ಬದುಕು ಕೊಟ್ಟ ‘ಮಿಶ್ರ ಬೆಳೆ’ ಬೇಸಾಯ

7

ಬದುಕು ಕೊಟ್ಟ ‘ಮಿಶ್ರ ಬೆಳೆ’ ಬೇಸಾಯ

Published:
Updated:

ಚಿಟಗುಪ್ಪಾ: ಮೂರು ಹೆಣ್ಣು ಮಕ್ಕಳ ಮದುವೆ, ಕುಟುಂಬದ ಜವಾಬ್ದಾರಿ, ಸಾಲದ ಭಾರ, ಅವುಗಳ ಜೊತೆಗೆ ಬಡತನವೂ ಸವಾಲಾಗಿತ್ತು. ಅಂತಹ ಸಂದರ್ಭದಲ್ಲಿ ಮುನ್ನಡೆ­ಯುವುದೇ ದೊಡ್ಡ ಕಷ್ಟವಾಗಿತ್ತು. ಬದುಕಿನ ಬಂಡಿ ಸಾಗಿಸಲು ಬೇರೆ ದಾರಿ ಕಾಣದಿರುವಾಗ  ಬಡ ರೈತನಿಗೆ ಆಸರೆಯಾಗಿ  ಬದುಕು ಕೊಟ್ಟಿದ್ದು ಮಿಶ್ರ ಬೆಳೆ ಬೇಸಾಯ ಪದ್ಧತಿ.ಇದ್ದ ಎರಡು ಎಕರೆ ಮರಳು ಮಿಶ್ರಿತ ಕೆಂಪುಭೂಮಿಯಲ್ಲಿ ಮಿಶ್ರ ಬೆಳೆ ಪದ್ಧತಿ ಅನುಸರಿಸಿ ಸಫಲತೆ ಕಂಡುಕೊಂಡ ಹುಮನಾಬಾದ್ ತಾಲ್ಲೂ­ಕಿನ ನಿರ್ಣಾ ಗ್ರಾಮದ ರೈತ ಯಲ್ಲಪ್ಪ ಕಾಗೆನೋರ್ ಅವರ ಸಾಧನೆ ಮೆಚ್ಚುವಂತಿದೆ.ವಯಸ್ಸಿಗೆ ಬಂದ ಮೂವರು ಗಂಡು ಮಕ್ಕಳನ್ನು ಜೊತೆಗೆ ಕರೆದುಕೊಂಡು ಕೃಷಿ ಕಾಯಕದ ಪಾಠ ಹೇಳುತ್ತಿದ್ದಾರೆ. 15 ವರ್ಷಗಳಿಂದ ತಮ್ಮ ಭೂಮಿಯಲ್ಲಿ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡು ನೆಮ್ಮದಿ ಕಾಣುತ್ತಿದ್ದಾರೆ.ಮರಳು ಮಿಶ್ರಿತ ಭೂಮಿ ಇರುವುದ­ರಿಂದ ನೀರಿನ ಸಮಸ್ಯೆ ಉದ್ಭವಿಸಿತು. ಆಗ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೋರ್‌ವೆಲ್ ಹಾಕಿಸಿ ಹನಿ ನೀರಾವರಿ ಸೌಲಭ್ಯ ಪಡೆ­ದು­ಕೊಂಡು ಅಲ್ಲವನ್ನು ಪ್ರಮುಖ ಬೆಳೆ­ಯಾ­ಗಿಸಿಕೊಂಡು ಬೇಸಾಯ ಆರಂಭಿಸಿ­ದರು. ಮಿಶ್ರ ಬೆಳೆಯಾಗಿ ಮೆಣಸಿನ­ಕಾಯಿ, ಕಬ್ಬು ಹಾಗೂ ತರಕಾರಿ ಬೆಳೆಯಾಗಿ ಟೊಮೆಟೊ, ಚವಳಿ ಬೆಳೆಸಿ ಅಧಿಕ ಇಳುವರಿ ಹೆಚ್ಚು ಆದಾಯ ಪಡೆದುಕೊಂಡಿದ್ದಾರೆ.‘ದಿನಾಲೂ ನಸುಕಿನ ಜಾವದಲ್ಲಿ ಮಕ್ಕಳು ತೋಟಕ್ಕೆ ಹೋಗಿ ಕೃಷಿ ಕಾರ್ಯ ಆರಂಭಿಸುತ್ತಾರೆ. ಮಧ್ಯಾಹ್ನ  ಅವರು ಮನೆಗೆ ಬರುವಷ್ಟರಲ್ಲಿ ನಾನು ತೋಟಕ್ಕೆ ಹೋಗುತ್ತೇನೆ. ಕೂಲಿ ಕಾರ್ಮಿ­ಕರ ಸಮಸ್ಯೆ ಇರುವುದರಿಂದ ಕುಟುಂ­ಬದ  ಎಲ್ಲಾ ಸದಸ್ಯರು ಸೇರಿ ತೋಟ­ದಲ್ಲಿ ದುಡಿಯುತ್ತೇವೆ. ಮೂರು ವರ್ಷದಲ್ಲಿ  ಮಿಶ್ರ ಬೆಳೆ ಬೇಸಾಯ ಪದ್ಧತಿಯಿಂದ ಬೆಳೆದ ಬೆಳೆಯ ಆದಾಯದಲ್ಲಿ ಮೂರು ಹೆಣ್ಣು ಮಕ್ಕಳ ಮದುವೆ ಮಾಡಿ, ಸಂಸಾರಕ್ಕಾಗಿ ಮಾಡಿದ  ಸಾಲ ತೀರಿಸಿದ್ದೇನೆ’ ಎಂದು ಯಲ್ಲಪ್ಪ ಹೆಮ್ಮೆಯಿಂದ ಹೇಳುತ್ತಾರೆ.ಕಳೆದ ವರ್ಷ ಒಟ್ಟು ₨60 ಸಾವಿರ ವೆಚ್ಚಮಾಡಿ ಒಂದು ಎಕರೆ ಯಲ್ಲಿ 70 ಕ್ವಿಂಟಲ್‌ ಅಲ್ಲ, 15 ಕ್ವಿಂಟಲ್‌ ಮೆಣಸಿನ­ಕಾಯಿ, 40 ಟನ್‌ ಕಬ್ಬು ಇಳುವರಿ ಪಡೆಯಲಾಗಿತ್ತು. ವಾರದ ಸಂತೆ­ಯಲ್ಲಿ ಟೊಮೊಟೊ ಮಾರಾಟ ಮಾಡಿ ಅದರಿಂದ ಬರುವ ಆದಾಯ­ದಲ್ಲಿ ಕುಟುಂಬ ನಿರ್ವಹಣೆ ಮಾಡು­ತ್ತಿ­ದ್ದಾರೆ. ‘ನಮಗಂತೂ ಕೃಷಿ ನೆಮ್ಮದಿ ನೀಡಿದೆ. ಮಕ್ಕಳಿಗೆ ಕೃಷಿ ಚಟುವಟಿಕೆ­ಯ ಸಂಸ್ಕಾರ ಕೊಡುತ್ತಿ­ರುವು­ದರಿಂದ ಕಷ್ಟಪಟ್ಟು ದುಡಿಯು­ತ್ತಿದ್ದಾರೆ. ಅವರು ಸ್ವಾವ­ಲಂಬಿ ಬದುಕು ನಡೆಸು­ವಂತಾಗಿದ್ದಾರೆ. ನಾನು ಅನುಭವಿಸಿದ ಕಷ್ಟ ಮುಂದೆ ನನ್ನ ಮಕ್ಕಳು ಅನುಭವಿಸಬಾರದು ಎಂದು ಅವರಿಗೆ ಕೃಷಿಯಲ್ಲಿ ಪರಿಶ್ರಮ ವಹಿಸಿ ದುಡಿಯಲು ಕಲಿಸುತ್ತಿದ್ದೇನೆ’ ಎಂದು ಯಲ್ಲಪ್ಪ ನುಡಿಯುತ್ತಾರೆ.ಹನಿ ನೀರಾವರಿ ಪದ್ಧತಿಯಲ್ಲಿ ಮಿಶ್ರ ಬೇಸಾಯ ಮಾಡುವುದರಿಂದ ಕಡಿಮೆ ವೆಚ್ಚ, ಅಧಿಕ ಇಳುವರಿ, ಹೆಚ್ಚು ಆದಾಯ ಪಡೆಯುತ್ತಿದ್ದಾರೆ.

