ಅಂತಿಮ ಅಖಾಡದಲ್ಲಿ 221 ಅಭ್ಯರ್ಥಿಗಳು

ಮಂಗಳವಾರ, ಜೂನ್ 25, 2019
26 °C
ಐವರು ಅವಿರೋಧ ಆಯ್ಕೆ; 64 ವಾರ್ಡ್‌ಗಳಲ್ಲಿ ಮತದಾನ ಮೇ 29ಕ್ಕೆ

ಅಂತಿಮ ಅಖಾಡದಲ್ಲಿ 221 ಅಭ್ಯರ್ಥಿಗಳು

Published:
Updated:

ವಿಜಯಪುರ: ಇಂಡಿ, ಬಸವನಬಾಗೇವಾಡಿ, ತಾಳಿಕೋಟೆ ಪುರಸಭೆಯ ಚುನಾವಣಾ ಕಣದ ಚಿತ್ರಣ ಅಂತಿಮಗೊಂಡಿದೆ. ಮೂರು ಪುರಸಭೆಗಳ ವ್ಯಾಪ್ತಿಯ 64 ವಾರ್ಡ್‌ಗಳಲ್ಲಿ 221 ಹುರಿಯಾಳುಗಳು ಗೆಲುವಿಗಾಗಿ ಜಿದ್ದಾಜಿದ್ದಿಯ ಹೋರಾಟ ನಡೆಸಲಿದ್ದಾರೆ.

ನಾಮಪತ್ರ ವಾಪಸ್‌ ಪಡೆಯುವ ಕೊನೆ ದಿನವಾದ ಸೋಮವಾರ ಸೇರಿದಂತೆ, ಮುನ್ನಾ ದಿನಗಳಿಂದ ಒಟ್ಟು 46 ನಾಮಪತ್ರಗಳನ್ನು ಸ್ಪರ್ಧಾಕಾಂಕ್ಷಿಗಳು ವಾಪಸ್ ಪಡೆದಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ ಹಾಗೂ ಪಕ್ಷೇತರರು ಮತದಾನಕ್ಕೂ ಮುನ್ನವೇ ಖಾತೆ ತೆರೆಯುವ ಮೂಲಕ ಶುಭಾರಂಭ ಮಾಡಿದ್ದಾರೆ. ನಿರೀಕ್ಷೆಯಂತೆ ತಾಳಿಕೋಟೆ ಪುರಸಭೆ ವ್ಯಾಪ್ತಿಯಲ್ಲಿ ಮೂವರು ಪಕ್ಷೇತರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಳಿಕೋಟೆ ಪುರಸಭೆ ವ್ಯಾಪ್ತಿಯ ಒಂಬತ್ತನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಶಿವಪ್ಪ ಪಟ್ಟಣಶೆಟ್ಟಿ, 20ನೇ ವಾರ್ಡ್‌ನಿಂದ ಜುಬೇದಾ ಹುಸೇನ್‌ಬಾಷಾ ಜಮಾದಾರ, 22ನೇ ವಾರ್ಡ್‌ನಿಂದ ಮೋಹನ ಶ್ರೀಪತಿ ಬಡಿಗೇರ ಅವಿರೋಧವಾಗಿ ಆಯ್ಕೆಯಾದ ಪಕ್ಷೇತರರು.

ಬಸವನಬಾಗೇವಾಡಿ ಪುರಸಭೆ ವ್ಯಾಪ್ತಿಯ 18ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವಿಕುಮಾರ ಪ್ರಭು ನಾಯ್ಕೋಡಿ, ತಾಳಿಕೋಟೆ ಪುರಸಭೆಯ 19ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಕ್ಕಮಹಾದೇವಿ ಸೈದಪ್ಪ ಕಟ್ಟಿಮನಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ‘ಕೈ’ ಖಾತೆ ತೆರೆದಿದ್ದಾರೆ.

ಇಂಡಿ ಜಿದ್ದಾಜಿದ್ದಿಯ ಅಖಾಡ

ಇಂಡಿ ಪುರಸಭೆ ಜಿದ್ದಾಜಿದ್ದಿಯ ಅಖಾಡವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್‌, ಬಿಜೆಪಿ ತಲಾ 23 ವಾರ್ಡ್‌ಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಸ್ವತಂತ್ರವಾಗಿ ಬಹುಮತದೊಂದಿಗೆ ಪುರಸಭೆಯ ಚುಕ್ಕಾಣಿ ಹಿಡಿಯಲು ಪೈಪೋಟಿ ನಡೆಸಿವೆ.

ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದ ಜೆಡಿಎಸ್ 15 ವಾರ್ಡ್‌ಗಳಿಂದಷ್ಟೇ ತನ್ನ ಹುರಿಯಾಳುಗಳನ್ನು ಅಖಾಡಕ್ಕಿಳಿಸಿದೆ. ಬಿಎಸ್‌ಪಿ ಎರಡು ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದು, 28 ಪಕ್ಷೇತರರು ಅಖಾಡದಲ್ಲಿ ಉಳಿದಿದ್ದಾರೆ.

ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ 107 ಆಕಾಂಕ್ಷಿಗಳಲ್ಲಿ 16 ಮಂದಿ ಅಖಾಡದಿಂದ ಹಿಂದೆ ಸರಿಯುವ ಮೂಲಕ, 23 ವಾರ್ಡ್‌ಗಳಲ್ಲಿ ಗೆಲುವಿಗಾಗಿ 91 ಅಭ್ಯರ್ಥಿಗಳು ಹೋರಾಟ ನಡೆಸಲಿದ್ದಾರೆ.

ತಾಳಿಕೋಟೆಯಲ್ಲಿ ಪಕ್ಷೇತರರದ್ದೇ ಪಾರಮ್ಯ

ತಾಳಿಕೋಟೆ ಪುರಸಭೆ ಚುನಾವಣಾ ಅಖಾಡದಲ್ಲಿ ಪಕ್ಷಗಳ ಪಾರಮ್ಯಕ್ಕಿಂತ ಪಕ್ಷೇತರರ ಪ್ರಾಬಲ್ಯವೇ ಹೆಚ್ಚಿದೆ. ಈಗಾಗಲೇ ನಾಲ್ಕು ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆ ಘೋಷಣೆಯಾಗಿದೆ.

19 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ 9, ಬಿಜೆಪಿ 8, ಜೆಡಿಎಸ್‌ ಮೂರು ವಾರ್ಡ್‌ಗಳಲ್ಲಷ್ಟೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಉಳಿದಂತೆ 44 ಪಕ್ಷೇತರರು ಅಖಾಡದಲ್ಲಿದ್ದು, ಗೆಲುವಿಗಾಗಿ ಪಕ್ಷಗಳ ಅಭ್ಯರ್ಥಿಗೆ ಸೆಡ್ಡು ಹೊಡೆದು ಹೋರಾಟಕ್ಕಿಳಿದಿದ್ದಾರೆ. ಒಟ್ಟು 64 ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ. 16 ಸ್ಪರ್ಧಾಕಾಂಕ್ಷಿಗಳು ಕಣದಿಂದ ಹಿಂದೆ ಸರಿದಿದ್ದಾರೆ.

ಬಾಗೇವಾಡಿ ಕಣದಲ್ಲಿ 66 ಅಭ್ಯರ್ಥಿಗಳು

ಫಲಿತಾಂಶ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ ಖಾತೆ ತೆರೆದು ಶುಭಾರಂಭ ಮಾಡಿದೆ. 22 ವಾರ್ಡ್‌ಗಳಿಗಷ್ಟೇ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಪುರಸಭೆಯ ಚುಕ್ಕಾಣಿಯನ್ನು ‘ಕೈ’ ವಶಪಡಿಸಿಕೊಳ್ಳಲಿಕ್ಕಾಗಿಯೇ ಆರೋಗ್ಯ ಸಚಿವ ಶಿವಾನಂದ ಪಾಟೀಲ ಸಾರಥ್ಯದಲ್ಲಿ ಎಲ್ಲಾ ವಾರ್ಡ್‌ಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಿಜೆಪಿ 18 ವಾರ್ಡ್‌ಗಳಿಗಷ್ಟೇ ಅಭ್ಯರ್ಥಿ ಕಣಕ್ಕಿಳಿಸಿದೆ. 18ನೇ ವಾರ್ಡ್‌ನಿಂದ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದುದರಿಂದಲೇ ಕಾಂಗ್ರೆಸ್‌ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದ ಜೆಡಿಎಸ್‌ ಏಳು ವಾರ್ಡ್‌ಗಳಿಂದಷ್ಟೇ ಸ್ಪರ್ಧಿಸಿದೆ. 19 ಪಕ್ಷೇತರರು ಅಖಾಡದಲ್ಲಿದ್ದು, ಚುನಾವಣಾ ಕಣ ರಂಗೇರಿದೆ. ನಾಮಪತ್ರ ಸಲ್ಲಿಸಿದ್ದ 80 ಅಭ್ಯರ್ಥಿಗಳಲ್ಲಿ 14 ಮಂದಿ ಉಮೇದುವಾರಿಕೆ ವಾಪಸ್ ಪಡೆದಿದ್ದು, 66 ಸ್ಪರ್ಧಾಕಾಂಕ್ಷಿಗಳು 22 ವಾರ್ಡ್‌ಗಳಲ್ಲಿ ಗೆಲುವಿಗಾಗಿ ಪೈಪೋಟಿ ನಡೆಸಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !