ತೊಗರಿ: ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ

7

ತೊಗರಿ: ಬೆಂಬಲ ಬೆಲೆಗೆ ಆಗ್ರಹಿಸಿ ರೈತರ ಪ್ರತಿಭಟನೆ

Published:
Updated:

ಗುಲ್ಬರ್ಗ: ತೊಗರಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ಜಿಲ್ಲೆಯ ವಿವಿಧೆಡೆ ರೈತ ಸಂಘ ಗುರುವಾರ ಪ್ರತಿಭಟನೆ ನಡೆಸಿತು.

ಚಿಂಚೋಳಿ ವರದಿ:ಕ್ವಿಂಟಾಲ್‌ ತೊಗರಿಗೆ ಸ್ವಾಮಿನಾಥನ್‌ ವರದಿ ಅನ್ವಯ ₨6,450 ಬೆಂಬಲ ಬೆಲೆ ಘೋಷಿಸಿ­ಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಪಟ್ಟಣದಲ್ಲಿ ಗುರುವಾರ ರಸ್ತೆತಡೆ ನಡೆಸಿ ಒತ್ತಾಯಿಸಿದರು.ಪಟ್ಟಣದ ಬಸ್‌ ಡಿಪೊ ಕ್ರಾಸ್‌ನಿಂದ ಮೆರವಣಿಗೆ ಪ್ರಾರಂಭಿಸಿದ ರೈತರು, ಅಂಬೇಡ್ಕರ್‌ ವೃತ್ತದವರೆಗೆ ಮೆರವಣಿಗೆಯಲ್ಲಿ ತೆರಳಿ, ಅಲ್ಲಿಂದ ಮರಳಿ ಬಸ್‌ ಡಿಪೊ ಕ್ರಾಸ್‌ನಲ್ಲಿ ಸೇರಿ ಬಹಿರಂಗ ಸಭೆ ನಡೆಸಿದರು.ಡಾ. ಸ್ವಾಮಿನಾಥನ್‌ ವರದಿ ಪ್ರಕಾರ ತೊಗರಿ, ಕಡಲೆ, ಉದ್ದು, ಹೆಸರು ಕ್ವಿಂಟಾಲ್‌ಗೆ ₨6450 ಬೆಂಬಲ ಬೆಲೆ ಘೋಷಿಸಬೇಕು, ತೊಗರಿ ಮಂಡಳಿ ಬಲ ಪಡಿಸಲು ₨100 ಕೋಟಿ ಒದಗಿಸಬೇಕು, ಬೇಳೆಕಾಳುಗಳ ಆಮದಿನ ಮೇಲೆ ಶೇ 30ರಷ್ಟು ಸುಂಕ ವಿಧಿಸಬೇಕು, ಎಪಿಎಂಸಿ ಕಾಯ್ದು ತಿದ್ದುಪಡಿ ಕೈಬಿಡಬೇಕು, ಹೆಲೆನ್‌ ಮತ್ತು ಫೈಲಿನ್‌ ಚಂಡ ಮಾರುತದಿಂದ ತೊಗರಿ ಬೆಳೆ ಹೂ ಉದುರಿ ಬರಡಾಗಿದ್ದು ನಷ್ಟಕ್ಕೀಡಾದ ರೈತರಿಗೆ ಎಕರೆ ₨15,000 ಪರಿಹಾರ ನೀಡ­ಬೇಕು ಮತ್ತು ಬೆಳೆವಿಮೆ ಮಂಜೂರು ಮಾಡ­ಬೇಕು ಹಾಗೂ ತೊಗರಿ ಖರೀದಿಗೆ ಹೋಬಳಿ­ಗೊಂದರಂತೆ ಖರೀದಿಕೇಂದ್ರ ತೆರೆಯಬೇಕೆಂದು ಒತ್ತಾಯಿಸುವ ಮನವಿ ಪತ್ರವನ್ನು ತಹಶೀಲ್ದಾರ್‌ ಮೋಹನ ಜೋಷಿ ಅವರಿಗೆ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಸಾಹಿತಿ ಎಸ್‌.ಎನ್‌.ದಂಡಿನ­ಕುಮಾರ, ಅಖಿಲ ಭಾರತ ಕಿಸಾನ ಸಭಾದ ಅಧ್ಯಕ್ಷ ಶಿವಪ್ಪ ಪೂಜಾರಿ, ಕಲ್ಲುಗಣಿ ಕಾರ್ಮಿಕರ ಸಂಘದ ಅಧ್ಯಕ್ಷ ಜಾಫರ್‌ ಖಾನ್‌ ಮಿರಿಯಾಣ, ಬಿಎಸ್‌ಪಿ ಅಧ್ಯಕ್ಷ ನಿಯಾಜ್‌ ಅಲಿ, ಜಿಲ್ಲಾ ಕಾರ್ಯದರ್ಶಿ ಗೌತಮ ಬೊಮ್ಮನಳ್ಳಿ, ಕರವೇ ಅಧ್ಯಕ್ಷ ಸಂಜೀವಕುಮಾರ ಪಾಟೀಲ, ಭೀಮ­ರಾವ್‌ ಮರಾಠಾ, ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಗೋಪಾಲರಾವ್‌ ಕಟ್ಟೀಮನಿ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಸವಣಪ್ಪ ಕುಡಳ್ಳಿ, ಸಿದ್ದಲಿಂಗಯ್ಯ ಸ್ವಾಮಿ, ಸುರೇಶ ಬೆಳಮಕರ್‌ ಇದ್ದರು.ಜೇವರ್ಗಿ ವರದಿ

ತೊಗರಿಗೆ ₨6,450 ಬೆಂಬಲ ಬೆಲೆ ಘೋಷಿಸಬೇಕು. ತೊಗರಿ ಅಭಿವೃದ್ಧಿ ಮಂಡಳಿಗೆ ₨100ಕೋಟಿ ರೂ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ  ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.‘ಡಾ. ಸ್ವಾಮಿನಾಥನ್‌ ವರದಿಯ ಶಿಫಾರಸು­ಗಳನ್ನು ಅನುಷ್ಠಾನಕ್ಕೆ ತರಬೇಕು. ತೊಗರಿ ಮಂಡಳಿ ಬಲಪಡಿಸಲು ರಾಜ್ಯ ಸರ್ಕಾರ ₨100ಕೋಟಿ ಅನುದಾನ ಬಿಡುಗಡೆ ಮಾಡ­ಬೇಕು. ಹೈದರಾಬಾದ್‌–ಕರ್ನಾಟಕ ಪ್ರದೇಶದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಒತ್ತಾಯಿಸಲಾಯಿತು.‘ತೊಗರಿ ಬೆಳೆ ಹಾನಿಗೀಡಾದ ರೈತರಿಗೆ ಬೆಳೆವಿಮೆ ಮತ್ತು ಪರಿಹಾರ ವಿತರಿಸಬೇಕು. ತೊಗರಿ ಮಂಡಳಿಯನ್ನು ಕೃಷಿ ಇಲಾಖೆಯಿಂದ ಕೃಷಿ ಮಾರುಕಟ್ಟೆ ಇಲಾಖೆಗೆ ವರ್ಗಾಯಿಸಬೇಕು’ ಎಂದೂ ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಂತರ ತಹಶೀಲ್ದಾರ್‌ ಮಲ್ಲಿಕಾರ್ಜುನರೆಡ್ಡಿ ಪಾಟೀಲ್‌ ಅವರ ಮುಖಾಂತರ 11 ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ಸುಭಾಷ ಹೊಸಮನಿ, ಕಾರ್ಯದರ್ಶಿ ಸಿದ್ಧರಾಮ ಹರವಾಳ, ವೆಂಕೋಬರಾವ್‌ ವಾಗಣಗೇರಿ, ಬಸಯ್ಯ ಹಿರೇಮಠ, ಬಸವರಾಜ ನಡಿವಿನಕೇರಿ, ಮಲ್ಕಪ್ಪ ಮ್ಯಾಗೇರಿ, ಶಿವರಾಜ್‌ ದೇಸಾಯಿ, ಚಂದ್ರಕಾಂತ ಆದವಾನಿ, ಶಂಕರಲಿಂಗ ಘೂಳ್ನೂರ, ಚನಬಸಪ್ಪ ಸೊಪ್ಪಣ್ಣ ಸೇರಿದಂತೆ ತಾಲ್ಲೂಕಿನ ಕೃಷಿ–ಕೂಲಿಕಾರರು, ಮಹಿಳೆಯರು ಪಾಲ್ಗೊಂಡಿದ್ದರು.ಅಫಜಲಪುರ ವರದಿ