ಯಲ್ಲಪ್ಪ ವರ್ಷಕ್ಕೆ ಎಕರೆಗೆ 6 ಟ್ರ್ಯಾಕ್ಟರ್‌ ತಿಪ್ಪೆ ಗೊಬ್ಬರ, ಕಬ್ಬಿನ ಮಡ್‌, ರಸಗೊಬ್ಬರ ಡಿಎಪಿ, ಎಂಒಪಿ ತಲಾ 100 ಕೆ.ಜಿ, ಜಿಂಕ್, ಜಿಪ್ಸಮ್ ತಲಾ 20 ಕೆಜಿ ಮೇಲು ಗೊಬ್ಬರವಾಗಿ ಬಳಸುತ್ತಿದ್ದಾರೆ. ಅಲ್ಲದೆ ಬೆಳೆಯಲ್ಲಿ ಮೆಣಸಿನಕಾಯಿ ನಾಟಿ ಮಾಡುವುದರಿಂದ ಬೆಳೆಗೆ ತಂಪು ಲಭಿಸುತ್ತದೆ. ಮಿಶ್ರ ಬೆಳೆಯಾಗಿ ತರಕಾರಿ ಬೆಳೆದು ಅದನ್ನು ಮಾರಾಟ ಮಾಡಿ ಬರುವ ಆದಾಯ­ವನ್ನು ಅಲ್ಲ ಬೆಳೆಯ ನಿರ್ವಹಣೆಯ ಖರ್ಚಿಗೆ ಬಳಸಿಕೊಳ್ಳ ಲಾಗು­ತ್ತಿದೆ.

ಮುಖ್ಯ­ವಾಗಿ ಮಿಶ್ರ ಬೆಳೆ ಬೆಳೆಯು­ವುದರಿಂದ ಕಳೆ ತೆಗೆಯುವ ಖರ್ಚು ಬರುವುದಿಲ್ಲ ಹಾಗೂ ಹನಿ ನೀರಾವರಿ ಬಳಕೆಯಿಂದ ರಸಗೊಬ್ಬರ ಹಾಕುವ ಕಾರ್ಮಿಕರ ಸಮಸ್ಯೆ ತಪ್ಪುತ್ತದೆ.ಫಲವತ್ತತೆ ಇಲ್ಲದ ಮರಳು ಮಿಶ್ರಿತ ಮಣ್ಣಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿ ನಿರೀಕ್ಷೆಗೂ ಮೀರಿ ಆದಾಯ ಪಡೆಯಲಾಗುತ್ತಿದೆ.

ಮಿಶ್ರ ಬೆಳೆ ಬೇಸಾಯ ಪದ್ಧತಿ ಸಣ್ಣ ರೈತರಿಗೆ ಆಶಾದಾಯಕ ಕೃಷಿ ಪದ್ಧತಿಯಾಗಿದೆ ಎಂದು ಖುಷಿಯಿಂದಲೇ ಹೇಳುತ್ತಾರೆ. (ಮೊ:9611733837)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry