ಭಾನುವಾರ, ಜೂನ್ 13, 2021
21 °C
ಸಮೀಕ್ಷೆಯಿಂದ ಮಾಹಿತಿ ಬಹಿರಂಗ

ಶೇ 4.9ರಷ್ಟು ಮಕ್ಕಳು ಶಾಲೆಯಿಂದ ಹೊರಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲೆಯಲ್ಲಿ ಶೇ 4.9 (6ರಿಂದ 14 ವರ್ಷ) ಮಕ್ಕಳು ಶಾಲೆಯಿಂದ ಹೊರಗುಳಿದರೆ, ಶೇ 9.2 ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯು ತ್ತಿದ್ದಾರೆ. ಶಾಲೆಗೆ ಹೋಗುತ್ತಿರುವ ಮಕ್ಕಳ ಪೈಕಿ (1 ಮತ್ತು 2ನೇ ತರಗತಿ) ಶೇ 72.8 ಮಕ್ಕಳು ಅಂಕಿ ಹಾಗೂ ಶಬ್ದಗಳನ್ನು ಓದಬಲ್ಲರು. 3ರಿಂದ 5ನೇ ತರಗತಿಯಲ್ಲಿ ಶೇ 37.5 ಮಕ್ಕಳು ಮಾತ್ರ ಗಣಿತದ ಸಮಸ್ಯೆಗಳನ್ನು ಬಿಡಿಸಬಲ್ಲರು.

– 2013ರ ವಾರ್ಷಿಕ ಶೈಕ್ಷಣಿಕ ವರದಿ ‘ಅಸರ್‌’ ಜಿಲ್ಲೆಯ ಇಂತಹ ಪ್ರಮುಖ ಶೈಕ್ಷಣಿಕ ಅಂಶಗಳನ್ನು ಉಲ್ಲೇಖಿಸಿದೆ.   ನವದೆಹಲಿಯ ಅಸರ್, ಧಾರವಾಡದ ಅಕ್ಷರ ಪ್ರತಿಷ್ಠಾನ, ಮೈಸೂರಿನ ಪ್ರಥಮ್‌, ರಾಯಚೂ ರಿನ ಸಮೃದ್ಧಿ ಸಂಸ್ಥೆ ಮತ್ತು ಹೈದರಾಬಾದ್‌ ಕರ್ನಾಟಕ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಹಯೋಗದಲ್ಲಿ ನಡೆಸಿದ  ಸಮೀಕ್ಷೆ (ಅಸರ್‌)ಯು ಈ ವಿವರ ಒಳಗೊಂಡಿದೆ.ಈ ವರದಿಯ ಅನ್ವಯ ರಾಜ್ಯದಲ್ಲಿ ಶೇ 1.8 (6ರಿಂದ 14 ವರ್ಷ) ಮಕ್ಕಳು ಶಾಲೆಯಿಂದ ಹೊರಗುಳಿದರೆ, ಶೇ 22.5 ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶಾಲೆಗೆ ಹೋಗು ತ್ತಿರುವ ಮಕ್ಕಳ ಪೈಕಿ (1 ಮತ್ತು 2ನೇ ತರಗತಿ) ಶೇ 83.8 ಮಕ್ಕಳು ಅಂಕಿ ಹಾಗೂ ಶಬ್ದಗಳನ್ನು ಓದಬಲ್ಲರು. 3ರಿಂದ 5ನೇ ತರಗತಿಯಲ್ಲಿ ಶೇ 45 ಮಕ್ಕಳು ಮಾತ್ರ ಗಣಿತದ ಸಮಸ್ಯೆಗಳನ್ನು ಬಿಡಿಸಬಲ್ಲರು ಎಂದು ಹೇಳಿದೆ.ಮಾದರಿ ಆಯ್ಕೆ: ಸಮೀಕ್ಷೆಗೆ ರಾಜ್ಯದ ಆಯ್ದ 26 ಜಿಲ್ಲೆಗಳ, 770 ಹಳ್ಳಿಗಳ, 15,506 ಕುಟುಂಬಗಳ 23,105 ಮಕ್ಕಳನ್ನು  ಒಳಪಡಿಸ ಲಾಗಿದೆ. 2005ರಿಂದ ಪ್ರತಿವರ್ಷ ದೇಶ ದಾದ್ಯಂತ ಈ ಸಮೀಕ್ಷೆಯು ನಡೆಯುತ್ತಿದ್ದು, ಈ ಬಾರಿ ದೇಶದ 585 ಜಿಲ್ಲೆಗಳಲ್ಲಿ ಮಾದರಿ ಯಾಗಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ವೇಳೆಯಲ್ಲಿ ಶಾಲೆಯ ಮೂಲಸೌಕರ್ಯ, ಮಕ್ಕಳ ಕಲಿಕಾ ಸಾಮರ್ಥ್ಯ, ಶಿಕ್ಷಣ ಕ್ರಮ, ಓದು–ಬರಹದ ಮಟ್ಟ, ಗುಣಮಟ್ಟ ಮತ್ತಿತರ ವಿಚಾರ ಮುಂದಿಟ್ಟುಕೊಂಡು ಪ್ರಶ್ನಿಸಲಾಗಿದೆ.ಉದ್ಘಾಟನೆ: ಅಸರ್‌–2013 ಜಿಲ್ಲಾ ಮಟ್ಟದ ಶೈಕ್ಷಣಿಕ ವರದಿಯನ್ನು ಮಂಗಳವಾರ ನಗರದ ವಿಕಾಸ ಅಕಾಡೆಮಿಯ ಕಚೇರಿಯಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ ಸಹಾಯಕ ಯೋಜನಾ ಸಂಯೋ ಜಕಿ ಜ್ಯೋತಿ ಪಾಟೀಲ್‌ ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಅವರು, ‘ಶಿಕ್ಷಣದ ಗುಣಮಟ್ಟ ಅಭಿವೃದ್ಧಿಗಾಗಿ ಅಸರ್‌ ವರದಿ ಯನ್ನು ಇಲಾಖೆಯು ಪರಿಗಣಿಸುತ್ತದೆ. ಇದೇ ಮಾದರಿಯಲ್ಲಿ ಇಲಾಖೆಯ ‘ಶಾಲಾ ಮೌಲ್ಯಾಂಕನ ಗುಣಮಟ್ಟ’ ವಿಭಾಗವೂ ಸಮೀಕ್ಷೆ ನಡೆಸಿ ವರದಿ ನೀಡುತ್ತದೆ. ಈ ಎಲ್ಲ ವರದಿಗಳ ಆಧಾರದಲ್ಲಿ ಪ್ರತಿವರ್ಷ ಗುಣಮಟ್ಟ ವೃದ್ಧಿಗೆ ಇಲಾಖೆ ಕ್ರಮ ಕೈಗೊಳ್ಳುತ್ತದೆ’ ಎಂದರು.‘ಮಕ್ಕಳ ಓದು, ಬರಹ ಹಾಗೂ ಅಂಕಗಣಿತದ ಸಾಮರ್ಥ್ಯವೇ ಪ್ರಾಥಮಿಕ ಶಿಕ್ಷಣದ ತಳಹದಿ. ಆ ಗುಣಮಟ್ಟವನ್ನು ಹೆಚ್ಚಿಸಲು ವಿವಿಧ ಯೋಜನೆ ಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಒಟ್ಟಾರೆ ಯಶಸ್ಸಿನ ಹಿಂದೆ ಮುಖ್ಯೋಪಾಧ್ಯಾಯರ ಪಾತ್ರ ಪ್ರಮುಖವಾಗಿದೆ. ಅದಕ್ಕಾಗಿ ಅವರಿಗೆ ವಿವಿಧ ಪುನಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳ ಲಾಗುತ್ತದೆ’ ಎಂದು ಹೇಳಿದರು.ಸಾಮಾಜಿಕ ಕಾರ್ಯಕರ್ತ ಬಂಡೇರಾವ್‌ ಪಟವರ್‌ ಮಾತನಾಡಿ, ಅಸರ್‌್ ಸಮೀಕ್ಷೆಯ ವಿಧಾನ, ಉದ್ದೇಶಗಳನ್ನು ವಿವರಿಸಿದರು. ಯಡ್ರಾಮಿಯ ರಾಘವೇಂದ್ರ ಕುಲಕರ್ಣಿ, ಚಿತ್ತಾಪುರದ ಶಿವರುದ್ರಪ್ಪ ಮತ್ತಿತರರು ಸಮೀಕ್ಷೆಯ ಅನುಭವವನ್ನು ಹಂಚಿಕೊಂಡರು. ವಿಶ್ವ ಸೇವಾ ಮಿಷನ್‌ನ ವಿಶ್ವನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಅಕಾಡೆಮಿಯ ಮಾರ್ತಾಂಡ ಶಾಸ್ತ್ರಿ, ಶಿವಯ್ಯ ಮಠಪತಿ, ಮಲ್ಲಿಕಾರ್ಜುನ ಸ್ವಾಮಿ, ಜ್ಯೋತಿ ಕುಲಕರ್ಣಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.