ಸೋಮವಾರ, ಜನವರಿ 27, 2020
23 °C

ಕೃಷಿ ಪಾಠ ಹೇಳುವ ಶಿಕ್ಷಕ ನರಸಪ್ಪ

ಪ್ರಜಾವಾಣಿ ವಾರ್ತೆ/ –ಬಸವರಾಜ ಆಲೆಮನಿ Updated:

ಅಕ್ಷರ ಗಾತ್ರ : | |

ಕೃಷಿ ಪಾಠ ಹೇಳುವ ಶಿಕ್ಷಕ ನರಸಪ್ಪ

ಗುರುಮಠಕಲ್‌:  ಪಟ್ಟಣದಿಂದ ಎಂಟು ಕಿಲೋಮೀಟರ್‌ ಸಾಗಿದರೆ ಎಂ.ಟಿ.ಪಲ್ಲಿ ಗ್ರಾಮ ಸಿಗುತ್ತದೆ. ಅಲ್ಲಿ ಶಿಕ್ಷಕ ನರಸಪ್ಪ ಕೋಟ್ರಿಕಿ ಕೃಷಿಯಲ್ಲಿನ ಆಸಕ್ತಿಯಿಂದಾಗಿ ಗ್ರಾಮದ ರೈತರಿಗೂ ಪ್ರತ್ಯೇಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕೃಷಿ ಪಾಠ ಹೇಳುತ್ತಿದ್ದಾರೆ.ಕುಟುಂಬದಲ್ಲಿ ಅಣ್ಣ ತಮ್ಮಂದಿರು ಬೇರೆಯಾದ ನಂತರ ಅವರ ಪಾಲಿಗೆ ಬಂದಿದ್ದು ಗುಡ್ಡದ ಹೊಲ. ಅಲ್ಲಿ ಹಿರಿಯರ ಕಾಲದಿಂದಲೂ ಕೇವಲ ಒಂದು ಎಕರೆ ಭೂಮಿಯಲ್ಲಿ ಜೋಳ, ತೊಗರಿ, ಕೆಲವೊಮ್ಮೆ ಹಳ್ಳದ ನೀರಿನಿಂದ ಶೇಂಗಾ ಬೆಳೆ ಬೆಳೆಯುತ್ತಿದ್ದರು. ಗುಡ್ಡ­ದಲ್ಲಿನ 1.5 ಎಕರೆ ಬೀಳುಭೂಮಿ­ಯನ್ನು ನೆಲಸಮ ಮಾಡಿ ಅಲ್ಲಿ 4 ಕೊಳವೆಬಾವಿಗಳನ್ನು ಕೊರೆಸಿದರು. ಎರಡರಲ್ಲಿ ಮಾತ್ರ ಸ್ವಲ್ಪ ನೀರು ಬಂದಿದೆ.ಗುಡ್ಡದಲ್ಲಿ ನೀರು ಸಿಗುವುದೇ ಅಪ­ರೂಪ. ಅದರಲ್ಲೂ ಒಂದರಲ್ಲಿ ಕುಡಿ­ಯಲು ಮಾತ್ರ ಸಾಕಾಗುವಷ್ಟು ನೀರು ಬಂದಿದೆ. ಇನ್ನೊಂದರಲ್ಲಿ ಸ್ವಲ್ಪ ಹೆಚ್ಚು ನೀರು ಬಂದಿತ್ತು. ಅದರಿಂದ ಕೃಷಿ ಮಾಡಲು ಸಾಧ್ಯವಾಗದು ಎಂದು ಎಲ್ಲರೂ ಹೇಳಿದರು.ಆದರೂ ಎದೆ­ಗುಂದದ ನರಸಪ್ಪ ಕೋಟ್ರಿಕಿ, ಸಾಧನೆ ಮಾಡಿ ತೋರಿಸಬೇಕೆಂಬ ಛಲದಿಂದ ಕಡಿಮೆ ನೀರಿನಲ್ಲಿಯೇ ಉತ್ತಮ ಫಸಲು ಮತ್ತು ಲಾಭ ಪಡೆಯುವ ರೀತಿಯಲ್ಲಿ ಯೋಜನೆ ರೂಪಿಸಿದರು. ಅದಕ್ಕೆ ತಕ್ಕಂತೆ ವ್ಯವಸಾಯಕ್ಕೆ ಮುಂದಾಗಿದ್ದಾರೆ. ಕೃಷಿಗೆ ನೀರು ಕಡಿಮೆ ಬೀಳಬಾರದು ಎಂದು ನೀರು ಸಂಗ್ರಹಣೆ ತೊಟ್ಟಿ ಮಾಡಿದರು. ಅದರಿಂದ ಸಮಯಕ್ಕೆ ಸರಿಯಾಗಿ ಗಿಡ­ಗಳಿಗೆ ನೀರು ಉಣಿಸಲು 10x18 ಅಡಿಯ ಟ್ಯಾಂಕ್‌ ನಿರ್ಮಿಸಿ, ಅದರಿಂದ ನೀರು ಹರಿಸುವ ವ್ಯವಸ್ಥೆ ಮಾಡಿ­ಕೊಂಡಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ರೂ 50 ಸಾವಿರ ಖರ್ಚು ಮಾಡಿ, ಮೊಸಂಬಿ ತೋಟವನ್ನು ಮಾಡಿದರು. ಫಸಲು ಬರುವವರೆಗೆ ಕಾಯದೇ ಜಾಮ್‌ ಸಸಿ, ಚಿಕ್ಕು, ನುಗ್ಗೆ ಸಸಿ, ಅಂಜೂರ, ದಾಳಿಂಬೆ, ಕರಿಬೇವು, ತೆಂಗಿನಸಸಿ ನೆಡುವ ಮೂಲಕ ಇರುವ ಹೊಲವನ್ನು ಸಂಪೂರ್ಣವಾಗಿ ಬಳಕೆ ಮಾಡಿ ಹೊಸ ಸಾಧನೆಗೆ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.ಪ್ರತಿ ವರ್ಷ ಎಲ್ಲ ಬೆಳೆಗಳಿಗೆ ಸುಮಾರು ರೂ 15 ಸಾವಿರ ಖರ್ಚು ಮಾಡು­ತ್ತಿದ್ದಾರೆ. ಕೇವಲ ಮೊಸಂಬಿ ಬೆಳೆಯಿಂದ ಮೊದಲ ಬೆಳೆಯಲ್ಲಿಯೇ ರೂ 60ಸಾವಿರ ಲಾಭ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ಪ್ರತಿ ವರ್ಷ ಅಂದಾಜು ರೂ 1.10 ಲಕ್ಷ ಲಾಭ ಪಡೆ­ದರೆ, ಇನ್ನುಳಿದ ನುಗ್ಗೆಗೆ ಖರ್ಚಿ­ಲ್ಲದೇ ವರ್ಷಕ್ಕೆ ಸುಮಾರು ರೂ 20 ಸಾವಿರ, ಅಂಜೂರದಿಂದ ರೂ 10 ಸಾವಿರ ಲಾಭ, ಚಿಕ್ಕು ಹಣ್ಣುಗಳಿಂದ ರೂ 15 ಸಾವಿರ, ಕರಿ­ಬೇವಿನಿಂದ ರೂ30 ಸಾವಿರ ಲಾಭ ಪಡೆಯುತ್ತಿದ್ದಾರೆ.‘ಸರ್ಕಾರದಿಂದ ಪಡೆದ ರೂ 30 ಸಾವಿರ ಅನುದಾನದಲ್ಲಿ ಎರೆಹುಳು ಗೊಬ್ಬರದ ತೊಟ್ಟಿಗಳನ್ನು ನಿರ್ಮಿಸಿ­ದ್ದೇನೆ. ತೋಟದಲ್ಲಿ ಬೆಳೆಯುವ ಪ್ರತಿ­ಯೊಂದು ಬೆಳೆ ಸಂಪೂರ್ಣ ಸಾವಯವ­ವಾಗಿದ್ದು, ಎರೆಹುಳು ಗೊಬ್ಬರವನ್ನು ಮಾತ್ರ ಬಳಸುವುದರಿಂದ ಬೆಳೆಗೆ ಮಾಡುವ ಖರ್ಚು ಕಡಿಮೆಯಾಗಿದೆ’ ಎಂದು ನರಸಪ್ಪ ಹೇಳುತ್ತಾರೆ.ಎರೆಹುಳು ತೊಟ್ಟಿಯಿಂದಾಗಿ ಹೊಲದಲ್ಲಿನ ಸತ್ವ ಕಾಪಾಡಲು ಮತ್ತು ಉತ್ತಮ ಫಸಲು ಪಡೆಯಲು ಸಹಾಯವಾಗಿದೆ. ಗೊಬ್ಬರ ಮಾರಾಟದಿಂದಾಗಿ ಪ್ರತಿ ವರ್ಷ ರೂ30 ಸಾವಿರ ಲಾಭ ದೊರೆಯಲಿದೆ. ಮುಂದಿನ ದಿನಗಳಲ್ಲಿ ಕೋಳಿ, ಮೊಲ, ಮೀನು ಸಾಕಣೆಗೆ ಯೋಚನೆ ಮಾಡುತ್ತಿರುವುದಾಗಿ ಹೇಳುತ್ತಾರೆ.‘ಹೊಲದಲ್ಲಿ ಹೆಚ್ಚಾಗಿ ತಾಯಿ ನರಸಮ್ಮ ಮತ್ತು ಪತ್ನಿ ಸುವರ್ಣ ಕೆಲಸ ಮಾಡುತ್ತಾರೆ.ಅವರೊಂದಿಗೆ ನಾನೂ ನಿತ್ಯ ಬೆಳಿಗ್ಗೆ 5ರಿಂದ 8ಗಂಟೆವರೆಗೆ ಕೆಲಸ ಮಾಡಿ ಶಾಲೆಗೆ ಹೋಗುತ್ತಿದ್ದು, ಸಂಜೆ ಮತ್ತೆ ಹೊಲದಲ್ಲಿ ಕೆಲಸ ಮಾಡುತ್ತೇನೆ’  ಇದು ನರಸಪ್ ಅವರ ಮಾತು.ನಾಲ್ಕು ವರ್ಷದಿಂದ ವೃತ್ತಿಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಕಡೆಗೆ ಗಮನ ನೀಡುತ್ತಿರುವುದರಿಂದ ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳುತ್ತಾರೆ.‘ಗ್ರಾಮದಲ್ಲಿ ಇನ್ನೂ ಎರಡು ತೋಟ’

‘ಗ್ರಾಮದಲ್ಲಿ ತೋಟಗಾರಿಕೆ ಮತ್ತು ಲಾಭದಾ­ಯಕ ಕೃಷಿ ಮಾಡುವುದ­ರಿಂದ ಗ್ರಾಮದ ಜನರಿಗೆ ಪ್ರೇರಣೆಯಾಗಿದ್ದು, ಅವರಿಂದಾಗಿ ಗ್ರಾಮದಲ್ಲಿ ಇನ್ನೂ ಎರಡು ತೋಟಗಳು ರೂಪಗೊಂಡಿದೆ.’

–ದೇವಪ್ಪ ಮಹಂತಗೌಡ, ರೈತ‘ಕೃಷಿಯಿಂದ ನೆಮ್ಮದಿಯ ಜೀವನ’

‘ಕೃಷಿಯಲ್ಲಿ ನಮ್ಮ ಜೀವನದ ನೆಮ್ಮದಿಯ ದಿನಗಳನ್ನು ಕಳೆಯಲು ಸಾಧ್ಯ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಹೊಲದಲ್ಲಿ ಕೆಲಸ ಮಾಡುವುದರಿಂದಾಗಿ ಆರೋಗ್ಯ ಕೂಡ ಉತ್ತಮವಾಗಿದೆ. ಸಂಪೂರ್ಣ ಸಾವಯವ ಕೃಷಿಯಾಗಿರುವು­ದರಿಂದ ಉತ್ತಮ ಫಸಲು ದೊರೆಯುತ್ತಿದೆ.’

–ನರಸಪ್ಪ ಕೋಟ್ರಿಕಿ, ಪ್ರಗತಿ ಪರ ರೈತ‘ನಮಗೂ ಪ್ರೇರಣೆ’

‘ನಮ್ಮ ಊರಲ್ಲಿ ಮೊದಲ ಬಾರಿಗೆ ಉಪಯೋಗವಿಲ್ಲದ ಭೂಮಿಯಲ್ಲಿ ತೋಟ ಮಾಡಿ ಉತ್ತಮ ಲಾಭ ಪಡೆಯುತ್ತಿ­ದ್ದಾರೆ. ಅಲ್ಲದೇ ಸಾವಯವ ಕೃಷಿಯನ್ನು ಮರೆಯುತ್ತಿರುವ ಜನರಿಗೆ ಅದರಿಂದ ಆಗುವ ಲಾಭ ಮತ್ತು ಉಪಯೋಗಗಳನ್ನು ತಿಳಿಸಿ ಹೇಳಿ, ನಾವು ಕೂಡ ಸಾವಯವ ಕೃಷಿ ಮಾಡುವಂತೆ ಮಾಡಿದ್ದಾರೆ.’

–ನರಸಪ್ಪ ಮಂಗೆರಿ, ರೈತ

 

ಪ್ರತಿಕ್ರಿಯಿಸಿ (+)