ಭಾನುವಾರ, ಆಗಸ್ಟ್ 25, 2019
23 °C
1994

ಗುರುವಾರ, 11–8–1994

Published:
Updated:

ಈದ್ಗಾ ಮೈದಾನಕ್ಕೆ ಬಿಗಿ ಬಂದೋಬಸ್ತ್

ಬೆಂಗಳೂರು, ಆ. 10– ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಆಗಸ್ಟ್ 15 ರಂದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಧ್ವಜಾರೋಹಣ ಮಾಡುವುದನ್ನು ಶತಾಯ ಗತಾಯ ತಡೆಯಲು ಪೊಲೀಸರು ನಿರ್ಧರಿಸಿ ಭಾರಿ ಬಂದೋಬಸ್ತ್ ಮಾಡಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂದು ಸುಮಾರು ಎರಡೂವರೆ ಲಕ್ಷ ಜನ ಹುಬ್ಬಳ್ಳಿಗೆ ತೆರಳುವ  ಅಂದಾಜಿದೆ. ಮುಂಜಾಗ್ರತಾ ಕ್ರಮವಾಗಿ ಇದೇ 14ರ ಸಂಜೆ 6 ರಿಂದ 15ರ ಮಧ್ಯರಾತ್ರಿಯವರೆಗೆ ಕರ್ಫ್ಯೂ ಜಾರಿಗೊಳಿಸಲಾಗುವುದು. ಧ್ವಜಾರೋಹಣ ಯತ್ನವನ್ನು  ವಿಫಲಗೊಳಿಸಲು ಹಾಗೂ ಈ ಸಂಬಂಧ ಯಾವುದೇ ಸವಾಲನ್ನು ಎದುರಿಸಲು ಪೊಲೀಸರು ಸನ್ನದ್ಧರಾಗಿದ್ದಾರೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎಸ್.ಸಿ. ಬರ್ಮನ್ ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯಾಕೂಬ್ ಟಿವಿ ಸಂದರ್ಶನ– ಕೋರ್ಟ್ ಆಕ್ಷೇಪ

ಮುಂಬೈ, ಆ. 10 (ಯುಎನ್‌ಐ)– ದೂರದರ್ಶನದಲ್ಲಿ ಸಂದರ್ಶನ ನೀಡಲು ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಯಾಕೂಬ್‌ ಮೆಮನ್‌ಗೆ  ಹೇಗೆ ಅವಕಾಶ ಕೊಡಲಾಯಿತು ಎಂಬ ಬಗ್ಗೆ ವಿವರಣೆ ನೀಡುವಂತೆ ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಜೆ.ಎನ್. ಪಟೇಲ್ ಇಂದು ಸಿಬಿಐಗೆ ಆದೇಶಿಸಿದರು.

ಸಂದರ್ಶನ ನಿನ್ನೆ ರಾತ್ರಿ 9ಕ್ಕೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ತಮ್ಮ ಆದೇಶಕ್ಕೆ ನಾಳೆ ಉತ್ತರಿಸುವಂತೆ ನ್ಯಾಯಮೂರ್ತಿಗಳು ಸಿಬಿಐ ವಕೀಲ ಸಿ.ಎಸ್. ಶರ್ಮಾ ಅವರಿಗೆ ಸೂಚಿಸಿದರು.

ಕ್ಷಮಿಸಿ! ಮದ್ಯ ಇಲ್ಲ

ಪನಜಿ, ಆ. 10 (ಯುಎನ್‌ಐ)– ಗೋವಾ ರಾಜ್ಯಪಾಲರ ನಿವಾಸ ರಾಜಭವನದಲ್ಲಿ ಇನ್ನು ಮುಂದೆ ಅತಿಥಿಗಳಿಗೆ ಮದ್ಯ ಪೂರೈಕೆ ಇಲ್ಲ. ಮದ್ಯ ಸೇವನೆ ಶಾಪಕ್ಕೆ ಆಹ್ವಾನ ಎಂಬುದು ಹೊಸ ರಾಜ್ಯಪಾಲ ಜಿ. ರಾಮಾನುಜಂ ಅವರ ಖಚಿತ ನಂಬಿಕೆ. ಆದ್ದರಿಂದ ಈ ನಿರ್ಧಾರ. ರಾಮಾನುಜಂ ಯುಎನ್ಐ ಜತೆ ಮಾತನಾಡುತ್ತಾ, ಜೂಜು, ಮದ್ಯ ಸೇವನೆಯಿಂದ ಸಿಗುವುದು ಬರೀ ಯಾತನೆ, ವಿನಾಶ ಎಂದರು.

Post Comments (+)