ತೊಗರಿಮಂಡಳಿ ಬಲವರ್ಧನೆ: ₨100 ಕೋಟಿ ಅನುದಾನಕ್ಕೆ ಆಗ್ರಹ

7

ತೊಗರಿಮಂಡಳಿ ಬಲವರ್ಧನೆ: ₨100 ಕೋಟಿ ಅನುದಾನಕ್ಕೆ ಆಗ್ರಹ

Published:
Updated:

ಗುಲ್ಬರ್ಗ: ‘ತೊಗರಿ ಮಂಡಳಿ ಬಲಪಡಿಸಲು ₨ 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಜ. 9 ರಂದು ಹೈ.ಕ ಬಂದ್‌ಗೆ ಕರೆ ನೀಡಲಾಗುವುದು’ ಎಂದು ತೊಗರಿ ಬೆಳೆಗಾರರ ಹೋರಾಟ ಸಮಿತಿಯ ಬಸವರಾಜ ಇಂಗಿನ ಹೇಳಿದರು.

‘ತೊಗರಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ.ಹೀಗಾಗಿ, ಕ್ವಿಂಟಲ್ ತೊಗರಿಗೆ ₨ 6,450 ಬೆಂಬಲ ಬೆಲೆ ನೀಡಬೇಕು. ಹೈ.ಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹೋಬಳಿಗೊಂದು ತೊಗರಿ ಖರೀದಿ ಕೇಂದ್ರ ತೆರೆಯಬೇಕು. ತೊಗರಿ ಹಾಗೂ ಇತರೆ ಬೇಳೆ ಕಾಳುಗಳನ್ನು ವಿದೇಶಗಳಿಂದ ತೆರಿಗೆ ರಹಿತವಾಗಿ ಆಮದು ಆಗುವುದನ್ನು ತಡೆಗಟ್ಟಲು ಆಮದು ಸುಂಕವನ್ನು ಶೇ 30ರಷ್ಟು ಹೆಚ್ಚಿಸಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.‘ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯೆ ಪ್ರವೇಶಿಸಿ 5 ಸಾವಿರ ಕ್ವಿಂಟಲ್ ತೊಗರಿ ಖರೀದಿಸಬೇಕು. ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಅಕ್ಕಿ, ಗೋಧಿಯ ಜತೆಗೆ ತೊಗರಿ ಬೇಳೆ ವಿತರಿಸಲು ಕ್ರಮಕೈಗೊಳ್ಳಬೇಕು.ಇದರಿಂದ ತೊಗರಿ ಬೆಳೆಯುವ ರೈತರ ಹಿತ ಕಾಪಾಡಿದಂತಾಗುತ್ತದೆ. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ವಿಜಾಪುರ ಸೇರಿದಂತೆ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಜ. 9 ರಂದು ಬಂದ್‌ ಆಚರಿಸಲಾಗುವುದು’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.‘ವಿವಿಧ ಕಾರಣಗಳಿಗಾಗಿ ಈ ಬಾರಿ ತೊಗರಿ ಬೆಳೆ ಹೂ ಬಿಡುವ ಹಂತದಲ್ಲೇ ಹಾಳಾಗಿದೆ.

ಚಿಂಚೋಳಿಯಲ್ಲಿ ಶೇ 80 ಹಾಗೂ ಚಿತ್ತಾಪುರದಲ್ಲಿ ಶೇ 70ರಷ್ಟು ಬೆಳೆ ನಾಶವಾಗಿದೆ. ಆದ್ದರಿಂದ, ರೈತರಿಗೆ ಸೂಕ್ತ ಪರಿಹಾರಧನ ನೀಡಬೇಕು’ ಎಂದು ಆಗ್ರಹಿಸಿದರು.ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ‘ಸಂಪುಟ ಉಪ ಸಮಿತಿ ಅಧ್ಯಕ್ಷ ಟಿ.ಬಿ.ಜಯಚಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಈ ಬಗ್ಗೆ ಚರ್ಚಿಸಿ, ದೆಹಲಿಗೆ ನಿಯೋಗ ಹೋಗಲಾಗುವುದು.ಈ ಕುರಿತು ಒಂದೆರಡು ದಿನಗಳಲ್ಲೇ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು. ಕಿಸಾನ ಸಭಾದ ಮೌಲಾಮುಲ್ಲಾ, ಎಚ್‌ಕೆಸಿಸಿಐ ಕಾರ್ಯದರ್ಶಿ ಬಸವರಾಜ ಹಡಗಿಲ್, ಮಲ್ಲಿಕಾರ್ಜುನ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry