ಫೆ. 4ರ ಒಳಗೆ ಪರವಾನಗಿ ಕಡ್ಡಾಯ

7
ಬೀದಿ ಆಹಾರಕ್ಕೆ ಗುಣಮಟ್ಟ–ಸುರಕ್ಷತೆಯ ಭಾಗ್ಯ

ಫೆ. 4ರ ಒಳಗೆ ಪರವಾನಗಿ ಕಡ್ಡಾಯ

Published:
Updated:

ಗುಲ್ಬರ್ಗ:   ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಆಹಾರ ಪದಾರ್ಥಗಳ ಎಲ್ಲ ವಹಿವಾಟುದಾರರು 4 ಫೆಬ್ರುವರಿ 2014ರ ಒಳಗಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ  ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ಮತ್ತು ನಿಯಮಗಳು 2011’ ದೇಶದಲ್ಲಿ 5ನೇ ಆಗಸ್ಟ್‌ 2011ರಂದು ಜಾರಿಗೆ ಬಂದಿದೆ. ಈ ಕಾಯಿದೆ ಅನ್ವಯ ಎಲ್ಲ ಆಹಾರ ಉತ್ಪಾದಕರು ಹಾಗೂ ವ್ಯಾಪಾರಸ್ಥರು ನೋಂದಣಿ ಮಾಡಿಕೊಳ್ಳಬೇಕು.

ಆ ಬಳಿಕ ₨ 5 ಲಕ್ಷ ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆ ವಿಧಿಸಲು ಸರ್ಕಾರಕ್ಕೆ ಅವಕಾಶವಿದೆ.ಬೀದಿ–ಬದುಕು:ಗೃಹೋಪಯೋಗಿ ವಸ್ತುಗಳು, ಬಟ್ಟೆ, ತರಕಾರಿಯಿಂದ ಹಿಡಿದು ಆಹಾರ ಪದಾರ್ಥಗಳ ತನಕ ಎಲ್ಲವೂ  ಬೀದಿಬದಿಯಲ್ಲಿ ದೊರೆಯುತ್ತದೆ. ದೊಡ್ಡ ಸಂಖ್ಯೆಯ ಜನತೆ ದೈನಂದಿನ ಖರೀದಿ ಹಾಗೂ ತಿನಿಸಿಗೆ ಬೀದಿಬದಿ ವ್ಯಾಪಾರವನ್ನೇ ಅವಲಂಬಿಸಿದ್ದಾರೆ. ಆದರೆ ಅವುಗಳಿಗೆ ಈ ತನಕ ಅಧಿಕೃತ ಪರವಾನಗಿ ಇರಲಿಲ್ಲ.ಈ ಕಾಯಿದೆಯಿಂದ ಈ ತನಕ ಹೋಟೆಲ್‌, ರೆಸ್ಟೋರೆಂಟ್‌, ಅಂಗಡಿ, ಉತ್ಪಾದನಾ ಘಟಕ, ಬೇಕರಿಗಳಿಗೆ ಸೀಮಿತವಾಗಿದ್ದ, ಪರವಾನಗಿಯು ಬೀದಿ ಬದಿ ಆಹಾರ ಪದಾರ್ಥ ವ್ಯಾಪಾರಕ್ಕೂ ವಿಸ್ತರಿಸಿದೆ.ಹೀಗಾಗಿ ಇನ್ನು ಮುಂದೆ ಬೀದಿ ಬದಿಯ ಎಲ್ಲ ಆಹಾರ ಪದಾರ್ಥ ವ್ಯಾಪಾರಿಗಳು ‘ಗುಣಮಟ್ಟ ಹಾಗೂ ಸುರಕ್ಷತೆ’ ಪರವಾನಗಿಯನ್ನೂ ಪಡೆಯಬೇಕು.

ಬೀದಿ ವ್ಯಾಪಾರ: ಕೇಂದ್ರ ಸರ್ಕಾರವು ಈ ವರ್ಷ ‘ಬೀದಿ ಬದಿ (ಜೀವನೋಪಾಯ ಮತ್ತು ಬೀದಿ ಬದಿ ವ್ಯಾಪಾರ  ನಿಯಂತ್ರಣ ರಕ್ಷಣೆ) ಮಸೂದೆ-– 2012’ಇನ್ನೊಂದು ಕಾಯಿದೆಯನ್ನು ಜಾರಿಗೆ ತಂದಿದೆ.ಇದರಲ್ಲಿ ಉಲ್ಲೇಖಿಸಿದಂತೆ ಸ್ಥಳೀಯಾಡಳಿತ ಸಂಸ್ಥೆಯ ಮಟ್ಟದಲ್ಲಿ ‘ಪಟ್ಟಣ ವ್ಯಾಪಾರ ಪ್ರಾಧಿಕಾರ’ ರಚಿಸಿ ಬೀದಿ ವ್ಯಾಪಾರಿಗಳ ಸರ್ವೆ ನಡೆಸಬೇಕು. ಬಳಿಕ ಸಾರ್ವಜನಿಕ ಜನಜೀವನ, ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ವ್ಯಾಪಾರ ನಡೆಸುತ್ತಿರುವ ಬೀದಿ ವ್ಯಾಪಾರಿಗಳನ್ನು ನೋಂದಾಯಿಸಿ, ಸ್ಥಳ ಗುರುತಿಸಿ ಪರವಾನಗಿ ನೀಡಬೇಕು. ಆ ಮೂಲಕ ಬೀದಿ ವ್ಯಾಪಾರಸ್ಥರಿಗೆ ಅಧಿಕೃತ ಪರವಾನಗಿ ನೀಡಬೇಕು.  ಗುಲ್ಬರ್ಗ ಮಹಾನಗರದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಬೀದಿಬದಿ ವ್ಯಾಪಾರಸ್ಥರಿದ್ದು, ಪರವಾನಗಿ ಪಡೆದು, ತಮ್ಮ ವ್ಯಾಪಾರವನ್ನು ಅಧಿಕೃತಗೊಳಿಸಬೇಕಾಗಿದೆ.‘ಕೆಲ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳಿಗೆ ಪ್ರತಿನಿತ್ಯ ಲಂಚ ಕೊಡಬೇಕು. ಕೆಲವರಿಗೆ ಬಿಟ್ಟಿ ಆಹಾರವನ್ನೂ ನೀಡಬೇಕು. ಇದಕ್ಕಿಂತ ಶುಲ್ಕ ಪಾವತಿಸಿ ಪರವಾನಗಿ ಪಡೆಯುವುದೇ ಉತ್ತಮ’ ಎಂದು ಬೀದಿ ಬದಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.‘ಶೀಘ್ರ ಜಾರಿಗೊಳಿಸಲಿ’

ಕಾಯಿದೆಯಲ್ಲಿ ಹೇಳಿದಂತೆ ‘ಪಟ್ಟಣ ವ್ಯಾಪಾರ ಪ್ರಾಧಿಕಾರ’ ರಚಿಸಬೇಕು. ಬೀದಿಬದಿ ವ್ಯಾಪಾರದ ಸ್ಥಳಗಳನ್ನು ಗುರುತಿಸಬೇಕು. ಎಲ್ಲರಿಗೂ ಪರವಾನಗಿ ನೀಡಬೇಕು ಎಂದು ಪಾಲಿಕೆಗೆ ಮನವಿ ಮಾಡಿದ್ದೇವೆ. ಇನ್ನೊಂದೆಡೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪರವಾನಗಿ ನೀಡುವುದೂ ಉತ್ತಮ. ಇದರಿಂದ ವ್ಯಾಪಾರಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡುತ್ತದೆ. ಅಲ್ಲದೇ ಗ್ರಾಹಕರಿಗೂ ಆಹಾರ ಗುಣಮಟ್ಟದ ಬಗ್ಗೆ ವಿಶ್ವಾಸ ಮೂಡುತ್ತದೆ. ಈ ಎರಡೂ ಕಾಯಿದೆ ಅನುಷ್ಠಾನವನ್ನು ನಾವು ಸ್ವಾಗತಿಸುತ್ತೇವೆ’

–ಜಗನ್ನಾಥ ಸೂರ್ಯವಂಶಿ, ಸಂಸ್ಥಾಪಕ ಅಧ್ಯಕ್ಷ, ಬೀದಿ ಬದಿ ವ್ಯಾಪಾರಿಗಳ ಸಂಘ,‘ಮನವಿ ಬಂದರೆ ಶೀಘ್ರ ಕ್ರಮ’

ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದರೆ ನಿಗದಿಪಡಿಸಿದ ಸ್ಥಳ ಪರಿಶೀಲನೆ ನಡೆಸಿ ಪರವಾನಗಿ ನೀಡಲಾಗುವುದು. ಈ ಕುರಿತು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ ಕಾಯಿದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಮಗೆ ಸರ್ಕಾರದಿಂದ ಯಾವುದೇ ನಿರ್ದೇಶನಗಳು ಈ ತನಕ ಬಂದಿಲ್ಲ. ಸರ್ಕಾರ ನಿರ್ದೇಶಿಸಿದರೆ ಶೀಘ್ರವೇ ಪಟ್ಟಣ ವ್ಯಾಪಾರ ಪ್ರಾಧಿಕಾರ (ಸಮಿತಿ)ವನ್ನು ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

–ಶ್ರೀಕಾಂತ ಕಟ್ಟಿಮನಿ, ಆಯುಕ್ತ, ಗುಲ್ಬರ್ಗ ಮಹಾನಗರ ಪಾಲಿಕೆ.

‘ಕಡ್ಡಾಯ’

ಬೀದಿ ಬದಿ ವ್ಯಾಪಾರ, ಆಹಾರ ಉತ್ಪಾದಕರು, ಪ್ಯಾಕರ್‌­­ಗಳು, ಸಗಟು ವ್ಯಾಪಾರಿಗಳು, ವಿತರಕರು, ಹೋಟೆಲ್‌, ಬೇಕರಿ, ಕ್ಯಾಂಟೀನ್‌, ಆಹಾರ ಸಾಗಣೆ­ದಾರರು, ಆಹಾರ ರಫ್ತು, ಉಗ್ರಾಣ ಸೇರಿದಂತೆ ಎಲ್ಲರೂ ಪರವಾನಗಿ ಪಡೆಯ­ಬೇಕು. ಹೆಚ್ಚಿನ ಮಾಹಿತಿಗೆ (ಮೊ.9845276810) ಸಂಪರ್ಕಿಸಿ. 

–ಆರ್.ಎಸ್.ಬಿರಾದಾರ,  ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry