ಗುರುವಾರ, 14–4–1994

ಭಾನುವಾರ, ಏಪ್ರಿಲ್ 21, 2019
26 °C
1994

ಗುರುವಾರ, 14–4–1994

Published:
Updated:

ಗ್ಯಾಟ್– ಅಮೆರಿಕ ಷರತ್ತಿಗೆ ಭಾರತದ ತೀವ್ರ ವಿರೋಧ
ಮರಕೇಶ್, ಏ. 13 (ಪಿಟಿಐ)– ವ್ಯಾಪಾರ ವ್ಯವಸ್ಥೆಯಲ್ಲಿ ಕಾರ್ಮಿಕರ ಗುಣಮಟ್ಟ ಇತ್ಯಾದಿ ಸಾಮಾಜಿಕ ಷರತ್ತುಗಳ ನಿರ್ಬಂಧವನ್ನು ಒಡ್ಡುವ ಅಮೆರಿಕ ನೇತೃತ್ವದ ಔದ್ಯಮಿಕ ರಾಷ್ಟ್ರಗಳ ಪ್ರಯತ್ನಗಳನ್ನು ಭಾರತವು ಇಂದು ಖಂಡತುಂಡವಾಗಿ ವಿರೋಧಿಸಿದೆ. ಕೃಷಿ ಕ್ಷೇತ್ರದಲ್ಲಿ ಗ್ಯಾಟ್‌ ಒಪ್ಪಂದವನ್ನು ಇನ್ನಷ್ಟು ನಾಜೂಕುಗೊಳಿಸಬೇಕಾದ ಅಗತ್ಯವನ್ನು ಭಾರತವು ಒತ್ತಿ ಹೇಳಿದೆ.

‌ಕೃಷಿಕರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಈ ಹಿನ್ನಲೆಯಲ್ಲಿ ಗ್ಯಾಟ್ ಒಡಂಬಡಿಕೆಯ ಕೃಷಿ ಸೂತ್ರಗಳನ್ನು ಪರಿಷ್ಕರಿಸಬೇಕಾಗಿದೆ ಎಂದು ವಾಣಿಜ್ಯ ಸಚಿವ ಪ್ರಣವ್ ಮುಖರ್ಜಿ ಅವರು ಇಂದು ಆಗ್ರಹಪಡಿಸಿದರು.

ಗ್ಯಾಟ್ ಒಪ್ಪಂದಕ್ಕೆ ಅಂಕಿತ ನೀಡಲಿರುವ ರಾಷ್ಟ್ರಗಳ ವಾಣಿಜ್ಯ ಸಚಿವರ ನಾಲ್ಕು ದಿನಗಳ ಸಮಾವೇಶದಲ್ಲಿ ಮಾತನಾಡಿದ ಪ್ರಣವ್ ಮುಖರ್ಜಿ ಅವರು, ‘ನಮ್ಮ ದೇಶದ ಜೀವನಾಡಿಯಾಗಿರುವ ಕೃಷಿಕರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ಜನರಿಗೆ ಆಹಾರ ಭದ್ರತೆಯ ರಕ್ಷಣೆ ಒದಗಿಸುವುದು ನಮ್ಮ ಉದ್ದೇಶವಾಗಿದೆ’ ಎಂಬುದನ್ನು ಸ್ಪಷ್ಟಪಡಿಸಿದರು.

‘ಅಣ್ವಸ್ತ್ರ ನಿರ್ಬಂಧಕ್ಕೆ ಭಾರತ ಒಪ್ಪದು
ನವದೆಹಲಿ, ಏ. 13 (ಯುಎನ್‌ಐ)– ಪಾಕಿಸ್ತಾನವು ಪರಮಾಣು ಅಸ್ತ್ರವನ್ನು ಹೊಂದಿರುವ ಹಿನ್ನೆಲೆಯಲ್ಲಿ ಭಾರತದ ಮೇಲೆ ಈ ವಿಷಯದಲ್ಲಿ ನಿರ್ಬಂಧ ಹೇರುವುದು ಸ್ವೀಕಾರಾರ್ಹವಲ್ಲ ಪ್ರಾಯೋಗಿಕವೂ ಅಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಹೇಳಿದ್ದಾರೆ.

ಸೇನಾ ಕಮಾಂಡರ್‌ಗಳ ದ್ವೈವಾರ್ಷಿಕ ಸಮ್ಮೇಳನವನ್ನು ಇಂದು ಇಲ್ಲಿ ಉದ್ಘಾಟಿಸಿ ಮಾತನಾಡಿದ ಪ್ರಧಾನಿಯವರು, ಪರಮಾಣು ಸಾಮರ್ಥ್ಯವನ್ನು ಯಾವಾಗಲೂ ಶಾಂತಿಗಾಗಿ ಬಳಸಬೇಕೆಂದು ಭಾರತವು ಪ್ರತಿಪಾದಿಸುತ್ತಾ ಬಂದಿದೆ. ಅಣ್ವಸ್ತ್ರ ನಿಷೇಧವು ಕೂಡಾ ನಿರ್ದಿಷ್ಟ ಕಾಲಮಿತಿಯಲ್ಲಿ ಜಾಗತಿಕವಾಗಿ, ಸಮಗ್ರವಾಗಿ ಹಾಗೂ ನಿಷ್ಪಕ್ಷಪಾತವಾಗಿರಬೇಕು ಎಂದು ಬಯಸುತ್ತದೆ ಎಂದರು.

ಕಾಶ್ಮೀರಕ್ಕೆ ರೂ. 200 ಕೋಟಿ ಯೋಜನೆ
ನವದೆಹಲಿ, ಏ. 13 (ಪಿಟಿಐ)– ಭಯೋತ್ಪಾದಕರ ಹಾವಳಿಗೊಳಗಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಇತ್ತೀಚೆಗೆ ಶ್ರೀನಗರಕ್ಕೆ ಭೇಟಿ ನೀಡಿದ ಉನ್ನತ ಮಟ್ಟದ ಅಧಿಕಾರಿಗಳ ತಂಡವು ಅಂಗೀಕಾರ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !