ಬುಧವಾರ, ನವೆಂಬರ್ 20, 2019
20 °C

ಅಭಿವೃದ್ಧಿ ಪಡಿಸದ ಬಡಾವಣೆ: ಪರವಾನಗಿ ಹಿಂಪಡೆಯಲು ಕ್ರಮ

Published:
Updated:

ಗುಲ್ಬರ್ಗ: ಗುಲ್ಬರ್ಗ ವಿಭಾಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಿರ್ಮಿಸಲು ಪರವಾನಗಿ ಪಡೆದು ಮೂಲಸೌಲಭ್ಯಗಳನ್ನು  ಸಂಪೂರ್ಣವಾಗಿ ಅಭಿವೃದ್ಧಿ ಪಡಿಸದಿರುವ ಬಡಾವಣೆಗಳ ಮಾಲೀಕರಿಗೆ ಅಂತಿಮವಾಗಿ ನೊಟೀಸ್ ಜಾರಿಮಾಡಿ ಬಡಾವಣೆಗಳ ಪರವಾನಗಿಯನ್ನು ಹಿಂದಕ್ಕೆ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತ ಡಾ. ರಜನೀಶ ಗೋಯಲ್ ತಿಳಿಸಿದರು.ಬುಧವಾರ ಇಲ್ಲಿ ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಬಡಾವಣೆಗಳಲ್ಲಿ ವಿದ್ಯುತ್, ಕುಡಿಯುವ ನೀರು, ರಸ್ತೆ, ಒಳಚರಂಡಿ, ಉದ್ಯಾನಗಳು ಇರುವುದು ಅವಶ್ಯಕ. ಈ ಮೂಲಸೌಲಭ್ಯಗಳನ್ನು ಬಡಾವಣೆಯ ಮಾಲೀಕರು ಪರವಾನಗಿ ಪಡೆದ 2 ವರ್ಷಗಳಲ್ಲಿ ಅಭಿವೃದ್ಧಿ ಪಡಿಸಬೇಕು. ಈ ಸೌಲಭ್ಯಗಳು ಇಲ್ಲದ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುವ ಸಾರ್ವಜನಿಕರು ತೊಂದರೆಗಳನ್ನು ಅನುಭಸಬೇಕಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಇನ್ನು ಮುಂದೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದ ಬಡಾವಣೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಪಾಲಿಕೆಗಳಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಬಾರದು ಎಂದು ಹೇಳಿದರು.ಗುಲ್ಬರ್ಗ ವಿಭಾಗದಲ್ಲಿ ಒಟ್ಟು 841 ಹೊಸ ಬಡಾವಣೆ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿದೆ. ಈ ಪೈಕಿ 351 ಬಡಾವಣೆಗಳು ಸಂಪೂರ್ಣ ಅಭಿವೃದ್ಧಿಗೊಂಡಿವೆ. 214 ಬಡಾವಣೆಗಳು ಭಾಗಶಃ ಹಾಗೂ 179 ಬಡಾವಣೆಗಳ ಅಭಿವೃದ್ಧಿಗೆ ಸಮಯಾವಕಾಶದೆ. 97 ಸಿಂಗಲ್ ಲೇ-ಔಟ್‌ಗಳಿವೆ. ಜಿಲ್ಲೆಯಲ್ಲಿ ಒಟ್ಟು 131 ನೂತನ ಬಡಾವಣೆಗಳಿದ್ದು ಈ ಪೈಕಿ 31 ಸಂಪೂರ್ಣ, 50 ಭಾಗಶಃ, 16 ಬಡಾವಣೆಗಳ ಅಭಿವೃದ್ಧಿಗೆ ಕಾಲಾವಕಾಶ ಇದ್ದು 34 ಸಿಂಗಲ್ ಲೇ-ಔಟ್‌ಗಳಿವೆ. ಬೀದರ ಜಿಲ್ಲೆಯಲ್ಲಿ ಒಟ್ಟು 31 ನೂತನ ಬಡಾವಣೆಗಳು.ಈ ಪೈಕಿ 23 ಭಾಗಶಃ, 8 ಬಡಾವಣೆಗಳ ಅಭಿವೃದ್ಧಿಗೆ ಕಾಲಾವಕಾಶ ಇದೆ. ರಾಯಚೂರ ಜಿಲ್ಲೆಯಲ್ಲಿ ಒಟ್ಟು 301 ನೂತನ ಬಡಾವಣೆಗಳು. ಈ ಪೈಕಿ 120 ಸಂಪೂರ್ಣ, 65 ಭಾಗಶಃ, 116 ಬಡಾವಣೆಗಳ ಅಭಿವೃದ್ಧಿಗೆ ಕಾಲಾವಕಾಶವಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 54 ನೂತನ ಬಡಾವಣೆಗಳಿದ್ದು ಈ ಪೈಕಿ 8 ಸಂಪೂರ್ಣ, 36 ಭಾಗಶಃ, 10 ಬಡಾವಣೆಗಳ ಅಭಿವೃದ್ಧಿಗೆ ಕಾಲಾವಕಾಶವಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 140 ನೂತನ ಬಡಾವಣೆಗಳಿದ್ದು, ಈ ಪೈಕಿ 90 ಸಂಪೂರ್ಣ, 21 ಭಾಗಶಃ, 29 ಬಡಾವಣೆಗಳ ಅಭಿವೃದ್ಧಿಗೆ ಕಾಲಾವಕಾಶವಿದೆ. ಹೊಸಪೇಟೆ ಉಪವಿಭಾಗದಲ್ಲಿ ಒಟ್ಟು 184 ನೂತನ ಬಡಾವಣೆಗಳು. ಈ ಪೈಕಿ 102 ಸಂಪೂರ್ಣ, 19 ಭಾಗಶಃ ಅಭಿವೃದ್ಧಿಗೊಂಡಿದ್ದು 63 ಸಿಂಗಲ್ ಲೇ-ಔಟ್‌ಗಳಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಉದ್ಯಾನಗಳಿಂದ ನಗರಗಳು ಸುಂದರವಾಗಿ ಕಾಣುತ್ತವೆ.

 ಸಾರ್ವಜನಿಕರು ಹರಿಸಲು ಅತಿ ಅವಶ್ಯಕ ಸ್ಥಳ ಇದಾಗಿದ್ದು ಉದ್ಯಾನಗಳು ಅತಿಕ್ರಮಣಗೊಂಡು ಕಟ್ಟಡಗಳಿಂದ ಕೂಡಿವೆ. ಈ ಹಿಂದೆ ಭಾಗದಲ್ಲಿ ಇದ್ದ ಉದ್ಯಾನಗಳ ಸ್ಥಳಗಳನ್ನು ಗುರುತಿಸಿ ಅವುಗಳ ಅತಿಕ್ರಮಣದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಅವುಗಳ ತೆರಗೆ ನೋಟೀಸ್ ನೀಡಿ ಕ್ರಮ ಜರುಗಿಸಬೇಕು ಎಂದ ಪ್ರಾದೇಶಿಕ ಆಯುಕ್ತರು ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾದ ನಿರ್ದೇಶನ ಮತ್ತು ಆದೇಶ ನೀಡಿರುವುದಾಗಿ ತಿಳಿಸಿದರು.ವಿಭಾಗದ ಗುಲ್ಬರ್ಗ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)