ಮಂಗಳವಾರ, ಜೂನ್ 15, 2021
27 °C

ಹೋಳಿ: ಬಣ್ಣಗಳಲ್ಲಿ ಮಿಂದೆದ್ದ ಗುಲ್ಬರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆಗಸದಲ್ಲಿ ಸೂರ್ಯ ಆಗಷ್ಟೇ ಉದಯಿಸುತ್ತಿದ್ದ. ಬಾನಲ್ಲಿ ಹೊಂಬಣ್ಣದ ಚಿತ್ತಾರ ಅರಳಿತ್ತು. ಅಪ್ಪನ ಕೆರೆ ಅಂಗಳದಲ್ಲಿ ಪಕ್ಷಿಗಳ ಕಲರವ ಇಂಪಾಗಿ ತೇಲಿ ಬರುತ್ತಿತ್ತು. ಇಂತಹ ರಮ್ಯ ವಾತಾವರಣದಲ್ಲಿ ಬಣ್ಣಗಳೊಂದಿಗೆ ಬೀದಿಗೆ ಇಳಿದ ಚಿಣ್ಣರು, ಯುವಕರು ನೋಡನೋಡುತ್ತಿದ್ದಂತೆಯೇ ಓಕುಳಿ ಆಡಲು ಆರಂಭಿಸಿದರು. ಮೋಡಗಳ ಮರೆಯಿಂದ ಹೊರಬಂದ ಸೂರ್ಯನಿಗೂ ಬಣ್ಣ ಎರಚಿ ಸಂಭ್ರಮಿಸಿದರು..!ಹೌದು. ಬಣ್ಣಗಳ ಹಬ್ಬ ಹೋಳಿ ಆಚರಣೆಗೆ ನಗರದಾದ್ಯಂತ ಸೋಮವಾರ ರಂಗೇರಿತ್ತು. ಬೈಕ್‌ನಲ್ಲಿ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ನೂರಾರು ಯುವಕರು ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಚಿಣ್ಣರು ಕೂಡ ತಾವೇನು ಕಡಿಮೆ ಎಂಬಂತೆ ಕೈಯಲ್ಲಿ ಪಿಚಕಾರಿ ಹಿಡಿದು ರಸ್ತೆಗೆ ಇಳಿದಿದ್ದರು. ಪರಸ್ಪರರ ಮೇಲೆ ಬಣ್ಣ ಎರಚಿ, ಕೇಕೆ ಹಾಕಿ ಸಂಭ್ರಮಿಸಿದರು. ಹಸಿರು, ಹಳದಿ, ನೀಲಿ, ಕೆಂಪು ಬಣ್ಣಗಳನ್ನು ಎರಚಿದ ಯುವಕರು ಬಣ್ಣದ ಲೋಕವನ್ನೇ ಸೃಷ್ಟಿಸಿದರು.‘ಬಣ್ಣ ನನ್ನ ಒಲವಿನ ಬಣ್ಣ..ನನ್ನ ಬದುಕಿನ ಬಣ್ಣ’.. ಎಂಬಂತಹ ವಾತಾವರಣ ನಿರ್ಮಿಸಿದರು. ಯುವತಿಯರು ಹಾಗೂ ಮಹಿಳೆಯರು, ಮಕ್ಕಳು ಮತ್ತು ಕುಟುಂಬದ ಸದಸ್ಯರಿಗೆ ಬಣ್ಣ ಎರಚಿ ತಾವೂ ಸಂಭ್ರಮದಲ್ಲಿ ಪಾಲ್ಗೊಂಡರು.ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ದೇಶದಾದ್ಯಂತ ಆಚರಿಸಲಾಗುತ್ತಿದೆ. ಯುವಕ, ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿದೆ. ಹೀಗಾಗಿ, ನಗರದ ವಿವಿಧ ಬಡಾವಣೆ, ಗಲ್ಲಿ ಗಲ್ಲಿಗಳಲ್ಲಿ ರಂಗಿನಾಟ ಕಂಡು ಬಂದಿತು.ಕಾಲೇಜು ವಿದ್ಯಾರ್ಥಿನಿಯರು, ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿನಿಯರು ಒಂದೆಡೆ ಸೇರಿ ಹೋಳಿ ಹಬ್ಬ ಆಚರಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ಪ್ರಮುಖ ವೃತ್ತಗಳಲ್ಲಿ ಬಂಡಿಯಲ್ಲಿ ಬಣ್ಣ ತುಂಬಿದ ಬ್ಯಾರೆಲ್‌ಗಳನ್ನು ಇಟ್ಟಿದ್ದ ಯುವಕರು ಸ್ನೇಹಿತರ ಮೇಲೆ ಬಣ್ಣ ಚೆಲ್ಲಿ ಖುಷಿಯಲ್ಲಿ ತೇಲಾಡಿದರು. ‘ಹ್ಯಾಪಿ ಹೋಲಿ.. ಹ್ಯಾಪಿ ಹೋಲಿ’ ಎಂಬ ಉದ್ಘಾರ ಮುಗಿಲು ಮುಟ್ಟಿದ್ದವು.ಕೆಲವೆಡೆ ಮರ ಹಾಗೂ ಕಂಬಗಳಿಗೆ ಬಣ್ಣ ತುಂಬಿದ ಮಡಿಕೆಗಳನ್ನು ಕಟ್ಟಲಾಗಿತ್ತು. ಪಿರಾಮಿಡ್ ಮಾದರಿಯಲ್ಲಿ ಒಬ್ಬರ ಮೇಲೊಬ್ಬರು ಹತ್ತಿದ ಯುವಕರು ಮಡಿಕೆಗಳನ್ನು ಒಡೆದು ಸಾಹಸ ಪ್ರದರ್ಶಿಸಿದರು. ಬಣ್ಣದ ಬ್ಯಾರೆಲ್‌ಗಳಲ್ಲಿ ಮುಳುಗೆದ್ದರು.ಹೋಳಿ ಆಚರಿಸಲು ಪೊಲೀಸರು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರ ವರೆಗೆ ಸಮಯ ನಿಗದಿ ಪಡಿಸಿದ್ದರು. ಆದಾಗ್ಯೂ, ಉತ್ಸಾಹದಲ್ಲಿ ತೇಲುತ್ತಿದ್ದ ಯುವಕರು ಮಧ್ಯಾಹ್ನ 2 ಗಂಟೆ ವರೆಗೂ ಬಣ್ಣದ ಓಕುಳಿ ಆಡಿ ಖುಷಿ ಪಟ್ಟರು. ಆ ಬಳಿಕ ಉದ್ಯಾನ ಹಾಗೂ ವೃತ್ತಗಳಲ್ಲಿ ಕುಣಿದು ಕುಪ್ಪಳಿಸಿದರು.ಬಣ್ಣದಾಟ ಮುಗಿದ ಬಳಿಕ ಸ್ನಾನ ಮಾಡಿ, ಸಮೀಪದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ರಾತ್ರಿ ಮನೆಗಳಲ್ಲಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ತಿಂದು ಫಾಲ್ಗುಣ ಮಾಸದ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.