ಘನತೆವೆತ್ತ ರಾಜ್ಯಪಾಲರೇ ಇದು ಸಹಜ ನ್ಯಾಯವಲ್ಲ...

7

ಘನತೆವೆತ್ತ ರಾಜ್ಯಪಾಲರೇ ಇದು ಸಹಜ ನ್ಯಾಯವಲ್ಲ...

Published:
Updated:

ಇದು ದೊಡ್ಡ ಚದುರಂಗದಾಟ. ಹಂಸರಾಜ ಭಾರದ್ವಾಜರು ಕರ್ನಾಟಕದ ರಾಜ್ಯಪಾಲರಾಗಿ ಬಂದ ದಿನದಿಂದಲೇ ಈ ಆಟ ಆರಂಭಿಸಿದ್ದರು. ಈ ಆಟದಲ್ಲಿ ಅವರು ಮೊದಲು ಗುರಿ ಇಟ್ಟುದು ರೆಡ್ಡಿ ಸೋದರರಂಥ ‘ಮಂತ್ರಿ’ಯ ಮೇಲೆ. ಅದು ವಿಫಲವಾಗುತ್ತಿದ್ದಂತೆಯೇ ಈಗ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಜಸ್ಟೀಸ್ ಲಾಯರ್ಸ್ ಫೋರಮ್‌ಗೆ ಅನುಮತಿ ಕೊಟ್ಟು ‘ರಾಜ’ನಿಗೇ ಚೆಕ್‌ಮೇಟ್ ಮಾಡಿದ್ದಾರೆ. ಇನ್ನು ಮುಂದೆ ಏನಾಗುತ್ತದೆ ಎಂದು ಊಹಿಸಲು ಭಾರಿ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ರಾಜ್ಯಪಾಲರಿಗೆ ಅದೇ ಬೇಕಾಗಿದೆ. ಇವರಿಗೆ ಬೇಕಾದುದು ಸಜ್ಜನ ಪ್ರಧಾನಿ ಮನಮೋಹನಸಿಂಗ್ ಅವರಿಗೂ ಬೇಕಾಗಿದೆ ಎಂದು ಹೇಳುವುದು ಕಷ್ಟ. ಸೋನಿಯಾ ಗಾಂಧಿ ಅವರ ಬಗ್ಗೆ ಬಿಜೆಪಿಯವರು ಏನೇ ಹೇಳಲಿ; ‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಕೇಂದ್ರ ಸರ್ಕಾರದ ‘ಪ್ರತಿನಿಧಿ’ಯೊಬ್ಬರು ‘ಹೇಗಾದರೂ ಮಾಡಿ’ ಉರುಳಿಸಲಿ’ ಎಂದು ಅವರು ಬಯಸುತ್ತಾರೆ ಎಂದು ನಂಬುವುದು ಕಷ್ಟ.ಇಲ್ಲಿ ಮುಖ್ಯವಾಗಿ ಇರುವುದು ಸಜ್ಜನಿಕೆಯ ಪ್ರಶ್ನೆ. ರಾಜ್ಯಪಾಲರೇ ಹಲವು ಸಾರಿ ಹೇಳಿದ ಹಾಗೆ ಕನ್ನಡಿಗರು ಮೂಲತಃ ಸಜ್ಜನರು. ಅವರಿಗೆ ಇಂಥ ಹಾದಿರಂಪ ಬೀದಿರಂಪ ರೂಢಿಯಿಲ್ಲ. ಕರ್ನಾಟಕ ಏಕೀಕರಣವಾದ ಮೇಲೆ ಅವರು ಇಂಥ ರಾಜ್ಯಪಾಲರನ್ನು ಕಂಡುದು ಇದೇ ಮೊದಲು. ಸಂವಿಧಾನಬದ್ಧ ಸಂಸ್ಥೆಗಳು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅವರಿಗೆ ಅವರದೇ ಆದ ಒಂದು ಪರಿಕಲ್ಪನೆ ಇದೆ. ಬಹುಶಃ ಅದರಿಂದಲೇ ರಾಜ್ಯಪಾಲರ ವರ್ತನೆ ಅವರಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ‘ಇವರದು ಅತಿಯಾಯಿತು’ ಅನಿಸುತ್ತಿದೆ. ರಾಜ್ಯಪಾಲರು ರಾಜ್ಯದಲ್ಲಿ ಸಂವಿಧಾನಬದ್ಧ ಆಡಳಿತ ನೋಡಿಕೊಳ್ಳಲು ಇರುವ ಕೇಂದ್ರದ ಪ್ರತಿನಿಧಿ. (ಇಂಗ್ಲಿಷ್‌ನಲ್ಲಿ ಅದಕ್ಕೆ ಏಜೆಂಟ್ ಎಂಬ ಪದಬಳಕೆಯಾಗಿದೆ. ಆದರೆ, ಏಜೆಂಟ್‌ಗೆ ಅಂಥ ಒಳ್ಳೆಯ ಅರ್ಥವಿಲ್ಲ!) ಸಂವಿಧಾನದ ಚೌಕಟ್ಟಿನಲ್ಲಿ ಅವರು ಹೇಗೆ ಆಡಳಿತ ನಡೆಸಬೇಕು, ಅದಕ್ಕಿಂತ ಹೆಚ್ಚಾಗಿ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಲಿಖಿತ, ಅಲಿಖಿತ ನಿಯಮಗಳಿವೆ. ಲಿಖಿತ ಮತ್ತು ಅಲಿಖಿತ ನಿಯಮಗಳಿಗಿಂತ ಈ ದೇಶದ ಆಡಳಿತ ಸಂಪ್ರದಾಯಗಳು ದೊಡ್ಡದಾದುವು. ಅವೇ ಇಂಥ ಹುದ್ದೆಗಳಿಗೆ ಮಾದರಿಗಳು.ಹಂಸರಾಜ ಭಾರದ್ವಾಜರು ಕರ್ನಾಟಕಕ್ಕೆ ಬಂದ ಕೂಡಲೇ ಈ ಸಂಪ್ರದಾಯಗಳನ್ನು ಮುರಿದಿರುವುದೇ ಸಾರ್ವಜನಿಕ ವಲಯದಲ್ಲಿನ ಇರಿಸು ಮುರಿಸಿಗೆ ಮುಖ್ಯ ಕಾರಣ. ಅವರು ಇಲ್ಲಿಗೆ ಬರುವುದಕ್ಕಿಂತ ಮುಂಚೆ ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದವರು. ಕಾನೂನು ಸಚಿವರಾಗಿದ್ದಾಗಲೂ ಅವರು ಕೇಂದ್ರಕ್ಕೆ ಬಹಳ ಹಿತಕಾರಿಯಾಗಿರಲಿಲ್ಲ. ಹಲವು ಸಾರಿ ಭಾರದ್ವಾಜರ ತಪ್ಪಿನಿಂದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ಭರ್ತ್ಸನೆಗೆ ಗುರಿಯಾಯಿತು. ಯುಪಿಎ 2ನೇ ಸರ್ಕಾರದಲ್ಲಿ ಹಂಸರಾಜರಿಗೆ ಜಾಗವಿರಲಿಲ್ಲ. ಸಕ್ರಿಯ ರಾಜಕಾರಣಿಯಾಗಿದ್ದ ಭಾರದ್ವಾಜರಿಗೆ ರಾಜಭವನ ಉಸಿರುಗಟ್ಟಿಸಿರಬಹುದು. ತಮಗೆ ಇಲ್ಲಿ ಉಸಿರುಗಟ್ಟಿದೆ, ತಮ್ಮನ್ನು ಕೇಂದ್ರಕ್ಕೆ ಕರೆಸಿಕೊಳ್ಳಿ ಎಂದು ಹೇಳುವುದಕ್ಕೂ ಅವರು ಯಡಿಯೂರಪ್ಪ ಸರ್ಕಾರಕ್ಕೆ ನೇಣು ಬಿಗಿಯುತ್ತಿರಬಹುದು. ಆದರೆ, ರಾಜಭವನ ಮತ್ತು ವಿಧಾನಸೌಧದ ನಡುವಿನ ಎಲ್ಲ ವ್ಯವಹಾರಕ್ಕೆ ಇದ್ದ ನಾಲ್ಕು ಗೋಡೆಗಳ ಚೌಕಟ್ಟು ಒಡೆದು ಹೋಗಿದೆ. ಏನಿದ್ದರೂ ರಾಜ್ಯಪಾಲರು ಮಾಧ್ಯಮಗಳ ಮೂಲಕವೇ ಮಾತನಾಡುತ್ತಿದ್ದಾರೆ, ಹೆದರಿಸುತ್ತಿದ್ದಾರೆ. ಯಾವ ರಾಜ್ಯಪಾಲರೂ ಮಾಧ್ಯಮಗಳ ಜತೆಗೆ ಮಾತನಾಡಲು ಹೀಗೆ ತುದಿಗಾಲ ಮೇಲೆ ನಿಂತುದು ನಮಗೆ ನೆನಪಿಲ್ಲ. ಹಿಂದೆ ನಿದರ್ಶನಗಳೂ ಇಲ್ಲ. ದೇಶದ ಬೇರೆಡೆ ಇಂಥ ಘಟನೆ ನಡೆಯುತ್ತಿರುವುದೂ ವರದಿಯಾಗಿಲ್ಲ.ರಾಜಭವನಕ್ಕೆ ವಿರೋಧ ಪಕ್ಷದ ನಾಯಕರು ತಮ್ಮ ಮನೆಗೆ ಹೋಗಿ ಬಂದಷ್ಟೇ ಸರಾಗವಾಗಿ ಹೋಗಿ ಬರುತ್ತಿದ್ದಾರೆ. ಹಿಂದೆ ಯಾವ ರಾಜ್ಯಪಾಲರ ಕಾಲದಲ್ಲಿಯೂ ವಿರೋಧಿ ನಾಯಕರು ಹೀಗೆ ರಾಜಭವನಕ್ಕೆ ಎಡತಾಕಿದ ಉದಾಹರಣೆಯಿಲ್ಲ. ಹಲವು ಸಾರಿ ಮುಖ್ಯಮಂತ್ರಿ ರಾಜಭವನದಿಂದ ಹೊರಗೆ ಬರುವುದಕ್ಕೂ ಕುಮಾರಸ್ವಾಮಿ ಒಳಗೆ ಹೋಗುವುದಕ್ಕೂ ತಾಳೆಯಾಗಿದೆ. ಇದು ಕೇವಲ ಕಾಕತಾಳೀಯ ಇರಲಾರದು. ವಿರೋಧ ಪಕ್ಷಗಳ ನಾಯಕರು ರಾಜಭವನಕ್ಕೆ ಹೋದಾಗ ಅಲ್ಲಿ ನಡೆದ ಮಾತುಕತೆಗಳು ಈಗ ಅಂಥ ರಹಸ್ಯವಾಗಿಯೇನೂ ಉಳಿದಿಲ್ಲ. ರಾಜಭವನದ ಕಾರ್ಯತಂತ್ರಗಳನ್ನು ವಿರೋಧಿ ನಾಯಕರೂ ರೂಪಿಸುತ್ತಾರೋ ಅಥವಾ ವಿರೋಧಿ ನಾಯಕರ ಕಾರ್ಯತಂತ್ರಗಳನ್ನು ರಾಜಭವನ ರೂಪಿಸುತ್ತದೋ ಎಂಬ ವ್ಯತ್ಯಾಸ ತಿಳಿಯದಷ್ಟು ಅಂತರ ಕಡಿಮೆಯಾಗಿದೆ. ಜಸ್ಟೀಸ್ ಲಾಯರ್ಸ್ ಫೋರಂ ಅರ್ಜಿ ವಿಚಾರದಲ್ಲಿಯೂ ಬಿಜೆಪಿ ಇದೇ ಮಾತನ್ನು ಹೇಳಬಹುದು.ಒಂದು ಸಂವಿಧಾನಬದ್ಧ ಹುದ್ದೆಯಲ್ಲಿ ಇದ್ದವರು ಸಕ್ರಿಯ ರಾಜಕಾರಣದ ಅಂತರವನ್ನು ಬುದ್ಧಿಪೂರ್ವಕವಾಗಿ ಕಾಯ್ದುಕೊಳ್ಳಬೇಕು. ಅದು ಆಗಿಲ್ಲ ಎಂತಲೇ ಆಡಳಿತ ಪಕ್ಷಕ್ಕೆ ಒಳಗುದಿ ಶುರುವಾಗಿದೆ. ದಕ್ಷಿಣ ಭಾರತದ ಮೊದಲ ಮತ್ತು ಏಕೈಕ ಸರ್ಕಾರವನ್ನು ಅದು ಅಷ್ಟು ಸುಲಭವಾಗಿ ಕಳೆದುಕೊಳ್ಳಲು ಬಯಸಲಾರದು. ಮುಖ್ಯಮಂತ್ರಿಯ ವಿರುದ್ಧ ಮೊಕದ್ದಮೆ ಹೂಡಲು ಅವಕಾಶ ಕೊಡಬೇಡಿ ಎಂದು ‘ಸವಿನಯಪೂರ್ವಕ’ ಪತ್ರ ಬರೆದುದು ಆ ಬಯಕೆಯ ಮೊದಲ ಹೆಜ್ಜೆ. ರಾಜ್ಯಪಾಲರು ಮುಖ್ಯಮಂತ್ರಿಗೆ ಈ ಪ್ರಕರಣದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶ ಕೊಟ್ಟಿಲ್ಲ.ಅಂಥ ಅವಕಾಶ ಕೊಡದೇ ಇರುವುದು ಸಹಜ ನ್ಯಾಯಕ್ಕೆ ವಿರುದ್ಧವಾದುದು ಎಂದು ವಾದ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂಥ ಅವಕಾಶ ಸಿಗಲಿಲ್ಲ ಮಾತ್ರವಲ್ಲ ಲಾಯರ್ಸ್‌ ಫೋರಮ್‌ಗೆ ಮೊಕದ್ದಮೆ ಹೂಡಲು ಕೊಟ್ಟ ಅನುಮತಿ ಆದೇಶದ ಪ್ರತಿಯನ್ನು ಕೊಡಲು ರಾಜ್ಯಪಾಲರು ಸತಾಯಿಸಿದರು ಎಂಬ ಕಾರಣದಿಂದಲೇ ರಾಷ್ಟ್ರಪತಿ ಭವನಕ್ಕೆ ಪೆರೇಡ್, ಪ್ರತಿಭಟನೆ, ಕರ್ನಾಟಕ ಬಂದ್‌ನಂಥ ಒತ್ತಡ ತಂತ್ರಗಳಿಗೂ ಅದು ಸಿದ್ಧವಾಗಿದೆ. ಯಾವುದೇ ಒಂದು ಅಪರಾಧಕ್ಕೆ ಎರಡು ವಿಚಾರಣೆಗಳು, ಶಿಕ್ಷೆಗಳು ಇರಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳೂ ಸೇರಿದಂತೆ ಅವರ ಸರ್ಕಾರದ ಭೂ ಹಗರಣಗಳ ಬಗ್ಗೆ ಈಗ ನ್ಯಾಯಾಂಗ ಮತ್ತು ಲೋಕಾಯುಕ್ತ  ತನಿಖೆ ನಡೆಯುತ್ತಿದೆ. ರಾಜ್ಯಪಾಲರು ಈಗ ಜಸ್ಟೀಸ್ ಲಾಯರ್ಸ್ ಫೋರಮ್‌ಗೆ ಮೊಕದ್ದಮೆ ಹೂಡಲು ಅನುಮತಿ ಕೊಟ್ಟಿರುವುದರಿಂದ ಅದು ಮೂರನೇ ತನಿಖೆಯಾಗುತ್ತದೆ.ಹೀಗೆ ಒಂದೇ ಆರೋಪ ಕುರಿತು ಹಲವು ಹಂತಗಳಲ್ಲಿ ತನಿಖೆ ನಡೆಯಬಹುದೇ ಎಂಬ ಪ್ರಶ್ನೆಯನ್ನು ಬಿಜೆಪಿ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗಬಹುದು. ಅದಕ್ಕೆ ಪೂರಕವಾಗಿ ಹಲವು ಕಾನೂನಾತ್ಮಕ ಅಂಶಗಳನ್ನೂ ಮುಂದೆ ಇಡಬಹುದು. ರಾಜ್ಯಪಾಲರು ಬರೀ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ಕೊಟ್ಟು ಗೃಹ ಸಚಿವ ಅಶೋಕ ಅವರನ್ನು ಹಾಗೇ ಬಿಟ್ಟುದೂಪ್ರಶ್ನೆಗಳು ಏಳಲು ಕಾರಣವಾಗಬಹುದು.ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ಕೊಟ್ಟಿರುವುದರಿಂದ ಮುಖ್ಯಮಂತ್ರಿಗಳ ಮುಂದೆ ಈಗ ದೊಡ್ಡ ನೈತಿಕ ಪ್ರಶ್ನೆ ಎದ್ದು ನಿಂತಿದೆ. ಕಾಯ್ದೆ ಪ್ರಕಾರ ತಾವು ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಅವರು ಹೇಳಬಹುದಾದರೂ ನೈತಿಕವಾಗಿ ಅಧಿಕಾರದಲ್ಲಿ ಉಳಿಯುವುದು ಕಷ್ಟವಾಗುತ್ತದೆ. ಅದು ಕಷ್ಟ ಎನಿಸುವಂಥ ವಾತಾವರಣವನ್ನು ವಿರೋಧಿಗಳು ನಿರ್ಮಾಣ ಮಾಡುತ್ತಾರೆ. ಆದರೆ, ಈ ಒತ್ತಡವನ್ನು ಬಿಜೆಪಿ ಹೇಗೆ ನಿಭಾಯಿಸುತ್ತದೆ ? ತಾನು ಎಂದೂ ಸಮರ್ಥಿಸದ ಮಾಯಾವತಿ, ಮುಲಾಯಂ ಅವರ ಮಾದರಿಯನ್ನು ಅನುಸರಿಸುತ್ತದೆಯೇ ಅಥವಾ ಮತ್ತೊಬ್ಬ ಮುಖ್ಯಮಂತ್ರಿ ನೇಮಿಸಿ ಆಡಳಿತ ನಡೆಸಲು ಬಯಸುತ್ತದೆಯೇ? ಇಲ್ಲವೇ ಮಧ್ಯಂತರ ಚುನಾವಣೆಗೆ ಹೋಗುವುದೇ ಲೇಸು ಎಂದು ನಿರ್ಧರಿಸುತ್ತದೆಯೇ? ರಾಜಭವನವನ್ನು ಆ ಮೂಲಕ ಕಾಂಗ್ರೆಸ್ಸನ್ನು ಹರಾಜು ಹಾಕಲು ರಾಜ್ಯಪಾಲರೇ ಕೊಟ್ಟ ಈ ದೊಡ್ಡ ಅಸ್ತ್ರವನ್ನು ಬಳಸಿಕೊಳ್ಳುವ ರಾಜಕೀಯ ನಿರ್ಧಾರವನ್ನೇ ಅದು ತೆಗೆದುಕೊಳ್ಳುತ್ತದೆಯೇ? 20 ತಿಂಗಳ ತಮ್ಮ ಆಡಳಿತದ ನಂತರ ಕುಮಾರಸ್ವಾಮಿಯವರು ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೇ ಇದ್ದಾಗ ನಿರ್ಮಾಣವಾದ ಸಹಾನುಭೂತಿಯನ್ನು ಮತ್ತೆ ನಿರ್ಮಿಸಲು ಅದು ಪ್ರಯತ್ನಿಸುತ್ತದೆಯೇ? ಕಾಂಗ್ರೆಸ್ಸು ಇದನ್ನೆಲ್ಲ ಊಹಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯಪಾಲರು ಇದಕ್ಕೆಲ್ಲ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ಅವರಿಗೆ ಮೂರು ತಿಂಗಳಾದರೂ ವಿಧಾನಸೌಧದಲ್ಲಿ ಕುಳಿತು ಆಡಳಿತ ಮಾಡಬೇಕಾದಂತಿದೆ.ಅವರ ಈ ಆಸೆ ವ್ಯಕ್ತವಾದುದು ಈಗಲೇನೂ ಅಲ್ಲ. ಕಳೆದ ಅಕ್ಟೋಬರ್‌ನಲ್ಲಿ ಯಡಿಯೂರಪ್ಪ ಸರ್ಕಾರ ಮೊದಲ ಬಾರಿ ಬಹುಮತ ಸಾಬೀತುಪಡಿಸಬೇಕಾದ ಸಂದರ್ಭದಲ್ಲಿ ‘ವಿಧಾನಸಭೆಯ ಸದಸ್ಯರ ಬಲಾಬಲವನ್ನು ಮೊದಲಿನಂತೆಯೇ ಉಳಿಸಿಕೊಳ್ಳಬೇಕು’ ಎಂದು ಸಭಾಧ್ಯಕ್ಷರಿಗೆ ಸೂಚಿಸಿದಾಗಲೂ ಅವರಿಗೆ ಈ ಆಸೆ ಇತ್ತು. ಸಭಾಧ್ಯಕ್ಷರು ರಾಜ್ಯಪಾಲರ ಮಾತನ್ನು ಕೇಳಿದ್ದರೆ ಅನರ್ಹಗೊಂಡಿದ್ದ 16 ಶಾಸಕರು ಮತದಾನದಲ್ಲಿ ಭಾಗವಹಿಸುತ್ತಿದ್ದರು. ಆಗ ಸರ್ಕಾರ ಬಿದ್ದು ಹೋಗುತ್ತಿತ್ತು. ಆದರೆ, ಒಬ್ಬ ರಾಜ್ಯಪಾಲರು ಸಭಾಧ್ಯಕ್ಷರಿಗೆ ಹೀಗೆ ಸೂಚನೆ ನೀಡಿದ್ದು ಇತಿಹಾಸದಲ್ಲಿ ಇದೇ ಮೊದಲು.ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆಶಯಕ್ಕೆ ಆ ಸೂಚನೆ ವಿರುದ್ಧವಾದುದು. ‘ಒಂದು ಸರ್ಕಾರದ ಬಲಾಬಲ ಸದನದಲ್ಲಿಯೇ ತೀರ್ಮಾನವಾಗಬೇಕು. ಅಂದರೆ ಸದನದ ನಡವಳಿಕೆಯನ್ನು ಸಭಾಧ್ಯಕ್ಷರೇ ತೀರ್ಮಾನಿಸಬೇಕು’ ಎಂಬುದು ಸುಪ್ರೀಂ ಕೋರ್ಟಿನ ತೀರ್ಪು, ಆಶಯ. ಸಭಾಧ್ಯಕ್ಷರು ತಮ್ಮ ಸೂಚನೆಗೆ ಮಣಿಯದೇ ಸರ್ಕಾರ ಬಹುಮತ ಸಾಬೀತುಪಡಿಸಿದ ಕೂಡಲೇ ರಾಜ್ಯಪಾಲರು ಮಾಡಿದ ಇನ್ನೊಂದು ಕೆಲಸ ‘ಸರ್ಕಾರ ಬಹುಮತ ಸಾಬೀತುಪಡಿಸಿರುವುದು ಒಂದು ದೊಡ್ಡ ನಾಟಕ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು’ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದು. ವಿಪರ್ಯಾಸ ಎನ್ನುವಂತೆ ಒಂದೇ ದಿನದಲ್ಲಿ ಅವರು ಸರ್ಕಾರಕ್ಕೆ ಬಲ ಪ್ರದರ್ಶಿಸಲು ಇನ್ನೊಂದು ಅವಕಾಶ ಕೊಟ್ಟರು. ತಾವು ಸರ್ಕಾರಕ್ಕೆ ಬಹುಮತ ಸಾಬೀತು ಮಾಡಲು ಸೂಕ್ತ ಅವಕಾಶ ಕೊಟ್ಟಿಲ್ಲ ಎಂಬ ಆರೋಪ ಬರುವುದು ಬೇಡ ಎಂದು ಹೀಗೆ ಅವಕಾಶ ಕೊಟ್ಟೆ ಎಂದು ಅವರು ಹೇಳಿಕೊಂಡರೂ ಕೇಂದ್ರ ಸರ್ಕಾರಕ್ಕೆ ಬೊಮ್ಮಾಯಿ ಪ್ರಕರಣದ ತೀರ್ಪಿನ ಭಯವಿತ್ತು. ಆ ಭಯವೇ ಇನ್ನೊಂದು ಅವಕಾಶ ಕೊಡುವಂತೆ ಮಾಡಿತು. ಒಟ್ಟಿನಲ್ಲಿ ಆಗಿದ್ದು ಏನು ಎಂದರೆ ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಬೀಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವೇ ಜನರ ಮನಸ್ಸಿನಲ್ಲಿ ಉಳಿಯಿತು. ಈಗ ಅದು ಬೆಳೆಯುತ್ತಿದೆ.ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ಕೊಟ್ಟಿರುವ ರಾಜ್ಯಪಾಲರ ತೀರ್ಮಾನ ರಾಜ್ಯ ಮತ್ತು ಕೇಂದ್ರದ ನಡುವಿನ ಸಂಬಂಧದ ಬಗ್ಗೆ ಮತ್ತೆ ಆಳವಾದ ಚರ್ಚೆ ನಡೆಯಲು ಪುಟ ಕೊಡುವುದು ಖಚಿತ. ಸಕ್ರಿಯ ರಾಜಕಾರಣಿಗಳನ್ನು ರಾಜ್ಯಪಾಲರನ್ನಾಗಿ ಮಾಡಬೇಕೇ ಅಥವಾ ಅವರ ಜಾಗದಲ್ಲಿ ನಿವೃತ್ತ ಅಧಿಕಾರಿಗಳನ್ನು ನೇಮಿಸಬೇಕೇ ಎಂಬ ಬಗ್ಗೆ ದಶಕಗಳಿಂದ ಚರ್ಚೆ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳಿಗಿಂತ ಆಡಳಿತಗಾರರೇ ವಾಸಿ ಎಂಬ ಅಭಿಪ್ರಾಯ ಸಾಮಾನ್ಯವಾದುದು.ಭಾರದ್ವಾಜರು ರಾಜಕೀಯದಲ್ಲಿ ಹೇಗೆ ಬೆಳೆದು ಬಂದಿದ್ದಾರೆ ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ಈಗಾಗಲೇ ಅವರ ಜಾತಕವನ್ನೆಲ್ಲ ಜೇಟ್ಲಿ, ಜೇಠ್ಮಲಾನಿ ಜಾಲಾಡಿಸಿ ಇಟ್ಟುಕೊಂಡಿದ್ದಾರೆ. ಭಾರದ್ವಾಜರು, ಕಾನೂನು ಸಚಿವರಾಗಿದ್ದಾಗ ಬೊಫೋರ್ಸ್ ಹಗರಣದಲ್ಲಿ ಸಿಬಿಐ ಸ್ಥಗಿತಗೊಳಿಸಿದ್ದ ಒಟ್ಟಾವಿಯೊ ಕ್ವಟ್ರೋಚಿಯವರ ಬ್ಯಾಂಕ್ ಖಾತೆಗಳನ್ನು ಮತ್ತೆ ಚಾಲ್ತಿಗೊಳಿಸಿದ್ದು, ಯೋಗಗುರು ಧೀರೇಂದ್ರ ಬ್ರಹ್ಮಚಾರಿಯ ಪಂಚೆಯ ಚುಂಗು ಹಿಡಿದುಕೊಂಡು, ಇಂದಿರಾ, ಸಂಜಯರಿಗೆ ನಿಕಟವಾದುದು, ಇಂದಿರಾ ಅವರ ಔಟ್‌ಹೌಸ್‌ನಲ್ಲಿಯೇ ಮನೆ ಮಾಡಿಕೊಂಡು ಜೀವಿಸಿದ್ದು, ಕಾನೂನು ಸಚಿವರಾಗಿದ್ದುಕೊಂಡು ಬಿಹಾರ ಮತ್ತು ಜಾರ್ಖಂಡ್‌ಗಳಲ್ಲಿ ಸಂವಿಧಾನದ ಬಿಕ್ಕಟ್ಟನ್ನು ಸೃಷ್ಟಿಸಿ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯದಲ್ಲಿ ಛೀಮಾರಿ ಹಾಕುವಂತೆ ಮಾಡಿದ್ದು...ಇತ್ಯಾದಿ, ಇತ್ಯಾದಿ.ಬೀದಿಯಲ್ಲಿ ಜಗಳ ನಡೆದರೆ ಆಗುವುದೇ ಹೀಗೆ. ಬಾಯಿಗೆ ಬಿಗಿ ಇರುವುದಿಲ್ಲ. ಕೆಟ್ಟ ಬೈಗುಳಗಳು ಕಿವಿಗೆ ಬೀಳುತ್ತವೆ. ರಾಜ್ಯಪಾಲರು ಗಾದೆ ಮಾತನ್ನು ಹೇಳಿದರೋ ಅಥವಾ ಅವರ ಮನಸ್ಸಿನಲ್ಲಿಯೇ ಅದು ಇತ್ತೋ, ಅವರು ಮುಖ್ಯಮಂತ್ರಿಯನ್ನು ಕಳ್ಳನಿಗೆ ಹೋಲಿಸಿಬಿಟ್ಟರು. ಬಿಜೆಪಿ ಮುಖಂಡರು ಈಗ ಅದೇ ಭಾಷೆಯಲ್ಲಿ ಉತ್ತರ ಕೊಡಲಿದ್ದಾರೆ.ರಾಜಭವನ ಇಂಥ ಅಗ್ಗದ ಮನರಂಜನೆಗೆ ಕಾರಣವಾಗಬೇಕು ಎಂದು ಯಾರಾದರೂ ಬಯಸುತ್ತಾರೆ ಎಂದು ಅನಿಸುವುದಿಲ್ಲ. ಜನರ ಕಷ್ಟಗಳು ನೂರೆಂಟು ಇವೆ. ಕಳೆದ ಆರೆಂಟು ತಿಂಗಳಲ್ಲಿ ಯಾರಾದರೂ ಒಬ್ಬ ರಾಜಕಾರಣಿ ಜನರ ಸಮಸ್ಯೆ ಕುರಿತು ಮಾತನಾಡಿದ್ದು ಯಾರಿಗಾದರೂ ನೆನಪಿದೆಯೇ? ಬಹುತೇಕ ಇಡೀ ಉತ್ತರ ಕರ್ನಾಟಕಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕೃಷ್ಣಾ ಕೊಳ್ಳದ ಯೋಜನೆಗಳ ಬಗ್ಗೆ ಏನು ಮಾಡಬೇಕು ಎಂದು ನೀರಾವರಿ ವಿಚಾರದಲ್ಲಿ ಈಗಲೂ ಬೆರಳ ತುದಿಯ ತಿಳಿವಳಿಕೆ ಇರುವ ದೇವೇಗೌಡರು ಮಾತನಾಡಿದ್ದಾರೆಯೇ? 14-15 ಜಿಲ್ಲೆಗಳ ಪ್ರವಾಹ ಸಂತ್ರಸ್ತರ ಗತಿ ಏನಾಯಿತು ಎಂದು ಯಾರಾದರೂ ಯೋಚಿಸಿದ್ದಾರೆಯೇ? ಪಲ್ಯ ಮಾಡಲು ಉಳ್ಳಾಗಡ್ಡಿ ಕೊಳ್ಳಲಾಗದ ಶ್ರೀಸಾಮಾನ್ಯನ ಗತಿಯೇನು ಎಂದು ಯಾವ ರಾಜಕಾರಣಿಯಾದರೂ ಕೇಳಿದ್ದಾನೆಯೇ?... ಎಲ್ಲರಿಗೂ ಚದುರಂಗದ ಆಟದಲ್ಲಿಯೇ ಆಸಕ್ತಿ. ಎದುರಾಳಿಯ ‘ರಾಜ’ನ ಮೇಲೇ ಕಣ್ಣು. ವಿರೋಧ ಪಕ್ಷಗಳಿಗೆ ಚದುರಂಗದ ಆಟದಲ್ಲಿ ಆಸಕ್ತಿ ಸಹಜ. ಆದರೆ, ಆಟದ ತೀರ್ಪುಗಾರರಾದ ರಾಜ್ಯಪಾಲರೇ ‘ಕಾಯಿ’ ಉರುಳಿಸತೊಡಗಿದರೆ ಏನು ಮಾಡುವುದು?...ಸಜ್ಜನ ಪ್ರಧಾನಿ ಮತ್ತು ಅಷ್ಟೇ ಸಜ್ಜನರಾದ ಸೋನಿಯಾ ಇದಕ್ಕೆ ಉತ್ತರ ಕೊಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry