ಖಾಲಿ ನಿವೇಶನ: ಸಮಸ್ಯೆಗಳ ತಾಣ

7

ಖಾಲಿ ನಿವೇಶನ: ಸಮಸ್ಯೆಗಳ ತಾಣ

Published:
Updated:

ಗುಲ್ಬರ್ಗ: ಜನವಸತಿ ಪ್ರದೇಶಗಳಲ್ಲಿ ಬೀಳುವ ತ್ಯಾಜ್ಯ ವಿಲೇವಾರಿಗೆ ಮಾತ್ರ ಲಕ್ಷ್ಯ ವಹಿಸಿರುವ ಗುಲ್ಬರ್ಗ ಮಹಾನಗರ ಪಾಲಿಕೆಯು ಖಾಲಿ ನಿವೇಶನಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಅವೆಲ್ಲ ಸಮಸ್ಯೆಗಳನ್ನು ಹರಡುವ ತಾಣಗಳಾಗುತ್ತಿವೆ!ನಗರದ ಯಾವುದೇ ಬಡಾವಣೆಗೆ ಹೋದರೂ ಖಾಲಿ ನಿವೇಶನಗಳೆಲ್ಲ ಚಿಕ್ಕಕಾಡುಗಳಂತೆ ಭಯ ಹುಟ್ಟಿಸುತ್ತವೆ. ಗಿಡಗಂಟಿ ಹಾಗೂ ತ್ಯಾಜ್ಯ ರಾಶಿ ಅನೇಕ ವರ್ಷಗಳಿಂದ ಬಿದ್ದ ಪರಿಣಾಮದಿಂದ ಹಂದಿ ಹಾಗೂ ಬೀದಿ ನಾಯಿಗಳು ಬೀಡಾರ ಹೂಡಿವೆ. ಇನ್ನು ಕೊಳಚೆ ಪ್ರದೇಶಗಳಲ್ಲಿರುವ ಖಾಲಿ ಜಾಗಗಳ ಕಥೆ ಅರಣ್ಯರೋದನ. ಎಷ್ಟೋ ವರ್ಷಗಳಿಂದ ನಿಂತ ಕೊಳಚೆ, ಅದರ ದುರ್ನಾತದಲ್ಲಿ ಬಿದ್ದೇಳುವ ಹಂದಿಗಳ ಹಿಂಡು ವಾಕರಿಗೆ ಬರಿಸುತ್ತವೆ.ಪಾಲಿಕೆಯ ತ್ಯಾಜ್ಯ ವಿಲೇವಾರಿ ನಿರ್ಲಕ್ಷ್ಯ ತಿಳಿಯಲು ರೋಜಾ ಬಡಾವಣೆ ಹಾಗೂ ಬ್ರಹ್ಮಪುರ ಬಡಾವಣೆಗಳನ್ನು ಸುತ್ತು ಹಾಕಿದರೆ ಸಾಕು; ಖಾಲಿ ಜಾಗಗಳಲ್ಲಿ ಬಿದ್ದಿರುವ ಕಸದ ರಾಶಿ ಕೈಗನ್ನಡಿ ಹಿಡಿಯುತ್ತವೆ. ಬಸವೇಶ್ವರ ನಗರ, ಆದರ್ಶನಗರ, ಖಾಲಾ ಕಾಲೋನಿ, ಕರುಣೇಶ್ವರ ನಗರ, ಮಹಾವೀರ ನಗರ, ಶಾಸ್ತ್ರೀನಗರ ಹಾಗೂ ಕೊಳೆಗೇರಿ ಪಟ್ಟಿಯಲ್ಲಿರುವ ಬಸವನಗರ, ಇಂದಿರಾನಗರ ಹಾಗೂ ನಗರದೆಲ್ಲೆಡೆ ಇರುವ ಖಾಲಿ ನಿವೇಶಗಳೆಲ್ಲ ತಿಪ್ಪೆಗುಂಡಿಗಳಾಗಿವೆ.ಮಹಾನಗರ ಪಾಲಿಕೆ ಕಡತದಲ್ಲಿರುವಂತೆ ಗುಲ್ಬರ್ಗದಲ್ಲಿ ಒಟ್ಟು 1,11,203 ಆಸ್ತಿಗಳು ನೋಂದಾವಣೆಯಾಗಿವೆ. ಅದರಲ್ಲಿ 99,367 ಆಸ್ತಿಗಳು ಮನೆಗಳಿಗೆ ಸಂಬಂಧಿಸಿದ್ದಾದರೆ, 11,836 ಆಸ್ತಿಗಳು ವಾಣಿಜ್ಯ ಉದ್ದೇಶಿತ ಆಸ್ತಿಗಳಿವೆ. ಮನೆ ಎಂದು ನೋಂದಾಯಿಸಲಾದ ಆಸ್ತಿಗಳಲ್ಲಿ ಒಟ್ಟು 14,526 ಖಾಲಿ ನಿವೇಶನ­ಗಳಿದ್ದರೆ, 586 ವಾಣಿಜ್ಯ ಉದ್ದೇಶಿತ ನಿವೇಶನಗಳು ಖಾಲಿ ಬಿದ್ದಿವೆ. ಒಟ್ಟು 15,112 ನಿವೇಶನಗಳು ನಗರದಲ್ಲಿ ಖಾಲಿ ಇವೆ. ಇವು ಸಮಸ್ಯೆಯ  ಮೂಲವಾಗಿವೆ.ಸಮಸ್ಯೆಗೆ ಪರಿಹಾರ: ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿ ಹಾಗೂ ಅದರಲ್ಲಿ ಬೀಳು­ತ್ತಿರುವ ತ್ಯಾಜ್ಯರಾಶಿಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಸ್ತ್ರೀನಗರದಂತಹ ಕೊಳಚೆ ಪ್ರದೇಶಗಳಲ್ಲಿ ಬಹಿರ್ದೇಸೆಗೆ ಈ ಗಿಡಗಂಟಿಗಳು ಆಸರೆಯಾಗಿವೆ. ಖಾಲಿ ನಿವೇಶನಗಳು ಹೆಚ್ಚಾಗಿರುವ ಜಿಡಿಎ ಬಡಾವಣೆಗಳಲ್ಲಿ ಸಂಚಾರ ಕೂಡಾ ಕಷ್ಟದಾಯಕ­ವಾಗಿದೆ. ನಗರದ ಹೃದಯಭಾಗ­ಗಳಾದ ಸೂಪರ್‌ ಮಾರ್ಕೆಟ್‌, ಸರ್ದಾರ್‌ ವಲ್ಲಭಭಾಯಿ ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಬೆರಳೆಣಿಕೆ ಖಾಲಿ ನಿವೇಶನಗಳು ಮೂತ್ರ ವಿಸರ್ಜನೆಗೆ ಮೀಸಲಾಗಿವೆ.ನಿವೇಶನದ ಮಾಲೀಕರು ಕೂಡಾ ಈ ಬಗ್ಗೆ ಲಕ್ಷ್ಯ ವಹಿಸದ ಪರಿಣಾಮ ಮನೆ ನಿರ್ಮಿಸಿಕೊಂಡಿ­ರುವವರು ಸಮಸ್ಯೆ ಎದುರಿಸುವಂತಾಗಿದೆ. ಸಮಸ್ಯೆ­ಗಳನ್ನು ಹರಡುತ್ತಿರುವ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಮಹಾನಗರ ಪಾಲಿಕೆಯೇ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯ.ಮಹಾನಗರ ಪಾಲಿಕೆಯಲ್ಲಿ ನೋಂದಾಯಿಸ­ಲಾದ ಖಾಲಿ ನಿವೇಶನಗಳಿಗೆ ಪ್ರತಿವರ್ಷ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಸಂಗ್ರಹಿಸುವುದರೊಂದಿಗೆ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಇದೆಯೋ ಇಲ್ಲವೋ ಎಂಬುದರ ಕಡೆಗೂ ಗಮನ ಹರಿಸುವ ಅಗತ್ಯವಿದೆ.ಅಕ್ರಮಕ್ಕೆ ಅವಕಾಶ: ನಗರದ ವಿವಿಧೆಡೆಯಲ್ಲಿರುವ ಖಾಲಿ ಸಾರ್ವಜನಿಕ ಪ್ರದೇಶಗಳು ಕಸದ ರಾಶಿಯಿಂದ ಭರ್ತಿಯಾಗುತ್ತಿವೆ. ಸೂಪರ್‌ ಮಾರ್ಕೆಟ್‌ ನಗರ ಸಾರಿಗೆ ಬಸ್‌ ನಿಲ್ದಾಣ ಎದುರಿನ ಖಾಲಿ ಜಾಗ ಇದಕ್ಕೊಂದು ಅಪ್ಪಟ ಉದಾಹರಣೆ.ಈ ಖಾಲಿ ಪ್ರದೇಶದಲ್ಲಿ ಗಿಡಗಂಟಿ ಬೆಳೆದಿದ್ದು, ತ್ಯಾಜ್ಯ ವಿಲೇವಾರಿಯಾಗದೇ ದುರ್ನಾತ ಹರಡುತ್ತಿದೆ. ಎಂ.ಎಸ್‌.ಕೆ. ಮಿಲ್‌ ಪ್ರದೇಶದಲ್ಲಿ ಈ ರೀತಿಯ ಅನೇಕ ಜಾಗಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry