ಭಾನುವಾರ, ನವೆಂಬರ್ 17, 2019
25 °C

ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸಲು ಸಮರೋಪಾದಿಯ ಕ್ರಮ ಅತ್ಯಗತ್ಯ

Published:
Updated:
Prajavani

ರಾಜ್ಯದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹಸ್ಥಿತಿ ಉಲ್ಬಣಿಸಿದೆ. ಮಳೆಯ ಆರ್ಭಟದಿಂದ ಮತ್ತು ಹಳ್ಳ, ನದಿಗಳಲ್ಲಿ ಉಕ್ಕೇರಿರುವ ಪ್ರವಾಹದಿಂದ 12 ಜನರು ಸಾವನ್ನಪ್ಪಿದ್ದು, 5400ಕ್ಕೂ ಹೆಚ್ಚು ಮನೆಗಳು ಕುಸಿದುಬಿದ್ದಿವೆ. ಎರಡು ತಿಂಗಳ ಹಿಂದೆ ಮಹಾಪ್ರವಾಹಕ್ಕೆ ತತ್ತರಿಸಿದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೆ ಮಹಾಪೂರದ ಪರಿಸ್ಥಿತಿ ಉಂಟಾಗಿದೆ. ಬೆಳಗಾವಿ, ಗದಗ, ಬಾಗಲಕೋಟೆ, ಧಾರವಾಡ, ಹಾವೇರಿ, ಕೊಪ್ಪಳ ಮಾತ್ರವಲ್ಲ, ದಾವಣಗೆರೆ, ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಉತ್ತರ ಕನ್ನಡ– ಹೀಗೆ ಎಲ್ಲೆಡೆಯಿಂದ ಅತಿವೃಷ್ಟಿಯ ಅನಾಹುತದ ಬಗ್ಗೆ ವರದಿಗಳು ಬರುತ್ತಿವೆ. ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಸಾವಿರಾರು ಎಕರೆಗಳಲ್ಲಿ ಬೆಳೆದುನಿಂತಿದ್ದ ಬೆಳೆಯೂ ಹಾನಿಗೀಡಾಗಿದೆ. ಈ ಮಧ್ಯೆ ಮಹಾರಾಷ್ಟ್ರದ ಕೃಷ್ಣಾ ನದಿಪಾತ್ರದಲ್ಲಿ ಇನ್ನೂ 4–5 ದಿನಗಳ ಕಾಲ ಮಳೆ ಸುರಿಯುವ ಸಂಭವ ಇರುವುದರಿಂದ ಪ್ರವಾಹ ತೀವ್ರಗೊಳ್ಳುವ ಸಾಧ್ಯತೆ ಇದೆ. ಎರಡು ತಿಂಗಳ ಹಿಂದಿನ ಮಹಾಪ್ರವಾಹಕ್ಕೆ ಸಿಲುಕಿ ನಲುಗಿದ ಸಾವಿರಾರು ಕುಟುಂಬಗಳ ಪುನರ್ವಸತಿ ಕೆಲಸಗಳೇ ಸರಿಯಾಗಿ ನಡೆದಿಲ್ಲ; ಈಗ ಮಹಾಮಳೆಯ ಹೊಡೆತಕ್ಕೆ ರಾಜ್ಯ ಮತ್ತೆ ತತ್ತರಿಸುತ್ತಿರುವುದು ನಿಜಕ್ಕೂ ದುಃಖಕರ. ಮುಂಗಾರು ಬೆಳೆ ಪೂರ್ಣ ಪ್ರಮಾಣದಲ್ಲಿ ಕೈಗೆ ಸಿಗದೆ ಆತಂಕದಲ್ಲಿದ್ದ ರೈತರು ಈಗ ಹಿಂಗಾರು ಬೆಳೆಯೂ ಕೈತಪ್ಪುವ ಭೀತಿಯಲ್ಲಿದ್ದಾರೆ. ಕಾಫಿ, ಅಡಿಕೆ, ಏಲಕ್ಕಿ ಮುಂತಾದ ವಾಣಿಜ್ಯ ಬೆಳೆಗಾರರಿಗೂ ಈ ಸಲದ ಅತಿವೃಷ್ಟಿ ಭಾರಿ ಹೊಡೆತ ನೀಡಿದ್ದು, ಮುಂದಿನ ದಿನಗಳಲ್ಲಿ ಆಹಾರಧಾನ್ಯಗಳ ತೀವ್ರ ಬೆಲೆಯೇರಿಕೆಯ ಭೀತಿಯೂ ಉಂಟಾಗಿದೆ.

ಮಳೆ ಧಾರಾಕಾರವಾಗಿ ಸುರಿಯುವುದನ್ನು ಯಾವ ಸರ್ಕಾರವೂ ತಡೆಯಲು ಸಾಧ್ಯವಿಲ್ಲ. ಆದರೆ, ಹಾಗೆ ಸುರಿದ ಮಳೆನೀರು ವ್ಯವಸ್ಥಿತವಾಗಿ ಹರಿದುಹೋಗಿ ಯಾವ ದೊಡ್ಡ ಅನಾಹುತವನ್ನೂ ಮಾಡದಂತೆ ನೋಡಿಕೊಳ್ಳಲು ಸಾಧ್ಯವಿದೆ. ಪ್ರತಿವರ್ಷ ಈ ರೀತಿ ಮಳೆ ಬಂದಾಗಲೂ ಉತ್ತರ ಕರ್ನಾಟಕದಲ್ಲಿ ಹಲವು ರಸ್ತೆಗಳು ಮುಳುಗಿ, ಸೇತುವೆಗಳು ಕೊಚ್ಚಿ ಹೋಗುತ್ತವೆ. ಈ ರಸ್ತೆ ಮತ್ತು ಸೇತುವೆಗಳನ್ನು ಅತಿವೃಷ್ಟಿಗೆ ಹಾಳಾಗದಂತೆ ನಿರ್ಮಿಸಲು ಸಾಧ್ಯವಿಲ್ಲವೇ? ಹಲವು ನಗರ ಮತ್ತು ಪಟ್ಟಣಗಳಲ್ಲಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ಕೊಡುವಾಗಲೇ ಪ್ರವಾಹಕ್ಕೆ ಸಿಲುಕದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲವೇ? ನಗರಗಳಲ್ಲಿ ಸಕಾಲಕ್ಕೆ ಒಳಚರಂಡಿಗಳ ಸ್ವಚ್ಛತೆ ಮತ್ತು ರಸ್ತೆ ರಿಪೇರಿ ಕಾಮಗಾರಿ ನಡೆಸಿದರೆ ಪ್ರವಾಹ ಪರಿಸ್ಥಿತಿ ಉಂಟಾಗುವುದಿಲ್ಲ ಎನ್ನುವುದು ಗೊತ್ತಿರುವ ಸಂಗತಿಯೇ. ಆದರೆ ಯಾವುದೂ ಯೋಜನಾಬದ್ಧವಾಗಿ ನಡೆಯುವುದಿಲ್ಲ. ಅಧಿಕಾರಸ್ಥರ ಅಸಡ್ಡೆ ಮತ್ತು ಕಳಪೆ ಕಾಮಗಾರಿಗಳೇ ನಮ್ಮ ಬಹುತೇಕ ಪಟ್ಟಣ ಮತ್ತು ಗ್ರಾಮಗಳಲ್ಲಿ ಮಹಾಪೂರ ಬಳಿಕದ ಅವಾಂತರಗಳಿಗೆ ಕಾರಣ ಎನ್ನುವುದು ನಿಸ್ಸಂಶಯ. ಪ್ರವಾಹ ಸಂತ್ರಸ್ತರಿಗೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ ಎಂದು ರಾಜ್ಯ ಸರ್ಕಾರ ಪದೇ ಪದೇ ಹೇಳುತ್ತಿದೆ. ಆದರೆ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ ಎನ್ನುವುದು ಅಧಿಕಾರಸ್ಥರ ಹೇಳಿಕೆಗಳಿಂದಲೇ ಗೊತ್ತಾಗುತ್ತಿದೆ. ಎರಡು ತಿಂಗಳ ಹಿಂದಿನ ಮಹಾಪ್ರವಾಹದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ತಲಾ ₹ 10 ಸಾವಿರ ಕೊಟ್ಟು ಕೈತೊಳೆದುಕೊಂಡದ್ದು ಕಣ್ಣೆದುರಿಗೇ ಇದೆ. ಆಗ ಮನೆಮಾರುಗಳನ್ನು ಕಳೆದುಕೊಂಡು ಕಾಳಜಿ ಕೇಂದ್ರ ಸೇರಿದ ಸಾವಿರಾರು ಕುಟುಂಬಗಳು ಈಗಲೂ ಸ್ವಂತ ಮನೆಯಿಲ್ಲದೆ ಅತಂತ್ರ ಸ್ಥಿತಿಯಲ್ಲಿವೆ. ಅತಿವೃಷ್ಟಿ ಮತ್ತು ಪ್ರವಾಹದಲ್ಲಿ ರಾಜ್ಯಕ್ಕೆ ಸುಮಾರು ₹ 35,000 ಕೋಟಿ ನಷ್ಟ ಸಂಭವಿಸಿದೆಯೆಂದು, ಕೇಂದ್ರ ಸರ್ಕಾರದಿಂದ ನೆರವು ಕೋರಿದ ರಾಜ್ಯ ಸರ್ಕಾರಕ್ಕೆ ತಡವಾಗಿ ಸಿಕ್ಕಿದ್ದು ₹ 1200 ಕೋಟಿ ಮಾತ್ರ. ಈ ನೆರವು ಆರಂಭಿಕ ಹಂತದ್ದು, ಇನ್ನಷ್ಟು ನೆರವು ಬರಲಿದೆ ಎಂದು ಕಾದಿರುವಾಗಲೇ, ಇನ್ನೊಮ್ಮೆ ಮಹಾಮಳೆ ಅಪ್ಪಳಿಸಿದೆ. ರಾಜ್ಯ ಸರ್ಕಾರ ಈಗಲಾದರೂ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ತೀವ್ರ ಯತ್ನ ನಡೆಸಬೇಕಿದೆ. ಪ್ರಧಾನಿಯವರ ಎದುರು ನಿಂತು ಗಟ್ಟಿ ಧ್ವನಿಯಲ್ಲಿ ನೆರವು ಕೇಳಲು ರಾಜ್ಯದ ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲವಾದಲ್ಲಿ, ರಾಜ್ಯದಿಂದ ಸರ್ವಪಕ್ಷ ನಿಯೋಗವೊಂದನ್ನು ದೆಹಲಿಗೆ ಒಯ್ದು ಒತ್ತಡ ಹೇರಬೇಕಿದೆ. ಪ್ರವಾಹ ಸಂತ್ರಸ್ತರ ಪುನರ್ವಸತಿ ಯೋಜನೆಗಳಿಗೆ ರಾಜ್ಯದ  ಉದ್ಯಮಿಗಳ, ಸಂಘ–ಸಂಸ್ಥೆಗಳ ಹಾಗೂ ದಾನಿಗಳ ನೆರವು ಪಡೆಯುವುದರಲ್ಲೂ ತಪ್ಪಿಲ್ಲ. ಉಗ್ರರೂಪಿ ವರುಣನ ದಾಳಿಯಿಂದ ತತ್ತರಿಸಿದ ಜನರ ಕಣ್ಣೀರು ಒರೆಸುವಲ್ಲಿ ಸರ್ಕಾರ ಸರ್ವ ಪ್ರಯತ್ನಗಳನ್ನೂ ಸಮರೋಪಾದಿಯಲ್ಲಿ ನಡೆಸಬೇಕಿದೆ.

ಪ್ರತಿಕ್ರಿಯಿಸಿ (+)