ಶನಿವಾರ, 23–4–1994

ಸೋಮವಾರ, ಮೇ 20, 2019
30 °C
ಶನಿವಾರ

ಶನಿವಾರ, 23–4–1994

Published:
Updated:

ಛಬಿಲ್‌ದಾಸ್ ಗುಜರಾತ್ ಮುಖ್ಯಮಂತ್ರಿ

ಗಾಂಧಿನಗರ, ಏ. 22 (ಪಿಟಿಐ)– ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಛಬಿಲ್‌ದಾಸ್ ಮೆಹ್ತಾ ನೇತೃತ್ವದ 39 ಸದಸ್ಯರ ಸಚಿವ ಸಂಪುಟ ಇಂದು ಸಂಜೆ ಇಲ್ಲಿನ ರಾಜಭವನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿತು.

ಸಿ.ಡಿ. ಪಟೇಲ್ ಮತ್ತು ನರಹರಿ ಅಮಿನ್ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಚಿಮಣ್‌ಬಾಯಿ ಪಟೇಲ್ ಅವರ ಸಂಪುಟದಲ್ಲಿದ್ದ ಎಲ್ಲ ಸಚಿವರುಗಳನ್ನೂ ನೂತನ ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ. ನಾಲ್ಕು ಕ್ಯಾಬಿನೆಟ್ ಸಚಿವರನ್ನು ಮತ್ತು ಎಂಟು ಮಂದಿ ರಾಜ್ಯ ಸಚಿವರುಗಳನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ತುಳು ಅಕಾಡೆಮಿ ಅಧ್ಯಕ್ಷರಾಗಿ ವಿವೇಕ ರೈ

ಮಂಗಳೂರು, ಏ. 22– ನೂತನವಾಗಿ ಸ್ಥಾಪಿಸಲಾಗಿರುವ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ಖ್ಯಾತ ಜಾನಪದ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅವರನ್ನು ಸರ್ಕಾರ ನೇಮಿಸಿದೆ.

ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರು ವಿಶ್ವ ತುಳು ಸಮ್ಮೇಳನದಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ಪ್ರಥಮ ತುಳು ಅಕಾಡೆಮಿಯು 12 ಜನ ಸದಸ್ಯರನ್ನು ಒಳಗೊಂಡಿದ್ದು, ಮಂಗಳೂರಿನಿಂದಲೇ ಕಾರ್ಯ ನಿರ್ವಹಿಸಲಿದೆ. ತುಳು ಅಕಾಡೆಮಿಗೆ ಸರ್ಕಾರ ಆರಂಭದ ವರ್ಷದಲ್ಲಿ 10 ಲಕ್ಷ ರೂಗಳನ್ನು ಬಿಡುಗಡೆ ಮಾಡಲಿದೆ.

ಕೋಲಾರ ಗಣಿ ಪುನಶ್ಚೇತನಕ್ಕೆ ಸಲಹೆ

ನವದೆಹಲಿ, ಏ. 22– ಕೋಲಾರ ಚಿನ್ನದ ಗಣಿಯು ತೀವ್ರ ನಷ್ಟ ಅನುಭವಿಸುತ್ತಿರುವುದಕ್ಕೆ ಗಣಿಯಿಂದ ಉತ್ಪನ್ನವಾಗುವ ಚಿನ್ನದ ನಿರಂತರ ಕಳ್ಳತನ, ಸೋರಿಕೆ, ಓಬಿರಾಯನ ಕಾಲದ ತಂತ್ರಜ್ಞಾನ ಮತ್ತು ನಿರುತ್ಸಾಹದಿಂದ ಕೂಡಿರುವ ಆಡಳಿತವರ್ಗದ ಮಂದಗತಿಯ ಧೋರಣೆಯೇ ಕಾರಣ ಎಂದು ಭಾರತ ಚಿನ್ನದ ಗಣಿ ನಿಯಮಿತದ ಕಾರ್ಯನಿರ್ವಹಣೆ ಕುರಿತು ಅಧ್ಯಯನ ಮಾಡಿರುವ ಸಂಸದೀಯ ಸ್ಥಾಯಿ ಸಮಿತಿಯ ವರದಿಯಲ್ಲಿ ಆಕ್ಷೇಪಿಸಲಾಗಿದೆ.

ನಲವತ್ಮೂರು ಮಂದಿ ಸದಸ್ಯರುಳ್ಳ ಸಮಿತಿಯ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದ ಅದರ ಅಧ್ಯಕ್ಷ ಎಂ. ಹನುಮಂತರಾವ್ ಅವರು ಮೇಲಿನ ಈ ಕಾರಣಗಳಿಗಾಗಿ ತೀರಾ ಹಳೆಯದಾದ ಈ ಗಣಿಯನ್ನು  ಮುಚ್ಚುವ ಅಗತ್ಯ ಕಂಡುಬರುವುದಿಲ್ಲ. ಬದಲಾಗಿ ಅದನ್ನು ಪುನಶ್ಚೇತನಗೊಳಿಸಲು ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !