂಪಲ ಕೃಷಿಯಲ್ಲಿ ಖುಷಿ ಕಾಣ ತೊಡಗಿದರು.ಈಗ ಒತ್ತಡದ ಮುಕ್ತ ಜೀವನ ನಡೆಸುತ್ತಿರುವ ದತ್ತಾತ್ರೇಯ, ತಮ್ಮ ವ್ಯಾಪಾರ ಮತ್ತು ರಾಜಕೀಯ­ಕ್ಕಿಂತ ಹೆಚ್ಚು ನೆಮ್ಮದಿ ಕಾಣುತ್ತಿದ್ದಾರೆ.

ಜೀವಾಮೃತ, ಎರೆಹುಳ ಗೊಬ್ಬರ ಸೇರಿದಂತೆ ಸಾವಯುವ ಪದ್ಧತಿಯಲ್ಲಿ ಇವರು ಬೇಸಾಯ ಮಾಡುತ್ತಿದ್ದಾರೆ.

ಸಾವಯುವ ಗೊಬ್ಬರ ಮತ್ತು ಜೀವಾಮೃತ ಉತ್ಪಾದನೆಗಾಗಿ ಗುಜ­ರಾತ್‌ನ ಕೆಂಪು ತಳಿಯ ಜಾನುವಾರು ಹಿಂಡುಗಳನ್ನೇ ಸಾಕುತ್ತಿದ್ದಾರೆ. (ಮಾಹಿತಿಗಾಗಿ ­ದತ್ತಾತ್ರೇಯ ಕೊಳ್ಳೂರ 9980000199)

‘ಸೌರಶಕ್ತಿ ಪಂಪ್‌ಸೆಟ್‌ ಸಾಧನೆ!’

‘ದತ್ತಾತ್ರೇಯ ಕೊಳ್ಳೂರ ಸರ್ಕಾರದ ಎಲ್ಲಾ ಸೌಲಭ್ಯ­ಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಉತ್ತಮ ಕೃಷಿ ಮಾಡುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಅಳವ­ಡಿಸಿ­ದ್ದಾರೆ. ಅವರು ಸೌರಶಕ್ತಿ ಪಂಪ್‌ಸೆಟ್‌ ಅಳವಡಿಸಿಕೊಂಡಿರುವುದು ಸಾಧನೆಯೇ ಸರಿ.

–ಶಂಕರ ಪಟವಾರಿ,

ತೋಟಗಾರಿಕೆ ಅಧಿಕಾರಿ‘ಮಾರುಕಟ್ಟೆ ಒದಗಿಸಲಿ’

‘ದತ್ತಾತ್ರೇಯ ಕೊಳ್ಳೂರ ತೋಟಗಾರಿಕೆಯಲ್ಲಿ ಸಾಧನೆ ಮಾಡಿದ್ದಾರೆ. ಶ್ರಮ ಜೀವಿಗಳಾಗಿದ್ದು, ಅವರು ಬೆಳೆಯುತ್ತಿ­ರುವ ಪೇರಲ ಮತ್ತು ಮಾವಿನಹಣ್ಣಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕಾಗಿದೆ.

–ದತ್ತು ಸಿಂಧೆ, ತಾಲ್ಲೂಕು ಪಂಚಾಯಿತಿ ಸದಸ್ಯ, ಅಫಜಲಪುರ

ಪ್ರತಿಕ್ರಿಯಿಸಿ (+)