ಕೇಂದ್ರ ಸರ್ಕಾರವು ತೊಗರಿ ಆಮದಿನ ಮೇಲೆ ಸುಂಕ ವಿಧಿಸುತ್ತಿಲ್ಲ. ಬದಲಾಗಿ ಆಮದುದಾರರಿಗೆ ಶೇ 15 ಪ್ರೋತ್ಸಾಹ ಧನ ನೀಡುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ತೊಗರಿ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಕೇಂದ್ರ ಸರ್ಕಾರವು ಕೂಡಲೇ ಶೇ 30 ಆಮದು ಸುಂಕು ವಿಧಿಸಬೇಕು ಮತ್ತು ಕಬ್ಬಿಗೂ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು  ಒತ್ತಾಯಿಸಿ, ರೈತ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳು ಗುರುವಾರ ನಡೆಸಿದ ಅಫಜಲಪುರ ಬಂದ್‌ ಯಶಸ್ವಿಯಾಗಿದೆ.ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜು ಬಡದಾಳ, ‘ತೊಗರಿಗೆ ₨ 6450 ಬೆಂಬಲ ಬೆಲೆ ನೀಡಬೇಕು. ರಾಜ್ಯ ಸರ್ಕಾರ ತೊಗರಿಗೆ 5 ಸಾವಿರ ಬೆಂಬಲ ಬೆಲೆ ಘೋಷಿಸಿ ಖರೀದಿ ಆರಂಭಿಸಿದೆ. ಆದರೆ ಸಾಕಷ್ಟು ಅನುದಾನ ಇಲ್ಲದ ಕಾರಣ ಎಲ್ಲಾ ರೈತರ ತೊಗರಿ ಖರೀದಿ ಮಾಡುತ್ತಿಲ್ಲ. ಸಮೀಪದ ಮಹಾರಾಷ್ಟ್ರ ಮತ್ತು ಸ್ಥಳೀಯ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₨3800ನಿಂದ 4 ಸಾವಿರದವರೆಗೆ ತೊಗರಿ ಖರೀದಿ ನಡೆಯುತ್ತಿದೆ. ರಾಜ್ಯ ಸರ್ಕಾರ ಘೋಷಿಸಿದ ಬೆಂಬಲ ಬೆಲೆ 5 ಸಾವಿರವು ಸಿಗುತ್ತಿಲ್ಲ’ ಎಂದು ದೂರಿದರು.ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿದರು. ನಂತರ ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ನಿಂಗದಳ್ಳಿ, ಶರಣು ಕುಂಬಾರ, ಜೈ ಕರವೇ ಕರವೇ ಅಧ್ಯಕ್ಷ ಸುರೇಶ ಅವಟೆ ರೈತ ಮುಖಂಡರಾದ ಸುನೀಲ ಹೊಸಮನಿ, ಗೌರಿಶಂಕರ ಹೆಗ್ಗಿ, ಬಾಬು ಕಲ್ಲೂರ, ಶ್ರೀಶೈಲ ಸಿಂಗೆ, ಅಂಬರೀಶ ಮೇತ್ರಿ, ಮಹಾಂತು ಗಣಾರಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಬಂದ್‌ ನಿಂದಾಗಿ ಗುರುವಾರ ರಸ್ತೆ ಸಾರಿಗೆ ಸ್ಥಗಿತಗೊಂಡಿತ್ತು. ಜನರು ಖಾಸಗಿ ವಾಹನಗಳಲ್ಲಿ ದುಬಾರಿ ಹಣ ನೀಡಿ ಸಂಚರಿಸುವದು ಕಂಡುಬಂತು. ಅಫಜಲಪುರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿದ್ದವು. ಶಾಲಾ ಕಾಲೇಜ್‌ಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಗೈರು ಹಾಜರು ಕಂಡುಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry