ಹೊರಗೇ ಇರುವುದೋ... ಒಳಗೆ ಬರುವುದೋ...

ಬುಧವಾರ, ಜೂನ್ 26, 2019
25 °C

ಹೊರಗೇ ಇರುವುದೋ... ಒಳಗೆ ಬರುವುದೋ...

Published:
Updated:

ನಿರ್ಧಾರವನ್ನು ಮುಂದಕ್ಕೆ ಹಾಕುವುದೂ ಒಂದು ನಿರ್ಧಾರ ಎನ್ನುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಸಿದ್ದರಾಮಯ್ಯನವರ ಸರ್ಕಾರವನ್ನು ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ನ್ಯಾಯವಾಗಿ ನೋಡುವುದಾದರೆ  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಪರಮೇಶ್ವರ್‌ ಅವರೂ ಸಂಪುಟವನ್ನು ಸೇರಬೇಕಿತ್ತು.ಆದರೆ, ಅವರಿಗೆ ಅದೃಷ್ಟ ಇರಲಿಲ್ಲ. ಅಥವಾ ಅವರನ್ನು ‘ಅದೃಷ್ಟ ವಂಚಿತ’ರನ್ನಾಗಿ ಮಾಡಲಾಯಿತು. ಈಗ ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದು ಹೋಗಿದೆ. ಈಗಲೂ ಪರಮೇಶ್ವರ್‌ ಸರ್ಕಾರದ ಹೊಸ್ತಿಲ ಹೊರಗೇ ನಿಂತಿದ್ದಾರೆ.ಅವರಿಗೆ ಒಳಗೆ ಪ್ರವೇಶ ಸಿಗುತ್ತಿಲ್ಲ. ಅವರು ಹೊರಗೇ ನಿಲ್ಲಲು ಸಿದ್ದರಾಮಯ್ಯನವರೂ ಕಾರಣ ಇರಬಹುದು, ಪರಮೇಶ್ವರ್‌ ಅವರೂ ಕಾರಣ ಇರಬಹುದು. ಪರಮೇಶ್ವರ್‌ ಅವರಿಗೆ ತಾವು ಮುಖ್ಯಮಂತ್ರಿಯೇ ಆಗಿರಬೇಕಿತ್ತು, ಅದು ಆಗಲಿಲ್ಲ; ಉಪಮುಖ್ಯಮಂತ್ರಿ ಯಾದರೂ ಆಗುವುದು ಬೇಡವೇ ಎಂಬ ಭಾವನೆ ಇದೆ. ಅದನ್ನೇನು ಅವರು ಬಚ್ಚಿಟ್ಟಿಲ್ಲ. ಯಾವ ಯಾವ ರೀತಿಯಲ್ಲಿ ವ್ಯಕ್ತ ಮಾಡಬೇಕೋ ಆಯಾ ರೀತಿಯಲ್ಲಿ ಅದನ್ನು ವ್ಯಕ್ತ ಮಾಡಿದ್ದಾರೆ.ಈಗಲೂ ಮಾಡುತ್ತಿದ್ದಾರೆ. ಸಂಪುಟ ಸೇರುವ ವರೆಗೆ ಮಾಡುತ್ತಲೇ ಇರಬಹುದು. ಸಿದ್ದರಾಮಯ್ಯ ಅವರಿಗೆ ಅದು ಸುತರಾಂ ಇಷ್ಟವಿಲ್ಲ. ಪರಮೇಶ್ವರ್ ಅವರನ್ನು ಮಂತ್ರಿಯಾಗಿ ಸಂಪುಟ ಸೇರಿಸಿಕೊಳ್ಳಲು ಅವರಿಗೇನೂ ಅಭ್ಯಂತರ ಇದ್ದಂತೆ ಕಾಣುವುದಿಲ್ಲ. ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯಾಗಿಯೇ ಸಂಪುಟಕ್ಕೆ ಸೇರಿಸಲು ಬಹಿರಂಗ ಕಸರತ್ತುಗಳು, ಬಲ ಪ್ರದರ್ಶನಗಳು ನಡೆದ ಹಾಗೆ ತೆರೆಮರೆಯ ಸಂಧಾನಗಳೂ ನಡೆದಿವೆ. ‘ಕೃಷ್ಣಸಂಧಾನ’ಗಳೂ (ಎಸ್.ಎಂ.ಕೃಷ್ಣ ಅಲ್ಲ!) ನಡೆದಿವೆ.ಆದರೆ, ಸಿದ್ದರಾಮಯ್ಯ ಅವರಿಗೆ, ಪರಮೇಶ್ವರ್‌ ಇನ್ನೊಂದು ಅಧಿಕಾರ ಕೇಂದ್ರ ಆಗುವುದು ಇಷ್ಟವಿಲ್ಲ. ಒಂದು ವೇಳೆ ಪರಮೇಶ್ವರ್ ಉಪಮುಖ್ಯಮಂತ್ರಿಯಾದರೆ, ಮೂಲ ಕಾಂಗ್ರೆಸ್ಸಿಗರೆಲ್ಲ ಅವರ ಸುತ್ತ ಸೇರಿಬಿಡಬಹುದು ಎಂಬುದು ಸಿದ್ದರಾಮಯ್ಯ ಅವರ ಅಳುಕು. ತಮ್ಮ ಷರತ್ತಿಗೆ ಪರಮೇಶ್ವರ್ ಒಪ್ಪುವವರೆಗೆ ಸಿದ್ದರಾಮಯ್ಯ ಪಟ್ಟು ಸಡಿಲಿಸುವಂತೆ ಕಾಣುವುದಿಲ್ಲ.ಸಂಪುಟ ವಿಸ್ತರಣೆ ಮಾಡದೇ ಇರುವುದರಿಂದ ಸಿದ್ದರಾಮಯ್ಯ ಅವರಿಗೇನೂ ನಷ್ಟವಿಲ್ಲ. ನಷ್ಟ ಆಗುವುದು ಹೊರಗೆ ಕಾಯುತ್ತ ನಿಂತವರಿಗೆ. ಪರಮೇಶ್ವರ್‌ ಜತೆಗೆ ಇನ್ನೂ ಮೂವರು ಸಂಪುಟ ಸೇರಬಹುದು. ವಿಸ್ತರಣೆ ತಡವಾದಷ್ಟೂ ಎಂಥ ಖಾತೆಯಾದರೂ ಸಾಕು ಸಂಪುಟ ಸೇರೋಣ ಎಂದು ವಿರಹ ವೇದನೆಯಿಂದ ಕಾಯುತ್ತ ಇರುವವರೂ ಪರಮೇಶ್ವರ್‌ ಅವರಿಗೇ ಶಾಪ ಹಾಕಬಹುದು!ಮೂಲ ಮತ್ತು ವಲಸೆ ಎಂಬುದು ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದ ಕೇಳಿ ಬರುತ್ತಿರುವ ಭೇದಭಾವ. ಅದನ್ನು ಮುಖ್ಯಮಂತ್ರಿಗಳು ಇದುವರೆಗೆ ಹೇಗೋ ನಿಭಾಯಿಸಿಕೊಂಡು ಬಂದಿದ್ದಾರೆ. ಈಗ ಅವರ ನಾಯಕತ್ವ ಪ್ರಶ್ನಾತೀತ. ಕೇಂದ್ರದಲ್ಲಿ ಹೈಕಮಾಂಡ್‌ ದುರ್ಬಲವಾಗಿದೆ. ಸಿದ್ದರಾಮಯ್ಯ ಅವರ ಬುಡವನ್ನು ಅಲ್ಲಾಡಿಸಲು ಅದಕ್ಕೆ ವ್ಯವಧಾನವೂ ಇಲ್ಲ, ಆಸಕ್ತಿಯೂ ಇದ್ದಂತೆ ಇಲ್ಲ. ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ ಸಮಾಧಾನದಿಂದ ಇದ್ದಾರೆ. ಅವರ ಸಮಾಧಾನಕ್ಕೆ ಪಕ್ಷದಲ್ಲಿ ಏನೇನೋ ವಿವರಣೆಗಳು ಸಿಗುತ್ತವೆ. ಅದನ್ನು ನಂಬುವುದು ಕಷ್ಟ. ಈಗಿನ ಕಾಲದಲ್ಲಿ ನಂಬದೇ ಇರುವುದು ಇನ್ನೂ ಕಷ್ಟ!ಆದರೆ, ಕೆಳಗೆ ಪಕ್ಷದಲ್ಲಿ ಅಸಮಾಧಾನ ಇಲ್ಲ ಎಂದು ಅಲ್ಲ. ಬೇಕಾದಷ್ಟು ಇದೆ. ಅದಕ್ಕೆ ದೊಡ್ಡ ಕಾರಣಗಳೂ ಇವೆ. ಸಣ್ಣ ಪುಟ್ಟ ಕಾರಣಗಳೂ ಇವೆ. ವಿ.ಎಸ್‌.ಉಗ್ರಪ್ಪ ಅವರನ್ನು ಪರಿಷತ್ತಿಗೆ ನಾಮಕರಣ ಮಾಡಿದ್ದು, ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ ಅವರನ್ನು ಗೃಹ ಸಚಿವರ ಕಚೇರಿಗೆ ತಗುಳು ಹಾಕಿದ್ದು, ಪಕ್ಷಕ್ಕೆ ದುಡಿದವರನ್ನು ಬಿಟ್ಟು ‘ಅನ್ಯ’ ಕಾರಣಗಳಿಗಾಗಿ ಕೆಲವರನ್ನು ನಿಗಮ, ಮಂಡಳಿಗಳಿಗೆ ನೇಮಕ ಮಾಡಿದ್ದು... ಹೀಗೆ ಅಸಮಾಧಾನದ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವೆಲ್ಲ ಸಣ್ಣಪುಟ್ಟ ಕಾರಣಗಳು ಎಂದು ತಳ್ಳಿ ಹಾಕಿಬಿಡಬಹುದು. ದೊಡ್ಡ ಕಾರಣ : ಪಕ್ಷ ಅಧಿಕಾರಕ್ಕೆ ಬರಲು ದುಡಿದ ಕಾರ್ಯಕರ್ತರನ್ನು ಯಾರೂ ಕ್ಯಾರೇ ಎಂದು ಕೇಳದೇ ಇರುವುದು.ಸಿದ್ದರಾಮಯ್ಯನವರಿಗೂ ಆ ಬಗ್ಗೆ ಕಾಳಜಿ ಇದ್ದಂತೆ ಇಲ್ಲ. ಪರಮೇಶ್ವರ್‌ ಅವರಿಗೆ ತಾವು ಸಂಪುಟ ಸೇರುವುದೇ ಸಮಸ್ಯೆ ಆಗಿರುವಾಗ ಅವರಿಗೆ ಕಾರ್ಯಕರ್ತರ ಯೋಚನೆಯೇ ಇದ್ದಂತೆ ಇಲ್ಲ. ಹಾಗೆ ನೋಡಿದರೆ ಪಕ್ಷಕ್ಕೆ ಸಿಕ್ಕ ಅಧಿಕಾರವನ್ನು ಶಾಸಕರು ಮತ್ತು ಕಾರ್ಯಕರ್ತರ ನಡುವೆ ಹೇಗೆ ಹಂಚಬೇಕು ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಯಬೇಕಿತ್ತು.ಒಂದೆರಡು ಬಾರಿ ಅವರು ಮಾತನಾಡಿದ್ದಾರೆ. ಆದರೆ, ಸಿದ್ದರಾಮಯ್ಯನವರಿಗೆ ತಮ್ಮ ಹುದ್ದೆ ಭದ್ರ ಮಾಡಿಕೊಳ್ಳಬೇಕಿರುವುದರಿಂದ ಅವರಿಗೆ ಶಾಸಕರನ್ನು ಸಮಾಧಾನ ಮಾಡಬೇಕಿದೆ. ಅಂದರೆ ನಿಗಮ, ಮಂಡಳಿಗಳಲ್ಲಿ ಅರ್ಧದಷ್ಟನ್ನಾದರೂ ಶಾಸಕರಿಗೆ ಕೊಡಲು ಅವರಿಗೆ ಇಷ್ಟ ಇದೆ. ಆದರೆ, ಹೈಕಮಾಂಡ್‌ನಲ್ಲಿ ಅದಕ್ಕೆ ಒಲವು ಇದ್ದಂತೆ ಇಲ್ಲ. ಶಾಸಕ ಆಗುವುದೂ ಒಂದು ಅಧಿಕಾರ, ಅವರಿಗೆ ಇನ್ನಷ್ಟು ಅಧಿಕಾರ ಬೇಡ ಎಂದು ಹೈಕಮಾಂಡ್‌ ಯೋಚನೆ ಮಾಡಿದಂತೆ ಇದೆ.ಕಾರ್ಯಕರ್ತರಿಗೆ ಅಧಿಕಾರ ಕೊಟ್ಟರೆ ಅವರು ಪಕ್ಷಕ್ಕಾಗಿ ದುಡಿಯುತ್ತಾರೆ ಎಂಬುದೂ ಹೈಕಮಾಂಡ್‌ ಅನಿಸಿಕೆ ಇದ್ದಂತೆ ಇದೆ. ಸಿದ್ದರಾಮಯ್ಯನವರು ಪಕ್ಷದ ಶಾಸಕರ ಪರವಾಗಿ ನಿಂತಿರುವಂತೆ ಪರಮೇಶ್ವರ್‌ ಅವರು ಹಿರಿಯ ಕಾರ್ಯಕರ್ತರ ಪರವಾಗಿ ನಿಂತಿದ್ದರೆ ಏನೋ ಒಂದಿಷ್ಟು ರಾಜಿ ಸಂಧಾನ ಆಗಿ ಕೆಲವರಿಗಾದರೂ ಅಧಿಕಾರ ಸಿಗುತ್ತಿತ್ತು.ಯಾರೇ ಆಗಲಿ ನಾಯಕರಾಗಿ ರೂಪುಗೊಳ್ಳುವುದು, ಜನಪ್ರಿಯವಾಗುವುದು ತನ್ನ ಪರವಾಗಿಯೇ ಮಾತನಾಡುತ್ತ ಇದ್ದಾಗ ಅಲ್ಲ; ಇನ್ನೊಬ್ಬರ ಪರವಾಗಿ ಮಾತನಾಡುತ್ತ ಇದ್ದಾಗ. ಪರಮೇಶ್ವರ್‌ ಅವರಿಗೆ ಇದು ಗೊತ್ತಿದೆಯೋ ಇಲ್ಲವೋ, ಅವರು ಇದುವರೆಗೆ ಯಾರ ಪರವಾಗಿಯೂ ಧ್ವನಿ ಎತ್ತಿಲ್ಲ, ಅಥವಾ ಎತ್ತಿದ್ದು ಕೇಳಿಸಿಲ್ಲ.ಹೀಗಾಗಿ ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್‌ ಅವರ ‘ಶಕ್ತಿ’ಯ ಅಂದಾಜು ಚೆನ್ನಾಗಿಯೇ ಸಿಕ್ಕಂತೆ ಕಾಣುತ್ತದೆ. ತಮ್ಮ ಸಂಪುಟದ ಕೆಲವರು ಪರಮೇಶ್ವರ್ ಪರವಾಗಿ ಇದ್ದರೂ, ಒಬ್ಬ ಸಚಿವರ ಮನೆಯಲ್ಲಿ ಅವರೆಲ್ಲ ಗುಟ್ಟಾಗಿ ಆಗೀಗ ಭೇಟಿ ಮಾಡುತ್ತಿದ್ದರೂ ಅದಕ್ಕಿಂತ ಹೆಚ್ಚಿಗೆ ಏನೂ ಮಾಡುವುದಿಲ್ಲ ಎಂಬುದೂ ಸಿದ್ದರಾಮಯ್ಯ ಅವರಿಗೆ ಗೊತ್ತಾಗಿದೆ.

ಇದು ಜನತಾದಳದ್ದೋ, ಬಿಜೆಪಿಯದ್ದೋ ಸರ್ಕಾರ  ಆಗಿದ್ದರೆ ಈಗಾಗಲೇ ಹಾದಿರಂಪ, ಬೀದಿರಂಪ ಆಗಿ ಬಿಡುತ್ತಿತ್ತು.ಪ್ರತಿನಿತ್ಯ ‘ಭಿನ್ನಮತೀಯರ’ ಸಭೆಗಳು ನಡೆಯುತ್ತಿದ್ದುವು, ಅಥವಾ ‘ನಡೆದುವು’ ಎಂದು ಮಾಧ್ಯಮದಲ್ಲಿ ಬಿಂಬಿಸುವ ಪ್ರಯತ್ನವಾದರೂ ಆಗುತ್ತಿತ್ತು. ಕಾಂಗ್ರೆಸ್‌ ಹೈಕಮಾಂಡ್‌ ಎಷ್ಟೇ ದುರ್ಬಲವಾಗಿದ್ದರೂ ಅದು ಇಂಥ ‘ಭಿನ್ನಮತೀಯ’ ಚಟುವಟಿಕೆಗಳನ್ನು ಸಹಿಸುವುದಿಲ್ಲ. ವಿಪರ್ಯಾಸ ಎಂದರೆ ಈಗ ‘ಭಿನ್ನಮತೀಯ’ ಚಟುವಟಿಕೆ ಮಾಡಬೇಕಾದವರು ಮೂಲ ಕಾಂಗ್ರೆಸ್ಸಿಗರು!ಅದೇ ಜಾಗದಲ್ಲಿ ವಲಸೆ ಕಾಂಗ್ರೆಸ್ಸಿಗರು ಇದ್ದಿದ್ದರೆ ಅವರು ಸುಮ್ಮನೆ ಇರುತ್ತಿದ್ದರೋ ಇಲ್ಲವೋ ಹೇಳುವುದು ಕಷ್ಟ. ಮೂಲ ಕಾಂಗ್ರೆಸ್ಸಿಗರ ಕರ್ಮ ಎಂದರೆ ಅವರು ಹೈಕಮಾಂಡ್‌ನ  ಸೂಚನೆಗಳನ್ನು ಕಾಯುತ್ತ ಕೂರಬೇಕು : ಯಾವುದೋ ಕಾರಣಕ್ಕೆ ‘ಸಿದ್ದರಾಮಯ್ಯ ಸಾಕು’ ಎಂದು ಅದಕ್ಕೆ ಅನಿಸಬಹುದು ಎಂದು!ಆಗಲೂ ಸಿದ್ದರಾಮಯ್ಯ ಅವರಿಗೆ ನಷ್ಟವೇನೂ ಆಗುವುದಿಲ್ಲ. ಅವರು ಮುಖ್ಯಮಂತ್ರಿ ಆಗಬೇಕಿತ್ತು. ಆಗಿದ್ದಾರೆ. ಇದುವರೆಗೆ ಅವರಿಗೆ ಹೈಕಮಾಂಡ್‌ನಿಂದ ಯಾವುದೇ ಕಿರುಕುಳ ಆಗಿಲ್ಲ. ಆಗುವವರೆಗೆ ತಮಗೆ  ಬುದ್ಧಿ ತೋಚಿದಂತೆ ಅಧಿಕಾರ ಮಾಡಿಕೊಂಡು ಇರುತ್ತಾರೆ. ಎಲ್ಲರೂ ಒಂದು ದಿನ ಅಧಿಕಾರ ಬಿಡಲೇ ಬೇಕು. ಹಾಗೆ ಅವರೂ ಯಾವಾಗಲೋ ಅಧಿಕಾರ ಬಿಟ್ಟುಕೊಟ್ಟರೆ ಆಗಲೂ ಅವರು ಮಾಜಿ ಮುಖ್ಯಮಂತ್ರಿಯೇ ಆಗಿರುತ್ತಾರೆ!ಅಂದರೆ, ತಾವು ಮುಖ್ಯಮಂತ್ರಿ ಆಗಿರುವವರೆಗೆ ತಮ್ಮ ಅಧಿಕಾರಕ್ಕೆ ಸವಾಲು ಒಡ್ಡುವವರು ಯಾರೂ ಇರಬಾರದು ಎಂದು ಅವರು ಗಟ್ಟಿಯಾಗಿ ನಿರ್ಧಾರ ಮಾಡಿದಂತೆ ಕಾಣುತ್ತದೆ. ಪರಮೇಶ್ವರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅದನ್ನೇ ಅವರು ಚಲಾಯಿಸುತ್ತ ಇರುವಂತೆ ಕಾಣುತ್ತದೆ.ಪರಮೇಶ್ವರ್‌ ಅವರು ತಾವು, ‘ಉಪ ಮುಖ್ಯಮಂತ್ರಿಯಾದರೂ ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಸವಾಲು ಹಾಕುವುದಿಲ್ಲ, ತಮಗೆ ಅಂಥ ಮಹತ್ವಾಕಾಂಕ್ಷೆಯೂ ಇಲ್ಲ’ ಎಂದು  ‘ಸಂಧಾನಕಾರರ’ ಮೂಲಕ ಹೇಳಿಸಿದ್ದರೂ ಅದು ಸಿದ್ದರಾಮಯ್ಯ ಅವರಿಗೆ ಮನವರಿಕೆ ಆಗಿಲ್ಲ. ರಾಜಕಾರಣ ಎಷ್ಟು ಮಸಲತ್ತಿನದು ಎಂದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ್ದೇನೂ ಅಲ್ಲವಲ್ಲ!ಈ ತಿಂಗಳು ವಿಧಾನಸಭೆಗೆ ನಡೆಯುತ್ತಿರುವ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಲಿ ಎಂದು ಬಯಸುವವರು ಕಾಂಗ್ರೆಸ್ಸಿನಲ್ಲಿಯೇ ಬಹಳಷ್ಟು ಮಂದಿ ಇದ್ದಾರೆ. ಹಾಗಾದರೂ ಸಿದ್ದರಾಮಯ್ಯ ಅವರ ಪ್ರಾಬಲ್ಯ ಕೊಂಚ ಕಡಿಮೆ ಆಗಲಿ ಎಂಬುದು ಅವರ ‘ಹಾರೈಕೆ’ ಇದ್ದಂತೆ ಇದೆ!ಆದರೆ, ಆತ್ಮಹತ್ಯೆಯ ದಾರಿಯಲ್ಲಿ ಇರುವ ಜೆ.ಡಿ (ಎಸ್‌) ಸಿದ್ದರಾಮಯ್ಯ ಅವರ ನೆರವಿಗೆ ಬಂದು ನಿಂತಿದೆ. ವಿಧಾನಪರಿಷತ್ತಿನಲ್ಲಿ ಬಿಜೆಪಿ ಜತೆ ಕೈ ಜೋಡಿಸಿ ಉಪಸಭಾಪತಿ ಸ್ಥಾನ ಗಿಟ್ಟಿಸಿಕೊಳ್ಳುವ ಆ ಪಕ್ಷ ಶಿಕಾರಿಪುರದಲ್ಲಿ ‘ಕೋಮುವಾದಿ’ ಬಿಜೆಪಿ ವಿರುದ್ಧ ‘ಜಾತ್ಯತೀತ’ ಕಾಂಗ್ರೆಸ್‌ ಪಕ್ಷದ ಜತೆ ಕೈ ಜೋಡಿಸಿದೆ! ಜನರು ಇಷ್ಟು ಮೂರ್ಖರು ಎಂದು ಯಾವ ಪಕ್ಷವೂ ತಿಳಿದುಕೊಳ್ಳಬಾರದು.ಜೆ.ಡಿ (ಎಸ್‌) ವಿಧಾನ ಮಂಡಳದಲ್ಲಿ ಕಾಂಗ್ರೆಸ್‌ ವಿರುದ್ಧ ಶಸ್ತ್ರಸನ್ಯಾಸ ಮಾಡಿತ್ತು. ಈಗ ಚುನಾವಣೆ ರಂಗದಲ್ಲಿಯೂ ಅದನ್ನೇ ಮಾಡಿದೆ. ಇಡೀ ದೇಶದಲ್ಲಿ ‘ತೃತೀಯ ಶಕ್ತಿ’ಯನ್ನು ಕ್ರೋಡೀಕರಿಸಲು ಹೊರಟಿದ್ದ ಒಂದು ರಾಜಕೀಯ ಪಕ್ಷ ನಿಧಾನವಾಗಿ ವಿಸರ್ಜನೆಯಾಗಿ ಬಿಡಬಹುದು ಅಥವಾ ಬೇರೆ ಯಾರ ಒಡಲಲ್ಲಿಯೋ ವಿಲೀನ ಆಗಿಬಿಡಬಹುದು ಎಂಬ ಭಯ ಆ ಪಕ್ಷದವರನ್ನೇ ಕಾಡುತ್ತಿದೆ. ಜೆ.ಡಿ (ಎಸ್‌) ಅನ್ನು ಆಪೋಶನ ತೆಗೆದುಕೊಳ್ಳಲು ಅತ್ತ ಕಾಂಗ್ರೆಸ್‌ ಇತ್ತ ಬಿಜೆಪಿ ಎರಡೂ ಖೆಡ್ಡಾ ತೋಡಿ ಸಿದ್ಧವಿರುವಂತೆ ಕಾಣುತ್ತದೆ.ಸಿದ್ದರಾಮಯ್ಯ ಏನು ಎಣಿಕೆ ಹಾಕಿದ್ದಾರೋ ಏನೋ? ಅವರೇನಾದರೂ ಜೆ.ಡಿ (ಎಸ್‌) ಅನ್ನು ಬಲಿ ಹಾಕಿದರೆ ಅಥವಾ ಈಗ ‘ನಿಭಾಯಿಸಿದಂತೆ’ ಮುಂದೆಯೂ ‘ನಿಭಾಯಿಸಿದರೆ’ ಮತ್ತು ತೀರಾ ಅನಿರೀಕ್ಷಿತವಾದುದು ಏನಾದರೂ ಘಟಿಸದೇ ಇದ್ದರೆ ಅವರನ್ನು ನಿಯಂತ್ರಿಸುವುದು ಕಷ್ಟ ಆಗಬಹುದು.  ಆಗ, ಹೊಸ್ತಿಲ ಹೊರಗೆ ಕೆಲವರು ಕಾಯುತ್ತಲೇ ಇರಬೇಕಾಗಬಹುದು; ಒಳಗೆ ಬರಲೇಬೇಕು ಎನ್ನುವುದಾದರೆ  ರಾಜಿಗೆ ಸಿದ್ಧವಾಗಬೇಕಾಗಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry