ವಿ.ಪಿ. ಸಿಂಗ್ ದಳ ಅಧ್ಯಕ್ಷ; ಬೊಮ್ಮಾಯಿ ರಾಜಿನಾಮೆ

7

ವಿ.ಪಿ. ಸಿಂಗ್ ದಳ ಅಧ್ಯಕ್ಷ; ಬೊಮ್ಮಾಯಿ ರಾಜಿನಾಮೆ

Published:
Updated:

ವಿ.ಪಿ. ಸಿಂಗ್ ದಳ ಅಧ್ಯಕ್ಷ; ಬೊಮ್ಮಾಯಿ ರಾಜಿನಾಮೆ

ನವದೆಹಲಿ, ಫೆ. 14– ಇಂದು ರಾಜಧಾನಿಯಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಜನತಾ ದಳದ ನೂತನ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರು ಆಯ್ಕೆಯಾದರು. ಇದಕ್ಕೆ ಮುನ್ನ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಪಕ್ಷದ ಅಧ್ಯಕ್ಷತೆಗೆ ಎಸ್.ಆರ್. ಬೊಮ್ಮಾಯಿ ಅವರು ನೀಡಿದ ರಾಜಿನಾಮೆಯನ್ನು ಅಂಗೀಕರಿಸಿತು.

ಬೆಳಿಗ್ಗೆ ಪಕ್ಷದ ಕಾರ್ಯಕಾರಿಣಿ ಸಭೆಗೆ ಮುನ್ನ ಮಾಜಿ ವಿದೇಶಾಂಗ ಸಚಿವ ಐ.ಕೆ. ಗುಜ್ರಾಲ್ ಅವರ ನಿವಾಸದಲ್ಲಿ ನಡೆದ ರಾಜಕೀಯ ವ್ಯವಹಾರ ಸನಿತಿ ಸಭೆಯಲ್ಲಿ ಬೊಮ್ಮಾಯಿ ಅವರು ಪಕ್ಷದ ಅಧ್ಯಕ್ಷ ಪಟ್ಟಕ್ಕೆ ರಾಜಿನಾಮೆ ನೀಡುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು. ನಂತರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಬೊಮ್ಮಾಯಿ ಅವರು ರಾಜಿನಾಮೆ ನೀಡುವ ತಮ್ಮ ನಿರ್ಧಾರವನ್ನು ಪ್ರಕಟಿಸಿ, ತಮ್ಮ ಉತ್ತರಾಧಿಕಾರಿಯಾಗಿ ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರ ಹೆಸರನ್ನು ಸೂಚಿಸಿದರು. ಸಂಸತ್ ಸದಸ್ಯ ನಿತೀಶ್ ಕುಮಾರ್ ಅವರು ಇದನ್ನು ಅನುಮೋದಿಸಿದರು.

ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಒರಿಸ್ಸಾ ಮುಖ್ಯಮಂತ್ರಿ ಬಿಜು ಪಟ್ನಾಯಕ್, ಜಾರ್ಜ್ ಫರ್ನಾಂಡೀಸ್ ಅವರನ್ನು ಒಳಗೊಂಡ ಇಡೀ ಕಾರ್ಯಕಾರಿಣಿ ಸಭೆ ಇದನ್ನು ಸರ್ವಾನುಮತಯದಿಂದ ಒಪ್ಪಿಗೆ ನೀಡಿತು.

ರಾಮಸ್ವಾಮಿ ನಿವೃತ್ತಿ

ನವದೆಹಲಿ ಫೆ. 14 (ಪಿಟಿಐ)– ಕಳೆದ ಮೇ ತಿಂಗಳಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಮಂಡಿಸಿದ್ದ ದೋಷಾರೋಪಣೆ ನಿರ್ಣಯದಿಂದ ‍ಪಾರಾಗಿದ್ದ ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ ನ್ಯಾಯಮೂರ್ತಿ ವಿ. ರಾಮಮೂರ್ತಿ ಇಂದು ಸೇವೆಯಿಂದ ನಿವೃತ್ತರಾದರು.

ಮೇ 11 ರಂದು ಲೋಕಸಭೆಯಲ್ಲಿ ದೋಷಾರೋಪಣೆ ನಿರ್ಣಯ ವಿಫಲವಾಗಿ ಮೂರು ದಿನಗಳ ಬಳಿಕ ತಮ್ಮ ರಾಜಿನಾಮೆಯನ್ನು ಘೋಷಿಸಿದ್ದ ರಾಮಸ್ವಾಮಿ ರಾಷ್ಟ್ರಪತಿಯ ಅನುಮತಿಯ ಮೇರೆಗೆ ರಜೆಯ ಮೇಲೆ ತೆರಳಿದ್ದರು.

ವಿಶ್ವ ಕ್ಷಮಾದಾನ ಸಂಸ್ಥೆಗೆ ಕಾಶ್ಮೀರ ಭೇಟಿಗೆ ಅನುಮತಿ

ನವದೆಹಲಿ, ಫೆ. 14 (ಪಿಟಿಐ)– ಅಂತರ್‌ರಾಷ್ಟ್ರೀಯ ಕ್ಷಮಾದಾನ ಸಂಸ್ಥೆಗೆ ಕಾಶ್ಮೀರಕ್ಕೆ ಭೇಟಿ ಕೊಡಲು ನಿರ್ದಿಷ್ಟ ಪ್ರಕರಣಗಳ ಆಧಾರದ ಮೇಲೆ ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ಸಚಿವ ದಿನೇಶ್ ಸಿಂಗ್ ಇಂದು ಇಲ್ಲಿ ಪ್ರಕಟಿಸಿದರು.

ಅವರು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಸಂಸದೀಯ ಸಲಹಾ ಸಮಿತಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ‘ಕಾಶ್ಮೀರದ ಬಗ್ಗೆ ನಾವು ಏನನ್ನೂ ಮುಚ್ಚಿಡಲು ಬಯಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ತುಂಗಾ ಮೇಲ್ದಂಡೆ: ಶೀಘ್ರವೇ ಮಂಜೂರಾತಿ

ಬೆಂಗಳೂರು, ಫೆ. 14– ಕೇಂದ್ರ ಸರ್ಕಾರಕ್ಕೆ ತುಂಗಾ ಮೇಲ್ದಂಡೆ ಯೋಜನೆಯ ಸಂಬಂಧದಲ್ಲಿ ರಾಜ್ಯ ಸರ್ಕಾರ ಅಗತ್ಯ ಸಮಜಾಯಿಷಿ ಕೊಟ್ಟು ಆದಷ್ಟು ಬೇಗ ಅದಕ್ಕೆ ಮಂಜೂರಾತಿಯನ್ನು ಪಡೆಯುವುದು ಎಂದು ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.

ಕೃಷ್ಣ ಕೊಳ್ಳದಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹಾಗೂ ಇನ್ನೂ ಕೈಗೊಳ್ಳಬೇಕಾಗಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕ್ರಿ.ಶ. 2000ನೇ ವರ್ಷದ ಒಳಗೆ ಪೂರ್ಣಗೊಳಿಸಲು ಸಮಗ್ರ ಯೋಜನೆಯನ್ನು ತಯಾರಿಸಲಾಗಿದ್ದು ಅದಕ್ಕೆ ಅನುಗುಣವಾಗಿ ಆರ್ಥಿಕ ಮತ್ತು ಭೌತಿಕ ಕಾರ್ಯಕ್ರಮಗಳನ್ನು ರೂಪಿಸಿ ಅದರ ಅನುಸಾರ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !