ಶನಿವಾರ, ಜುಲೈ 31, 2021
27 °C

ಇಂದಲ್ಲ, ನಾಳೆ ಫಲ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಸಮಾನತೆ ನಿವಾರಿಸಲು 371ನೇ ಕಲಂ ತಿದ್ದುಪಡಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಇಂದಲ್ಲ, ನಾಳೆ ಪ್ರತಿಫಲ ಸಿಗುತ್ತದೆ ಎಂದು ತೆಲಂಗಾಣ ಹೋರಾಟ ಸಮಿತಿಯ ಪ್ರಮುಖ ಪ್ರೊ. ಕೇಶವರಾವ ಜಾಧವ್‌ ಹೇಳಿದರು.ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಲಾಗಿದ್ದ 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಬೃಹತ್‌ ಜನಜಾಗೃತಿ ಜಾಥಾದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಈ ದೇಶದಲ್ಲಿ ಪ್ರಾದೇಶಿಕ ಅಸಮಾನತೆ ತುಂಬಿ ತುಳುಕಾಡುತ್ತಿದ್ದು, ಈ ಅಸಮಾನತೆ ನಿವಾರಿಸಬೇಕು ಎಂದು ಆಗ್ರಹಿಸಿ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಆಸ್ಸಾಂ ಮುಂತಾದ ರಾಜ್ಯಗಳಲ್ಲಿ ಹೋರಾಟ ನಡೆಸಲಾಗುತ್ತಿದೆ.ಪ್ರಾದೇಶಿಕ ಅಸಮಾನತೆಯೇ ನಕ್ಸಲೈಟ್‌, ಭಯೋತ್ಪಾದನೆ ಮುಂತಾದ ದುಷ್ಕೃತ್ಯಗಳಿಗೆ ಕಾರಣವಾಗಿದ್ದು, ಸಣ್ಣ ರಾಜ್ಯ ನಿರ್ಮಾಣ ಕುರಿತು ಡಾ. ಅಂಬೇಡ್ಕರ್‌ ಅವರು ರಚಿಸಿದ ಗ್ರಂಥವನ್ನು ಈ ಭಾಗದ ಎಲ್ಲರೂ ಓದಲೇಬೇಕು. ಇದರಿಂದ ಜ್ಞಾನ ವೃದ್ದಿಯಾಗುವುದರ ಜೊತೆಗೆ ಹೋರಾಟದ ಮಾರ್ಗ ಕೂಡ ತೆರೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.ಫೋಜು ಕೊಡುವುದು ಬೇಡ: ಇಂದು ಜಾತಿ ಚಿಂತನೆಯೇ ಹೆಚ್ಚಾಗಿದ್ದು, ಸಮಾಜ ಚಿಂತನೆ ಕಡಿಮೆಯಾಗಿದೆ. ಸ್ವಾಮಿಗಳಾದವರು ಕೂಡ ಕೇವಲ ಸಿಂಹಾಸನ, ಕಿರೀಟ ಬಯಸುವುದನ್ನು ಬಿಟ್ಟು, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಎಲ್ಲರೂ ಸೇರಿ ಜನಜಾಗೃತಿಯ ತೇರು ಎಳೆಯಬೇಕಿದೆ ಎಂದು ಸಾನ್ನಿಧ್ಯ ವಹಿಸಿದ್ದ ಸುಲಫಲ ಮಠದ ಮಹಾಂತ ಶಿವಾಚಾರ್ಯರು ಹೇಳಿದರು.ಜನ ಜಾಗೃತಿ ಅಗತ್ಯ: 371ನೇ ಕಲಂ ತಿದ್ದುಪಡಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ರಾಜಕೀಯ ಮುಖಂಡರ ಬೆಂಬಲ ಬೇಕಿಲ್ಲ. ಅವರೇ ಮುಂದಾಳತ್ವ ವಹಿಸಬೇಕಾಗಿದೆ. ಈ ಭಾಗದ ಎಲ್ಲ ಸ್ವಾಮೀಜಿಗಳು ಸೇರಿ `ಧಾರ್ಮಿಕ ಸಂಸತ್ತು~ ಕರೆಯುವ ಮೂಲಕ ಎಲ್ಲರಿಗೆ ಈ ಹೋರಾಟಕ್ಕೆ ಬೆಂಬಲಿಸುವಂತೆ ಆದೇಶ ನೀಡಬೇಕು ಎಂದು ಕೊಪ್ಪಳದ ರಾಘವೇಂದ್ರ ಕುಷ್ಟಗಿ ಹೇಳಿದರು.ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಮರೇಗೌಡ ಬೈಯಾಪುರ, ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕರಾದ ಸಂಗಣ್ಣ ಕರಡಿ, ಎಂ.ವೈ. ಪಾಟೀಲ, ಹೈ.ಕ. ಹೋರಾಟ ಸಮಿತಿಯ ವೈಜನಾಥ ಪಾಟೀಲ, ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರುಣಕುಮಾರ ಪಾಟೀಲ, ಫಾದರ್‌ ವಿಕ್ಟರ್‌. ಶಿವರಾಮ ಮೋಘಾ, ಉದ್ಯಮಿ ಎಸ್‌.ಎಸ್‌. ಪಾಟೀಲ, ಬಸವಂತರಾವ ಕುರಿ, ಕ್ಯಾಪ್ಟನ್‌ ಪಾಂಡುರಂಗ, ಶಂಕರ ಚವ್ಹಾಣ, ಅಲ್ಲಮಪ್ರಭು ಪಾಟೀಲ ಬೆಟ್ಟದೂರು, ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ತಾದ್‌ ವಜಾದ್‌ ಹುಸೇನ್‌, ತಿಪ್ಪಣಪ್ಪ ಕಮಕನೂರು, ಚಂದ್ರಗುಂಡ ಶಿವಾಚಾರ್ಯರು, ಸಿದ್ರಾಮಪ್ಪ ಪಾಟೀಲ ಧಂಗಾಪುರ, ಚಂದ್ರಗುಂಡ ಶಿವಾಚಾರ್ಯರು ಮತ್ತು ಇತರರು ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.