ಶುಕ್ರವಾರ, 13–5–1994

ಶನಿವಾರ, ಮೇ 25, 2019
22 °C
ಶುಕ್ರವಾರ

ಶುಕ್ರವಾರ, 13–5–1994

Published:
Updated:

ಕ್ಷಿಪಣಿ ಯೋಜನೆಗೆ ರಾಜಿ ಇಲ್ಲ

ನವದೆಹಲಿ, ಮೇ 12 (ಯುಎನ್‌ಐ, ಪಿಟಿಐ)– ಪ್ರತಿಷ್ಠಿತ ‘ಪೃಥ್ವಿ’ ಕ್ಷಿಪಣಿ ಅಭಿವೃದ್ಧಿ ಮತ್ತು ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದೇಶದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ತಮ್ಮ ಅಮೆರಿಕ ಭೇಟಿ ಕಾಲಕ್ಕೆ ಈ ವಿಚಾರವಾಗಿ ಅಧ್ಯಕ್ಷ ಕ್ಲಿಂಟನ್ ಆಡಳಿತದ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ರಾಜ್ಯಸಭೆಗೆ ಭರವಸೆ ನೀಡಿದರು.

ನಾನು ವಿದೇಶ ಪ್ರವಾಸದಲ್ಲಿ ಇರುವಾಗ ಕ್ಷಿಪಣಿಯೊಂದರ ಪರೀಕ್ಷೆ ನಡೆದು ಮುಜುಗರದ ಸನ್ನಿವೇಶ ಏರ್ಪಡಬಾರದು ಎಂಬ ದೃಷ್ಟಿಯಿಂದ ‘ಪೃಥ್ವಿ’ಯ ಅಂತಿಮ ಹಂತದ ಪ್ರಯೋಗವನ್ನು ಮುಂದೂಡಲಾಗಿದೆ. ದೇಶವು ತನ್ನ ಕ್ಷಿಪಣಿ ಕಾರ್ಯಕ್ರಮದಿಂದ ಹಿಂದೆ ಸರಿಯದು ಎಂದು ರಾವ್ ಸದಸ್ಯರ ಟೀಕೆಗೆ ಸ್ಪಷ್ಟನೆ ನೀಡಿದರು.

ಪೃಥ್ವಿ ಕ್ಷಿಪಣಿಯ ಪರೀಕ್ಷಾ ಹಂತ ಕೊನೆಯ ಘಟ್ಟದಲ್ಲಿ ಇದೆ. ಅಮೆರಿಕ ಅಥವಾ ಇನ್ನಾವುದೇ ದೇಶದ ಒತ್ತಡಕ್ಕೆ ಮಣಿದು ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ‘ಪೃಥ್ವಿ’ ಕ್ಷಿಪಣಿ ಅಂತಿಮ ಹಂತದ ಪ‍ರೀಕ್ಷೆ ಜುಲೈ ತಿಂಗಳಲ್ಲಿ ಪೂರ್ಣಗೊಳ್ಳಬೇಕು ಎಂಬ ಮೂಲ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಧಾನಿ ಹೇಳಿದರು.

 ಶೇಷನ್ ಎಚ್ಚರಿಕೆ

ಮದ್ರಾಸ್, ಮೇ 12 (ಯುಎನ್‌ಐ)– ಮತದಾನದ ಸಮಯದಲ್ಲಿ ಮತಗಟ್ಟೆಗಳಿಗೆ ಸಚಿವರು ಅನಧಿಕೃತವಾಗಿ ಪ್ರವೇಶಿಸಿದರೆ ಚುನಾವಣೆ ರದ್ದಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರಾದ ಟಿ.ಎನ್. ಶೇಷನ್ ಎಚ್ಚರಿಕೆ ನೀಡಿದ್ದಾರೆ.

ಮೇ 26ರಂದು ಮೈಲಾಪುರ ವಿಧಾನಸಭೆ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ನಡೆದಿರುವ ವ್ಯವಸ್ಥೆಗಳ ಬಗ್ಗೆ ರಾಜಕೀಯ ಪಕ್ಷಗಳ ಜೊತೆ ಸಮಾಲೋಚಿಸಿದ ಅವರು ಅಭ್ಯರ್ಥಿಗಳಾಗಿರುವ ಇಲ್ಲವೇ ಅಭ್ಯರ್ಥಿಗಳ ಮತಗಟ್ಟೆ ಏಜೆಂಟರಾಗಿರುವ ಸಚಿವರು ಮಾತ್ರ ಮತಗಟ್ಟೆಗಳನ್ನು ಪ್ರವೇಶಿಸಬಹುದು ಎಂದು ಹೇಳಿದರು.

ವಿಸ್ನರ್ ಭಾರತಕ್ಕೆ ಅಮೆರಿಕ ರಾಯಭಾರಿ

ವಾಷಿಂಗ್‌ಟನ್, ಮೇ 12 (ಪಿಟಿಐ)– ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರ ಪ್ರಥಮ ಅಮೆರಿಕಾ ಭೇಟಿಗೆ ನಾಲ್ಕು ದಿನಗಳು ಮಾತ್ರ ಉಳಿದಿದ್ದು, ಫ್ರಾಂಕ್ ಜಿ. ವಿಸ್ನರ್ ಅವರನ್ನು ಭಾರತದಲ್ಲಿ ಅಮೆರಿಕದ ಹೊಸ ರಾಯಭಾರಿಯನ್ನಾಗಿ ಅಧ್ಯಕ್ಷ ಬಿಲ್ ಕ್ಲಿಂಟನ್ ನೇಮಿಸಿದ್ದಾರೆಂದು ಶ್ವೇತಭವನ ಇಂದು ಪ್ರಕಟಿಸಿದೆ.

ಅನುಭವ ಮತ್ತು ರಾಜತಾಂತ್ರಿಕ ನೈಪುಣ್ಯ ಹೊಂದಿರುವ ಫ್ರಾಂಕ್ ವಿಸ್ನರ್ ಈ ಹುದ್ದೆಗೆ ಆಯ್ಕೆಯಾಗಿರುವುದು ತಮಗೆ ಸಂತೋಷವನ್ನುಂಟು ಮಾಡಿದೆ ಎಂದು ಅಧ್ಯಕ್ಷ ಕ್ಲಿಂಟನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !